’ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ರೈತರ ಹಿತಾಸಕ್ತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡಿದೆ ಎಂದು ನಟ-ರಾಜಕಾರಣಿ ಸನ್ನಿ ಡಿಯೋಲ್ ತಮ್ಮ ಪಕ್ಷವನ್ನು ಸಮರ್ಥಿಸಿಕೊಂಡಿದ್ದಾರೆ. ಕೇಂದ್ರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ರೈತರ ಭಾರಿ ಪ್ರತಿಭಟನೆಗಳ ನಡುವೆಯೂ ತಮ್ಮ ಪಕ್ಷವನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ನಟ, ರಾಜಕಾರಣಿ, ಇದು ರೈತರು ಮತ್ತು ಸರ್ಕಾರದ ನಡುವಿನ ವಿಷಯ, ಯಾರು ಮಧ್ಯೆ ಬರಬೇಡಿ ಎಂದಿದ್ದಾರೆ.
“ಇದು ನಮ್ಮ ರೈತರು ಮತ್ತು ಸರ್ಕಾರದ ನಡುವಿನ ವಿಷಯ ಎಂದು ನಾನು ಇಡೀ ಜಗತ್ತಿಗೆ ವಿನಂತಿಸುತ್ತೇನೆ. ಅವರ ನಡುವೆ ಬರಬೇಡಿ, ಏಕೆಂದರೆ ಇಬ್ಬರೂ ಚರ್ಚೆಯ ನಂತರ ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಅನೇಕ ಜನರು ಪರಿಸ್ಥಿತಿಯ ಲಾಭವನ್ನು ಪಡೆಯಲು ಬಯಸುತ್ತಾರೆ. ತಾವೇ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ನನಗೆ ತಿಳಿದಿದೆ. ಅವರು ರೈತರ ಬಗ್ಗೆ ಯೋಚಿಸುತ್ತಿಲ್ಲ. ಅವರು ತಮ್ಮದೇ ಆದ ಕಾರ್ಯಸೂಚಿಯನ್ನು ಹೊಂದಿರಬಹುದು” ಎಂದು ಸನ್ನಿ ಡಿಯೋಲ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ’ಈ ಹೋರಾಟ ಕೇವಲ ರೈತರದ್ದಲ್ಲ, ಎಲ್ಲಾ ದೇಶವಾಸಿಗಳದ್ದು’: ಭಾರತ್ ಬಂದ್ ಬೆಂಬಲಿಸಿದ ಆಪ್
— Sunny Deol (@iamsunnydeol) December 6, 2020
“ನಾನು ಮತ್ತು ನನ್ನ ಪಕ್ಷ ರೈತರೊಂದಿಗೆ ನಿಲ್ಲುತ್ತವೆ ಮತ್ತು ಯಾವಾಗಲೂ ರೈತರೊಂದಿಗೆ ಇರುತ್ತದೆ. ನಮ್ಮ ಸರ್ಕಾರ ಯಾವಾಗಲೂ ರೈತರ ಸುಧಾರಣೆಯ ಬಗ್ಗೆ ಯೋಚಿಸುತ್ತದೆ ಮತ್ತು ರೈತರೊಂದಿಗೆ ಮಾತುಕತೆ ನಡೆಸಿದ ನಂತರ ಸರ್ಕಾರವು ಸರಿಯಾದ ನಿರ್ಧಾರವನ್ನು ತಿಳಿಸುತ್ತದೆ ಎಂದು ನನಗೆ ಖಾತ್ರಿಯಿದೆ “ಎಂದು ಹೇಳಿದ್ದಾರೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ ಬಿಜೆಪಿಗೆ ಸೇರ್ಪಡೆಯಾದ ನಂತರ ನಟ ಸನ್ನಿ ಡಿಯೋಲ್ ಪಂಜಾಬ್‌ನ ಗುರುದಾಸ್‌ಪುರದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ.
ರೈತರ ಪ್ರತಿಭಟನೆಯನ್ನು ಗಾಯಕ-ನಟ ದಿಲ್ಜಿತ್ ದೋಸಂಜ್, ಬಾಲಿವುಡ್ ನಟಿ ಸ್ವರಾ ಭಾಸ್ಕರ್, ರಿಚಾ ಚಾಡ್ಡಾ, ತಾಪ್ಸಿ ಪನ್ನು, ರಿತೇಶ್ ದೇಶ್‌ಮುಖ್, ಮಿಕಾ ಸಿಂಗ್, ವಿಜೇಂದರ್ ಸಿಂಗ್ ಸೇರಿದಂತೆ ಪಂಜಾಬಿ ಚಿತ್ರೋದ್ಯಮ, ಕ್ರಿಡಾಪಟುಗಳು ಬೆಂಬಲ ಸೂಚಿಸಿದ್ದಾರೆ.


