ಶನಿವಾರ ದೇಶಾದ್ಯಂತ ಕೊರೊನಾ ವ್ಯಾಕ್ಸಿನೇಷನ್ ಪ್ರಾರಂಭವಾಗಿದೆ. ಆದರೆ ಈ ವ್ಯಾಕ್ಸಿನೇಷನ್‌ನಿಂದ ದೆಹಲಿಯಲ್ಲಿ 51 ಸಣ್ಣಪುಟ್ಟ ಪ್ರತಿಕೂಲ ಪರಿಣಾಮ ಬೀರಿದ್ದು ವರದಿಯಾಗಿವೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಹೇಳಿದ್ದಾರೆ. ಒಂದು ಗಂಭೀರ ಪ್ರಕರಣ ವರದಿಯಾಗಿದ್ದು, ಆ ರೋಗಿಯನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಯಲ್ಲಿ ದಾಖಲಿಸಲಾಗಿದೆ.
“ನಿನ್ನೆ ಒಂದು ದಿನದಲ್ಲಿ ಸಣ್ಣ ಪುಟ್ಟ 51 ಘಟನೆಗಳು ನಡೆದಿವೆ, ಅವುಗಳಲ್ಲಿ ಕೆಲವು ಸಣ್ಣಪುಟ್ಟ ತೊಂದರೆಗಳಾಗಿವೆ. ಒಂದು ಪ್ರಕರಣವಷ್ಟೇ ಸ್ವಲ್ಪ ಗಂಭೀರವಾಗಿದ್ದು, ಅವರನ್ನು ಏಮ್ಸ್‌ಗೆ ದಾಖಲಿಸಲಾಗಿದೆ. ಕಳೆದ ರಾತ್ರಿಯವರೆಗೂ ಅವರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು” ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಹೇಳಿದ್ದಾರೆಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
“ದೆಹಲಿಯಲ್ಲಿ ಕೇವಲ ಒಬ್ಬರನ್ನಷ್ಟೇ ಆಸ್ಪತ್ರೆಗೆ ಸೇರಿಸಬೇಕಾಯಿತು. ಉಳಿದ 51 ಜನರನ್ನು ಆಸ್ಪತ್ರೆಗೆ ಸೇರಿಸಬೇಕಾಗಿ ಬಂದಿಲ್ಲ. ಅವರ ಮೇಲೆ ಸ್ವಲ್ಪ ಸಮಯದವರೆಗೆ ನಿಗಾ ವಹಿಸಲಾಯಿತು” ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: ಕೋವಿಡ್ ಲಸಿಕೆಯಷ್ಟೇ ಸಾಕೆ? ಭವಿಷ್ಯದ ಸಾಂಕ್ರಾಮಿಕಗಳನ್ನು ಎದುರಿಸಲು ನಾವು ಸಜ್ಜಾಗಿದ್ದೇವೆಯೆ?
ಏಮ್ಸ್‌ನಲ್ಲಿ ದಾಖಲಾದ ರೋಗಿಯು ಆಸ್ಪತ್ರೆಯಲ್ಲಿ ಕೆಲಸ ಮಾಡುವ 22 ವರ್ಷದ ಭದ್ರತಾ ಸಿಬ್ಬಂದಿಯಾಗಿದ್ದು, ನಿನ್ನೆ ರಾತ್ರಿಯವರೆಗೂ ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ಈಗ ಸ್ಥಿರವಾಗಿದ್ದಾರೆ ಎಂದು ತಿಳಿದು ಬಂದಿದೆ.
ದೆಹಲಿಯಲ್ಲಿ ಮೊದಲ ದಿನ 4,000 ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿತ್ತು. ಏಮ್ಸ್‌ನಂತಹ ಕೇಂದ್ರ ಸರ್ಕಾರ ನಡೆಸುವ ಆಸ್ಪತ್ರೆಗಳನ್ನು ಹೊರತುಪಡಿಸಿ, ಎಲ್ಲರಿಗೂ ಕೋವಿಶೀಲ್ಡ್ ನೀಡಲಾಗಿದೆ. ಇದನ್ನು ಆಕ್ಸ್‌ಫರ್ಡ್ ಯುನಿವರ್ಸಿಟಿಯು ಅಸ್ಟ್ರಾಜೆನೆಕಾ ಫಾರ್ಮಾ ಜೊತೆ ಅಭಿವೃದ್ಧಿಪಡಿಸಿದ್ದು, ಭಾರತದಲ್ಲಿ ಇದನ್ನು ಸೀರಮ್ ಇನ್ಸ್ಟಿಟ್ಯೂಟ್ ತಯಾರಿಸಿದೆ.
ಕೇಂದ್ರ ಸರ್ಕಾರ ನಡೆಸುವ ಆರು ಆಸ್ಪತ್ರೆಗಳಿಗೆ ಭಾರತ್ ಬಯೋಟೆಕ್‌ನ ತಯಾರಿಕೆಯ ಕೊವಾಕ್ಸಿನ್ ನೀಡಲಾಗಿದ್ದು, ಇದು ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಭಾರತೀಯ ಔಷಧ ನಿಯಂತ್ರಕವು ಈ ಲಸಿಕೆಗೆ ಅನುಮತಿ ನೀಡಿದಾಗ ಅದರ ಕ್ಲಿನಿಕಲ್ ಪ್ರಯೋಗ ನಡೆಯುತ್ತಿತ್ತು.
ದೆಹಲಿಯು ಮೊದಲ ದಿನ 8,117 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಿತ್ತು, ಆದರೆ ನಗರದಾದ್ಯಂತ ಕಾರ್ಯನಿರ್ವಹಿಸುತ್ತಿದ್ದ 81 ತಾಣಗಳಲ್ಲಿ ಅರ್ಧದಷ್ಟು ಮಾತ್ರ ಲಸಿಕೆ ಹಾಕಲಾಯಿತು.
ಇದನ್ನೂ ಓದಿ: ವಿಶ್ವದ ಹಲವು ನಾಯಕರು ಮೊದಲ ಲಸಿಕೆ ಪಡೆದಿರುವಾಗ ಮೋದಿ ಏಕೆ ಪಡೆಯಲಿಲ್ಲ? ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ


