ಮೀಸಲೇತರ ಕ್ಷೇತ್ರಗಳಲ್ಲಿ ಬಿಜೆಪಿ 95% ಕ್ಷೇತ್ರಗಳಲ್ಲಿ ಮೇಲ್ಜಾತಿಯವರಿಗೆ ಟಿಕೆಟ್. ಸಮತೋಲನ ಕಾಯ್ದುಕೊಂಡ ಮೈತ್ರಿ ಪಕ್ಷಗಳು. ಮಹಿಳೆಯರಿಗೆ 33% ಬಲುದೂರ.
ಈ ಲೋಕಸಭಾ ಚುನಾವಣೆಯಲ್ಲಿ ಯಾವ್ಯಾವ ಪಕ್ಷಗಳು ಯಾವ್ಯಾವ ಜಾತಿಗಳಿಗೆ ಟಿಕೆಟ್ ನೀಡಿವೆ ಎಂಬುದನ್ನು ಪರಿಶೀಲಿಸಿದರೆ ಆಶ್ಚರ್ಯ ಕಾದಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಎರಡು ಎಸ್.ಟಿ. ಮೀಸಲು ಮತ್ತು ಐದು ಎಸ್.ಸಿ. ಮೀಸಲು ಕ್ಷೇತ್ರಗಳಿದ್ದು, ಉಳಿದ 21 ಕ್ಷೇತ್ರಗಳ ಪೈಕಿ ಬಿಜೆಪಿ ಒಂದೇ ಒಂದು ಕ್ಷೇತ್ರದಲ್ಲಿ ಮಾತ್ರ ಓಬಿಸಿ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ಇನ್ನೊಂದು ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧಿಸಿಲ್ಲ. ಅದೇ ಸಂದರ್ಭದಲ್ಲಿ ಮೈತ್ರಿ ಪಕ್ಷಗಳ (ಕಾಂಗ್ರೆಸ್ ಮತ್ತು ಜೆಡಿಎಸ್) ಟಿಕೆಟ್ ನೀಡಿಕೆಯು ವೈವಿಧ್ಯಮಯವಾಗಿದೆ.
ಎಸ್.ಟಿ. ಎಂಬುದು ಪರಿಶಿಷ್ಟ ಪಂಗಡವಾಗಿದ್ದು, ಉಳಿದ ರಾಜ್ಯಗಳಲ್ಲಿ ಆದಿವಾಸಿ-ಗಿರಿಜನರು ಅದರ ಭಾಗವಾಗಿ ಒಂದಷ್ಟು ಪ್ರಾತಿನಿಧ್ಯ ಪಡೆದುಕೊಳ್ಳುತ್ತಾರೆ. ಆದರೆ, ಕರ್ನಾಟಕದಲ್ಲಿ ಹಿಂದೆ ರಾಜ್ಯದ ಕೆಲವು ಭಾಗಗಳನ್ನು ಆಳಿದ ಇತಿಹಾಸವಿರುವ (ಈಗಲೂ ಆ ಕುಟುಂಬಗಳ ಪ್ರತಿನಿಧಿಗಳು ವಿವಿಧ ರಾಜಕೀಯ ಪಕ್ಷಗಳಿಂದ ಟಿಕೆಟ್ ಪಡೆದುಕೊಳ್ಳುತ್ತಿದ್ದಾರೆ) ವಾಲ್ಮೀಕಿ/ನಾಯಕ ಸಮುದಾಯವು ಎಸ್.ಟಿ.ಯ ಭಾಗವಾಗಿದೆ. ಈ ಸಮುದಾಯದವರೇ ಬಳ್ಳಾರಿ ಮತ್ತು ರಾಯಚೂರು ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಮೈತ್ರಿ ಅಭ್ಯರ್ಥಿಗಳಾಗಿ (ಎರಡೂ ಕಾಂಗ್ರೆಸ್) ಕಣಕ್ಕಿಳಿದಿದ್ದಾರೆ.
