ಕನ್ನಡಿಗ ಕ್ಯಾಪ್ಟನ್.ಜಿ.ಆರ್. ಗೋಪಿನಾಥ್ ಜೀವನಾಧಾರಿತ ತಮಿಳು ಚಿತ್ರ ’ಸೂರರೈ ಪೋಟ್ರು’ ಸಿನಿಮಾ ಪ್ರಿಯರ ಮನಗೆದ್ದಿದ್ದು, ಅದರಲ್ಲೂ ಸಿನಿಮಾವು ಕನ್ನಡಕ್ಕೆ ಡಬ್ಬಿಂಗ್ ಆಗಿ, ಕುವೆಂಪು, ಮಂತ್ರ ಮಾಂಗಲ್ಯ ಸೇರಿದಂತೆ ಕನ್ನಡಿಗ ಸಂಸ್ಕೃತಿಯ ಬಗ್ಗೆ ಚಿತ್ರಿಸಿದ್ದು ಕೂಡಾ ಕನ್ನಡಿಗರ ಮನಗೆದ್ದಿತ್ತು.
ಸಿನಿಮಾವು ಕ್ಯಾಪ್ಟನ್ ಗೋಪಿನಾಥ್ ಜೀವನಾಧಾರಿತ ಕತೆಯಾಗಿದ್ದರೂ, ಕಾಲ್ಪನಿಕ ಘಟನೆಗಳನ್ನು ಸೇರಿಸಲಾಗಿದೆ ಎಂದು ಸಿನಮಾ ನಿರ್ದೇಶಕಿ ಸುಧಾ ಕೆ. ಪ್ರಸಾದ್ ಹೇಳಿದ್ದರು. ಸ್ವತಃ ಕ್ಯಾಪ್ಟನ್ ಗೋಪಿನಾಥ್ ಕೂಡಾ “ಕಾಲ್ಪನಿಕ ಘಟನೆಗಳನ್ನು ಸೇರಿಸಿ ಮಾಡಿರುವ ಚಿತ್ರವಾಗಿದ್ದರೂ ನನ್ನ ಪುಸ್ತಕದ ಕತೆಯ ಎಳೆಯನ್ನು ಹಿಡಿದು ಮಾಡಿರುವ ಚಿತ್ರವು ತುಂಬಾ ಚೆನ್ನಾಗಿದೆ” ಎಂದು ಹೇಳಿದ್ದರು. ಜೊತೆಗೆ ಚಿತ್ರ ತಂಡಕ್ಕೆ ಶುಭಹಾರೈಸಿದ್ದರು.
ಇದನ್ನೂ ಓದಿ: ಹಿಂದುತ್ವದ ಬೀಜಗಳನ್ನು ತೊರೆದು ಬಹುತ್ವದ ಕನ್ನಡ ರಾಷ್ಟ್ರೀಯತೆ ಕಟ್ಟುವ ಸವಾಲುಗಳು
Sorarai potru ..Heavily fictionalised but outstanding in capturing the true essence of the story of my book. A real roller coaster.
Yes watched it last night. Couldn’t help laughing and crying on many family scenes that brought memories.— Capt GR Gopinath (@CaptGopinath) November 13, 2020
ಈ ಕಮರ್ಷಿಯಲ್ ಸಿನಿಮಾ ಬಿಡುಗಡೆಯಾದ ಹಿನ್ನಲೆಯಲ್ಲಿ ಕ್ಯಾಪ್ಟನ್ ಜಿ. ಆರ್. ಗೋಪಿನಾಥ್ ಅವರ ಜೀವನ ಮತ್ತು ಸಾಧನೆಗಳ ಬಗ್ಗೆ ವ್ಯಾಪಕ ಹುಡುಕಾಟಗಳು, ಚರ್ಚೆಗಳು ನಡೆದು ಕನ್ನಡಿಗನೊಬ್ಬನ ಸಾಧನೆಯ ಬಗ್ಗೆ ಕನ್ನಡಿಗರು ಹೆಮ್ಮೆ ವ್ಯಕ್ತಪಡಿಸಿದ್ದರು. ಗೋಪಿನಾಥ್ ಅವರ ತಂದೆಯವರ ಹೆಸರು ‘ಗೊರೂರು ರಾಮಸ್ವಾಮಿ ಅಯ್ಯಂಗಾರ್’ ಆಗಿದ್ದು, ಅವರನ್ನು ಕನ್ನಡದ ಖ್ಯಾತ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರಿಗೆ ಗೊಂದಲಿಸಿಕೊಂಡು ಸಾಮಾಜಿಕ ಜಾಲಣಗಳಲ್ಲಿ ತಪ್ಪು ಮಾಹಿತಿ ಹರಡಿತ್ತು.
ಈ ಬಗ್ಗೆ ವಿಕಿಪೀಡಿಯಾದಲ್ಲಿ ಕೂಡಾ ತಪ್ಪು ಮಾಹಿತಿಯಿದ್ದು, ಅವರ ತಂದೆಯನ್ನು ”ಕನ್ನಡ ಕಾದಂಬರಿಗಾರ” ಎಂದು ತಪ್ಪಾಗಿ ಉಲ್ಲೇಖಿಸಿದೆ. (ಲಿಂಕ್ ಇಲ್ಲಿದೆ)

ಕೆಲವರು ಸ್ವಾತಂತ್ಯ್ರ ಹೋರಾಟಗಾರ, ಮಹಾತ್ಮಾ ಗಾಂಧಿಯ ಆತ್ಮಕತೆಯನ್ನು ಕನ್ನಡಕ್ಕೆ ತಂದಿದ್ದ ಸಾಹಿತಿ ‘ಗೊರೂರು ರಾಮಸ್ವಾಮಿ ಅಯ್ಯಂಗಾರ್’ ಅವರೇ ಕ್ಯಾಪ್ಟನ್ ಜಿ. ಆರ್. ಗೋಪಿನಾಥ್ ಅವರ ತಂದೆ ಎಂದು ತಪ್ಪು ಮಾಹಿತಿಗಳನ್ನು ಹರಡಿದ್ದರು.
