Homeಮುಖಪುಟಚಿಕ್ಕೋಡಿ: ಸೆಟಗೊಂಡಿವೆ ಬಿಜೆಪಿಯ “ಕತ್ತಿ’ಗಳು : ಮತ್ತೆ ಡಿಲ್ಲಿಗೆ ಹಾರಲಿದೆ ಕಾಂಗ್ರೆಸ್ ‘ಕುದುರೆ’...

ಚಿಕ್ಕೋಡಿ: ಸೆಟಗೊಂಡಿವೆ ಬಿಜೆಪಿಯ “ಕತ್ತಿ’ಗಳು : ಮತ್ತೆ ಡಿಲ್ಲಿಗೆ ಹಾರಲಿದೆ ಕಾಂಗ್ರೆಸ್ ‘ಕುದುರೆ’…

- Advertisement -
- Advertisement -

| ಮಹಾಲಿಂಗಪ್ಪ ಆಲಬಾಳ |
ಬೆಳಗಾವಿಯ ‘ಸಿಂಡಿಕೇಟ್’ ರಾಜಕಾರಣದ ಭಾಗವಾಗಿರುವ ಚಿಕ್ಕೋಡಿ ಈ ಸಲ ಮತ್ತೆ ಕಾಂಗ್ರೆಸ್ ಪಾಲಾಗುವ ಎಲ್ಲ ಲಕ್ಷಣಗಳು ಎದ್ದು ಹೊಡೆಯುತ್ತಿವೆ. ಏಕೆಂದರೆ ಇಲ್ಲಿ ಬಿಜೆಪಿ ಎತ್ತಿ ಹಿಡಿಯಬೇಕಿದ್ದ ಎರಡೂ ‘ಕತ್ತಿ’ಗಳು ಮಲಗಿದಂತೆ ನಾಟಕ ಆಡುತ್ತಿವೆ. ಹೋರಿಯಂತಿರುವ ಕಾಂಗ್ರೆಸ್‍ನ ‘ಕುದುರೆ’ಗೆ ಇದು ಅನಾಯಾಸವಾಗಿ ಇನ್ನೊಂದು ಗೆಲುವನ್ನು ತಂದು ಕೊಡಲಿದೆ. 2014ರಲ್ಲಿ ‘’ಕತ್ತಿ’ಗಳು ಆ್ಯಕ್ಟೀವ್ ಆಗಿದ್ದಾಗಲೇ ಈ ‘ಕುದುರೆ’ 3 ಸಾವಿರ ಲೀಡ್‍ನಲ್ಲಿ ಗೆದ್ದಿತ್ತು!

ಬೆಳಗಾವಿಯ ಎರಡೂ ಕ್ಷೇತ್ರಗಳಲ್ಲಿ ಮೂರು ‘ಸಿಂಡಿಕೇಟ್’ಗಳದ್ದೇ ಕಾರುಬಾರು. ಜಾರಕಿಹೊಳಿ, ಕತ್ತಿ, ಕೋರೆ ಕುಟುಂಬಗಳು ಇಲ್ಲಿಯ ರಾಜಕಾರಣವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಪ್ರಜಾಪ್ರಭುತ್ವವನ್ನೇ ಅಣಕ ಮಾಡಿ ದಶಕಗಳೇ ಸವೆದವು. ಇದರಡಿ, ಹುಕ್ಕೇರಿ ಕುಟುಂಬವೂ ಈಗ ತನ್ನದೊಂದು ‘ಸಾಮ್ರಾಜ್ಯ’ ವಿಸ್ತರಿಸುತ್ತಿದೆ!

