Homeಮುಖಪುಟದೆಹಲಿಯ ಗಡಿಗಳಲ್ಲಿ ಈಗ ಎಷ್ಟು ರೈತರು ನೆರೆದಿದ್ದಾರೆ ಗೊತ್ತೆ? ಮೂರು ಗಡಿಗಳ ಪ್ರಸ್ತುತ ಪರಿಸ್ಥಿತಿಯ ವಿವರ...

ದೆಹಲಿಯ ಗಡಿಗಳಲ್ಲಿ ಈಗ ಎಷ್ಟು ರೈತರು ನೆರೆದಿದ್ದಾರೆ ಗೊತ್ತೆ? ಮೂರು ಗಡಿಗಳ ಪ್ರಸ್ತುತ ಪರಿಸ್ಥಿತಿಯ ವಿವರ ಇಲ್ಲಿದೆ

ಟಿಕ್ರಿ, ಸಿಂಘು ಮತ್ತು ಗಾಜಿಪುರ್ ಗಡಿಗಳಲ್ಲಿ ಟ್ರ್ಯಾಕ್ಟರ್ ರ್ಯಾಲಿಗಿಂತ ಮುಂಚೆ ಎಷ್ಟು ರೈತರಿದ್ದರು? ಇಂದು ಎಷ್ಟಿದ್ದಾರೆ? ಸಂಪೂರ್ಣ ವಿವರ

- Advertisement -
- Advertisement -

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಮತ್ತು ಎಂಎಸ್‌ಪಿ ಖಾತ್ರಿಗೊಳಿಸುವ ಕಾಯ್ದೆ ಜಾರಿಗೆ ಆಗ್ರಹಿಸಿ ದೆಹಲಿಯ ಹಲವು ಗಡಿಗಳಲ್ಲಿ ಲಕ್ಷಾಂತರ ರೈತರು ನಡೆಸುತ್ತಿರುವ ಹೋರಾಟ ಇಂದಿಗೆ 67 ದಿನಗಳನ್ನು ಪೂರೈಸಿದೆ. ಹಲವು ವಿಭಿನ್ನ ಹೋರಾಟಗಳ ಮೂಲಕ ವಿಶ್ವದ ಗಮನ ಸೆಳೆದಿದ್ದ ಈ ಹೋರಾಟ ಜನವರಿ 26 ರಂದು ಕೆಂಪುಕೋಟೆಯಲ್ಲಿ ಧಾರ್ಮಿಕ ಧ್ವಜ ಹಾರಿದ ಕಾರಣ ವಿವಾದಕ್ಕೀಡಾಗಿತ್ತು. ತದನಂತರ ಪೊಲೀಸರು ರೈತರನ್ನು ತೆರವುಗೊಳಿಸುತ್ತಿದ್ದಾರೆ, ಸ್ಥಳೀಯರ ನೆಪದಲ್ಲಿ ಕೆಲವರು ಟೆಂಟ್ ಕಿತ್ತು ಹಾಕಿದ್ದಾರೆ ಎಂದು ಹಲವು ಮುಖ್ಯವಾಹಿನಿ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ದೆಹಲಿಯ ಗಡಿಗಳಲ್ಲಿಯೇ ಒಂದು ತಿಂಗಳಿನಿಂದ ತಂಗಿದ್ದು ವರದಿ ಮಾಡುತ್ತಿರುವ ನಾನುಗೌರಿ.ಕಾಂ ವರದಿಗಾರರು ಸರ್ಕಾರ ಮತ್ತು ಮಾಧ್ಯಮಗಳು ಸುಳ್ಳು ವರದಿ ಮೂಲಕ ಜನರ ದಾರಿ ತಪ್ಪಿಸುತ್ತಿವೆ ಎಂದು ತಿಳಿಸಿದ್ದಾರೆ. ಅಲ್ಲದೇ ಎಲ್ಲಾ ಗಡಿಗಳಲ್ಲಿ ಎಂದಿನಂತೆ ರೈತ ಹೋರಾಟ ಮುಂದುವರೆದಿದ್ದು ಹಿಂದಿಗಿಂತಲೂ ಹೆಚ್ಚಿನ ಜನ ಬಂದು ಸೇರಿದ್ದಾರೆ ಎಂದು ತಿಳಿಸಿದ್ದಾರೆ.

