Homeಅಂಕಣಗಳುಹಿಂಗೇ ಹೊರಟರ ಖಾಸಗಿ ಕಂಪನಿ ಸಿಈಓ ಬಜೆಟ್ ಮಂಡಿಸುವ ದಿನವೂ ದೂರವಿಲ್ಲ

ಹಿಂಗೇ ಹೊರಟರ ಖಾಸಗಿ ಕಂಪನಿ ಸಿಈಓ ಬಜೆಟ್ ಮಂಡಿಸುವ ದಿನವೂ ದೂರವಿಲ್ಲ

- Advertisement -
- Advertisement -

‘ಸರಕಾರ’ ಎನ್ನುವುದು ಪರ್ಶಿಯನ್ ಭಾಷೆ ಪದ. ಅದರ ಅನೇಕ ಅರ್ಥಗಳಲ್ಲಿ ಒಂದು ‘ಕೆಲಸದಲ್ಲಿ ಇರುವುದು’ ಅಂತ. ಸರಕಾರ ಅನ್ನುವುದೇ ಕೆಲಸ ಅನ್ನುವುದಕ್ಕ ಸಮಾನಾರ್ಥಕ ಪದ ಅನ್ನೋದಾದರ, ಸರ್ಕಾರದ ಕೆಲಸ ಏನು?

ಈ ಸರಕಾರದ ಕೆಲಸ ಏನು ಎನ್ನುವ ಸರಳವಾದ ಪ್ರಶ್ನೆ ಇಡೀ ಜಗತ್ತನ್ನು ಇಬ್ಭಾಗ ಮಾಡಿಬಿಟ್ಟಿದೆ.
ಕೆಲವರು ಸರಕಾರಕ್ಕ ಕೆಲಸನ ಇಲ್ಲ ಅನ್ನೋರು. ಇನ್ನೂ ಕೆಲವರು ಎಲ್ಲವೂ ಸರ್ಕಾರದ ಕೆಲಸ ಅನ್ನೋರು. ಅವರ ನಡುವೆ ಬಹಳ ದೊಡ್ಡ ಸಂಖ್ಯೆಯಲ್ಲಿ ಮಧ್ಯಮ ಮಾರ್ಗಿಗಳು. ಸರ್ಕಾರದ ಕೆಲಸ ಏನು ಅನ್ನೋದು ನಮಗ ಗೊತ್ತಿಲ್ಲ. ಅದು ಏನು ಅಂತ ತಿಳಕೋಳೋದು ಬೇಕಾಗಿಲ್ಲ, ಅಂತ ಇವರು ಗಟ್ಟಿಯಾಗಿ ನಂಬತಾರ. ಮಜಾ ಏನು ಅಂದ್ರ ಈ ರೀತಿಯ ಜನಗಳಿಗೆ ಅತಿ ಕಠೋರವಾದ ರಾಜಕೀಯ ನಿಲುವು ಇರ್ತಾವ. ಯಾವುದನ್ನು ನಾವು ಸ್ಪಷ್ಟವಾಗಿ ತಿಳಕೊಂಡಿರೋದಿಲ್ಲವೋ ಅದರ ಬಗ್ಗೆ ಅಭಿಪ್ರಾಯ ಮಾತ್ರ ಗಟ್ಟಿಯಾಗಿ ರೂಪಿಸಿಕೊಂಡು ಬಿಟ್ಟಿರತೀವಿ.