ಪ್ರಕಾಶ್ ಹುಕ್ಕೇರಿ

ವರ್ತಮಾನದ ಚುನಾವಣಾ ರಾಜಕೀಯಕ್ಕೆ ಬರುವುದಾದರೆ, ಇಲ್ಲಿ ಕಾಂಗ್ರೆಸ್‍ನ ಹಾಲಿ ಸಂಸದ ಪ್ರಕಾಶ ಹುಕ್ಕೇರಿ ಮತ್ತೆ ತುರುಸಿನಲ್ಲಿ ಇದ್ದಾರೆ. ಕಳೆದ ಸಲ ಕೇವಲ 3 ಸಾವಿರ ಚಿಲ್ಲರೆ ಮತಗಳಿಂದ ಸೋತ ರಮೇಶ ಕತ್ತಿಗೆ ಬಿಜೆಪಿ ಟಿಕೆಟ್ ಕೊಡದೇ ಇರುವುದೇ ಕಾಂಗ್ರೆಸ್‍ಗೆ ಲಾಭವಾಗಲಿದೆಯೇನೋ? ಆಗಾಗ ‘ಪ್ರತ್ಯೇಕ ಉತ್ತರ ಕರ್ನಾಟಕ’ ಎಂದೆಲ್ಲ ಅಸಂಬದ್ಧವಾಗಿ ಮಾತಾಡುವ ಬಿಜೆಪಿ ಶಾಸಕ ಉಮೇಶ ಕತ್ತಿಯ ಸಹೋದರ ರಮೇಶ ಕತ್ತಿಗೆ ಟಿಕೆಟ್ ಕೊಡದೇ ಇರುವುದು ಲೋಕಲ್ ಬಿಜೆಪಿ ಪಾಳಯಕ್ಕೆ ತಲೆ ಕೆಡಿಸಿದೆ. ಇಲ್ಲಿವರೆಗೂ ಕತ್ತಿ ಸಹೋದರರು ಬಿಜೆಪಿ ಪ್ರಚಾರಕ್ಕೆ ಬರದೇ ಸೆಟಗೊಂಡಿದ್ದಾರೆ.

ಅಣ್ಣಾ ಸಾಹೇಬ್ ಜೊಲ್ಲೆ

ಇಲ್ಲೀಗ ಹಾಲಿ ಸಂಸದ ಪ್ರಕಾಶ ಹುಕ್ಕೇರಿ ಎಂಬ ‘ಮೀಸೆ ಮಾವ’ನ ಎದುರು ಬಿಜೆಪಿ ಅಣ್ಣಾಸಾಬ್ ಜೊಲ್ಲೆ ಎಂಬ ಉದ್ಯಮಿಯನ್ನು ಕಣಕ್ಕಿಳಿಸಿದೆ. ಈತ ನಿಪ್ಪಾಣಿಯ ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆಯ ಪತಿ. ಮೊದಲ ಸಲ ಶಾಸಕಿಯಾಗಿರುವ ಶಶಿಕಲಾ ‘ಕತ್ತಿ’ಗಳಿಗೇ ಇರಿಯುವಂತೆ ಗಂಡನಿಗೆ ಟಿಕೆಟ್ ತಂದಿದ್ದಾರೆ!

ಈಗ ಅಖಾಡಕ್ಕೆ ಬರೋಣ. ಬಿಜೆಪಿಯ ಅಪ್ಪಾಸಾಹೇಬ ಜೊಲ್ಲೆ ಉದ್ಯಮಿ. ಹಲವಾರು ಶೈಕ್ಷಣಿಕ ಸಂಸ್ಥೆ ನಡೆಸುತ್ತಾರೆ. ಹಲವು ಕೋ-ಆಪರೇಟಿವ್ ಸಂಸ್ಥೆಗಳೂ ಇವೆ. ಇದು ಅವರ ಮೊದಲ ರಾಜಕೀಯ ಫೈಟ್ ಆಗಿರುವುದರಿಂದ, ಅವರ ಪತ್ನಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮೇಲೆಯೇ ಎಲ್ಲ ಭಾರ ಬಿದ್ದಿದೆ ಎನ್ನುವುದಕ್ಕಿಂತ ಅವರು ತಾವಾಗೇ ಭಾರ ಹೊತ್ತುಕೊಂಡು ಗಂಡನಿಗೆ ಟಿಕೆಟ್ ತಂದಿದ್ದಾರೆ. ಈ ಕಾರಣಕ್ಕೇ ಕತ್ತಿ ಸಹೋದರರು ಮುನಿಸಿಕೊಂಡಿದ್ದರಿಂದ ಶಶಿಕಲಾ ಮತ್ತು ಬಿಜೆಪಿಯ ಡಬ್ಬದ ಮೇಲೆ ಲೋಡು ಬಿದ್ದಿದೆ. ಆ ಲೋಡನ್ನು ಹೊತ್ತುಕೊಂಡು ತೆವಳುತ್ತ ಪ್ರಚಾರ ಮಾಡುತ್ತಿದೆ ಬಿಜೆಪಿ.