ಟಿಕ್ರಿ ಗಡಿ

ಇಲ್ಲಿ ಜನವರಿ 25 ರಂದು ಸುಮಾರು 40 ಸಾವಿರ ಜನರಿದ್ದರು. ಜನವರಿ 26ರ ಟ್ರ್ಯಾಕ್ಟರ್ ರ್ಯಾಲಿ ವೇಳೆಗೆ ರೈತರ ಸಂಖ್ಯೆ 1 ಲಕ್ಷ ಮೀರಿತ್ತು. ಗಣರಾಜ್ಯೋತ್ಸವದಂದು ಉಂಟಾದ ಗೊಂದಲದಿಂದಾಗಿ ಸಂಜೆ ವೇಳೆ ಟ್ರ್ಯಾಕ್ಟರ್ ರ್ಯಾಲಿ ನಿಲ್ಲಿಸಲಾಯ್ತು. ಹಾಗಾಗಿ ಟ್ರ್ಯಾಕ್ಟರ್ ರ್ಯಾಲಿಗೆಂದು ಬಂದಿದ್ದ ಜನರು ರ್ಯಾಲಿ ಮುಗಿಸಿ ತಮ್ಮ ಊರಿಗೆ ಕಡೆ ಹೊರಟಿದ್ದರು.

ಆದರೆ ಜನವರಿ 27 ರ ರಾತ್ರಿ ವೇಳೆಗೆ ಟಿಕ್ರಿ ಗಡಿಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಯಿತು. ಅಲ್ಲದೆ ಇಂದು ರಾತ್ರಿ ಪೊಲೀಸರು ರೈತರ ಮೇಲೆ ಲಾಠೀ ಚಾರ್ಜ್ ಮಾಡುತ್ತಾರೆ ಎಂಬ ವರದಿಗಳು ಹರಿದಾಡಿದ್ದವು. ಅಷ್ಟರಲ್ಲಿ ಗಾಜಿಪುರ್ ಗಡಿಯಲ್ಲಿ ರೈತರ ಮೇಲೆ ಲಾಠೀ ಚಾರ್ಜ್ ನಡೆದಿತ್ತು. ಸಿಂಘು ಗಡಿಯಲ್ಲಿ ಸ್ಥಳೀಯರು ಪ್ರತಿಭಟಿಸುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಒಂದು ರೀತಿಯ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಸುದ್ದಿ ಸಾಮಾಜಿಕ ಮಾಧ್ಯಮಗಳ ಮೂಲಕ ದೇಶಕ್ಕೆ ತಲುಪಿತು. ಹರಿಯಾಣದ ಖಾಪ್ ಪಂಚಾಯತ್‌ಗಳು ರಾತ್ರೋರಾತ್ರಿ ಸಭೆ ಸೇರಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದವು. ಕೂಡಲೇ ಟಿಕ್ರಿ ಗಡಿಗಳಿಗೆ ಹೋಗಿ ರೈತರಿಗೆ ಬೆಂಬಲ ನೀಡಬೇಕೆಂದು ನಿರ್ಣಯಿಸಲಾಯಿತು. ಸಾವಿರಾರು ಜನ ಕಾರುಗಳಲ್ಲಿ ಗಡಿಗಳತ್ತ ನಡೆದರು. ತಮ್ಮ ಊರಿನ ಕಡೆಗೆ ಹೊರಟಿದ್ದ ಟ್ರ್ಯಾಕ್ಟರ್‌ಗಳು ಮತ್ತೆ ವಾಪಸ್ ಟಿಕ್ರಿ ಗಡಿಯತ್ತ ಮುಖ ಮಾಡಿದವು. ಇಂದು ಜನವರಿ 30 ರಂದು ಸುಮಾರು 70 ಸಾವಿರಕ್ಕೂ ಹೆಚ್ಚು ರೈತರು ಟಿಕ್ರಿ ಗಡಿಯಲ್ಲಿ ನಿರಾಂತಕವಾಗಿ ಪ್ರತಿಭಟನೆ ಮುಂದುವರೆಸಿದ್ದಾರೆ ಎಂದು ನಾನುಗೌರಿ.ಕಾಂ ಪ್ರತಿನಿಧಿ ಮಮತ.ಎಂ ಮಾಹಿತಿ ನೀಡಿದ್ದಾರೆ. ವಿಡಿಯೋ ಇಲ್ಲಿದೆ.

ಸಿಂಘು ಗಡಿ

ಸಿಂಘು ಗಡಿಯಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿ ರೈತರನ್ನು ತೆರವುಗೊಳಿಸುವಂತೆ ಪ್ರತಿಭಟನೆ ಮಾಡಿದ್ದಾರೆ ಎಂಬುದು ಅರ್ಧ ಸತ್ಯ. ಮೊದಲಿಗೆ ಅವರು ಸ್ಥಳೀಯರಲ್ಲ ಬದಲಿಗೆ ಬಿಜೆಪಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಎಂದು ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ನಡೆಸಿದೆ. ಎರಡನೇದಾಗಿ ಅವರು ಸಿಂಘು ಗಡಿಯ ಒಂದು ಮೂಲೆಯಲ್ಲಿ ಚಿಕ್ಕ ಪ್ರತಿಭಟನೆಯ ಪ್ರಹಸನವಷ್ಟೇ ನಡೆಸಿದ್ದಾರೆ. ANI ಸೇರಿದಂತೆ ಮುಖ್ಯವಾಹಿನಿ ಮಾಧ್ಯಮಗಳು ಅದನ್ನೆ ದೊಡ್ಡದು ಮಾಡಿ ತೋರಿಸಿ ಇಡೀ ಸಿಂಘು ಗಡಿಗೆ ಸ್ಥಳೀಯರು ನುಗ್ಗಿಬಂದಿದ್ದಾರೆ ಎಂದು ಸುಳ್ಳು ವರದಿ ಮಾಡಿವೆ.

ವಾಸ್ತವವೆಂದರೆ ಸಿಂಘು ಗಡಿಯಲ್ಲಿ ಎರಡು ಪ್ರತಿಭಟನೆಗಳು ನಡೆಯುತ್ತಿವೆ. ಹರಿಯಾಣಕ್ಕೆ ಹೊಂದಿಕೊಂಡಂತೆ ಸಂಯುಕ್ತ ಕಿಸಾನ್ ಮೋರ್ಚಾ ಅಡಿಯಲ್ಲಿ ನಡೆಯುತ್ತಿರುವುದು ಒಂದು ಬೃಹತ್ ಪ್ರತಿಭಟನೆಯಾದರೆ, ಅಲ್ಲಿಂದ 200 ಮೀಟರ್ ದೂರದಲ್ಲಿ ಅಂದರೆ ದೆಹಲಿ ವ್ಯಾಪ್ತಿಗೆ ಬರುವ ಸ್ಥಳದಲ್ಲಿ ಮಜ್ದೂರ್ ಕಿಸಾನ್ ಸಂಘರ್ಷ ಕಮಿಟಿ ನೇತೃತ್ವದಲ್ಲಿ ಸಣ್ಣ ಪ್ರತಿಭಟನೆ ನಡೆಯುತ್ತಿದೆ. (ದೀಪ್ ಸಿಧು ಇದೇ ಸಂಘಟನೆಗೆ ಸೇರಿದ್ದು, ಮುಖ್ಯವಾಗಿ ಗಣರಾಜ್ಯೋತ್ಸವದ ದಿನ ನಿಯೋಜಿತ ಮಾರ್ಗ ಉಲ್ಲಂಘಿಸಿ, ಕೆಂಪು ಕೋಟೆಗೆ ನುಗ್ಗಿ ಧಾರ್ಮಿಕ ಧ್ವಜ ಹಾರಿಸಿದ್ದು ಇವರೆ ಎನ್ನಲಾಗಿದೆ) ಈ ಭಾಗ ದೆಹಲಿ ಪೊಲೀಸರ ವ್ಯಾಪ್ತಿಗೆ ಬರುವುದರಿಂದ, ಜನವರಿ 27 ರಂದು ಸ್ಥಳೀಯರ ಹೆಸರಿನ ಗುಂಪು ಇಲ್ಲಿ ಪ್ರತಿಭಟನೆ ನಡೆಸಿದೆ. ಇದು ಇನ್ನೊಂದು ಹರಿಯಾಣದ ಬದಿಯಲ್ಲಿರುವ ರೈತ ಗುಂಪಿಗೆ ಗೊತ್ತಾಗಿಯೇ ಇಲ್ಲ. ಆದರೆ ಮಾಧ್ಯಮಗಳು ಇಡೀ ಸಿಂಘು ಗಡಿಯಲ್ಲಿ ಪ್ರತಿಭಟನೆ ಎಂದು ತಪ್ಪು ವರದಿ ಮಾಡಿವೆ. ಏಕೆಂದರೆ ಅಲ್ಲಿ 60 ಸಾವಿರಕ್ಕೂ ಹೆಚ್ಚು ರೈತರು ಪ್ರತಿಭಟನೆ ನಡೆಸುತ್ತಿದ್ದು ಯಾವು ಗುಂಪು ಸಹ ಅಲ್ಲಿಗೆ ನುಗ್ಗಿ ಪ್ರತಿಭಟನೆ ನಡೆಸುವ ಧೈರ್ಯ ತೋರುವುದಿಲ್ಲ.