ಯಥಾ ಪ್ರಜಾ ತಥಾ ರಾಜಾ ಅನ್ನುವ ಗಾದಿಮಾತಿನ ಹಂಗ, ನಾವು ಹೆಂಗ ಇರತೆವೋ, ನಮ್ಮನ್ನ ಆಳುವ ಧೀರರು ಹಂಗೆ ಇರ್ತಾರ. ಎಲ್ಲ ವಿಷಯದ ಬಗ್ಗೆ ನಾವು ಸರಿಯಾಗಿ ಓದಿ, ಕೇಳಿ, ಅರ್ಥಮಾಡಿಕೊಂಡರ, ನಮಗೆ ಅರ್ಥ ಆಗಲಾರದ ವಿಷಯದ ಬಗ್ಗೆ ಪ್ರಶ್ನೆ ಮಾಡಿದರ ಅವರು ಸರಿಯಾಗಿ ಎಚ್ಚರದಿಂದ ಇರ್ತಾರ. ಅದನ್ನ ಬಿಟ್ಟು ನಮಗ ಏನು ಸರಿಯಾಗಿ ಗೊತ್ತಿಲ್ಲ. ಆದರೆ ನಾವು ಅವರ ಪರವಾಗಿ ಇದ್ದೇವೆ. ನಾವು ಅವರನ್ನ ಪ್ರಶ್ನೆ ಮಾಡೋದಿಲ್ಲ. ಯಾಕ ಅಂದ್ರ ಅವರು ತಪ್ಪು ಮಾಡಲಿಕ್ಕೆ ಸಾಧ್ಯ ಇಲ್ಲ ಅನ್ನುವ ಪ್ರಶ್ನಾತೀತ ಮಾತೃ ಪ್ರೇಮದ ನಾಗರಿಕರು ಇದ್ದರೆ, ಸರಕಾರ ಎನ್ನುವುದು ಕೈಕಯಿಯಂತಹ ತಾಯಿ ಆಗಿ ಬಿಡುತ್ತದೆ. ತನಗೆ ಓಟು ಕೊಟ್ಟ ಹಲವರನ್ನು ಮರೆತು ನೋಟು ಕೊಟ್ಟ ಕೆಲವರನ್ನು ಮಾತ್ರ ಪೋಷಿಸುತ್ತದೆ. ಆ ನೋಟು ಕೊಟ್ಟ ಕೆಲವರು ರಾಮನ ತಮ್ಮ ಭರತನ ಹಂಗ ಇದ್ದರ ಅಡ್ಡಿಯಿಲ್ಲ. ಆದರೆ ಅವರು ರಾವಣನ ತಂಗಿ ಶೂರ್ಪನಖಿ ಹಂಗ ಚೂಪಾದ ಉಗುರಿನಿಂದ ಬಡವರ ರಕ್ತ ಹೀರುವವರು ಇರ್ತಾರ.

ಮೊನ್ನೆ ನಮ್ಮ ಉಳ್ಳಿ ಪಥ್ಯದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಆಯವ್ಯಯ ಪತ್ರ ಭಾರತೀಯ ಕಂಪನಿ ವಿದೇಶಿ ಸಾಮಾನು ಬಳಸಿ ತಯಾರು ಮಾಡಿದ ಪಾಟಿ ಕಂಪ್ಯೂಟರ್‌ದೊಳಗ (ಟ್ಯಾಬ್ಲೆಟ್) ಓದಿದರು. ಹೆಸರಿನೊಳಗ ಸೀತಾ ಹಾಗೂ ರಾಮ್ ಎರಡೂ ಇರುವ ಅವರು ಜನರನ್ನು ಮಾತ್ರ ಅಯೋಧ್ಯಾ ನಾಗರಿಕರಂತೆ ನೋಡಲಿಲ್ಲ.

ನನ್ನ ಭಾಷಣದ ಮೂಲಮಂತ್ರ ಕನಿಷ್ಠ ಸರಕಾರ, ಗರಿಷ್ಟ ಆಡಳಿತ ಅಂತ ಘೋಷಿಸಿದ ಅವರು ಆ ಗುರಿ ಮುಟ್ಟುವುದು ಹೇಗೆ ಅಂತ ಬಿಡಿಸಿ ಹೇಳಲಿಲ್ಲ. ಆಡಳಿತದಲ್ಲಿ ಸರ್ಕಾರದ ಪಾಲು ಕಮ್ಮಿ ಆಗುತ್ತಾ ಹೋದರೆ ಗರಿಷ್ಟ ಆಡಳಿತ ಸಾಧ್ಯ ಆಗೋದು ಹೇಗೆ ಅನ್ನುವುದು ಅವರು ಹೇಳಲಿಲ್ಲ, ನಾವು ಕೇಳಲಿಲ್ಲ.

ಉನ್ನತ ಶಿಕ್ಷಣದ ಸ್ಥಿತಿ ಸುಧಾರಿಸುವ ಯೋಜನೆ ಒಳಗೆ ಖಾಸಗಿ ಬಂಡವಾಳ ತಂತ್ರ ಕುಶಲತೆಯು ಭಾಗ ವಹಿಸಲಿದೆಯಂತೆ. ಅಂದ್ರ ಸರಕಾರ ಕೈಚೆಲ್ಲಿ ಖಾಸಗಿಯವರಿಗೆ ದಾರಿ ಮಾಡಿಕೊಟ್ಟದ.

ಪ್ರಾಥಮಿಕ ಶಿಕ್ಷಣದೊಳಗ ಸರ್ಕಾರದ ನಿಯಂತ್ರಣ ಹಂತಹಂತವಾಗಿ ಕಮ್ಮಿಯಾಗಿ ಖಾಸಗಿಯವರ ಭಾಗಿದಾರಿಕೆ ಹೆಚ್ಚು ಆಗಲಿಕ್ಕೆ ಶುರು ಆಗತದ. ಹಿಂದೆ ಈ ಕೆಲಸ ಸಣ್ಣಗ ಶುರು ಆಗಿತ್ತು. ಇನ್ನು ಮುಂದ ಇದು ಗತಿ ಪಡತಿದ. ಅದಕ್ಕ ಸದ್ಗತಿ ಸಿಗತದೋ ಇಲ್ಲೋ.

ಸಚಿವರ ಪ್ರಕಾರ ಅಂಕೀಕೃತ ಆರೋಗ್ಯ ವಾಗ್ದಾನ ಯೋಜನೆ (ಡಿಜಿಟಲ್ ಹೆಲ್ತ್ ಅಷ್ಯೂರೆನ್ಸ್) ಪ್ರಕಾರ ಎಲ್ಲ 130 ಕೋಟಿ ಭಾರತೀಯ ರಹವಾಸಿಗಳ ಆರೋಗ್ಯ ಸೂಚಕಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಆಮೇಲೆ ಅದರ ಪ್ರಕಾರ ನಿಮ್ಮ ರೋಗದ ಲಕ್ಷಣ, ಸ್ಥಿತಿ, ರೋಗ ನಿರೋಧಕ ಶಕ್ತಿ, ಅದಕ್ಕೆ ಚಿಕಿತ್ಸೆ ಎಲ್ಲಾ. ಅದನ್ನು ಮಾಡೋರು ಯಾರು? ಖಾಸಗಿ ಕಂಪನಿಯವರು. ಅವರು ಬರೆ ನಿಮ್ಮ ರೋಗ ಚೆಕ್ ಮಾಡೋದಿಲ್ಲ. ನಿಮ್ಮ ಹಾಗೂ ನಿಮ್ಮ ಮನೆಯವರ, ನಿಮ್ಮ ಕಂಪನಿ ಉದ್ಯೋಗಿಗಳ, ಎಲ್ಲರ ಮಾಹಿತಿ ಇಟ್ಟುಕೊಂಡು ನಿಮ್ಮನ್ನ ಆಟ ಅಡಿಸತಾರ. ಅದನ್ನ ವಿಮಾ ಕಂಪನಿಗೆ ಮಾರಾಟ ಮಾಡಿಬಿಡತಾರ. ಅವರು ನಿಮ್ಮ ಆರೋಗ್ಯದ ಸ್ಥಿತಿ ಗೊತ್ತಿದ್ದರಿಂದ ನಿಮಗೆ ವಿಮೆ ಕೊಡಲಿಕ್ಕೆ ಇಲ್ಲೆ, ಅಥವಾ ಅತಿ ಹೆಚ್ಚಿನ ವೆಚ್ಚದ ಪಾಲಿಸಿ ಕೊಡಬಹುದು. ಎಲ್ಲ ಚಿಕಿತ್ಸೆ ಕೊಡಲಿಕ್ಕೆ ಮಾತ್ರ ಇರಲಿಕ್ಕಿಲ್ಲ.

