ತನ್ನ ಮೇಲಿನ ದ್ವೇಷಕ್ಕೆ ರಾಜ್ಯದ ವಿಧಾನಸಭಾ ಚುಣಾವಣೆಯಲ್ಲಿ ಅತ್ಯಂತ ದೊಡ್ಡ ಶತ್ರು ಬಿಜೆಪಿಗೆ ದಾರಿ ಮಾಡಿ ಕೊಡಬೇಡಿ ಎಂದು ಟಿಎಂಸಿಯು ಶನಿವಾರ ಎಡಪಂಥೀಯ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಮನವಿ ಮಾಡಿದೆ. ಆದರೆ, ಎಡ ಮತ್ತು ಕಾಂಗ್ರೆಸ್ ಮೈತ್ರಿಕೂಟವು ಈ ಮನವಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದು, ಟಿಎಂಸಿಯನ್ನು ಪಶ್ಚಿಮ ಬಂಗಾಳದ ಬಿಜೆಪಿಯ “ಬಿ ತಂಡ” ಎಂದು ಕರೆದಿದೆ.
ಟಿಎಂಸಿ ಕಳೆದೊಂದು ತಿಂಗಳಲ್ಲಿ ಇದು ಎರಡನೆ ಬಾರಿಗೆ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನಲ್ಲಿ ಹೋರಾಟ ನಡೆಸುವಂತೆ ಎಡ ಮತ್ತು ಕಾಂಗ್ರೆಸ್ ಗೆ ಮನವಿ ಮಾಡಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ 200 ಸ್ಥಾನ ಗೆಲ್ಲುತ್ತೇವೆ: ಅಮಿತ್ ಶಾ
ಬಿಜೆಪಿಯು ಟಿಎಂಸಿ ಮಾಡಿರುವ ಮನವಿಯ ಬಗ್ಗೆ, ರಾಜ್ಯದಲ್ಲಿ ತೃಣಮೂಲಕ್ಕೆ ಪರ್ಯಾಯವಾಗಿ ಬಿಜೆಪಿ ಮಾತ್ರ ಇದೆ ಎಂದು ಈ ಮನವಿ ಸಾಬೀತುಪಡಿಸುತ್ತದೆ ಎಂದು ಹೇಳಿದೆ.
294 ಸದಸ್ಯ ಬಲವಿರುವ ರಾಜ್ಯ ವಿಧಾನಸಭೆಗೆ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ.
“ಎಡಪಂಥೀಯ ಮತ್ತು ಕಾಂಗ್ರೆಸ್ ಪಕ್ಷಗಳು ನಿಜವಾದ ಬಿಜೆಪಿ ವಿರೋಧಿಗಳಾಗಿದ್ದರೆ ಅವರು ಬಿಜೆಪಿಯ ಕೋಮು ಮತ್ತು ವಿಭಜಕ ರಾಜಕಾರಣದ ವಿರುದ್ಧದ ಹೋರಾಟದಲ್ಲಿ ಮಮತಾ ಬ್ಯಾನರ್ಜಿ ಅವರ ಬೆನ್ನಿಗೆ ನಿಲ್ಲಬೇಕು” ಎಂದು ಪಶ್ಚಿಮ ಬಂಗಾಳದ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ತಪಸ್ ರಾಯ್ ಹೇಳಿದ್ದಾರೆ.
“ಮಮತಾ ಬ್ಯಾನರ್ಜಿ ಮತ್ತು ಟಿಎಂಸಿಯನ್ನು ವಿರೋಧಿಸುತ್ತಾ ಅವರು ಬಂಗಾಳದ ದೊಡ್ಡ ಶತ್ರು ಬಿಜೆಪಿಯನ್ನು ಆಹ್ವಾನಿಸುವ ತಪ್ಪನ್ನು ಮಾಡಬಾರದು. ಅವರು ತ್ರಿಪುರದ ಪರಿಸ್ಥಿತಿಯನ್ನು ಗಮನಿಸಿ ಏನು ಮಾಡಬೇಕೆಂದು ನಿರ್ಧರಿಸಬೇಕು” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬಂಗಾಳ: ಬಿಜೆಪಿಯ ರಥಯಾತ್ರೆಯಂದು, ಅದೇ ಜಿಲ್ಲೆಯಲ್ಲಿ ಬೈಕ್ ರ್‍ಯಾಲಿ ನಡೆಸಲಿರುವ ಟಿಎಂಸಿ
ಟಿಎಂಸಿಯ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಹಿರಿಯ ಕಾಂಗ್ರೆಸ್ ಮುಖಂಡ ಅಬ್ದುಲ್ ಮನ್ನನ್ ಅವರು ಬಂಗಾಳದಲ್ಲಿ ಬಿಜೆಪಿಯ ಬೆಳವಣಿಗೆಗೆ ಟಿಎಂಸಿಯೆ ಕಾರಣ ಎಂದು ದೂಷಿಸಿದ್ದಾರೆ.