ಇಲ್ಲಿ ಜನವರಿ 25 ರಂದು 60-70 ಸಾವಿರ ರೈತರಿದ್ದರು. ಜನವರಿ 26ರ ಗಣರಾಜ್ಯೋತ್ಸವದಂದು 2 ಲಕ್ಷಕ್ಕೂ ಅಧಿಕ ರೈತರಿದ್ದರು. ಇಂದು ಜನವರಿ 30 ರಂದು ಸಹ ಸುಮಾರು 60-70 ಸಾವಿರ ಜನರಿದ್ದಾರೆ. ಟ್ರ್ಯಾಕ್ಟರ್‌ಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ. ಆದರೆ ಕಾರುಗಳ ಸಂಖ್ಯೆ ಹೆಚ್ಚಾಗಿದ್ದು, ಸೈಕಲ್‌ಗಳ ಬಂದು ಸೇರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಮಮತ ಎಂ ಮಾಹಿತಿ ನೀಡಿದ್ದಾರೆ.

ಅಲ್ಲದೆ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಮಜ್ದೂರ್ ಕಿಸಾನ್ ಸಂಘರ್ಷ ಕಮಿಟಿ ಪ್ರತಿಭಟನೆಗಳ ನಡುವೆ ಇದ್ದ 200 ಮೀಟರ್ ಜಾಗದಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ. ಇದರಿಂದ ಎರಡೂ ಕಡೆಗೆ ಯಾರೂ ಹೋಗದಂತೆ ತಡೆಯಲಾಗಿದೆ. ಇದರಿಂದ ಮಜ್ದೂರ್ ಕಿಸಾನ್ ಸಂಘರ್ಷ ಕಮಿಟಿ ರೈತರಿಗೆ ತೀವ್ರ ಅನಾನುಕೂಲವಾಗಿದೆ. ಏಕೆಂದರೆ ಅವರ ಲಂಗರ್ ಹರಿಯಾಣದ ಭಾಗದ ಕಡೆಗಿದ್ದು ಅಲ್ಲಿಗೆ ಹೋಗದಂತೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಹಾಗಾಗಿ ಅವರು ಮುರೂ ನಿಮಿಷದಲ್ಲಿ ಕ್ರಮಿಸಬಹುದಾಗಿದ್ದ ಲಂಗರ್‌ಗೆ ತಲುಪಲು ಈಗ ಒಂದೂವರೆ ಕಿ.ಮೀ ನಡೆದು ಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ಸಿಂಘು ಗಡಿಯ ಪ್ರತಿಭಟನೆಯ ಸ್ಥಳಕ್ಕೆ ಯಾರನ್ನೂ ಪೊಲೀಸರು ಬಿಡುತ್ತಿಲ್ಲ ಎನ್ನಲಾಗಿದೆ.