ಕೋವಿಡ್ ಮಾರಿಯ ಕಾಲದಾಗ ಖಾಸಗಿ ಆಸ್ಪತ್ರೆ, ಖಾಸಗಿ ಶಾಲೆ ಹಾಗೂ ಖಾಸಗಿ ಮಾಧ್ಯಮಗಳು ಆಡಿದ ಆಟ ನೋಡಿದ ಮೇಲೆ ಸಹಿತ ಎಲ್ಲಾ ರೋಗಕು ಖಾಸಗಿ ಕ್ಷೇತ್ರ ರಾಮ ಬಾಣ ಅಲ್ಲ ಅನ್ನುವುದು ನಮಗ ಇನ್ನೂ ಖಾತರಿ ಯಾಗಿಲ್ಲ ಅಂತ ಅನ್ನಿಸತದ.

ಇನ್ನ ಉದ್ಯೋಗ ಸೃಷ್ಟಿ ಸಲುವಾಗಿ ಸರಕಾರ ಹಮ್ಮಿಕೊಂಡಿರುವ ಅನೇಕ ಯೋಜನೆಗಳಿಗೆ ಖಾಸಗಿಯವರೇ ಇಂಜಿನ್, ಗಾಲಿ ಹಾಗೂ ಇಂಧನ. ಸರಕಾರ ಯಾವುದೇ ಉದ್ಯೋಗ ಸೃಷ್ಟಿ ಮಾಡೋದಿಲ್ಲ. ಇರುವ ಸರ್ಕಾರಿ ಸಂಸ್ಥೆಗಳನ್ನು ಮಾರಾಟ ಮಾಡೋದರಿಂದ ಜನರಿಗೆ ಒಳ್ಳೆಯದು ಆಗತದ. ಎರಡು ಬ್ಯಾಂಕು ಹಾಗೂ ಎಲ್‌ಐಸಿಗಳನ್ನು ಖಾಸಗಿಗೆ ಮಾರಾಟ ಮಾಡಿದರ ಎಲ್ಲ ಸಮಸ್ಯೆ ಪರಿಹಾರ ಆಗತದ ಅಂತ ಸಚಿವರು ಹೇಳಿದ್ದಾರ. ಅದಕ್ಕ ಸರ್ಕಾರಿ-ಖಾಸಗಿ ಸಹ ಭಾಗಿತ್ವದ ಮೊದಲ ಮಾದರಿಯಾದ ಮಾರುತಿ ಕಂಪನಿಯ ಹಿಂದಿನ ಮುಖ್ಯಸ್ಥ ಭಾರ್ಗವ ಅವರು ಒಪ್ಪಿಗೆ ಸೂಚಿಸಿಬಿಟ್ಟಾರ. ಮಾರುತಿ ಕಂಪನಿ ಸರಕಾರದಿಂದ ಅನೇಕ ಬಾರಿ ಸಹಾಯ ಪಡೆಯಿತು ಅನ್ನೋದನ್ನ ಮರ್ತುಬಿಟ್ಟಾರ.

ಸರಕಾರ ಮನಿ ಕಟ್ಟುವುದಿಲ್ಲ. ಆ ಕೆಲಸ ಮಾಡುವ ಖಾಸಗಿಯವರಿಗೆ ಸಹಾಯ ಮಾಡತದ ಅಂತ ಸಚಿವರು ಹೇಳಿಬಿಟ್ಟಾರ. ಅವರಿಗೆ ಸುಲಭ ಸಾಲ, ಕಟ್ಟು ಬಾಕಿ ಸಾಲಗಾರರ ಕಡೆ ಮೃದು ಧೋರಣೆ, ಈ ರೀತಿಯ ಡೆವಲಪರ್‌ಗಳ ಕೈಗೆ ಸಿಕ್ಕುವ ಬಡಪಾಯಿ ಮಧ್ಯಮ ವರ್ಗದವರಿಗೆ ಎರಡು ಶೇಕಡಾ ಬಡ್ಡಿ ಕಮ್ಮಿ, ಇತ್ಯಾದಿ ಘೋಷಣೆ ಮಾಡಿದ್ದಾರೆ.

