ಟ್ರಕ್ ಮತ್ತು ಕಾರು ಅಫಘಾತದಲ್ಲಿ ಗಾಯಗೊಂಡಿದ್ದ ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಪರ ವಕೀಲ ಮಹೇಂದ್ರ ಸಿಂಗ್ ಸೋಮವಾರ ಮೃತಪಟ್ಟಿದ್ದಾರೆ. ಕಳೆದ ವರ್ಷ ಸಂಭವಿಸಿದ್ದ ಈ ಅಫಘಾತಕ್ಕೆ ಬಿಜೆಪಿ ನಾಯಕ ಕುಲದೀಪ್ ಸಿಂಗ್ ಸೆಂಗಾರ್ ಕಾರಣ ಎಂದು ಆರೋಪಿಸಲಾಗಿತ್ತು. ಅಫಘಾತದಲ್ಲಿ ಅತ್ಯಾಚಾರ ಸಂತ್ರಸ್ತೆ ಗಾಯಗೊಂಡಿದ್ದರೆ ಅವರ ಇಬ್ಬರು ಅತ್ತೆಯಂದಿರು ಸಾವಿಗೀಡಾಗಿದ್ದರು.
ಆರು ತಿಂಗಳ ಹಿಂದೆಯೇ ನವದೆಹಲಿಯ ಏಮ್ಸ್‌ನಿಂದ ಡಿಸ್ಚಾರ್ಜ್ ಹೊಂದಿದ್ದ ವಕೀಲರು ಉನ್ನಾವೊದಲ್ಲಿರುವ ತನ್ನ ಮನೆಯಲ್ಲಿ ಬಹು ಅಂಗಾಂಗ ಹಾನಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ನಿಧನರಾದರು ಎಂದು ಅವರ ಕುಟುಂಬ ತಿಳಿಸಿದೆ.
2017 ರ ಜೂನ್‌ನಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಕ್ಕಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸೆಂಗಾರ್, ಟ್ರಕ್ ಮತ್ತು ಕಾರು ಅಪಘಾತ ಮಾಡಿ ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಉನ್ನಾವೊ: ಅತ್ಯಾಚಾರದ ದೂರು ದಾಖಲಿಸಲು ವಿಫರಾಲದ ಜಿಲ್ಲಾಧಿಕಾರಿ ವಿರುದ್ದ ಕ್ರಮಕ್ಕೆ ಸಿಬಿಐ ಶಿಫಾರಸ್ಸು
ಜುಲೈ 28, 2019 ರಂದು ರಾಯ್ ಬರೇಲಿ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಸಂತ್ರಸ್ತೆ ಬಾಲಕಿ ಮತ್ತು ಮಹೇಂದ್ರ ಸಿಂಗ್ ಅವರನ್ನು ದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು. ಕೆಲವು ತಿಂಗಳ ನಂತರ ಬಾಲಕಿ ಚೇತರಿಸಿಕೊಂಡರೆ, ಆರು ತಿಂಗಳ ಹಿಂದೆ ವಕೀಲ ಮಹೇಂದ್ರ ಸಿಂಗ್ ಅವರನ್ನು ಡಿಸ್ಚಾರ್ಜ್ ಮಾಡಿ ಮನೆ ಚಿಕಿತ್ಸೆಗೆ ಆಸ್ಪತ್ರೆಯು ಸಲಹೆ ನೀಡಿತ್ತು.
ಕಳೆದ ಡಿಸೆಂಬರ್‌ನಲ್ಲಿ ದೆಹಲಿ ನ್ಯಾಯಾಲಯವು ಅತ್ಯಾಚಾರ ಆರೋಪ ಸಾಬೀತಾಗಿದ್ದಕ್ಕೆ ಕುಲದೀಪ್‌ಗೆ ಜೀವಾವದಿ ಶಿಕ್ಷೆ ವಿಧಿಸಲಾಗಿತ್ತು. ನಂತರ ಮಾರ್ಚ್‌ನಲ್ಲಿ ಕುಲದೀಪ್‌ಗೆ ಬಾಲಕಿಯ ತಂದೆಯನ್ನು ಹತ್ಯೆ ಮಾಡಿದ್ದಕ್ಕೆ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.
ಅತ್ಯಾಚಾರ ಪ್ರಕರಣವನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದ್ದಕ್ಕಾಗಿ ಹುಡುಗಿಯ ತಂದೆ ಮೇಲೆ 2018 ರ ಏಪ್ರಿಲ್‌ರಲ್ಲಿ ಹಲ್ಲೆ ಮಾಡಲಾಗಿತ್ತು ಮತ್ತು ಅವರನ್ನು ಸುಳ್ಳು ಶಸ್ತ್ರಾಸ್ತ್ರ ಪ್ರಕರಣದಲ್ಲಿ ಕೇಸು ದಾಖಲಿಸಿ ಬಂಧಿಸಲಾಗಿತ್ತು. ನಂತರ ಉನ್ನಾವ್ ಜೈಲಿನಲ್ಲಿ ಗಾಯಗಳಿಂದಾಗಿ ಅವರು ಸಾವನ್ನಪ್ಪಿದ್ದರು.
ಟ್ರಕ್ ಡಿಕ್ಕಿ ಕೊಲೆ ಪ್ರಕರಣ ದೆಹಲಿ ನ್ಯಾಯಾಲಯದಲ್ಲಿ ಇನ್ನೂ ಬಾಕಿ ಇದ್ದು, ಅತ್ಯಾಚಾರ ಮತ್ತು ಸಂತ್ರಸ್ಥೆಯ ತಂದೆಯ ಕೊಲೆ ಮತ್ತು ಚಿಕ್ಕಮ್ಮಂದಿರ ಕೊಲೆಗೆ ಸಂಬಂಧಿಸಿದ ಎಲ್ಲಾ ಮೂರು ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ದೆಹಲಿಗೆ ವರ್ಗಾಯಿಸಿತ್ತು ಮತ್ತು ಅವುಗಳನ್ನು ತನಿಖೆ ಮಾಡಲು ಸಿಬಿಐಗೆ ಸೂಚಿಸಿದೆ.
ಇದನ್ನೂ ಓದಿ: ಉನ್ನಾವ್ ಅತ್ಯಾಚಾರ: ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸೆಂಗಾರ್‌ಗೆ ಜೀವಾವಧಿ ಶಿಕ್ಷೆ ಘೋಷಿಸಿದ ಕೋರ್ಟ್