ಇನ್ನು ಎಸ್.ಸಿ. ಮೀಸಲು ಕ್ಷೇತ್ರಗಳಿಗೆ ಬಂದರೆ, ಐದು ಕ್ಷೇತ್ರಗಳಲ್ಲಿ ಬಿಜೆಪಿಯು ಎರಡು ಎಡಗೈ ಸಮುದಾಯಕ್ಕೆ, ಎರಡು ಬಲಗೈ ಸಮುದಾಯಕ್ಕೆ ಟಿಕೆಟ್ ನೀಡಿದ್ದರೆ, ಕಾಂಗ್ರೆಸ್ ಸಹ ಎರಡು ಬಲಗೈ ಮತ್ತು ಎರಡು ಎಡಗೈ ಸಮುದಾಯಕ್ಕೆ ನೀಡಿದೆ.ಮತ್ತು ಮೈತ್ರಿಯಿಂದ ವಿಜಯಪುರದಲ್ಲಿ ಲಂಬಾಣಿ ಸಮುದಾಯದ ಸುನೀತಾ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿಯು ಒಬ್ಬ ಸ್ಪೃಶ್ಯ (ಲಂಬಾಣಿ) ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ.
ಉಳಿದ 21 ಕ್ಷೇತ್ರಗಳ ಪೈಕಿ ಬೆಂಗಳೂರು ಕೇಂದ್ರದಲ್ಲಿ ಓಬಿಸಿ ಸಮುದಾಯದ ಪಿ.ಸಿ.ಮೋಹನ್‍ರಿಗೆ ಬಿಜೆಪಿ ಟಿಕೆಟ್ ನೀಡಿರುವುದನ್ನು ಬಿಟ್ಟರೆ, ರಾಜ್ಯದ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಮೇಲ್ಜಾತಿಗಳಿಗೇ ಮಣೆ ಹಾಕಿದೆ. ಅದರಲ್ಲಿ 7 ಲಿಂಗಾಯಿತರಿಗೆ, 6 ಒಕ್ಕಲಿಗರಿಗೆ, ಮೂರು (ಶೇ.10ಕ್ಕಿಂತ ಹೆಚ್ಚು) ಬ್ರಾಹ್ಮಣರಿಗೆ ಮತ್ತು 1 ಬಂಟ ಸಮುದಾಯಕ್ಕೆ ನೀಡಿದೆ.
ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಿಂದ 5 ಒಕ್ಕಲಿಗರಿಗೆ, 5 ಲಿಂಗಾಯಿತರಿಗೆ, 1 ನಾಮಧಾರಿ ರೆಡ್ಡಿ, 1 ಬಂಟರಿಗೆ ನೀಡಿದ್ದರೆ, ಹಿಂದುಳಿದ ವರ್ಗಗಳಲ್ಲಿ 8 (3 ಕುರುಬರು, 2 ಈಡಿಗರು, 1 ಬಿಲ್ಲವ, 1 ಸವಿತಾ ಸಮಾಜ, 1 ದೇವಳಿ) ಸಮುದಾಯದವರಿಗೆ ಟಿಕೆಟ್ ನೀಡಿದೆ ಮತ್ತು ಒಬ್ಬರು ಮುಸ್ಲಿಮರಿಗೆ ಟಿಕೆಟ್ ನೀಡಿದೆ. ಬಿಜೆಪಿ ಒಬ್ಬರು ಮಹಿಳೆಗೆ ಟಿಕೆಟ್ ನೀಡಿದ್ದರೆ, ಮೈತ್ರಿ ಪಕ್ಷಗಳು ಇಬ್ಬರಿಗೆ ನೀಡಿವೆ. ಬಿಜೆಪಿ ಒಬ್ಬರೂ ಮುಸ್ಲಿಮರಿಗೆ (ಕರ್ನಾಟಕದ ಜನಸಂಖ್ಯೆಯ ಶೇ.13ರಷ್ಟಿರುವ ಸಮುದಾಯ) ಟಿಕೆಟ್ ನೀಡಿಲ್ಲ.
