Homeಮುಖಪುಟಗೆಲ್ಲುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ: ಸಿಂಘು ಗಡಿಯಲ್ಲಿ ಗುರ್ತೇಜ್ ಸಿಂಗ್ ಗುಡುಗು

ಗೆಲ್ಲುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ: ಸಿಂಘು ಗಡಿಯಲ್ಲಿ ಗುರ್ತೇಜ್ ಸಿಂಗ್ ಗುಡುಗು

ಸರ್ಕಾರ ಮಾಡಿದ ಕುತಂತ್ರಗಳಿಂದಾಗಿ ಈಗ ನಮ್ಮ ಹೋರಾಟ ಸಾವು ಅಥವಾ ಗೆಲುವಿನ ಹೋರಾಟವಾಗಿದೆ. ಗೆಲ್ಲುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ.

- Advertisement -
- Advertisement -

ಹತ್ತನೇ ತರಗತಿಯವರೆಗೆ ವಿದ್ಯಾಭ್ಯಾಸ ಪಡೆದು, ಮಗಳನ್ನು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಕಳಿಸಿರುವ 57 ವರ್ಷದ ರೈತರಾದ ಗುರ್ತೇಜ್ ಸಿಂಗ್ ಕಳೆದ ಐದು ತಿಂಗಳಿನಿಂದ ರೈತ ಹೋರಾಟದ ಪ್ರತಿನಿಧಿಯಾಗಿದ್ದಾರೆ. ಪಂಜಾಬ್ ರಾಜ್ಯದ ಮೊಗ್ಗಾ ಜಿಲ್ಲೆಯ ರತಿನ್ಯಾ ಗ್ರಾಮದ ಇವರ ಕುಟುಂಬದ ಮೂಲ ಕೆಲಸವೇ ಕೃಷಿಯಾಗಿದೆ.

ರೈತ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿರುವ ಗುರ್ತೇಜ್ ಸಿಂಗ್ ಅವರ ಕುಟುಂಬದ ಸದಸ್ಯರು 5 ಮಂದಿ. ತಂದೆ, ಹೆಂಡತಿ, ಒಬ್ಬ ಮಗ ಮತ್ತು ಮಗಳೊಡನೆ ತಮ್ಮ ಗ್ರಾಮದಲ್ಲಿ ಗೋದಿ, ಭತ್ತ ಬೆಳೆಯುತ್ತಾ ನೆಮ್ಮದಿಯ ಜೀವನ ಸಾಗಿಸುತ್ತಿದ್ದವರು, ಇಂದು ಸಿಂಘು ಗಡಿಯಲ್ಲಿ ಚಳಿ, ಮಳೆ, ಧೂಳಿನಲ್ಲಿ ಟ್ರ್ಯಾಲಿಯಲ್ಲಿ ವಾಸಿಸುತ್ತಿದ್ದಾರೆ.

“ಮನೆಯಲ್ಲಿ ಎಲ್ಲರೂ ವಿದ್ಯಾವಂತರಿದ್ದೇವೆ. ನಮಗೂ ಕಾನೂನುಗಳ ಅರಿವಿದೆ. ಮನೆಗೆ ಹೋಗಬೇಕು ಎಂದು ಅನ್ನಿಸುತ್ತದೆ. ಆದರೆ, ಹೋರಾಟಕ್ಕಿಂತ ಮನೆ ದೊಡ್ಡದಲ್ಲ. ಮೊದಲು ಈ ಮೂರು ಕರಾಳ ಕಾನೂನುಗಳ ವಿರುದ್ಧ ಹೋರಾಡಿ ಗೆಲ್ಲುತ್ತೇವೆ. ಇಷ್ಟು ದಿನಗಳ ಹೋರಾಟ ಬೇರೆ. ಈಗೀನ ಹೋರಾಟವೇ ಬೇರೆ. ಸರ್ಕಾರ ಮಾಡಿದ ಕುತಂತ್ರಗಳಿಂದಾಗಿ ಈಗ ನಮ್ಮ ಹೋರಾಟ ಸಾವು ಅಥವಾ ಗೆಲುವಿನ ಹೋರಾಟವಾಗಿದೆ. ಗೆಲ್ಲುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ. ಕಾನೂನುಗಳನ್ನು ವಾಪಸ್ ತೆಗೆದುಕೊಳ್ಳುವವರೆಗೂ ನಾವ್ಯಾರೂ ಹೋಗುವುದಿಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುರ್ತೇಜ್ ಸಿಂಗ್ ಮಗ ಪದವಿ ಪಡೆದು ಚಂಢಿಗಡದಲ್ಲಿ ಸೋಲಾರ್ ಪ್ಲಾಂಟ್ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಮಗಳು ಪಂಜಾಬಿನಲ್ಲಿಯೇ ದ್ವೀತಿಯ ಪಿಯುಸಿ ಮುಗಿಸಿ ಕೆನಡಾದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದಾರೆ. ಗುರ್ತೇಜ್ ಸಿಂಗ್ ಅವರ ತಮ್ಮ ಕೆನಡಾದಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದು ಅಲ್ಲಿಯೇ ತಮ್ಮ ಉದ್ಯಮ ಶುರು ಮಾಡಿದ್ದಾರೆ.