ಕುಡಿಯುವ ನೀರು ಖಾಸಗಿಯವರಿಂದ ಪಡೆಯಬೇಕು. ಅದನ್ನು ಸರಕಾರ ಕೊಡಲಿಕ್ಕೆ ಆಗೋದಿಲ್ಲ. ಅದು ಸರ್ಕಾರದ ಕೆಲಸ ಅಲ್ಲ. ಅದಕ್ಕೆ ಜಲವೆ ಜೀವನ ಅನ್ನುವ ಯೋಜನೆ ಒಳಗ ಖಾಸಗಿ ಕಂಪನಿಗಳು ನೀರು ಕೊಡತಾವ. ಅವರಿಗೆ ಅನುಕೂಲ ಆಗು ಹಂಗ ಸರ್ಕಾರಿ ಅಧಿಕಾರಿಗಳು ನಡೆದುಕೊಳ್ಳಬೇಕು. ಆಡಳಿತ ಪಕ್ಷದ ಮಾಲೀಕರೆ ಸರ್ಕಾರಿ ಅಧಿಕಾರಿಗಳ ಮಾಲೀಕರು, ಅಷ್ಟೂ ತಿಳಿಯದೇ?

ಎಲ್ಲಾ ಹೋಗಲಿ, ಮುಂದಿನ ವರ್ಷದ ಜನಗಣತಿ ಸಹಿತ ಖಾಸಗಿಯವರು ಮಾಡೋರು. ಹಂಗಾರ ಇನ್ನೇನು ಉಳಿಯಿತು? ಶಾಸನ ಸಭೆ, ಚುನಾವಣೆ, ಕಾನೂನು ಮತ್ತು ಸುವ್ಯವಸ್ಥೆ, ದೇಶ ರಕ್ಷಣೆ ಹಾಗೂ ಯುದ್ಧ ಮಾಡುವುದು, ನಾಣ್ಯ ಟಂಕಿಸುವುದು ಇತ್ಯಾದಿ ಸಣ್ಣ ಪುಟ್ಟ ಕೆಲಸಗಳು. ಮುಂದಿನ ಸಾರಿ ಖಾಸಗಿ ವಿಶ್ವವಿದ್ಯಾಲಯದಿಂದ ಎಂಬಿಎ ಮಾಡಿದ ಖಾಸಗಿ ಕಂಪನಿ ಸಿಈಒ ಒಬ್ಬರು ನಮ್ಮ ಹಣಕಾಸು ಸಚಿವರ ಬದಲಿಗೆ ಬಜೆಟ್ ಮಂಡಿಸಿದರೂ ಮಂಡಿಸಬಹುದು. ಏನೇನೋ ಆಗುತ್ತಿರುವಾಗ ಇದು ಆದರೆ ಆಶ್ಚರ್ಯ ಏನು?


ಇದನ್ನೂ ಓದಿ: ಈ ಬಜೆಟ್ ಶ್ರೀಮಂತರು ಮತ್ತು ಕಾರ್ಪೋರೇಟ್‌‌ಗಳಿಗೆ ಮಾತ್ರ: ನೆಟ್ಟಿಗರ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿಯನ್ನು ಟೀಕಿಸಿದ್ದಕ್ಕೆ ಸ್ವಪಕ್ಷದ ನಾಯಕನ ಬಂಧನ: ಮೌನಕ್ಕೆ ಶರಣಾದ ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕರು

0
ರಾಜಸ್ಥಾನದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಉಸ್ಮಾನ್‌ ಘನಿ ಬಂಧನದ ಬಗ್ಗೆ ಮಾತನಾಡಲು ಸ್ವಪಕ್ಷದ ಅಲ್ಪಸಂಖ್ಯಾತ ಘಟಕದ ನಾಯಕರು ಮುಂದೆ ಬರುತ್ತಿಲ್ಲ. 'ಪ್ರಜಾಪ್ರಭುತ್ವ' ದೇಶದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದು ಅಪರಾಧವಲ್ಲ ಎಂದು ತಿಳಿದಿದ್ದರೂ ಈ...