ರಾಕೇಶ್ ಟಿಕಾಯತ್ ಕರೆಯ ಮೇರೆಗೆ ಮುಜಫರ್ ನಗರದಲ್ಲಿ ನಡೆದ ಮಹಾಪಂಚಾಯತ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ಜನ ರೈತ ಬೆಂಬಲಿಗರು ಸೇರಿದ್ದರು. ಅದೇ ರೀತಿ ಮಥುರಾ ಮತ್ತು ಬಾಗ್‌ಪತ್‌ನಲ್ಲಿ ನಡೆದ ಮಹಾಪಂಚಾಯತ್‌ನಲ್ಲಿಯೂ ಸಾವಿರಾರು ಸಂಖ್ಯೆಯಲ್ಲಿ ರೈತರು ಮತ್ತು ರೈತ ಬೆಂಬಲಿಗರು ಸೇರಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ 2 ತಿಂಗಳಿನಿಂದ ರೈತರು ಮಾಡುತ್ತಿರುವ ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳುತ್ತಿದೆ.
ಗುರುವಾರ ರಾಕೇಶ್ ಟಿಕಾಯತ್ ಭಾವನಾತ್ಮಕವಾಗಿ ಮಾತನಾಡಿದ್ದು ಉತ್ತರಪ್ರದೇಶದ ರೈತರನ್ನು ಕೆರಳಿಸಿತ್ತು. ಈಗ ಮಥುರಾ ಮತ್ತು ಬಾಗ್‌ಪತ್‌ನಲ್ಲಿ ನಡೆದ ಮಹಾಪಂಚಾಯತ್ ರೈತರಿಗೆ ಮತ್ತೊಂದು ಭರವಸೆಯನ್ನು ನೀಡಿದೆ. ಗಣರಾಜ್ಯೋತ್ಸವದಲ್ಲಿ ನಡೆದ ಅಹಿತಕರ ಘಟನೆಗಳು ರೈತ ಚಳವಳಿಗೆ ಹಿನ್ನಡೆಯನ್ನುಂಟು ಮಾಡಬಹುದು ಎಂದು ಸರ್ಕಾರ ಎಣಿಸಿತ್ತು. ಆದರೆ ಈಗ ಅದು ಸರ್ಕಾರಕ್ಕೇ ತಿರುಗು ಬಾಣವಾಗಿದೆ. ದೆಹಲಿಯ ಎಲ್ಲಾ ಗಡಿಗಳಲ್ಲಿಯೂ ಪ್ರತಿಭಟನೆಗೆ ಸೇರಿಕೊಳ್ಳುವವರ ಸಂಖ್ಯೆ ಏರುತ್ತಲೇ ಇದೆ. ದೆಹಲಿ-ಉತ್ತರಪ್ರದೇಶ ಗಡಿಯ ಗಾಜಿಪುರದಲ್ಲಂತೂ ಪ್ರತಿಭಟನಾಕಾರರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಯುವಜನತೆ- ವಿದ್ಯಾರ್ಥಿಗಳು ಅತಿ ಉತ್ಸಾಹದಲ್ಲಿದ್ದಾರೆ.
