ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಿರುವ ಪಂಜಾಬ್ ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಚಂಡೀಗಢದ ಕಾರಾಗೃಹಗಳ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಆಗಿ ನೇಮಕಗೊಂಡಿದ್ದ 56 ವರ್ಷದ ಲಖ್ವಿಂದರ್ ಸಿಂಗ್ ಜಖರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ರಾಜೀನಾಮೆ ಪತ್ರದಲ್ಲಿ, “ನಾನು ಮೊದಲು ರೈತ, ನಂತರ ಪೊಲೀಸ್ ಅಧಿಕಾರಿ. ಇಂದು ನನಗೆ ಯಾವುದೇ ಸ್ಥಾನ ಸಿಕ್ಕಿದ್ದರೂ, ಅದಕ್ಕೆ ಕಾರಣ ನನ್ನ ತಂದೆ ಹೊಲಗಳಲ್ಲಿ ಕೃಷಿಕರಾಗಿ ಕೆಲಸ ಮಾಡಿದ್ದು. ಕೃಷಿಯಿಂದಲೇ ಸಂಪಾದಿಸಿ ಅವರು ನನ್ನನ್ನು ವಿದ್ಯಾವಂತನಾಗಿಸಿದ್ದಾರೆ. ಆದ್ದರಿಂದ, ನನಗೆ ಸಿಕ್ಕಿರುವ ಎಲ್ಲದಕ್ಕೂ ನಾನು ಕೃಷಿಗೆ ಋಣಿಯಾಗಿದ್ದೇನೆ ”ಎಂದು 56 ವರ್ಷದ ಅಧಿಕಾರಿ ಹೇಳಿದ್ದಾರೆ.
“ನಾನು ಎಲ್ಲಾ ಫಾರ್ಮಲಿಟಿಸ್ ಪೂರ್ಣಗೊಳಿಸಿದ್ದೇನೆ. ಆದ್ದರಿಂದ, ನನ್ನ ರಾಜೀನಾಮೆಯನ್ನು ಸ್ವೀಕರಿಸುವಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಲಖ್ವಿಂದರ್ ಸಿಂಗ್ ಜಖರ್ ಹೇಳಿದ್ದಾರೆ.
ಇದನ್ನೂ ಓದಿ: ರೈತರಿಗೆ ಬೆಂಬಲ ಸೂಚಿಸಿ ಜಾನುವಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಶಾಸಕನ ರಾಜೀನಾಮೆ
ಲಖ್ವಿಂದರ್ ಸಿಂಗ್ ಜಖರ್, 14 ಪಂಜಾಬ್ (ನಭಾ ಅಕಾಲ್) ರೆಜಿಮೆಂಟ್‌ನಲ್ಲಿ 1989- 1994 ರಿಂದ ಸಣ್ಣ ಸೇವಾ ಆಯೋಗದ ಅಧಿಕಾರಿಯಾಗಿ ಆಗಿ ಸೇವೆ ಸಲ್ಲಿಸಿದರು ಮತ್ತು ನಂತರ ಪಂಜಾಬ್ ಪೊಲೀಸ್ ಇಲಾಖೆಗೆ ಸೇರಿದರು.
ಜಖರ್ ತಮ್ಮ ರಾಜೀನಾಮೆಯನ್ನು ಪ್ರಧಾನ ಕಾರ್ಯದರ್ಶಿ (ಕಾರಾಗೃಹ) ಡಿಕೆ ತಿವಾರಿ ಅವರಿಗೆ ಸಲ್ಲಿಸಿದ್ದಾರೆ ಎಂದು ಜೈಲುಗಳ ಸಹಾಯಕ ಮಹಾನಿರ್ದೇಶಕ ಪರ್ವೀನ್ ಕುಮಾರ್ ಸಿನ್ಹಾ, ಲಖ್ವಿಂದರ್ ಸಿಂಗ್ ಜಖರ್ ರಾಜೀನಾಮೆ ನೀಡಿರುವುದನ್ನು ದೃಢಪಡಿಸಿದ್ದಾರೆ.
ದೆಹಲಿಯಲ್ಲಿ ಪ್ರತಿಭಟನಾ ರೈತರನ್ನು ಬೆಂಬಲಿಸಲು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಅವರ ತಾಯಿ ಪ್ರೋತ್ಸಾಹಿಸಿದರು ಎಂದು ಹೇಳಿದ್ದಾರೆ. ಜೊತೆಗೆ “ನಾನು ಶೀಘ್ರದಲ್ಲೇ ರೈತರು ಹೋರಾಡುತ್ತಿರುವ ದೆಹಲಿಗೆ ಭೇಟಿ ನೀಡುವ ಸಾಧ್ಯತೆಯಿದೆ” ಎಂದು ಮಾಹಿತಿ ನೀಡಿದ್ದಾರೆ.
ಈಗಾಗಲೇ ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರಿಗೆ ಬೆಂಬಲವಾಗಿ ಅನೇಕ ಅಧಿಕಾರಿಗಳು, ರಾಜಕೀಯ ನಾಯಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಪಂಜಾಬ್‌ನ ಚಿತ್ರೋದ್ಯಮ, ಕ್ರಿಡಾಪಟುಗಳು, ಸಾಹಿತಿಗಳು ತಮ್ಮ ಪ್ರಶಸ್ತಿ ಹಿಂತಿರುಗಿಸಲು ನಿರ್ಧರಿಸಿದ್ದಾರೆ.



ನಾನು ಬಾಗವಹಿಸಬಹುದಾ