ಕರ್ನಾಟಕದ ಜನಸಂಖ್ಯೆಯಲ್ಲಿ ಶೇ.50ಕ್ಕಿಂತ ಹೆಚ್ಚಿರುವ ಜಾತಿ ಸಮುದಾಯಗಳಿಗೆ ಬಿಜೆಪಿ ಪಕ್ಷವು ಇಷ್ಟು ಕಡಿಮೆ ಸಂಖ್ಯೆಯಲ್ಲಿ ಪ್ರಾತಿನಿಧ್ಯ ಕೊಟ್ಟಿದೆ ಮತ್ತು ಈ ಕುರಿತು ಅವರಿಗೆ ಇದೊಂದು ಸಮಸ್ಯೆ ಎಂತಲೂ ಅನಿಸುತ್ತಿಲ್ಲ. ಚುನಾವಣಾ ರಾಜಕಾರಣದಲ್ಲಿ ಗೆಲುವು ಒಂದು ಮಾನದಂಡವಾದಾಗ ಪ್ರಾಬಲ್ಯ ಮತ್ತು ಜಾತಿ ಜನಗಳ ಸಂಖ್ಯೆಯೇ ಮುಖ್ಯವಾಗಿಬಿಡುತ್ತದೆ. ಹಾಗಾಗಿ ಸಂಖ್ಯೆಯಲ್ಲಿ ಸಣ್ಣದಾಗಿರುವ ಜಾತಿಗಳಂತೂ ಅನಾಥವಾಗಿಬಿಡುತ್ತವೆ. ಆದರೆ, ಸಂಖ್ಯೆಯಲ್ಲೂ ದೊಡ್ಡದಾಗಿರುವ ಹಿಂದುಳಿದ ಜಾತಿಗಳಿಗೆ ಬಿಜೆಪಿ ಪ್ರಾತಿನಿಧ್ಯ ಕಲ್ಪಿಸಿಲ್ಲ. ಕಾಂಗ್ರೆಸ್ ಈ ವಿಚಾರದಲ್ಲಿ ಗಣನೀಯವಾದ ಪ್ರಾತಿನಿಧ್ಯವನ್ನು ಕೊಟ್ಟಿದೆ. ಆದರೆ, ಬಹುತೇಕ ಕಾಂಗ್ರೆಸ್‍ಗೇ ಮತ ಹಾಕುವ ಮುಸ್ಲಿಮರಿಗೆ ಈ ರಾಜ್ಯದಲ್ಲಿ ಕನಿಷ್ಠ 3 ಪ್ರಾತಿನಿಧ್ಯವಾದರೂ ಇರಬೇಕಿತ್ತು. ಒಂದೇ ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟಿದೆ. ಮುಸ್ಲಿಮರು ನಿಂತರೆ ಗೆಲ್ಲುವುದಿಲ್ಲ ಎಂಬ ದುರಂತದ ಸ್ಥಿತಿ ಇರುವುದು ವಾಸ್ತವವಾದರೂ ಅದನ್ನು ಸರಿ ಮಾಡುವ ಬಗೆಯ ಕುರಿತು ಆ ಪಕ್ಷ ಯೋಚಿಸಿದಂತೆ ಕಾಣುವುದಿಲ್ಲ.
ಮಹಿಳೆಯರ ವಿಚಾರಕ್ಕೆ ಬರುವುದಾದರೆ, ಯಾವ ಪಕ್ಷಗಳೂ ಬೆನ್ನು ತಟ್ಟಿಕೊಳ್ಳುವ ಹಾಗಿಲ್ಲ. ಈ ಬಾರಿ ತೃಣಮೂಲ ಕಾಂಗ್ರೆಸ್ ಮತ್ತು ಒರಿಸ್ಸಾದ ಬಿಜೆಡಿ ಮಾತ್ರ ಧೈರ್ಯದ ನಿರ್ಧಾರಕ್ಕೆ ಮುಂದಾಗಿವೆ.
ಹಿಂದುಳಿದ ವರ್ಗಗಳ ಪ್ರಾತಿನಿಧ್ಯದ ವಿಚಾರದಲ್ಲಿ ಅಭಿಪ್ರಾಯಗಳಿಗಾಗಿ ವಿವಿಧ ಪಕ್ಷಗಳು ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಮಾತಾಡಿಸಿದೆವು.