Mathura Farmers United For #KisanSatyagrahOfNewIndiapic.twitter.com/nteJ9vvKHv
— Niraj Bhatia (@bhatia_niraj23) January 30, 2021
ಮಜಾಫರ್ ನಗರದ ಮಹಾಪಂಚಾಯತ್ ನಡೆದ ಒಂದು ದಿನದ ನಂತರ ಬಾಗ್‌ಪತ್‌ನಲ್ಲಿ ಮಹಾಪಂಚಾಯತ್ ಆಯೋಜಿಸಲಾಗಿದೆ. ಇದು ಜಾಟ್ ನಾಯಕ ಅಜಿತ್ ಸಿಂಗ್ ಮತ್ತು ಅವರ ಮಗ ಜಯಂತ್ ಅವರ ಭದ್ರಕೋಟೆ. ಉತ್ತರಪ್ರದೇಶ ಮತ್ತು ಹರಿಯಾಣದ ಮುಖ್ಯಮಂತ್ರಿಗಳು ಜಾಟ್ ಸಮುದಾಯಕ್ಕೆ ಸೇರಿದವರಲ್ಲವಾದ್ದರಿಂದ ಇದರ ಪರಿಣಾಮವನ್ನು ಬಿಜೆಪಿ ಸರ್ಕಾರ ಎದುರಿಸಲಿದೆ ಎಂದು ದಿ ಟ್ರಿಬ್ಯೂನ್ ವರದಿ ಮಾಡಿದೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸಂಜೀವ್ ಬಲ್ಯಾನ್ (ಈಗ ಕೇಂದ್ರ ಸಚಿವ) ಅವರನ್ನು ಬೆಂಬಲಿಸುವುದು ತಪ್ಪು ಎಂದು ಬಿಕೆಯು (ಟಿಕಾಯತ್) ಮುಖ್ಯಸ್ಥ ನರೇಶ್ ಟಿಕಾಯತ್ ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿಯ ಗಡಿಗಳಲ್ಲಿ ಈಗ ಎಷ್ಟು ರೈತರು ನೆರೆದಿದ್ದಾರೆ ಗೊತ್ತೆ? ಮೂರು ಗಡಿಗಳ ಪ್ರಸ್ತುತ ಪರಿಸ್ಥಿತಿಯ…
ಇನ್ನು ಮಥುರಾದಲ್ಲಿಯೂ ಉತ್ತರಪ್ರದೇಶದ ಸಾವಿರಾರು ಜನರು ಸೇರಿ ಬೃಹತ್ ಮಹಾಪಂಚಾಯತ್ ಅನ್ನು ನಡೆಸಲಾಗಿತ್ತು. ಭಾರತೀಯ ಕಿಸಾನ್ ಯೂನಿಯನ್ (BKU) ಆಯೋಜಿಸಿದ್ದ ಈ ಸಭೆಯಲ್ಲಿ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವ ಸಲುವಾಗಿ 10 ಸಾವಿರಕ್ಕೂ ಹೆಚ್ಚು ರೈತರು ಸೇರಿ ದೆಹಲಿ-ಆಗ್ರಾ ಯಮುನಾ ಹೆದ್ದಾರಿಯನ್ನು ನಿರ್ಬಂಧಿಸಲು ಯೋಜಿಸಲಾಗಿದೆ. ಈ ಕುರಿತು ಮುಂದಿನವಾರ ನಿಗದಿಪಡಿಸಲಾಗಿರುವ ಮತ್ತೊಂದು ಮಹಾಪಂಚಾಯತ್ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.
ಈ ಕುರಿತು ಮಾತನಾಡಿದ BKU ಜಿಲ್ಲಾಧ್ಯಕ್ಷ ರಾಜ್ ಕುಮಾರ್ ತೋಮರ್ “2 ತಿಂಗಳ ಆಂದೋಲನದ ನಂತರವೂ ಸರ್ಕಾರ ನಮ್ಮ ಬೇಡಿಕೆಗಳನ್ನು ಆಲಿಸದ ಕಾರಣ, ಈಗ ಸರ್ಕಾರ ಮೇಲೆ ಹೆಚ್ಚಿನ ಒತ್ತಡ ಹೇರಬೇಕಿದೆ. ಗಾಜಿಪುರ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪ್ರತಿ ರೈತ ಕುಟುಂಬದ ಕನಿಷ್ಠ ಒಬ್ಬ ಸದಸ್ಯರಾದರೂ ಸೇರಬೇಕು ಎಂದು ರಾಷ್ಟ್ರೀಯ ಲೋಕ ದಳದ (ಆರ್‌ಎಲ್‌ಡಿ) ನಾಯಕ ಜಯಂತ್ ಚೌಧರಿ ನೀಡಿದ ಪ್ರಸ್ತಾವನೆಯನ್ನು ಮಹಾಪಂಚಾಯತ್ ಸ್ವಾಗತಿಸಿದೆ. ಈ ಕುರಿತು ಅಂತಿಮ ತೀರ್ಮಾನವನ್ನು ಮುಂದಿನ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು” ಎಂದು ಹೇಳಿದರು.
