ಕರ್ನಾಟಕ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರಕಾರ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ಪಡೆದಂತಹ ಮುಖ್ಯಮಂತ್ರಿಗಳು, ಸಚಿವರು ಅಧಿಕಾರಕ್ಕೆ ಬಂದ ನಂತರ ಸಂವಿಧಾನದ ಮೂಲಭೂತ ಆಶಯಗಳ ವಿರುದ್ದ ಕೆಲಸ ಮಾಡುತ್ತಿರುವದು ಅತ್ಯಂತ ವಿಷಾಧನೀಯವಾಗಿದೆ. ರಾಜಕೀಯ ಕಾರಣಕ್ಕೆ ಎಲ್ಲ ಪಕ್ಷಗಳು ತಮ್ಮದೇ ಆದ ಆದ್ಯತೆಯ ಕೆಲಸ ಮಾಡುತ್ತ ಆರೋಪ, ಪ್ರತ್ಯಾರೋಪ ಮಾಡುವದು ಸಾಮಾನ್ಯವಾದರೂ ಯಾವ ಸರಕಾರವೂ ಒಂದು ಸಮುದಾಯವನ್ನು ಇಷ್ಟೊಂದು ಅನ್ಯಾಯ ಮಾಡಿರುವದು ಇತಿಹಾಸದಲ್ಲಿ ಕಂಡು ಬರಲಿಕ್ಕಿಲ್ಲ. ಬಿ.ಎಸ್.ಯಡಿಯೂರಪ್ಪನವರ ಸರಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಅದರ ಮೂಲಕ ರಾಜ್ಯದ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬುದ್ಧ, ಪಾರ್ಸಿ ಮತ್ತು ಜೈನ್ ಸಮುದಾಯದ ಮೇಲೆ ತೋರಿಸಿದಷ್ಟು ತಾತ್ಸಾರ, ದ್ವೇಷ, ಅಸೂಹೆ ದೇಶದ ಯಾವ ರಾಜ್ಯ ಸರಕಾರಗಳು ಕೂಡ ಇಷ್ಟೊಂದು ಅನ್ಯಾಯ ಮಾಡಿರುವ ಉದಾಹರಣೆ ಇಲ್ಲ.

ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರಕಾರ ಬಂದ ಮೇಲೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಈ ಹಿಂದೆ ನಿಗದಿಗೊಳಿಸುತ್ತ ಬಂದಿರುವ ಅನುದಾನ ಕಡಿತಗೊಳಿಸಿದ್ದಲ್ಲದೇ ಹಲವು ಯೋಜನೆಗಳನ್ನು ಬಂದ್ ಮಾಡಿದೆ. 2019-20ನೇ ಸಾಲಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರ ಬಜೆಟ್‌ನಲ್ಲಿ ಘೋಷಿಸಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನವನ್ನು 1897.00 ಕೋಟಿ ರೂ. ಯಿಂದ 1571.00 ಕೋಟಿ ರೂ. ಗೆ ಕಡಿಮೆಗೊಳಿಸಿತು. 2020-21ನೇ ಸಾಲಿನಲ್ಲಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರಕಾರ ಮಂಡಿಸಿದ ಬಜೆಟ್‌ನಲ್ಲಿ 1177.00 ಕೋ.ರೂ. ಯಷ್ಟಿದ್ದ ಅನುದಾನವನ್ನು ಮತ್ತೆ ಕಡಿತಗೊಳಿಸಿ 1055.00ಕೋ.ರೂ. ಗೆ ನಿಗದಿಗೊಳಿಸಿದೆ. ಇತ್ತೀಚಿಗೆ ಮತ್ತೆ 1055.00 ಕೋ.ರೂ. ಯಷ್ಟಿದ್ದ ಅನುದಾನದಲ್ಲಿ 50.00 ಕೋ.ರೂ. ಅನುದಾನ ಕಡಿತಗೊಳಿಸಿದೆ.

ಈಗ ಕಡಿತಗೊಳಿಸಿದ ಅನುದಾನದಲ್ಲಿ ಕಳೆದ 5 ವರ್ಷಗಳಿಂದ ಅನುಷ್ಠಾನ ಮಾಡಲಾಗುತ್ತಿದ್ದ ಹಲವು ಜನಪರ ಕಲ್ಯಾಣ ಯೋಜನೆಗಳನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಅನುಷ್ಠಾನ ಮಾಡುವದನ್ನು ನಿಲ್ಲಿಸಿದೆ. ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಜಾರಿಗೊಳಿಸಿದ ಕಾಲೋನಿ ಅಭಿವೃದ್ದಿ ಯೋಜನೆ ಈಗಿನ ಸರಕಾರ ರದ್ದುಗೊಳಿಸಿದೆ, ಭಾರಿ ಸದ್ದುಗೊಳಿಸಿದ ಶಾದಿಭಾಗ್ಯ ಯೋಜನೆಯನ್ನು ಕೂಡ ರದ್ದುಗೊಳಿಸಿದೆ. ಈ ವರ್ಷ ಇದೆಲ್ಲವುಕ್ಕಿಂತ ಪ್ರಮುಖ ಯೋಜನೆಗಳಾದ ವಿದೇಶದಲ್ಲಿ ಉನ್ನತ ವ್ಯಾಸಂಗದ ಯೋಜನೆ, ನಾಗರೀಕ ಪರೀಕ್ಷೆ ತರಬೇತಿ ಯೋಜನೆ, ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ, ಮೆರಿಟ್-ಕಮ್ ಮೀನ್ಸ್ ವಿದ್ಯಾರ್ಥಿ ವೇತನ, ಶುಲ್ಕ ವಿನಾಯತಿ, ವಿದ್ಯಾಸಿರಿಯಂತಹ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದಂತಹ ಯೋಜನೆಗಳ 2019-20ನೇ ಸಾಲಿನ ಅನುದಾನ ಸರಕಾರ ಇಲ್ಲಿಯವರೆಗೆ ಬಿಡುಗಡೆಗೊಳಿಸದೇ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುವಂತಹ ಕೆಲಸ ಮಾಡುತ್ತಿರುವದು ಅಕ್ಷಮ್ಯ ಅಪರಾಧವಾಗುತ್ತದೆ.

ರಾಜ್ಯದಲ್ಲಿ 2016-17 ರಿಂದ ಜಾರಿಯಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಸಂಶೋಧನೆ ಕೈಗೊಂಡಲ್ಲಿ ನೀಡಲಾಗುತ್ತಿದ್ದ ಪ್ರೋತ್ಸಾಹಧನವನ್ನು ಈ ವರ್ಷದಿಂದ ಪ್ರತಿ ತಿಂಗಳು 25000/- ರೂ ಯನ್ನು ಕಡಿತಗೊಳಿಸಿ 8333/- ರೂ ಗೆ ಇಳಿಸಿ ಯಾರೂ ಸಂಶೋಧನೆಯನ್ನು ಪೂರ್ಣಗೊಳಿಸದಂತಹ ವಾತಾವರಣ ನಿರ್ಮಿಸಿದೆ. 2020-21ನೇ ಸಾಲಿನಲ್ಲಿ ರಾಜ್ಯಾದ್ಯಂತಹ ಸುಮಾರು 300 ವಿದ್ಯಾರ್ಥಿಗಳು ಸಂಶೋಧನೆಗಾಗಿ ಪ್ರೋತ್ಸಾಹ ಧನ ಪಡೆಯುತ್ತಿದ್ದರೂ, ಪ್ರತಿ ವಿದ್ಯಾರ್ಥಿಗೆ ವಾರ್ಷಿಕ 3.00 ಲಕ್ಷ ರೂ. ಯಾದರೂ ಒಟ್ಟು 300 ವಿದ್ಯಾರ್ಥಿಗಳಿಗೆ ಈ ಮೊತ್ತ 9.0 ಕೋ.ರೂ ಆಗುತ್ತದೆ. ಹಲವಾರು ಅನುಪಯುಕ್ತ ಯೋಜನೆಗಳಿಗೆ ಸಾವಿರಾರು ಕೋಟಿ ರೂ. ವೆಚ್ಚ ಮಾಡುವ ಸರಕಾರ ಕೇವಲ 9.0 ಕೋ.ರೂ ಗೆ 300 ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿದೆ.

ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ, ಮೆರಿಟ್-ಕಮ್ ಮೀನ್ಸ್ ವಿದ್ಯಾರ್ಥಿ ವೇತನಕ್ಕಾಗಿ ವಾರ್ಷಿಕವಾಗಿ ಕರ್ನಾಟಕ ರಾಜ್ಯದಿಂದ ಸುಮಾರು 12 ಲಕ್ಷ 50 ಸಾವಿರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರ ಸೇರಿ ಒಟ್ಟು 270.00 ಕೋ.ರೂ. ಅನುದಾನ ನಿಗದಿಗೊಳಿಸಲಾಗಿತ್ತು, ಆದರೆ 2019-20ನೇ ಸಾಲಿನಲ್ಲಿ ರಾಜ್ಯ ಸರಕಾರ ಅನುದಾನ ಬಿಡುಗಡೆಗೊಳಿಸದೇ ಇರುವದರಿಂದ ಶೇ 50 ರಷ್ಟು ವಿದ್ಯಾರ್ಥಿಗಳು ಕಳೆದ ವರ್ಷದ ವಿದ್ಯಾರ್ಥಿ ವೇತನ ಪಡೆಯಲು ಸಾದ್ಯವಾಗಿಲ್ಲ. ಈಗಲೂ ಜಾತಕ ಪಕ್ಷಿಯಂತೆ ಸರಕಾರದ ಕಡೆ ಇಂದು ಬಿಡುಗಡೆಯಾಗುವುದೋ ನಾಳೆ ಬಿಡುಗಡೆಯಾಗುವುದೋ ಎಂದು ನೋಡುವಂತಹ ಪರಸ್ಥಿತಿ ಬಡ ಅಲ್ಪಸಂಖ್ಯಾತ ವಿದ್ಯಾರ್ಥಿಗಳದ್ದು.

ಇದನ್ನೂ ಓದಿ: ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪಿಎಚ್‌‌ಡಿ, ಎಂಫಿಲ್ ಫೆಲೋಶಿಪ್ ಕಡಿತಗೊಳಿಸಿದ ಸರ್ಕಾರ!

1980 ರಿಂದ ರಾಜ್ಯದಲ್ಲಿ ಎಲ್ಲ ಹಿಂದುಳಿದ ವಿದ್ಯಾರ್ಥಿಗಳಿಗೆ ಜಾರಿಯಲ್ಲಿದ್ದು, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪ್ರತ್ಯೇಕಗೊಂಡ ನಂತರ ಶುಲ್ಕವಿನಾಯತಿ ಯೋಜನೆ 2014 ರಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಲ್ಪಸಂಖ್ಯಾತ ಸಮುದಾಯದ ಅರ್ಜಿ ಸಲ್ಲಿಸಿದ ಅರ್ಹ ವಿದ್ಯಾರ್ಥಿಗಳಿಗೆ ನೀಡುತ್ತ ಬಂದಿದೆ. ಆದರೆ, 2019-20ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ ಅರ್ಹ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಈಗಲೂ ಅನುದಾನ ಬಿಡುಗಡೆಗೊಳಿಸದೇ ಇರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಡೋಲಾಯನಮಾನವಾಗಿದೆ.

ಅದೇ ರೀತಿ ರಾಜ್ಯದಲ್ಲಿ ಎಲ್ಲ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 2014-15ನೇ ಸಾಲಿನಿಂದ ಮನೆ ಬಿಟ್ಟು ಬೇರೆ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಎಂದೇ ಸಿದ್ದರಾಮಯ್ಯ ನೇತೃತ್ವದ ಸರಕಾರ ಜಾರಿಗೊಳಿಸಿದ ವಿದ್ಯಾಸಿರಿ ಯೋಜನೆಯ 2019-20ನೇ ಸಾಲಿನ ಅನುದಾನ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಬಿಡುಗಡೆಗೊಳಿಸಿದೇ ಇರುವದರಿಂದ ಈ ಯೋಜನೆಯ ಅಲ್ಪಸಂಖ್ಯಾತ ಸಮುದಾಯದ ಫಲಾನುಭವಿಗಳು ಆತಂಕದಲ್ಲಿದ್ದಾರೆ.