ಕುಟಂಬದ ಮೂಲ ಕಾರ್ಯ ಕೃಷಿಯಾಗಿರುವುದರಿಂದ ಮನೆಯಲ್ಲಿ ಮೂರು ಎಮ್ಮೆ ಸೇರಿದಂತೆ ಒಂದು ಹಸುವನ್ನು ಗುರ್ತೇಜ್ ಸಿಂಗ್ ಸಾಕಿಕೊಂಡಿದ್ದಾರೆ. ಗೋದಿ, ಭತ್ತದ ಜೊತೆಗೆ ಎಮ್ಮೆಗೆ ಬೇಕಾದ ಹಸಿರು ಹುಲ್ಲು ಬೆಳೆಯುತ್ತಾರೆ. ಆದರೆ ಈ ಎಮ್ಮೆ ಹಾಲನ್ನು ಇವರು ಮಾರುವುದಿಲ್ಲ. ಮನೆಯವರ ಬಳಕೆಗೆ ಬಳಸಿಕೊಳ್ಳಲಾಗುತ್ತದೆ. ಅಕ್ಕ ಪಕ್ಕದಲ್ಲಿ ಎಮ್ಮೆ ಇಲ್ಲದವರಿಗೆ ಹಾಲು ನೀಡಲಾಗುತ್ತದೆ ಎಂದು ವಿವರಿಸುತ್ತಾರೆ.

ಮನೆಯ ಹಿರಿಯ ಸದಸ್ಯರಾಗಿರುವ ಗುರ್ತೇಜ್ ಸಿಂಗ್ ಅವರ ತಂದೆ 85 ವರ್ಷದವರಾಗಿದ್ದು, ಈಗಲೂ ಚಟುವಟಿಕೆಯಿಂದ ಹೊಲದ ಕೆಲಸ ನಿರ್ವಹಿಸುತ್ತಾರೆ. ಗುರ್ತೇಜ್ ಸಿಂಗ್ ಪ್ರತಿಭಟನೆಗೆ ಬಂದಾಗಿನಿಂದ ಮನೆಯ ಎಲ್ಲ ಕೆಲಸಗಳನ್ನೂ ಅವರೆ ನೋಡಿಕೊಳ್ಳುತ್ತಿದ್ದಾರೆ. ತಮ್ಮ ತಂದೆಗೆ ಪ್ರತಿದಿನ ಕನಿಷ್ಠ ಎರಡು ಲೀಟರ್ ಹಾಲು ಬೇಕಾಗುತ್ತದೆ. ಹಾಲಿನ ಉತ್ಪನ್ನಗಳಿಲ್ಲದೆ ಇವರಿಗೆ ಊಟ ಸೇರುವುದಿಲ್ಲ ಎಂದು ಗುರ್ತೇಜ್ ಸಿಂಗ್ ನಸುನಗುತ್ತಾರೆ. ಇದು ಅವರ ಆರೋಗ್ಯದ ಗುಟ್ಟು ಕೂಡ ಎನ್ನುತ್ತಾರೆ.

ಹೋರಾಟಕ್ಕೆ ಬಂದ ಗುರ್ತೇಜ್ ಸಿಂಗ್ ಅವರಿಗೆ ತಂದೆಯ ಬೆಂಬಲ ಹೆಚ್ಚಾಗಿದೆಯಂತೆ. ಈ ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ನಂತರ ಮನೆಗೆ ಬರಲು ತಿಳಿಸಿದ್ದಾರೆ. ನನ್ನ ಮಗ ಕೂಡ ಹಲವು ಬಾರಿ ರಜೆ ತೆಗೆದುಕೊಂಡು ಇಲ್ಲಿಗೆ ಬಂದು ಹೋರಾಟಕ್ಕೆ ಬೆಂಬಲ ನೀಡಿದ್ದಾರೆ ಎಂದು ರೈತ ಗುರ್ತೇಜ್ ಸಿಂಗ್ ತಿಳಿಸುತ್ತಾರೆ.

