ನಿನ್ನೆ ತಾನೇ ಮಾಜಿ ಸ್ಪೀಕರ್ ರಮೇಶ್ ಕುಮಾರ್ ರಾಜಕೀಯ ನಿವೃತ್ತಿ ಘೋಷಿಸಿರುವುದಾಗಿ ವದಂತಿಗಳು ಹರಿದಾಡುತ್ತಿದ್ದವು. ಇದಕ್ಕೆ ಸ್ಪಷ್ಟನೆ ನೀಡಿರುವ ರಮೇಶ್ ಕುಮಾರ್ ’ನನ್ನ ರಾಜಕೀಯ ನಿವೃತ್ತಿ ಕೇವಲ ವದಂತಿಯಷ್ಟೇ’ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ರಮೇಶ್ ಕುಮಾರ್, ರಾಜಕೀಯ ನಿವೃತ್ತಿ ಬಗ್ಗೆ ನಾನು ಯಾವುದೇ ಹೇಳಿಕೆ ಕೊಟ್ಟಿಲ್ಲ. ನಿವೃತ್ತಿ ಘೋಷಿಸಿದ್ದೇನೆ ಎಂಬುದು ಕೇವಲ ವದಂತಿಯಷ್ಟೇ. ರಾಜಕೀಯ ನಿವೃತ್ತಿ ಬಗ್ಗೆ ನಾನೇ ನಿರ್ಧಾರ ತೆಗೆದುಕೊಳ್ಳಲು ಆಗಲ್ಲ ಎಂದಿದ್ದಾರೆ.
“ನನ್ನನ್ನ ಈ ಮಟ್ಟಕ್ಕೆ ಬೆಳೆಸಿದ ಜನರು ನನ್ನ ನಿವೃತ್ತಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಿದೆ. ಜನರು ನನ್ನ ಎಲ್ಲಾ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದಾರೆ. ನನ್ನ ರಾಜಕೀಯ ನಿವೃತ್ತಿ ಬಗ್ಗೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲು ಆಗಲ್ಲ, ಏಕೆಂದರೇ ನಾನು ಜನರ ಪ್ರೀತಿ ಬಂಧನದಲ್ಲಿದ್ದೇನೆ” ಎಂದರು.
ನಿನ್ನೆ ಕೊಲಾರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರ್ತರ ಸಭೆಯಲ್ಲಿ ’ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಗೌರವಯುತವಾಗಿ ಸಕ್ರಿಯ ರಾಜಕಾರಣದಿಂದ ನಿವೃತ್ತನಾಗುತ್ತೇನೆ’ ಎಂದು ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್‌ಕುಮಾರ್ ಹೇಳಿದ್ದಾರೆ ಎಂದು ವದಂತಿ ಹಬ್ಬಿತ್ತು.


