ಮಂಗಳಮುಖಿ ಅಥವಾ ಲೈಂಗಿಕ ಅಲ್ಪಸಂಖ್ಯಾತರು ಇಂದಿಗೂ ಮುಖ್ಯವಾಹಿನಿಗೆ ಬಂದು ಎಲ್ಲರಂತೆ ಬದುಕಲು ಹೆಣಗಾಡುತ್ತಿದ್ದಾರೆ. ಆದರೆ ನಮ್ಮ ಸಮಾಜ ಇನ್ನೂ ಈ ಪ್ರಕ್ರಿಯೆಗೆ ಮುಕ್ತವಾಗಿಲ್ಲ. ಆದರೆ ತಮಿಳುನಾಡಿನ ತಿರುಚ್ಚಿ ಯಲ್ಲಿ ಆಶಾದಾಯಕ ಬೆಳವಣಿಗೆಯೊಂದು ನಡೆದಿದ್ದು, ಯುವ ಮಂಗಳಮುಖಿಯನ್ನು ಶಾಲೆಯೊಂದರಲ್ಲಿ ದಾಖಲು ಮಾಡಿಕೊಳ್ಳಲಾಗಿದೆ.
ತನ್ನ ದೇಹದಲ್ಲಾದ ಬದಲಾವಣೆಗಳು ಬೆಳಕಿಗೆ ಬಂದಾಗ ಹರಿಹರನ್‌ಗೆ 10 ವರ್ಷ. 5 ನೇ ತರಗತಿಯಲ್ಲಿ ಓದುತ್ತಿದ್ದ ಹುಡುಗನಲ್ಲಿನ ಬದಲಾವಣೆಗಳನ್ನು ಕುಟುಂಬ ಸ್ವೀಕರಿಸಿರಲಿಲ್ಲ. ಹಾಗಾಗಿ ಪೋಷಕರು ತೀವ್ರ ಹಿಂಸೆ ನೀಡುತ್ತಿದ್ದರು. ನಂತರ ಪೊಲೀಸರಿಂದ ರಕ್ಷಿಸಲ್ಪಟ್ಟ ಹರಿಹರನ್ ಭವಿಷ್ಯದಲ್ಲಿ ತಾನೂ ಪೊಲೀಸ್ ಆಗಬೇಕು ಎಂದು ನಿರ್ಧರಿಸಿ, ತನ್ನ ನೆರೆಯಲ್ಲಿದ್ದ ಮಂಗಳಮುಖಿಯ ಆಶ್ರಯದಲ್ಲಿ ಬೆಳೆದು ಈಗ 11 ನೇ ತರಗತಿಯ ವ್ಯಾಸಾಂಗಕ್ಕೆಂದು ಶ್ರೀ ಶಿವಾನಂದ ಶಾಲೆಗೆ ದಾಖಲಾಗಿದ್ದಾ’ಳೆ’. ಅಂದಹಾಗೆ ಈಗ ಹರಿಹರನ್ ‘ಹರಿಣಿ’ಯಾಗಿದ್ದಾಳೆ.
ಇದನ್ನೂ ಓದಿ: ‘She Man’: ನೋಯ್ಡಾ ಮೆಟ್ರೋ ಸ್ಟೇಷನ್ ಹೆಸರಿಗೆ ಟ್ರಾನ್ಸ್‌ಜೆಂಡರ್ ಸಮುದಾಯದ ವಿರೋಧ
“ನಾನು ನನ್ನ ತಾಯಿಯ ಸೀರೆ ಧರಿಸುತ್ತಿದ್ದೆ. ಮಸ್ಕರಾ, ಲಿಪ್‌ಸ್ಟಿಕ್ ಹಾಕಿಕೊಳ್ಳುತ್ತಿದ್ದೆ. ನೃತ್ಯವನ್ನು ತುಂಬಾ ಇಷ್ಟಪಡುತ್ತಿದ್ದೆ. ಹೀಗಿರುವಾಗ ನಾನು ನನ್ನನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದೆ. ಜೊತೆಗೆ ವಾಸ್ತವಿಕವಾಗಿ ಇದು ‘ನಾನು’ ಎಂದು ತಿಳಿದಿದ್ದೆ. ಕ್ರಮೇಣ ನನ್ನ ದೇಹ ಮತ್ತು ಭಾವನೆಗಳು ಬದಲಾಗಲಾರಂಭಿಸಿತು. ಆದರೆ ನನ್ನ ಕುಟುಂಬ ಅದನ್ನು ಗಮನಿಸಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ನಾನು ಟ್ರಾನ್ಸ್‌ಜೆಂಡರ್ ಎಂದು ಅರಿತುಕೊಂಡೆ. ಆದರೆ ನನ್ನ ಕುಟುಂಬ ಇದನ್ನು ಸ್ವೀಕರಿಸಲಿಲ್ಲ. ನನ್ನ ಹಿರಿಯ ಸಹೋದರ ಮತ್ತು ಇತರ ಕುಟುಂಬ ಸದಸ್ಯರು ನನ್ನನ್ನು ಹಿಂಸಿಸುತ್ತಿದ್ದರು. ನಾನು ಹುಡುಗನಂತೆ ಇರಬೇಕು ಎಂದು ಬಲವಂತ ಮಾಡುತ್ತಿದ್ದರು” ಎಂದು ಹರಿಣಿ ಹೇಳುತ್ತಾಳೆ.