ಗಾಜಿಪುರ್ ಗಡಿ

ಇದು ಉತ್ತರ ಪ್ರದೇಶ ಮತ್ತು ದೆಹಲಿ ಸಂಪರ್ಕಿಸುವ ಗಡಿಯಾಗಿದೆ. ಜನವರಿ 27ರಂದು ಇಲ್ಲಿಂದ ರೈತರು ಜಾಗ ಖಾಲಿ ಮಾಡಬೇಕೆಂದು ಉತ್ತರ ಪ್ರದೇಶ ಪೊಲೀಸರು ಧಮಕಿ ಹಾಕಿದ್ದರು. ಅಲ್ಲದೇ 27 ರ ರಾತ್ರಿ ಬಿಜೆಪಿ ಶಾಸಕನ ಬೆಂಬಲಿಗರು ವೇದಿಕೆಗೆ ನುಗ್ಗಿ ಧಾಂಧಲೆ ನಡೆಸುತ್ತಿದ್ದಾಗ ರೈತ ಮುಖಂಡ ರಾಕೇಶ್ ಟಿಕಾಯತ್ ಮೈಕ್ ಕೈಗೆತ್ತಿಕೊಂಡು ಮಾಡಿದ ಭಾಷಣ ನಿಮಗೆ ಗೊತ್ತಿದೆ. ಭಾವನಾತ್ಮಕ ಭಾಷಣ ಮತ್ತು ಅವರು ಸುರಿಸಿದ ಕಣ್ಣೀರು ಉತ್ತರ ಪ್ರದೇಶ ಮತ್ತು ಹರಿಯಾಣ ರೈತರನ್ನು ಕಲಕಿದೆ. ಅಂದಿನಿಂದ ಗಾಜಿಪುರ್ ಗಡಿಗೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ರಾಕೇಶ್ ಟಿಕಾಯತ್‌ರವರ ಊರು ಮುಜಾಫರ್‌ನಗರದಲ್ಲಿ ರೈತ ಹೋರಾಟ ಬೆಂಬಲಿಸಲು ಮಹಾಪಂಚಾಯತ್ ನಡೆದು 10 ಸಾವಿರಕ್ಕಿಂತಲೂ ಹೆಚ್ಚು ಜನ ಸೇರಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾಟ್ ಸಮುದಾಯದವರೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ನಿನ್ನೆ ನಡೆದ ಮಹಾಪಂಚಾಯತ್‌ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಗಾಜಿಪುರ್ ಗಡಿಗೆ ಹೋಗುವಂತೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಅದರಂತೆ ಇಂದು ಸಾವಿರಾರು ಜನ ಗಾಜಿಪುರ್ ಗಡಿ ತಲುಪಿದ್ದಾರೆ. ಜನವರಿ 25 ರಂದು ಇದ್ದ ರೈತರಿಗಿಂತ ನಾಲ್ಕು ಪಟ್ಟು ಹೆಚ್ಚು ರೈತರು ಗಡಿಯಲ್ಲಿದ್ದಾರೆ.

