ಅರಣ್ಯ ಪ್ರದೇಶಗಳಲ್ಲಿ ರಸ್ತೆ ದಾಟುವಾಗ ಪ್ರಾಣಿಗಳು, ಹಾವು, ಹಲ್ಲಿ, ಉಡ, ಮೊಸಳೆ ಮುಂತಾದ ಸರೀಸೃಪಗಳು ವಾಹನಗಳಿಗೆ ಸಿಕ್ಕು ಮೃತಪಡುತ್ತವೆ. ಈ ಹಿನ್ನೆಲೆ ರಸ್ತೆ ದಾಟುವಾಗ ಸರೀಸೃಪಗಳು ಮತ್ತು ಸಣ್ಣ ಪ್ರಾಣಿಗಳನ್ನು ವಾಹನ ಅಪಘಾತಗಳಿಂದ ರಕ್ಷಿಸುವ ಪ್ರಯತ್ನದಲ್ಲಿ ಉತ್ತರಖಂಡದ ರಾಮನಗರ ಅರಣ್ಯ ವಿಭಾಗವು ಕಲಧುಂಗಿ-ನೈನಿತಾಲ್ ಹೆದ್ದಾರಿಯಲ್ಲಿ ರಾಜ್ಯದ ಮೊದಲ ಪರಿಸರ ಸೇತುವೆಯನ್ನು ನಿರ್ಮಿಸಿದೆ.
90 ಅಡಿ ಉದ್ದ ಮತ್ತು 5 ಅಡಿ ಅಗಲದ ಸೇತುವೆ ಉತ್ತರಾಖಂಡದ ಮೊದಲ ಪರಿಸರ ಸೇತುವೆ ಎಂದು ಕಲಧುಂಗಿ ಅರಣ್ಯ ಅಧಿಕಾರಿ ಅಮಿತ್ ಕುಮಾರ್ ಗ್ವಾಸ್ಕೋಟಿ ಎಎನ್‌ಐಗೆ ತಿಳಿಸಿದ್ದಾರೆ.
“ಸಣ್ಣ ಪ್ರಾಣಿಗಳು ಮತ್ತು ಸರೀಸೃಪಗಳಾದ ಹಾವು, ಅಳಿಲು, ಉಡ, ಹಲ್ಲಿ ಸೇತುವೆಯ ಮೂಲಕ ರಸ್ತೆ ದಾಟುವಾಗ ಉಂಟಾಗುವ ಅಪಘಾತವನ್ನು ತಪ್ಪಿಸುತ್ತದೆ ಎಂಬ ಭರವಸೆಯಿಂದ ನಾವು ಈ ಸೇತುವೆಯನ್ನು ನಿರ್ಮಿಸಿದ್ದೇವೆ” ಎಂದು ಗ್ವಾಸ್ಕೋಟಿ ತಿಳಿಸಿದ್ದಾರೆ.
ಇದನ್ನೂ ಓದಿ: ಮೋದಿ ಆಡಳಿತದಲ್ಲಿ ಪರಿಸರದ ಮೇಲಾದ ದಾಳಿಗಳು : ಲಿಯೋ ಎಫ್ ಸಲ್ಡಾನಾ

ಸೇತುವೆಯ ನಿರ್ಮಾಣದಲ್ಲಿ ಯಾವುದೇ ಸಿಮೆಂಟ್ ಅಥವಾ ಕಬ್ಬಿಣವನ್ನು ಬಳಸಲಾಗಿಲ್ಲ. ಇದು ಬಿದಿರು, ಹಗ್ಗ ಮತ್ತು ಹುಲ್ಲಿನಂತಹ ಪರಿಸರ ಸ್ನೇಹಿ ವಸ್ತುಗಳಿಂದ ಮಾಡಲ್ಪಟ್ಟಿದ್ದು, ಇದಕ್ಕೆ 2 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ನೈನಿತಾಲ್ಗೆ ಮುಖ್ಯ ಸಂಪರ್ಕ ರಸ್ತೆಯಾಗಿರುವ ಇಲ್ಲಿನ ಕಲಧುಂಗಿ ಹೆದ್ದಾರಿಯನ್ನ ಸಾಕಷ್ಟು ಜನ ಬಳಸುತ್ತಿದ್ದು, ಈ ವೇಳೆ ರಸ್ತೆ ದಾಟುವಾಗ ಅನೇಕ ಜೀವಿಗಳು ವಾಹನಗಳಡಿ ಸಿಲುಕಿ ಸಾವನ್ನಪ್ಪುತ್ತಿದ್ದವು.


