ನಿನ್ನೆ ನಡೆದ ಮೂವರು ಕೇಂದ್ರ ಸಚಿವರೊಂದಿಗಿನ ರೈತ ಮುಖಂಡರ ಸಭೆಯ ನಿರ್ಧಾರಗಳಿಗೆ ರೈತ ಸಂಘಟನೆಗಳು ತಿರಸ್ಕರಿಸಿದ್ದು, ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಳ್ಳುತ್ತವೆ ಎಂದು AIKSCC ಅಧಿಕೃತ ಹೇಳಿಕೆ ನೀಡಿದೆ.
AIKSCC (All India Kisan Sangarsh Coordination Committee) ಬಿಡುಗಡೆ ಮಾಡಿರುವ ಬುಲೆಟಿನ್‌ನಲ್ಲಿ ಈ ನಿರ್ಧಾರವನ್ನು ತಿಳಿಸಿದೆ. ಸರ್ಕಾರದೊಂದಿಗೆ ನಡೆದ ಮಾತುಕತೆ ಅನಿರ್ದಿಷ್ಟವಾಗಿದ್ದು, ರೈತ ಸಂಘಟನೆಗಳಿಗೆ ಸರ್ಕಾರದ ಪ್ರಸ್ತಾಪ ಒಪ್ಪಿತವಾಗಿಲ್ಲ ಹೀಗಾಗಿ ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಳ್ಳುತ್ತವೆ ಎಂದು ತಿಳಿಸಿದೆ.
35 ರೈತ ಮುಖಂಡರು, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಸಚಿವ ಪಿಯೂಷ್ ಗೋಯಲ್ ಮತ್ತು ಕಿರಿಯ ಕೈಗಾರಿಕಾ ಸಚಿವ ಸೋಮ್ ಪ್ರಕಾಶ್ ಅವರ ಸಚಿವರ ನಿಯೋಗವನ್ನು ಭೇಟಿಯಾಗಿ ತಮ್ಮ ಬೇಡಿಕೆಗಳನ್ನು ತಿಳಿಸಿದ್ದಾರೆ. ಕೇಂದ್ರದ ಮೂರು ಕೃಷಿ ಕಾಯ್ದೆಗಳು ಮತ್ತು ವಿದ್ಯುತ್ ತಿದ್ದುಪಡಿ ಮಸೂದೆ 2020 ಅನ್ನು ಹಿಂತೆಗೆದುಕೊಳ್ಳುವುದು ಈ ಬೇಡಿಕೆಯಲ್ಲಿವೆ. 32 ರೈತ ಮುಖಂಡರು, ಪಂಜಾಬ್ ಒಕ್ಕೂಟಗಳು, ಹರಿಯಾಣದ ರೈತ ಮುಖಂಡರು, ರಾಷ್ಟ್ರೀಯ ರೈತ ಸಂಘಟನೆಗಳಾದ ಎಐಕೆಎಸ್‌ಸಿಸಿ ಮತ್ತು ಆರ್‌ಕೆಎಂಎಸ್ ಪ್ರತಿನಿಧಿಗಳು ಸಭೆಯಲ್ಲಿದ್ದರು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೃಷಿ ಕಾಯ್ದೆಗಳ ಬಗ್ಗೆ ಸಮಿತಿ ರಚಿಸುವ ಸರ್ಕಾರದ ಪ್ರಸ್ತಾಪ ತಿರಸ್ಕರಿಸಿದ ರೈತ ಮುಖಂಡರು: ಪ್ರತಿಭಟನೆ ಮುಂದುವರಿಕೆ
ಕೇಂದ್ರ ಸಚಿವರೊಂದಿಗಿನ ಮಾತುಕತೆ ಅನಿರ್ದಿಷ್ಟವಾಗಿ ಕೊನೆಗೊಂಡಿದೆ. ಡಿಸೆಂಬರ್ 3(ನಾಳೆ)ರಂದು ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.
ರೈತರ ಆಕ್ಷೇಪಣೆಗಳನ್ನು ಪರಿಶೀಲಿಸಲು ಮತ್ತು ಅವರ ಕಳವಳಗಳನ್ನು ಅಧ್ಯಯನ ಮಾಡಲು 5 ಸದಸ್ಯರ ಸಮಿತಿಯನ್ನು ರಚಿಸುವ ಸರ್ಕಾರದ ಪ್ರಸ್ತಾಪವನ್ನು ರೈತ ಮುಖಂಡರು ತಿರಸ್ಕರಿಸಿ ಪ್ರತಿಭಟನೆ ಮುಂದುವರಿಸುವುದಾಗಿ ಘೋಷಿಸಿದ್ದಾರೆ.
ಸರ್ಕಾರವು ಕೃಷಿ ಸಂಘಟನೆಗಳಿಗೆ ಕೃಷಿ ಮಸೂದೆಗಳ ಬಗ್ಗೆ ತಮ್ಮ ವಿಮರ್ಶೆಯನ್ನು ವಿವರವಾಗಿ ಒದಗಿಸಲು ಕೇಳಿದೆ. ಕೃಷಿ ಒಕ್ಕೂಟಗಳು ಸೂಚಿಸಿರುವ ಆಕ್ಷೇಪಣೆಗಳು ಮತ್ತು ನ್ಯೂನತೆಗಳನ್ನು ಪರಿಶೀಲಿಸಲು ಸರ್ಕಾರ ಸಿದ್ಧವಿದೆ ಎಂದು ಸಚಿವರು ಹೇಳಿದ್ದಾರೆ ಎಂದು ಬುಲೆಟಿನ್‌ನಲ್ಲಿ ಉಲ್ಲೇಖಿಸಲಾಗಿದೆ.
ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ರೈತರ ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಎಐಕೆಎಸ್‌ಸಿಸಿ ಘೋಷಿಸಿದೆ. ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆಗಳಿಗೆ ಗುರುವಾರದೊಳಗೆ ಸರ್ಕಾರ ಒಪ್ಪದಿದ್ದರೆ ಮಹಾರಾಷ್ಟ್ರದಿಂದ ದೆಹಲಿಗೆ ಮೆರವಣಿಗೆ ಪ್ರಾರಂಭಿಸುವುದಾಗಿ ಮಹಾರಾಷ್ಟ್ರ ರೈತ ಗುಂಪುಗಳು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.