ಮನೆಯಲ್ಲಿ ಹಿಂಸೆ ಹೆಚ್ಚಾದಾಗ, ಹತ್ತಿರದಲ್ಲಿಯೇ ವಾಸಿಸುತ್ತಿದ್ದ ಮತ್ತೊಬ್ಬ ಮಂಗಳಮುಖಿ ಏಂಜಲ್ ಎಂಬುವವರು ಹರಿಣಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡರು. ಹರಿಣಿಯ ಜೀವನವು ತನ್ನ ಜೀವನದಂತೆ ಆಗಬಾರದು ಎಂದು ನಿರ್ಧರಿಸಿ ಆಕೆಗೆ ಶಿಕ್ಷಣ ನೀಡಲು ಮುಂದಾದರು. ಈ ಸಂದರ್ಭದಲ್ಲಿ ಶಿವಾನಂದ ರೆಸಿಡೆನ್ಶಿಯಲ್ ಶಾಲೆಯ ಬಗ್ಗೆ ತಿಳಿದ ಏಂಜೆಲ್ ಹರಿಣಿಯನ್ನು ನಿನ್ನೆ ಶಾಲೆಗೆ ಸೇರಿಸಿದ್ದಾರೆ.
ಇದನ್ನೂ ಓದಿ: ಟ್ರಾನ್ಸ್‌ಜೆಂಡರ್ ಸಮುದಾಯದ ಅರಿವಿನ ಲೋಕ ವಿಸ್ತರಿಸುತ್ತಿರುವ ಉಮಾ
ನಿವೃತ್ತ ಮೇಜರ್ ಜನರಲ್ ಎನ್‌ಆರ್‌ಕೆ ಬಾಬು ಅವರ ಕನಸಿನ ಕೂಸಾಗಿದ್ದ ಈ ಶಾಲೆಯ ಹಾಸ್ಟಲ್‌ನಲ್ಲಿ ಹರಿಣಿಗೆ ಮೊದಲ ಪ್ರವೇಶಾತಿಯನ್ನು ನೀಡಲಾಗಿದೆ. ಇದನ್ನು ಕಳೆದ ವರ್ಷವಷ್ಟೆ ನಿರ್ಮಿಸಲಾಗಿತ್ತು.
“ನಾವು ಹರಿಣಿಗೆ ಮೊದಲ ಪ್ರವೇಶವನ್ನು ನೀಡಿದ್ದೇವೆ. ಆಕೆಯ ಪೋಷಕರು ಅವಳನ್ನು ಮನೆಯಿಂದ ಹೊರಹಾಕಿದ್ದಾರೆ. ನಿರ್ದಿಷ್ಟವಾಗಿ ಇಂತಹ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಈ ಹಾಸ್ಟಲ್ ಅನ್ನು ಸ್ಥಾಪಿಸಿದ್ದೇವೆ. ಶೀಘ್ರದಲ್ಲೇ ಹೆಚ್ಚಿನ ಮಕ್ಕಳು ಇಲ್ಲಿಗೆ ಸೇರಬೇಕೆಂದು ಬಯಸುತ್ತೇವೆ” ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಹೇಳಿದ್ದಾರೆ.
ಇದನ್ನೂ ಓದಿ: ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧೆ; ಇತರೆ ಅಭ್ಯರ್ಥಿಗಳಿಗೆ ಸವಾಲು ಹಾಕಿದ ಮಂಗಳಮುಖಿಯರು!
ಹರಿಣಿಗೆ ಸರಿಯಾದ ಜೀವನವನ್ನು ರೂಪಿಸಿಕೊಡಲು ಶ್ರಮಪಡುತ್ತಿರುವ ಏಂಜೆಲ್, “ನನಗೆ 9 ನೇ ತರಗತಿಯ ನಂತರ ಓದಲು ಸಾಧ್ಯವಾಗಲಿಲ್ಲ. ನನ್ನ ಕುಟುಂಬ ನನ್ನನ್ನು ನಿರಾಕರಿಸಿತು. ಕೊನೆಗೆ ನಾನು ಭಿಕ್ಷೆ ಬೇಡಿ ಜೀವನ ಸಾಗಿಸಬೇಕಾಯಿತು. ಹಾಗಾಗಿ ಹರಿಣಿಯ ಜೀವನ ನನ್ನಂತಾಗಬಾರದು ಎಂದು ನಿರ್ಧರಿಸಿದೆ. ನಂತರ ಈ ಶಿವಾನಂದ ಬಾಲಾಲಯದ ಬಗ್ಗೆ ತಿಳಿದುಕೊಂಡು ಬಾಬು ಸರ್ ಅವರನ್ನು ಸಂಪರ್ಕಿಸಿದೆ” ಎಂದು ಹೇಳಿದರು.
ಹರಿಣಿಯು ಸಬ್ ಇನ್ಸ್‌ಪೆಕ್ಟರ್ ಆಗಬೇಕೆಂದು ಬಯಸಿದ್ದು, ತನಗೆ 18 ವರ್ಷ ತುಂಬಿದ ನಂತರ ಶಸ್ತ್ರ ಚಿಕಿತ್ಸೆಯ ಮೂಲಕ ಲಿಂಗಪರಿವರ್ತನೆ ಮಾಡಿಸಿಕೊಳ್ಳುವುದಾಗಿ ಹೇಳಿದ್ದಾಳೆ.
ಇದನ್ನೂ ಓದಿ: ಕೇರಳ: ಸಾಕ್ಷರತಾ ಮಿಷನ್ ಅಡಿಯಲ್ಲಿ 18 ಮಂಗಳಮುಖಿಯರು ಉನ್ನತ ವ್ಯಾಸಾಂಗಕ್ಕೆ ಆಯ್ಕೆ!