ವಿ.ನಾಗರಾಜು, ದಸಂಸ (ಸಂಯೋಜಕ) ಮುಖಂಡರು
ಇದರಲ್ಲಿ ಸ್ಪಷ್ಟವಾಗುತ್ತದೆ ಇವರು ಎಷ್ಟು ಶೋಷಿತ ಸಮುದಾಯಗಳ ವಿರುದ್ಧವಿದ್ದಾರೆಂಬುದು. ಒಂದು ವೇಳೆ ಎಸ್‍ಸಿ ಮತ್ತು ಎಸ್‍ಟಿ ಮೀಸಲು ಇರದಿರುತ್ತಿದ್ದರೆ, ಅವರಿಗೂ ಟಿಕೆಟ್ ನೀಡುತ್ತಿರಲಿಲ್ಲ. ಮುಖ್ಯವಾಗಿ ಬಿಜೆಪಿಯು ಮನುವಾದಿ ಪಕ್ಷ. ಅವರ ಕಿಚನ್ ಒಳಗೆ ಯಾವ ಕಾರಣಕ್ಕೂ ಶೋಷಿತ ಸಮುದಾಯಗಳನ್ನು ಮತ್ತು ಮುಸ್ಲಿಮರನ್ನು ಬಿಟ್ಟುಕೊಳ್ಳುವುದಿಲ್ಲ. ಹಾಗಾಗಿಯೇ ಹಿಂದುಳಿದ ವರ್ಗದ ನಾಯಕರಿದ್ದರೂ ಅವರು ಮೇಲಕ್ಕೆ ಬಂದರೆ ತಮಗೆ ತೊಂದರೆ ಎಂದು ಭಾವಿಸುತ್ತಾರೆ.
ಬಿ.ಜೆ.ಪುಟ್ಟಸ್ವಾಮಿ, ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರು
ಪಾರ್ಲಿಮೆಂಟ್‍ನಲ್ಲಿ ಗೆಲ್ಲುವ ಅವಕಾಶ ಇರಬೇಕು. ನಮ್ಮಲ್ಲಿ ಹೆಚ್ಚು ಎಸ್ಟಾಬ್ಲಿಷ್ ಆಗಿರುವ ಬ್ಯಾಕ್‍ವರ್ಡ್ ಕ್ಲಾಸ್ ಲೀಡರ್ಸ್ ಇಲ್ಲ. ಬೇರೆ ಪಕ್ಷಗಳಲ್ಲಿ ಮೊದಲಿಂದಲೂ ಎಸ್ಟಾಬ್ಲಿಷ್ ಆಗಿದ್ದಾರೆ. ನಾಲ್ಕು ಕಡೆ ಟಿಕೆಟ್ ಕೊಡಬೇಕೆಂದು ಕೇಳಿದ್ದೆವು. ಆದರೆ, ನಮಗೆ ಸೀಟು ಕೊಡಿ ಎಂದು ಕೇಳಿದವರೇ ಇಬ್ಬರು. ಹಿಂದುಳಿದ ವರ್ಗಗಳಿಗೆ ಯಡಿಯೂರಪ್ಪನವರೇ ಆದ್ಯತೆ ಕೊಟ್ಟು ಮಠಮಾನ್ಯಗಳಿಗೆ ಹಣ ಕೊಟ್ಟರು.
