ನಟ, ನಿರ್ದೇಶಕ, ರಾಜಕಾರಣಿ ಕಮಲ್ ಹಾಸನ್ 2021ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಇಂದಿನಿಂದ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಪ್ರಚಾರ ಆರಂಭಿಸುವ ಮೊದಲು ಹೊಸ ಸಂಸತ್ತಿಗೆ ಅಡಿಗಲ್ಲು ಹಾಕಿರುವ ಪ್ರಧಾನಿ ಮೋದಿಯವರ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ದೇಶದ ಆರ್ಥಿಕತೆ ತೀವ್ರ ಕುಸಿತ ಕಂಡಿರುವ ಈ ಸಮಯದಲ್ಲಿ ಇಂತಹ ಬೃಹತ್ ಮೊತ್ತದ ಹೊಸ ಸಂಸತ್ತು ನಿರ್ಮಾಣದ ಅರ್ಥವೇನು ಎಂದು ಮಕ್ಕಳ್ ನೀದಿ ಮಯ್ಯಂ ಪಕ್ಷದ ಸಂಸ್ಥಾಪಕರಾದ ನಟ ಕಮಲ್ ಹಾಸನ್ ಪ್ರಧಾನಿಯವರನ್ನು ಪ್ರಶ್ನಿಸಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಕಮಲ್ ಹಾಸನ್, “ಭಾರತದ ಅರ್ಧದಷ್ಟು ಜನರು ಹಸಿವಿನಿಂದ ಬಳಲುತ್ತಿರುವಾಗ, ಕೊರೊನಾ ವೈರಸ್‌ನಿಂದಾಗಿ ಜೀವನೋಪಾಯವನ್ನು ಕಳೆದುಕೊಂಡಿರುವಾಗ 1,000 ಕೋಟಿ ವೆಚ್ಚದ ಹೊಸ ಸಂಸತ್ತು ಏಕೆ..?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ನಾಸ್ತಿಕತೆಯೇ ನನ್ನ ಆಯುಧ, ಮಾನವೀಯತೆ ನನ್ನ ಸಿದ್ಧಾಂತ: ಕಮಲ್ ಹಾಸನ್ ಹೇಳಿಕೆ ವೈರಲ್
ಕಮಲ್ ಹಾಸನ್ ಚೀನಾದ ಮಹಾಗೋಡೆ ನಿರ್ಮಾಣದ ಉದಾಹರಣೆ ನೀಡಿದ್ದಾರೆ. “ಚೀನಾದ ಮಹಾಗೋಡೆಯ ನಿರ್ಮಾಣದಲ್ಲಿ ಸಾವಿರಾರು ಜನರು ಸಾವನ್ನಪ್ಪಿದಾಗ, ಈ ಗೋಡೆ ಜನರನ್ನು ರಕ್ಷಿಸಲು ಎಂದು ರಾಜರು ಹೇಳಿದರು. ಈಗ ಕೊರೊನಾದಿಂದಾಗಿ ಜೀವನೋಪಾಯ ಕಳೆದುಕೊಂಡ ನಂತರ ಭಾರತದ ಅರ್ಧದಷ್ಟು ಜನರು ಹಸಿವಿನಿಂದ ಬಳಲುತ್ತಿರುವಾಗ, 1,000 ಕೋಟಿ ರೂ.ಗಳ ಸಂಸತ್ತನ್ನು ಯಾರಿಗಾಗಿ ನಿರ್ಮಿಸುತ್ತಿದ್ದಿರಿ..? ದಯವಿಟ್ಟು, ನನ್ನ ಗೌರವಾನ್ವಿತ ಚುನಾಯಿತ ಪ್ರಧಾನಿಗಳೇ ಉತ್ತರಿಸಿ ಎಂದು ಪ್ರಶ್ನಿಸಿದ್ದಾರೆ.
சீனப்பெருஞ்சுவர் கட்டும் பணியில் ஆயிரக்கணக்கான மக்கள் மடிந்து போனார்கள். மக்களைக் காக்கத்தான் இந்தச் சுவர் என்றார்கள் மன்னர்கள். கொரோனாவால் வாழ்வாதாரம் இழந்து பாதி இந்தியா பட்டினி கிடக்கையில்,ஆயிரம் கோடியில் பாராளுமன்றம் கட்டுவது யாரைக்காக்க?