ಹರಿಯಾಣದ ಭಾರತೀಯ ರಾಷ್ಟ್ರೀಯ ಲೋಕ್ ದಳ (ಐಎನ್‌ಎಲ್‌ಡಿ)ದ ಶಾಸಕ ಅಭಯ್ ಸಿಂಗ್ ಚೌಟಾಲ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮೊನ್ನೆ ರಾಜೀನಾಮೆ ನೀಡಿದ್ದರು. ಇಂದು ಅವರು ರಾಕೇಶ್ ಟಿಕಾಯತ್‌ರನ್ನು ಬೆಂಬಲಿಸಿ ರೈತರ ಹೋರಾಟಕ್ಕೆ ನೂರಾರು ಕಾರುಗಳೊಂದಿಗೆ ಗಾಜಿಪುರ್ ಗಡಿಗೆ ಧಾವಿಸುತ್ತಿರುವುದಾಗಿ ಕಾರುಗಳ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದಾರೆ.

ಪೊಲೀಸ್ ಬಲ ಬಳಸಿ, ತಂತ್ರ ಬಳಸಿ ರೈತ ಹೋರಾಟವನ್ನು ಹತ್ತಿಕ್ಕಲು ಮೋದಿ ಮತ್ತು ಯೋಗಿ ಸರ್ಕಾರ ಯೋಜಿಸಿತ್ತು. ಅದರೆ ಅದೇ ಅವರಿಗೆ ಉಲ್ಟಾ ಹೊಡೆದಿದ್ದು ಮೊದಲಿಗಿಂತ ಹೆಚ್ಚಿನ ರೈತರು ಗಡಿಗಳಿಗೆ ಮರಳುತ್ತಿದ್ದಾರೆ. ರೈತರು, ಯುವಕರು ಎಲ್ಲಾ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಇದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಪೊಲೀಸರು ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಆದರೆ ಅವರೇನು ಮಾಡಲು ಸಾಧ್ಯವಾಗುತ್ತಿಲ್ಲ. ದೊಡ್ಡ ಡೊಡ್ಡ ಮೀಡಿಯಾ ಚಾನೆಲ್‌ಗಳು ಸಹ ಸ್ಥಳದಲ್ಲಿವೆ. ಕೆಲ ಯೂಟ್ಯೂಬರ್‌ಗಳು, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವವರು ವಿಡಿಯೋ ಮಾಡುತ್ತಿದ್ದಾರೆ. ಸ್ವಲ್ಪ ಹೊತ್ತಿಗೆ ಮುಂಚೆ ರಾಕೇಶ್ ಟಿಕಾಯತ್ ನೆರೆದಿರುವವರನ್ನು ಉದ್ದೇಶಿಸಿ ಸ್ಪೂರ್ತಿದಾಯಕ ಭಾಷಣ ಮಾಡಿದರು. ಅವರ ಉತ್ಸಾಹ ಹೆಚ್ಚಾಗಿದೆಯೆಂದು ಸ್ಥಳದಲ್ಲಿರುವ ಗೌರಿ ಮೀಡಿಯಾ ಟ್ರಸ್ಟ್ ಅಧ್ಯಕ್ಷರಾದ ದೊಡ್ಡಿಪಾಳ್ಯ ನರಸಿಂಹ ಮೂರ್ತಿಯವರು ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ಮೂರು ಗಡಿಗಳಲ್ಲಿ ಜನವರಿ 25ರಂದು ಅಂದರೆ ಟ್ರ್ಯಾಕ್ಟರ್ ರ್ಯಾಲಿಗಿಂತ ಮೊದಲಿದ್ದ ರೈತರ ಸಂಖ್ಯೆಗಿಂತ ಹೆಚ್ಚಿನ ರೈತರು ಇಂದು ಮೂರು ಗಡಿಗಳಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇನ್ನು ಸಾವಿರಾರು ಜನ ಬರುತ್ತಿದ್ದಾರೆ. ರೈತರ ಹೋರಾಟ ಶಾಂತಿಯುತವಾಗಿ ಮುಂದುವರೆದಿದೆ.


ಇದನ್ನೂ ಓದಿ: ಶಾಸಕ ಚೌಟಾಲ ನೇತೃತ್ವದಲ್ಲಿ ಗಾಜಿಪುರ್‌ ಗಡಿಯತ್ತ ನುಗ್ಗಿ ಬರುತ್ತಿರುವ ರೈತರ ದಂಡು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...