ಇನ್ನೊಂದು ಆಶ್ಚರ್ಯದ ವಿಷಯವೆಂದರೆ ಮೊಗ್ಗಾ ಜಿಲ್ಲೆಯ ರತಿನ್ಯಾ ಗ್ರಾಮದ ಸುಮಾರು 3 ಕಿಲೋ ಮೀಟರ್ ದೂರದಲ್ಲಿ ಅದಾನಿ ಕಂಪನಿಯ DAGURU ಸೈಲೋಸ್ (ಸಂಗ್ರಹಾಲಯ) ಐದು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು, ಇದೆ ರೈತರು ಅಲ್ಲಿಗೆ ತಮ್ಮ ಗೋದಿಯನ್ನು ಮಾರಾಟ ಮಾಡಿದ್ದಾರೆ.

ಗುರ್ತೇಜ್ ಸಿಂಗ್ ಹೇಳುವಂತೆ “ನಮಗೆ ಅದು ಅದಾನಿ ಕಂಪನಿ ಎಂದು ಗೊತ್ತಿರಲಿಲ್ಲ. ನಮ್ಮ ಗೋದಿಗೆ ಮೊದ ಮೊದಲು ಒಳ್ಳೆಯ ಬೆಲೆ ನೀಡಲಾಗುತ್ತಿತ್ತು. ಇತರ ರೈತರನ್ನು ಅಲ್ಲಿಗೆ ಕರೆತಂದವರಿಗೆ ಕಮಿಷನ್ ಕೂಡ ನೀಡಲಾಗುತ್ತಿತ್ತು. ಆದರೆ ಕೆಲ ತಿಂಗಳುಗಳ ನಂತರ ಸ್ಯಾಂಪಲ್ ನೋಡಿ ತೆಗೆದುಕೊಳ್ಳಲು ಶುರು ಮಾಡಿದರು. ಕೆಲವರನ್ನು ಗೋದಿ ಉತ್ತಮ ಕ್ವಾಲಿಟಿ ಹೊಂದಿಲ್ಲ ಎಂದು ವಾಪಸ್ ಕಳುಹಿಸುತ್ತಿದ್ದರು. ನಂತರ ಅದನ್ನು ಸರ್ಕಾರಿ ಮಂಡಿಯಲ್ಲಿ ಮಾರುತ್ತಿದ್ದೆವು” ಎಂದಿದ್ದಾರೆ.

“ದಾಸ್ತಾನಿನ ಒಳಗೆ ಸ್ಪೆಷಲ್ ಟ್ರೈನ್ ನಲ್ಲಿ ಗೋದಿಯನ್ನು ರಫ್ತು ಮಾಡುತ್ತಿದ್ದರು . ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ಜಾರಿಗೆ ತಂದ ಮೇಲೆ ಅದು ಅದಾನಿ ಕಂಪನಿ ಎಂಬುದು ನಮಗೂ ತಿಳಿಯಿತು. 5 ತಿಂಗಳಿನಿಂದ DAGURU ಕಂಪನಿಯನ್ನು ರೈತರು ಬಂದ್ ಮಾಡಿದ್ದಾರೆ. ಇದರ ಪಕ್ಕದಲ್ಲಿಯೇ ಅದಾನಿಯವರ ರೈಸ್ ಕಂಪನಿಯ ತುಂಬಾ ದೊಡ್ಡ ಘಟಕ ಇದೆ. ಕಳೆದ ಐದು ತಿಂಗಳಿನಿಂದ ಈ ಕಂಪನಿಗಳನ್ನು ರೈತರು ಬಂದ್ ಮಾಡಿಸಿದ್ದಾರೆ” ಎಂದು ಗುರ್ತೇಜ್ ಸಿಂಗ್ ಮಾಹಿತಿ ನೀಡಿದ್ದಾರೆ.

