ಮಹಾರಾಷ್ಟ್ರದ ಸರ್ಕಾರಿ ಅಧಿಕಾರಿಗಳು, ಉದ್ಯೋಗಿಗಳು ಮತ್ತು ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಿದವರು ಎಲ್ಲರಿಗೂ ಸೇರಿದಂತೆ ಇನ್ನು ಮುಂದೆ ಸರ್ಕಾರಿ ಕಚೇರಿಯಲ್ಲಿ ವಸ್ತ್ರ ಸಂಹಿತೆ ಪಾಲಿಸುವಂತೆ ಸರ್ಕಾರ ಸೂಚಿಸಿದೆ. ಜೀನ್ಸ್, ಟೀ ಶರ್ಟ್ ಮತ್ತು ಚಪ್ಪಲಿ ಧರಿಸದಂತೆ, ವಾರಕ್ಕೆ ಒಮ್ಮೆ ಖಾದಿ ಬಟ್ಟೆಗಳನ್ನು ಬಳಸುವಂತೆ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಆದೇಶಿಸಿದೆ.
ಈ ವಾರದ ಆರಂಭದಲ್ಲಿ, ರಾಜ್ಯ ಸರ್ಕಾರದ ಸಾಮಾನ್ಯ ಆಡಳಿತ ವಿಭಾಗವು ತನ್ನ ಎಲ್ಲ ಉದ್ಯೋಗಿಗಳಿಗೆ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಜಾರಿಗೆ ತರುವ ನಿರ್ಣಯವನ್ನು ಹೊರಡಿಸಿತ್ತು. ಸರ್ಕಾರಿ ಉದ್ಯೋಗಿಗಳು ರಾಜ್ಯದ ಪ್ರತಿನಿಧಿಗಳಾಗಿದ್ದು, ಅವರು ಫಾರ್ಮಲ್ ಬಟ್ಟೆ ಧರಿಸದಿದ್ದರೇ ಜನರ ಮನಸ್ಸಿನಲ್ಲಿ ಸರ್ಕಾರದ ಕೆಟ್ಟ ಚಿತ್ರಣ ಮೂಡಬಹುದು ಎಂಬ ಕಾರಣ ನೀಡಿದ್ದಾರೆ.
’ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಬಹಳಷ್ಟು ಅಧಿಕಾರಿಗಳು ಮತ್ತು ನೌಕರರು, ಅದರಲ್ಲೂ ವಿಶೇಷವಾಗಿ ಗುತ್ತಿಗೆ ಪಡೆದವರು ಅಥವಾ ಸಲಹೆಗಾರರಾಗಿ ನೇಮಕಗೊಂಡವರು ಕಚೇರಿ ಸಮಯದಲ್ಲಿ ಸರ್ಕಾರಿ ನೌಕರರಂತೆ ಸೂಕ್ತವಾದ ಬಟ್ಟೆಗಳನ್ನು ಧರಿಸುವುದಿಲ್ಲ. ಇದರ ಪರಿಣಾಮವಾಗಿ, ಸಮಾಜದಲ್ಲಿ ಸರ್ಕಾರಿ ಅಧಿಕಾರಿಗಳ ಚಿತ್ರಣವು ಕೆಟ್ಟದಾಗಿರುತ್ತದೆ’ ಎಂದು ಆದೇಶದಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ನಿಲ್ಲದ ರೈತ ಹೋರಾಟ: 100 ಪತ್ರಿಕಾಗೋಷ್ಟಿ, 700 ಸಭೆಗಳ ಮೂಲಕ ಪ್ರಚಾರಕ್ಕೆ ಹೊರಟ ಬಿಜೆಪಿ!
“ಸರ್ಕಾರಿ ಅಧಿಕಾರಿಯ ಡ್ರೆಸ್ ಕೋಡ್ ಸೂಕ್ತವಲ್ಲದ, ಕಳಪೆ ಅಥವಾ ಅಶುದ್ಧವಾಗಿದ್ದರೆ ಅದು ಅವರ ಒಟ್ಟಾರೆ ಕೆಲಸದ ಮೇಲೆ ಪರೋಕ್ಷ ಪರಿಣಾಮ ಬೀರುತ್ತದೆ” ಎಂದು ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ದೇಶಪಾಂಡೆ ಸಹಿ ಮಾಡಿರುವ ಆದೇಶ ಪ್ರತಿಯಲ್ಲಿ ತಿಳಿಸಲಾಗಿದೆ.
ಡ್ರೆಸ್ ಕೋಡ್ ಹೇಗಿರಬೇಕು..?
ಸರ್ಕಾರದ ಹೊಸ ಡ್ರೆಸ್ ಕೋಡ್ ಪ್ರಕಾರ, ಎಲ್ಲಾ ಮಹಿಳಾ ಉದ್ಯೋಗಿಗಳು ಸೀರೆಗಳು, ಚೂಡಿದಾರ್, ಕುರ್ತಾ, ದುಪಟ್ಟಾ ಧರಿಸಬೇಕು. ಪುರುಷರು ಮತ್ತು ಮಹಿಳಾ ಉದ್ಯೋಗಿಗಳಿಗೆ ಜೀನ್ಸ್ ಮತ್ತು ಟೀ ಶರ್ಟ್, ಗಾಢ ಬಣ್ಣದ, ಮುದ್ರಿತ ಅಥವಾ ಕಸೂತಿ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಫಾರ್ಮಲ್ ಬೂಟುಗಳು, ಸ್ಯಾಂಡಲ್ಸ್‌ಗಳನ್ನು ಬಳಸಬೇಕು. ಲೈಟ್ ವೇಯ್ಟ್ ಚಪ್ಪಲಿಗಳನ್ನು ಧರಿಸಬಾರದೆಂದು ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ.
ಖಾದಿ ಉದ್ಯಮವನ್ನು ಉತ್ತೇಜಿಸುವ ಸಲುವಾಗಿ, ಸರ್ಕಾರಿ ನೌಕರರು ವಾರಕ್ಕೆ ಒಮ್ಮೆಯಾದರೂ ಕಡ್ಡಾಯವಾಗಿ ಖಾದಿ ಬಟ್ಟೆಗಳನ್ನು ಧರಿಸಬೇಕು ಎಂದು ತಿಳಿಸಲಾಗಿದೆ.
ಇತ್ತಿಚೆಗೆ ಮಹಾರಾಷ್ಟ್ರದ ಔರಂಗಾಬಾದ್ ನಗರದಲ್ಲಿ ಬಸ್ ಕಂಡಕ್ಟರ್‌ಗಳು ಮತ್ತು ಟಿಕೆಟ್ ಇನ್ಸ್‌ಪೆಕ್ಟರ್‌ಗಳು ಶೀಘ್ರದಲ್ಲೇ ತಮ್ಮ ಸಮವಸ್ತ್ರದಲ್ಲಿ ಕ್ಯಾಮೆರಾ ಹೊಂದಿಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು. ಇದರಿಂದ ಪ್ರಯಾಣ ಸಮಯದಲ್ಲಿ ಪ್ರಯಾಣಿಕರ ವರ್ತನೆ ಮತ್ತು ಇತರ ಚಟುವಟಿಕೆಗಳ ಬಗ್ಗೆ ಗಮನ ಇರಿಸಲಾಗುತ್ತದೆ ಎಂದು ಮಾಹಿತಿ ನೀಡಲಾಗಿತ್ತು


