ಈ ವರ್ಷ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. ಇತ್ತೀಚೆಗಷ್ಟೇ ಪಕ್ಷ ತೊರೆದು ಬಿಜೆಪಿ ಸೇರಿರುವ ಮತ್ತು ತೃಣಮೂಲ ಕಾಂಗ್ರೆಸ್‌ನ ಪ್ರಭಾವಿ ನಾಯಕರೂ ಆಗಿದ್ದ ಸುವೇಂದು ಅಧಿಕಾರಿ 2016 ರಲ್ಲಿ ನಂದಿಗ್ರಾಮ ಕ್ಷೇತ್ರದಲ್ಲಿ ಭಾರೀ ಅಂತರದಿಂದ ಗೆದ್ದಿದ್ದರು. ಈಗ ಅದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಾಗಿ ಮಮತಾ ಪ್ರಕಟಿಸಿದ್ದಾರೆ.
2016 ರ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಭವಾನಿಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, “ನಾನು ಈ ಬಾರಿ ನಂದಿಗ್ರಾಮ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಸಾಧ್ಯವಾದರೆ, ಭವಾನಿಪುರ ಮತ್ತು ನಂದಿಗ್ರಾಮ ಎರಡೂ ಕಡೆ ಸ್ಪರ್ಧೆ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.
“ನಾನು ಯಾವಾಗಲೂ ನಂದಿಗ್ರಾಮದಿಂದಲೇ ವಿಧಾನಸಭಾ ಚುನಾವಣೆ ಪ್ರಚಾರ ಪ್ರಾರಂಭಿಸುತ್ತಿದ್ದೆ. ಇದು ನನಗೆ ಅದೃಷ್ಟದ ಸ್ಥಳ. ಆದ್ದರಿಂದ ಈ ಬಾರಿ ನಾನು ವಿಧಾನಸಭಾ ಚುನಾವಣೆಗೆ ಇಲ್ಲಿಂದಲೇ ಸ್ಪರ್ಧಿಸಬೇಕೆಂದು ಬಯಸಿದ್ದೇನೆ” ಎಂದು ಹೇಳಿದರು.
ಮುಂದುವರಿದು ಬಿಜೆಪಿಯ ಪಕ್ಷಾಂತರ ತಂತ್ರದ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ, ತಮ್ಮ ಪಕ್ಷದ ವ್ಯಕ್ತಿಗಳ ಬ್ಲಾಕ್ ಮನಿಯನ್ನು ವೈಟ್ ಮನಿಯನ್ನಾಗಿ ಪರಿವರ್ತಿಸಿಕೊಡುತ್ತೇವೆ ಎಂದು ಬಿಜೆಪಿಗರು ವಚನ ನೀಡಿದ್ದಾರೆ ಎಂದು ಆರೋಪಿಸಿದರು.
“ವಾಷಿಂಗ್ ಪೌಡರ್ ಭಾಜಪಾ (BJP): ಟಿಎಂಸಿಯಲ್ಲಿದ್ದಾಗ ಕಳಂಕಿತರಾಗಿದ್ದವರು, ಬಿಜೆಪಿಯ ವಾಷಿಂಗ್ ಮಷಿನ್‌ನಲ್ಲಿ ಶುದ್ಧವಾಗುತ್ತಾರೆ (ಟಿಎಂಸಿಯಲ್ಲಿ ಕಪ್ಪು-ಬಿಜೆಪಿಯ ವಾಷಿಂಗ್ ಮಷಿನ್‌ನಲ್ಲಿ ಬಿಳಿ)” ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಅರ್ನಾಬ್ ವಾಟ್ಸಪ್ ಚಾಟ್: ಬಿಜೆಪಿಯ ರಾಷ್ಟ್ರೀಯತೆ ಪರೀಕ್ಷಿಸಬೇಕೆಂದ ಶಿವಸೇನೆ
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಭಾಗವಹಿಸುತ್ತೇವೆ ಎಂದು ಹಲವು ಪ್ರಮುಖ ಪಕ್ಷಗಳು ಇದುವರೆಗೂ ಘೋಷಿಸಿವೆ. ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ, ಶಿವಸೇನೆ ಮತ್ತು ಅಸದುದ್ದೀನ್ ಓವೈಸಿ ಅವರ ಪಕ್ಷವೂ ಸಹ ರಾಜ್ಯದ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿವೆ. ಇನ್ನು ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಪಕ್ಷವೂ ಸಹ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ಮತ್ತೊಂದು ಕಡೆ ಬಿಜೆಪಿ, ಈ ಬಾರಿ ಅಧಿಕಾರ ಹಿಡಿಯಲೇ ಬೇಕು ಎಂದು ಹವಣಿಸುತ್ತಿದೆ. ಇನ್ನು ಕಾಂಗ್ರೆಸ್ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಕೊರೊನಾ ಸಾಂಕ್ರಾಮಿಕ ರೋಗದ ನಂತರ ದೇಶದಲ್ಲಿ ನಡೆಯುತ್ತಿರುವ ಎರಡನೇ ಅತಿದೊಡ್ಡ ಚುನಾವಣೆ ಇದಾಗಿದ್ದು, ಕೇಂದ್ರದ ಬಿಜೆಪಿ ಸರ್ಕಾರ ಮತ್ತು ತೃಣಮೂಲ ಕಾಂಗ್ರೆಸ್‌ಗೆ ನೇರಾನೇರಾ ತೀವ್ರ ಪೈಪೋಟಿ ಇರಲಿದೆ. ಹಾಗಾಗಿ ಪಶ್ಚಿಮ ಬಂಗಾಳ ಯಾರ ತೆಕ್ಕೆಗೆ ಹೋಗಲಿದೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ಬಂಧನಕ್ಕೆ ಸಿದ್ಧರಾಗಿ: ‘ತಾಂಡವ್’ ಚಿತ್ರ ತಂಡಕ್ಕೆ ಯುಪಿ ಸಿಎಂ ಮಾಧ್ಯಮ ಸಲಹೆಗಾರನ ಬೆದರಿಕೆ