ಇನ್ನೂ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಮೂಲಕ ಅನುಷ್ಠಾನ ಮಾಡಲಾಗುತ್ತಿರುವ “ಅರಿವು” ಯೋಜನೆಯೂ ಸಹ ಈ ವರ್ಷ ದಾರಿ ತಪ್ಪಿದೆ, ಇದರ ಮೂಲಕ ಸಾವಿರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತಗೊಳ್ಳುವಂತೆ ಮಾಡಿದೆ. ಅರಿವು ಯೋಜನೆಯ ಮೂಲಕ ಸರಕಾರ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನಿಗಮದಿಂದ ಶೈಕ್ಷಣಿಕ ಸಾಲ ನೀಡಲಾಗುತ್ತಿತ್ತು, ಈ ವರ್ಷ ಸದರಿ ಸಾಲವನ್ನು ವಿದ್ಯಾರ್ಥಿಗಳು ಕೋರ್ಸುಗಳಿಗೆ ಪಾವತಿಸುವ ಮೊತ್ತದ ಅರ್ಧ ಮೊತ್ತ ಮಾತ್ರ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸಾಲದ ರೂಪದಲ್ಲಿ ನೀಡುತ್ತಿದೆ.

ಒಂದು ಕಡೆ ಪ್ರೋತ್ಸಾಹಧನ ಕಡಿತಗೊಳಿಸಿ, ಮತ್ತೊಂದು ಕಡೆ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ, ಮೆರಿಟ್-ಕಮ್ ಮೀನ್ಸ್ ವಿದ್ಯಾರ್ಥಿ ವೇತನದ ಅನುದಾನ ಕಡಿತಗೊಳಿಸಿದ್ದಲ್ಲದೇ ಶುಲ್ಕವಿನಾಯತಿ, ವಿದ್ಯಾಸಿರಿ ಅನುದಾನವೂ ಸರಕಾರ ನೀಡುತ್ತಿಲ್ಲ, ಇದನ್ನು ಹೊರತುಪಡಿಸಿ ಇದ್ದಂತಹ ಅರಿವು ಸಾಲದ ಯೋಜನೆಯನ್ನು ಮೊಟುಕುಗೊಳಿಸಲು ಹೊರಟಿರುವದು ಸರಕಾರ ಅಲ್ಪಸಂಖ್ಯಾತ ಸಮುದಾಯವನ್ನು ಸಂಪೂರ್ಣ ಮೂಲೆಗುಂಪು ಮಾಡುವ ಶಪಥ ಮಾಡಿರುವಂತಿದೆ ಬಿ.ಎಸ್. ಯಡಿಯೂರಪ್ಪನವರ ಆಡಳಿತ ವೈಖರಿ.
ಈ ಇಲಾಖೆಯ ಸಚಿವ ಶ್ರೀಮಂತ ಪಾಟೀಲ್ ಇವರು ಕಳೆದ ಮೂರು ತಿಂಗಳಿಂದ ಕಛೇರಿಗೆ ಆಗಮಿಸದೇ ಇರುವದರಿಂದ ಕಛೇರಿಯ ಅಗುಹೋಗುಗಳನ್ನು, ಇಲಾಖೆಯ ಸಮಸ್ಯೆಗಳನ್ನು ಬಗೆಹರಿಸುವವರು ಯಾರೂ ಇಲ್ಲದಂತಾಗಿದೆ. ಅದೇ ರೀತಿ ಕಳೆದ ಒಂದು ತಿಂಗಳಿಂದ ಇಲಾಖೆಯ ಪ್ರಭಾರಿ ಅಪರ ಮುಖ್ಯ ಕಾರ್ಯದರ್ಶಿ ಸ್ಥಾನ ವಹಿಸಿಕೊಂಡಿರುವ ಅಲ್ಪಸಂಖ್ಯಾತ ಸಮುದಾಯದವರೇ ಆದ ಮಹೇಂದ್ರ ಜೈನ್ ಅವರು ಕಛೇರಿಗೆ ಬಾರದೇ ಇರುವದರಿಂದ ಇಲಾಖೆಗೆ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿ, ಇಡೀ ಇಲಾಖೆ ಅನಾಥವಾಗಿರುವದು ಆತಂಕದ ವಿಷಯವಾಗಿದೆ.

ಈ ನಡುವೆ ಚುನಾವಣೆಯ ದೃಷ್ಟಿಯಿಂದಲೋ ಅಥವಾ ಸಮುದಾಯಗಳ ಮೇಲಿರುವ ಪ್ರತಿಯಿಂದಲೋ ಹಲವಾರು ನಿಗಮ ಮಂಡಳಿ ರಚಿಸಿ ಅನುದಾನ ಘೋಷಿಸುತ್ತ ನಡೆದಿರುವದು ಅನುಮಾನಕ್ಕೆ ದಾರಿ ಮಾಡಿಕೊಡುತ್ತಿದೆ. ಇದ್ದಂತಹ ಇಲಾಖೆಗಳಿಗೆ ಅನುದಾನ ನೀಡದೇ ಹೊಸ ಹೊಸ ನಿಗಮಗಳನ್ನು ಘೋಷಿಸಿ ಅನುದಾನ ನೀಡುತ್ತೇವೆ ಎನ್ನುವದು ನಂಬಲಸಾದ್ಯವಾದ ಮಾತಿನಂತಿದೆ. ಇದೆಲ್ಲ ಗೊತ್ತಿದೆಯೋ ಗೊತ್ತಿಲ್ಲವೋ ವಿರೋಧ ಪಕ್ಷದ ನಾಯಕರಾರೂ ಚಕಾರವೆತ್ತದೇ ಇರುವದು ಕೂಡ ಅನುಮಾನ ಮೂಡಿಸುತ್ತಿದೆ. ವಿರೋಧ ಪಕ್ಷಗಳ ನಾಯಕರ ನಡುವಳಿಕೆ “ಮೌನಂ ಸಮ್ಮತಿ ಲಕ್ಷಣಂ” ಎನ್ನುವಂತಿದೆ. ಸಮುದಾಯದ ಅಭಿವೃದ್ದಿಗೆ ಸಂಬಂಧವೇ ಇಲ್ಲದ ಲವ್ ಜಿಹಾದ್, ಗೋಹತ್ಯೆ ನಿಷೇಧ ಕಾನೂನಿನ ಬಗ್ಗೆ ಮಾತನಾಡುವ ವಿರೋಧ ಪಕ್ಷದ ನಾಯಕರು ಅಲ್ಪಸಂಖ್ಯಾತ ಸಮುದಾಯದ ಶೈಕ್ಷಣಿಕ ಬೆಳವಣಿಗೆಗೆ ತೊಂದರೆಯಾಗುತ್ತಿರುವದು ಕಾಣುತ್ತಿಲ್ಲವೋ ಅಥವಾ ಜಾಣ ಕುರುಡುತನ ಪ್ರದರ್ಶಿಸಲಾಗುತ್ತಿರುವರೋ ತಿಳಿಯದಾಗಿದೆ. ಭಾರತೀಯ ಜನತಾ ಪಕ್ಷದ ಸರಕಾರ ಈ ರೀತಿ ಅನುದಾನ ಕಡಿತಗೊಳಿಸುತ್ತ ಹೋದಲ್ಲಿ ಅಲ್ಪಸಂಖ್ಯಾತರು ಜಾತ್ಯಾತೀತ ಪಕ್ಷವನ್ನು ಬಿಟ್ಟುಹೋಗಲು ಸಾದ್ಯವಾಗುವದಿಲ್ಲ ಎನ್ನುವ ದುರಾಲೋಚನೆಯೋ ವಿವರಿಸಬೇಕಾಗಿದೆ.

  • ಡಾ.ರಝಾಕ ಉಸ್ತಾದ

ರಾಯಚೂರಿನವರಾದ ಡಾ.ರಝಾಕ ಉಸ್ತಾದ, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಹಿರಿಯ ಮುಖಂಡರು.


ಇದನ್ನೂ ಓದಿ: ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಫೆಲೋಶಿಪ್‌ ಕಡಿತ: ವಿದ್ಯಾರ್ಥಿ ಸಂಘಟನೆಗಳ ಆಕ್ರೋಶ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಡಾ.ರಝಾಕ ಉಸ್ತಾದ

LEAVE A REPLY

Please enter your comment!
Please enter your name here