#Baghpat update news – Thousands of farmers arrived in Khap Panchayat.
pic.twitter.com/fMAva0MMFe#MannKiBakwaas#ModiWhereAreMissingFarmers
— Nandkishor Kaushik (@NandkishorRAGA) January 31, 2021
“ರಾಕೇಶ್ ಟಿಕಾಯತ್ ಅವರ ಹಿಂದೆ ಎಲ್ಲಾ ರೈತರು ಇದ್ದಾರೆ. ದೆಹಲಿಯ ಹಿಂಸಾಚಾರಕ್ಕೆ ಸರ್ಕಾರ ರೈತರನ್ನು ಹೊಣೆಗಾರರನ್ನಾಗಿ ಮಾಡಬಾರದು. ಅಪರಾಧಿಗಳನ್ನ ಶಿಕ್ಷಿಸಬೇಕೇ ಹೊರತು ರೈತ ಸಮುದಾಯವನ್ನು ಗುರಿಯಾಗಿಸಿಕೊಳ್ಳಬಾರದು. ಸಾಮಾಜಿಕವಾಗಿ ಬಿಜೆಪಿ ನಾಯಕರನ್ನು ಬಹಿಷ್ಕರಿಸಲು ನಿರ್ಧರಿಸಲಾಗಿದೆ” ಎಂದು BKU ನಾಯಕರು ಹೇಳಿದರು.
ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಸಿಂಘು ಗಡಿಯ ಒಂದು ಭಾಗದಲ್ಲಿ ದಾಂಧಲೆ ಮಾಡಿದ್ದು ಸ್ಥಳೀಯರಲ್ಲ ಬಿಜೆಪಿ ಕಾರ್ಯಕರ್ತರು!
ಜಯಂತ್ ಚೌಧರಿ ತಮ್ಮ ಭಾಷಣದಲ್ಲಿ, “ನಾನು ಮಥುರಾದಲ್ಲಿ ಒಂದು ವಾರ ಪ್ರಚಾರ ಮಾಡಿ ಗಾಜಿಪುರ ಗಡಿ ಮತ್ತು ಪಾಲ್ವಾಲ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸೇರಿಕೊಳ್ಳುವಂತೆ ರೈತರನ್ನು ಪ್ರೇರೇಪಿಸುತ್ತೇನೆ” ಎಂದು ಹೇಳಿದರು.
ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರ ಆಂದೋಲನಕ್ಕೆ ಬೆಂಬಲವನ್ನು ನೀಡಲು ಯುಪಿಯ ಬಿಜ್ನೋರ್ ಮತ್ತು ಹರಿಯಾಣದ ಜಿಂದ್ ಜಿಲ್ಲೆಗಳಲ್ಲಿ ಇನ್ನೂ ಎರಡು ಮಹಾಪಂಚಾಯತ್‌ಗಳನ್ನು ಯೋಜಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಫೆಬ್ರವರಿ 1 ರಂದು ಬಿಜ್ನೋರ್‌ನಲ್ಲಿ ಮಹಾಪಂಚಾಯತ್ ನಿಗದಿಯಾಗಿದ್ದರೆ, ಫೆಬ್ರವರಿ 3 ರಂದು ಜಿಂದ್‌ನಲ್ಲಿ ನಡೆಯಲಿದೆ ಎಂದು BKU ವಕ್ತಾರ ಧರ್ಮೇಂದ್ರ ಮಲಿಕ್ ಭಾನುವಾರ ತಿಳಿಸಿದ್ದಾರೆ.
ಇದನ್ನೂ ಓದಿ: ಶಾಸಕ ಚೌಟಾಲ ನೇತೃತ್ವದಲ್ಲಿ ಗಾಜಿಪುರ್ ಗಡಿಯತ್ತ ನುಗ್ಗಿ ಬರುತ್ತಿರುವ ರೈತರ ದಂಡು