ಭಗವಂತ ಖೂಬಾ ಅವರನ್ನು ಹಿಂದುಳಿದ ವರ್ಗವೆಂದ ಪುಟ್ಟಸ್ವಾಮಿ
ಪತ್ರಿಕೆಯ ವತಿಯಿಂದ ಪುಟ್ಟಸ್ವಾಮಿಯವರನ್ನು ಸಂಪರ್ಕಿಸಿದಾಗ ಭಗವಂತ ಖೂಬಾ ಅವರಿಗೂ ಕೊಟ್ಟಿದೆ, ಅವರು ಹಿಂದುಳಿದ ವರ್ಗ ಎಂದರು. ವಾಸ್ತವದಲ್ಲಿ ಭಗವಂತ ಖೂಬಾ ಅವರು ದೀಕ್ಷಾ ಲಿಂಗಾಯಿತರಾಗಿದ್ದಾರೆ. ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಯನ್ನು ಆಧಾರವಾಗಿಟ್ಟುಕೊಂಡರೆ ಕರ್ನಾಟಕದಲ್ಲಿ ಒಕ್ಕಲಿಗರು, ಲಿಂಗಾಯಿತರೂ ಒಬಿಸಿ ಅಡಿಯಲ್ಲಿ ಮೀಸಲಾತಿ ಪಡೆಯುತ್ತಾರೆ. ಹಾಗಾಗಿಯೇ ಮೋದಿಯವರ ಮೇಲ್ಜಾತಿಗೆ 10% ಮೀಸಲಾತಿಯು ನಿಜವಾದ ಅರ್ಥದಲ್ಲಿ ಲಭ್ಯವಾಗುವುದು ಬ್ರಾಹ್ಮಣರಿಗೆ. ಹೀಗಿದ್ದರೂ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರು ಎರಡು ಸೀಟು ಕೊಟ್ಟಿದ್ದೇವೆ ಎಂದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆಯ ಶಿವರಾಂ
ಬಿಜೆಪಿ ಪಕ್ಷವು ಸಮಾನತೆಯ ವಿರೋಧಿ, ಹಿಂದುಳಿದ ವರ್ಗಗಳ ವಿರೋಧಿಯಾಗಿದ್ದು, ಅವರು ಮನುಸಂಸ್ಕøತಿಯನ್ನು ಮರುಸ್ಥಾಪಿಸಲು ಯೋಚಿಸುವವರು. 3% ಇರುವ ಬ್ರಾಹ್ಮಣರಿಗೆ ಮೇಲ್ಜಾತಿಗಳ ಬಡವರಿಗೆ ಮೀಸಲಾತಿ ಕಲ್ಪಿಸುವ ಹೆಸರಿನಲ್ಲಿ ಶೇ.10ರಷ್ಟು ಮೀಸಲಾತಿ ಕಲ್ಪಿಸಿದವರು. ಹಾಗಾಗಿ ಅವರು ಈ ರೀತಿ ಮಾಡಿದ್ದಾರೆ.
ಕೆ.ಆರ್.ಗೋಪಾಲಕೃಷ್ಣ, ಸಾಮಾಜಿಕ ಕಾರ್ಯಕರ್ತರು, ಮೈಸೂರು
ಬಿಜೆಪಿಗೂ ಸಾಮಾಜಿಕ ನ್ಯಾಯಕ್ಕೂ ಸಂಬಂಧವಿಲ್ಲ. ಏಕಮುಖಿ ಸಂಸ್ಕೃತಿಯ ಪ್ರತಿಪಾದಕರಿಗೆ ಬಹುಮುಖಿ ಸಂಸ್ಕೃತಿಯ ವೈವಿಧ್ಯದ ಮಹತ್ವದ ಅರಿವು ಅರ್ಥವಾಗುವುದು ಹೇಗೆ? ಜಾತಿ ಆಧಾರದಲ್ಲಿ ಶೋಷಣೆ, ತಾರತಮ್ಯ, ಆಸ್ತಿಯ ಮೇಲಿನ ಅಧಿಕಾರ ಇರುವ ಈ ದೇಶದಲ್ಲಿ ರಾಜಕೀಯ ಪ್ರಾತಿನಿಧ್ಯವನ್ನಾದರೂ ಕಲ್ಪಿಸುವುದಕ್ಕೆ ಪಕ್ಷಗಳು ಯೋಚಿಸಬೇಕು. ಮೀಸಲಾತಿ ಇರದಿದ್ದರೆ ಒಬ್ಬ ದಲಿತರಿಗೂ ಅವರು ಟಿಕೆಟ್ ನೀಡುತ್ತಿರಲಿಲ್ಲ ಎಂಬ ಅನಿಸಿಕೆ ಮುಂದಿಟ್ಟರು.