ಇದನ್ನೂ ಓದಿ: ಉತ್ತರ ಕನ್ನಡ : ಕನ್ನಡ ಕಟ್ಟಿದ ಕೊಂಕಣಿಗರು
ಇದೀಗ ಸ್ವತಃ ಗೋಪಿನಾಥ್ ಅವರೇ ಗೊಂದಲಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ನಾನುಗೌರಿ.ಕಾಮ್ ಜೊತೆ ಮಾತನಾಡಿದ ಕ್ಯಾಪ್ಟನ್ ಗೋಪಿನಾಥ್, “ನನ್ನ ತಂದೆಯ ಹೆಸರು ‘ಗೊರೂರು ರಾಮಸ್ವಾಮಿ ಅಯ್ಯಂಗಾರ್’ ಎಂದಾಗಿದ್ದು ಅವರು ಗೊರೂರಿನಲ್ಲಿ ಹೈಸ್ಕೂಲ್ ಮೇಷ್ಟ್ರಾಗಿದ್ದರು. ಆದರೆ ಸಾಹಿತಿ ‘ಗೊರೂರು ರಾಮಸ್ವಾಮಿ ಅಯ್ಯಂಗಾರ್’ ನನ್ನ ದೊಡ್ಡ ಅಜ್ಜ, ಅಂದರೆ ನನ್ನ ತಾಯಿಯ ಸೋದರ ಮಾವ. ಅವರೂ ನಮ್ಮ ಊರಿನವರೇ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದೆ” ಎಂದು ಹೇಳಿದ್ದಾರೆ.

ಭಾರತೀಯ ವಾಯು ಪಡೆಯಲ್ಲಿ ಸೇವೆ ಸಲ್ಲಿಸಿದ್ದ ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಹಾಸನ ಜಿಲ್ಲೆಯ ಗೊರೂರಿನಲ್ಲಿ ಜನಿಸಿದವರು. ಎಂಟು ವರ್ಷಗಳ ಕಾಲ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದ ಅವರು ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಭಾಗವಹಿಸಿದ್ದರು. ನಂತರ ಸೇನೆ ತೊರೆದ ಅವರು ಸುಸ್ಥಿರ ಕೃಷಿಯಲ್ಲಿ ಅನೇಕ ಪ್ರಯೋಗವನ್ನು ಮಾಡಿ ಯಶಸ್ಸು ಗಳಿಸಿದ್ದರು.
1997 ರಲ್ಲಿ ಅವರು ಚಾರ್ಟರ್ ಹೆಲಿಕಾಪ್ಟರ್ ಸೇವೆಯಾದ ಡೆಕ್ಕನ್ ಏವಿಯೇಷನ್ ಅನ್ನು ಸ್ಥಾಪಿಸಿದ ಅವರು, 2003 ರಲ್ಲಿ ಅತೀ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಯಾದ “ಏರ್ ಡೆಕ್ಕನ್” ಅನ್ನು ಸ್ಥಾಪಿಸಿದರು. ಇದು ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಸೇವೆ ಒದಗಿಸುತ್ತಿದ್ದ ವಿಮಾನಯಾನ ಸೇವೆ ಎಂದೇ ಹೆಸರಾಗಿತ್ತು.
ರಾಜಕಾರಣಿಯಾಗಿ ಕೂಡಾ ಕ್ಯಾಪ್ಟನ್ ತಮ್ಮದೆ ಛಾಪು ಮೂಡಿಸಿದ್ದು, 2009 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಮತ್ತು 2014 ರಲ್ಲಿ ಆಮ್ ಆದ್ಮಿ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸಿ ಸೋತಿದ್ದರು. ಗೋಪಿನಾಥ್ ಪ್ರಜಾವಾಣಿ ಪತ್ರಿಕೆಗೆ ಅಂಕಣಗಳನ್ನು ಬರೆಯುತ್ತಿದ್ದು, ‘ಯು ಕ್ಯನಾಟ್ ಮಿಸ್ ದಿಸ್ ಫ್ಲೈಟ್; ಎಸ್ಸೇ ಆನ್ ಎಮರ್ಜಿಂಗ್ ಇಂಡಿಯಾ’, ‘ಸಿಂಪ್ಲಿ ಫ್ಲೈ’, ‘ಸಿಂಪ್ಲಿ ಫ್ಲೈ: ಎ ಡೆಕ್ಕನ್ ಒಡಿಸ್ಸಿ’ ಎಂಬ ಕೃತಿಯನ್ನೂ ರಚಿಸಿದ್ದಾರೆ.
ಇದನ್ನೂ ಓದಿ: ಕನ್ನಡ ಸತಿಗೆ, ಮರಾಠಾ ಪತಿ! – ಡಿ.ಎಸ್ ಚೌಗಲೆ