(1/2)— Kamal Haasan (@ikamalhaasan) December 13, 2020
ರಾಷ್ಟ್ರ ರಾಜಧಾನಿಯಲ್ಲಿ ಸೆಂಟ್ರಲ್ ವಿಸ್ತಾದ 20,000 ಕೋಟಿ ಯೋಜನೆಯ ಕೇಂದ್ರಬಿಂದುವಾಗಿರುವ ಹೊಸ ಸಂಸತ್ ಕಟ್ಟಡಕ್ಕೆ ಡಿಸೆಂಬರ್ 10 ರಂದು ಪ್ರಧಾನಿ ನರೇಂದ್ರ ಮೋದಿ ಅಡಿಗಲ್ಲು ಹಾಕಿದ್ದಾರೆ. ಆದರೆ, ಸಂಸತ್ ಭವನದ ನಿರ್ಮಾಣವನ್ನು ತಕ್ಷಣ ಪ್ರಾರಂಭಿಸಲು ಸಾಧ್ಯವಿಲ್ಲ. ಏಕೆಂದರೆ, ಈ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ಇನ್ನು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದೆ.
ಇದನ್ನೂ ಓದಿ: ನೂತನ ಸಂಸತ್ ಭವನಕ್ಕೆ ಮೋದಿ ಭೂಮಿಪೂಜೆ: ಮುಂದುವರಿದ ಅನ್ನದಾತರ ಪ್ರತಿಭಟನೆ
ತಮಿಳುನಾಡು ಚುನಾವಣೆ ಹಿನ್ನೆಲೆ, ಇಂದಿನಿಂದ 16ನೇ ತಾರೀಖಿನವರೆಗೆ ಸುದೀರ್ಘ ಪ್ರಚಾರದಲ್ಲಿ ಕಮಲ್ ಹಾಸನ್ ತೊಡಗಲಿದ್ದು, ಮಧುರೈ, ಥೇಣಿ, ದಿಂಡಿಗಲ್, ವಿರುಧುನಗರ್, ತಿರುಣಲ್ವೇಲಿ, ಟುಟುಕೊರಿನ್ ಹಾಗೂ ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಪ್ರಚಾರ ಮಾಡಲಿದ್ದಾರೆ.
ಕಮಲ್ ಹಾಸನ್ ಈ ಬಾರಿ ಸ್ಪರ್ಧಿಸುವ ಸಾಧ್ಯತೆಯಿದ್ದು, ಭ್ರಷ್ಟಾಚಾರ ನಿರ್ಮೂಲನೆ, ಉದ್ಯೋಗಗಳು, ಗ್ರಾಮ ಅಭಿವೃದ್ಧಿ ಮತ್ತು ಕುಡಿಯುವ ನೀರು ತಮ್ಮ ಪಕ್ಷದ ಪ್ರಮುಖ ಯೋಜನೆಗಳನ್ನಾಗಿ ಮಾಡಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ ಕಮಲ್ ಪಕ್ಷವು ಸುಮಾರು 4 ಶೇಕಡಾ ಮತಗಳನ್ನು ಗಳಿಸಿದೆ.
ಮೊದಲಿನಿಂದಲೂ ಬಿಜೆಪಿ ವಿರುದ್ಧ ಟೀಕೆಗಳನ್ನು ಮಾಡುತ್ತ ಬಂದಿರುವ ನಟ ಕಮಲ್, ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವಾದ ”ಮಕ್ಕಳ್ ನೀದಿ ಮಯ್ಯಂ” ಉತ್ತಮ ಜನರೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ, ಮುಂಬರುವ ಚುನಾವಣೆಯಲ್ಲಿ ನಟ ರಜನಿಕಾಂತ್ ಬೆಂಬಲವನ್ನು ಕೇಳುತ್ತೇನೆ ಎಂದು ಎಂದು ಈ ಹಿಂದೆ ಹೇಳಿದ್ದಾರೆ.
ಈಗಾಗಲೇ ತಮಿಳುನಾಡು ರಾಜಕೀಯದಲ್ಲಿ ಚಿತ್ರರಂಗದ ಜೊತೆಗೆ ಐಎಎಸ್ ಅಧಿಕಾರಿಗಳು ಸೇರಿಕೊಂಡಿದ್ದಾರೆ. ಐಎಎಸ್ ಮಾಜಿ ಅಧಿಕಾರಿ ಸಸಿಕಾಂತ್ ಸೆಂಥಿಲ್, ಅಣ್ಣಾಮಲೈ ಸೇರಿಕೊಂಡರೇ, ಡಿಸೆಂಬರ್ 31 ರಂದು ಪಕ್ಷವನ್ನು ಅಧಿಕೃತ ಘೋಷಣೆ ಮಾಡುವುದಾಗಿ ರಜನಿಕಾಂತ್ ಹೇಳಿದ್ದಾರೆ. ಒಟ್ಟಾರೆ, ಈ ಬಾರಿಯ ತಮಿಳುನಾಡಿನ ವಿಧಾನಸಭಾ ಚುನಾವಣೆ ದೇಶದ ಗಮನ ಸೆಳೆಯಲಿದೆ.