“ಸದ್ಯ ಊರಿನಲ್ಲಿ ಗೋದಿ ಹಾಕಿದ್ದೇವೆ. ಎಲ್ಲವನ್ನು ತಂದೆ ನೋಡಿಕೊಳ್ಳುತ್ತಿದ್ದಾರೆ. ಏಪ್ರಿಲ್ ತಿಂಗಳವರೆಗೆ ಏನು ಕೆಲಸವಿಲ್ಲ. ಏನಾದರೂ ಬೇರೆ ಇದ್ದರೆ ಅಕ್ಕಪಕ್ಕದವರು ನೋಡಿಕೊಳ್ಳುತ್ತಾರೆ. ಒಂದೆರೆಡು ಸಲಿ ಆದರೂ ಮನೆಗೆ ಬಂದು ಹೋಗಿ ಎಂದು ಹೆಂಡತಿ, ಮಗ ಕರೆಯುತ್ತಾರೆ. ನನ್ನ ಹೆಂಡತಿಯ ಸಂಬಂಧಿಯ ಎಂಗೇಜ್ಮೆಂಟ್ ಇತ್ತು. ನಾನು ಹೋಗಲಿಲ್ಲ, ಮದುವೆಗೂ ಹೋಗಲಿಲ್ಲ, ಕಾಲಿನ ಗಾಯದ ಸಬೂಬು ಹೇಳಿ ತಪ್ಪಿಸಿಕೊಂಡೆ. ಆದರೆ ತಂದೆ ಮಾತ್ರ ಇಲ್ಲಿಯೇ ಇದ್ದು ಗೆದ್ದು ಬರಲು ಹೇಳುತ್ತಾರೆ” ಎಂದು ತಿಳಿಸಿದ್ದಾರೆ.

“ನನ್ನ ತಮ್ಮ ಕೆನಡಾದಲ್ಲಿ ಕೆಲಸ ಮಾಡುತ್ತಾರೆ. ಹೋರಾಟದಲ್ಲಿ ತೊಡಗಿಸಿಕೊಂಡು ಚಳಿಯಲ್ಲಿ ಕುಳಿತಿರುವ ರೈತರಿಗಾಗ ಬೆಚ್ಚಗಿನ ಶಾಲುಗಳನ್ನು ಹಂಚಲು ಕಳಿಸಿದ್ದರು. ಇನ್ನೂ ನಮ್ಮ ಊರಿನಿಂದ ಪ್ರತಿಭಟನೆ ಬೆಂಬಲಿಸಲು ಬರುವವರಿಗೆ ಅವರ ಬೈಕ್, ಟ್ರ್ಯಾಕ್ಟರ್‌ಗಳಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಹಣ ನೀಡುತ್ತಿದ್ದಾರೆ. ಊರಿನಿಂದ ಎಲ್ಲರೂ ಸಿಂಘುಗೆ ಬರಲು ಪ್ರೋತ್ಸಾಹ ನೀಡುತ್ತಿದ್ದಾರೆ” ಎಂದು ಗುರ್ತೇಜ್ ಸಿಂಗ್ ಹೇಳಿದ್ದಾರೆ.

ದೆಹಲಿಯ ಸಿಂಘು ಗಡಿಯಲ್ಲಿ ನವೆಂಬರ್ 26 ರಿಂದ ಟ್ರ್ಯಾಲಿಯಲ್ಲಿ ವಾಸ ಮಾಡುತ್ತಾ, ರೈತ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಗುರ್ತೇಜ್ ಸಿಂಗ್, ಹೊರ ರಾಜ್ಯಗಳಿಂದ ಬರುವ ಜನರಿಗೆ ತಮ್ಮ ಟ್ರ್ಯಾಲಿಗಳಲ್ಲಿ ಉಳಿಯಲು ವ್ಯವಸ್ಥೆ ಮಾಡುತ್ತಾರೆ. ಟೆಂಟ್‌ಗಳಿಲ್ಲದಿದ್ದರೇ ಅವರಿಗೆ ಟೆಂಟ್, ವಿದ್ಯುತ್ ವ್ಯವಸ್ಥೆ ಮಾಡುತ್ತಾರೆ. ಕರ್ನಾಟಕದಿಂದ ಟ್ರ್ಯಾಕ್ಟರ್ ಪೆರೇಡ್‌ಗಾಗಿ ಬಂದಿದ್ದ 20ಕ್ಕೂ ಹೆಚ್ಚು ಜನರಿಗೆ ಸ್ನಾನದ ವ್ಯವಸ್ಥೆ, ಉಳಿಯಲು ವ್ಯವಸ್ಥೆಯನ್ನು ಗುರ್ತೇಜ್ ಸಿಂಗ್ ನೋಡಿಕೊಂಡಿದ್ದರು.

– ಮಮತ ಎಂ


ಇದನ್ನೂ ಓದಿ: ಮಥುರಾ, ಬಾಗ್‌ಪತ್‌ನಲ್ಲಿ ಬೃಹತ್ ಮಹಾಪಂಚಾಯತ್‌: ಬಿಜೆಪಿಗೆ ಸಾಮಾಜಿಕ ಬಹಿಷ್ಕಾರ ನಿರ್ಣಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...