“ಟಿಎಂಸಿಯೊಂದಿಗೆ ಹೊಂದಾಣಿಕೆ ಮಾಡಲು ನಮಗೆ ಆಸಕ್ತಿಯಿಲ್ಲ. ಕಳೆದ 10 ವರ್ಷಗಳಿಂದ ನಮ್ಮ ಶಾಸಕರನ್ನು ಬೇಟೆಯಾಡಿದ ಟಿಎಂಸಿ, ಈಗ ಮೈತ್ರಿ ಮಾಡಿಕೊಳ್ಳಲು ಯಾಕೆ ಆಸಕ್ತಿ ವಹಿಸುತ್ತಿದೆ? ಮಮತಾ ಬ್ಯಾನರ್ಜಿ ಅವರಿಂದಾಗಿಯೆ ಬಂಗಾಳದಲ್ಲಿ ಬಿಜೆಪಿ ಬಲವನ್ನು ಹೆಚ್ಚಿಸಿದೆ” ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಪಕ್ಷಾಂತರದ ‘ಮಹಿಮೆ’: ಬಂಗಾಳದ ಬಿಜೆಪಿ ಕಚೇರಿಗಳಲ್ಲಿ ಹೊಡೆದಾಟ, ಬೀದಿ ರಂಪಾಟ, ವಾಹನಗಳಿಗೆ ಬೆಂಕಿ!
ಸಿಪಿಐ (ಎಂ) ಹಿರಿಯ ನಾಯಕ ಸುಜನ್ ಚಕ್ರವರ್ತಿ ಮಾತನಾಡಿ, ಬಿಜೆಪಿ ಮತ್ತು ಟಿಎಂಸಿ ಎರಡೂ ಎಡ ಮತ್ತು ಕಾಂಗ್ರೆಸ್ ಅನ್ನು ರಾಜ್ಯದಲ್ಲಿ ನಗಣ್ಯ ರಾಜಕೀಯ ಶಕ್ತಿ ಎಂದು ಬ್ರಾಂಡ್ ಮಾಡಿ ಈ ಅದೇ ಪಕ್ಷಗಳ ಮತವನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಟಿಎಂಸಿ ಮತ್ತು ಬಿಜೆಪಿ ಎರಡೂ ಈಗ ಎಡಪಂಥೀಯರನ್ನು ಹೊಗಳುತ್ತಾ ನಮ್ಮ ಬೆಂಬಲವನ್ನು ಬಯಸುತ್ತಿವೆ ಎಂದು ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಎಡ ಮತ್ತು ಕಾಂಗ್ರೆಸ್ ಮೈತ್ರಿಯು ಟಿಎಂಸಿ ಮತ್ತು ಬಿಜೆಪಿ ಎರಡನ್ನೂ ಸೋಲಿಸುತ್ತದೆ ಎಂದು ಚಕ್ರವರ್ತಿ ಪ್ರತಿಪಾದಿಸಿದ್ದಾರೆ.
ಪಶ್ಚಿಮ ಬಂಗಾಳದ ಆಡಳಿತ ಪಕ್ಷವು ಬಿಜೆಪಿ ವಿರುದ್ಧ ಸ್ವತಃ ಹೋರಾಡಲು ಸಾಧ್ಯವಿಲ್ಲ ಎಂದು ಈ ಮನವಿಯು ಸಾಬೀತುಪಡಿಸುತ್ತದೆ ಎಂದು ಬಿಜೆಪಿ ಹೇಳಿದೆ. “ಇದು ಟಿಎಂಸಿಯ ಹತಾಶೆಯನ್ನು ಸಹ ಸಾಬೀತುಪಡಿಸುತ್ತದೆ, ಅವರು ನಮ್ಮ ವಿರುದ್ಧ ತಾವಾಗಿಯೇ ಹೋರಾಡಲು ಸಾಧ್ಯವಿಲ್ಲ, ಆದ್ದರಿಂದ ಅವರು ಇತರ ಪಕ್ಷಗಳ ಸಹಾಯವನ್ನು ಪಡೆಯುತ್ತಿದ್ದಾರೆ. ಟಿಎಂಸಿಗೆ ಬಿಜೆಪಿ ಮಾತ್ರ ಪರ್ಯಾಯವಾಗಿದೆ ಎಂದು ಇದು ಸಾಬೀತುಪಡಿಸುತ್ತದೆ” ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.
ಇದನ್ನೂ ಓದಿ: ಪ.ಬಂಗಾಳ ಚುನಾವಣೆ: ನಂದಿಗ್ರಾಮದಿಂದ ಸ್ಪರ್ಧಿಸುವುದಾಗಿ ಮಮತಾ ಬ್ಯಾನರ್ಜಿ ಘೋಷಣೆ