ಉಮೇಶ್ ಕತ್ತಿ

ಕಾಂಗ್ರೆಸ್ ಮತ್ತು ಬಿಜೆಪಿಯ ಇಬ್ದರೂ ಕ್ಯಾಂಡಿಡೇಟ್‍ಗಳು ಪಂಚಮಸಾಲಿ ಲಿಂಗಾಯಿತರೇ ಆಗಿರುವುದರಿಂದ, ಇತರ ಸಮುದಾಯಗಳ ಮತಗಳು ಇಲ್ಲಿ ನಿರ್ಣಾಯಕ. ಇಲ್ಲಿರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ನಾಲ್ಕು ಸ್ಥಾನ ಹೊಂದಿವೆ. ಹುಕ್ಕೇರಿ ಕ್ಷೇತ್ರದ ಬಿಜೆಪಿ ಶಾಸಕ ಉಮೇಶ ಕತ್ತಿ ಸಹೋದರನಿಗೆ ಟಿಕೆಟ್ ಸಿಗಲಿಲ್ಲ ಎಂದು ಸೆಟಗೊಂಡಿದ್ದಾರೆ. ಇದೇ ಲೋಕಸಭೆ ವ್ಯಾಪ್ತಿಗೆ ಬರುವ ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಫುಲ್ ಇನ್‍ವಾಲ್ವ್ ಆಗಿದ್ದಾರೆ. ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರಗಳಲ್ಲಿ ಗೆಲುವು ತರುವ ಜವಾಬ್ದಾರಿಯನ್ನು ಅವರೀಗ ಹೊತ್ತುಕೊಂಡಿದ್ದಾರೆ.

ಸತೀಶ್ ಜಾರಕಿಹೊಳಿ

ಕೃಷ್ಣೆಯ ತಟದಲ್ಲಿ ಹುಲುಸಾಗಿ ಕಬ್ಬು ಬೆಳೆದೂ ನ್ಯಾಯಯುತ ಬೆಲೆಯಿಲ್ಲದೇ ಸಂಕಷ್ಟದಲ್ಲಿರುವ ರೈತರ ಕುರಿತಾಗಲಿ, ಕಬ್ಬಿನ ಗದ್ದೆ, ಸಕ್ಕರೆ ಕಾರ್ಖಾನೆಗಳಲ್ಲಿ ದುಡಿಯುವ ಶ್ರಮಿಕರ ಬಗ್ಗೆಯಾಗಲೀ ಇಲ್ಲಿ ಚರ್ಚೆಯೇ ಇಲ್ಲದಿರುವ ಅಸಹ್ಯ ‘ಡೆಮಾಕ್ರಸಿ’ಯನ್ನು ನಾವು ನೋಡಬೇಕಾಗಿದೆ.
ಈಗಿರುವ ಸಂಸದ ಪ್ರಕಾಶ ಹುಕ್ಕೇರಿ ತಮ್ಮ ಮಗ ಸದಲಗಾ ಶಾಸಕ ಗಣೇಶ ಹುಕ್ಕೇರಿಯ ಒಳಿತನ್ನಷ್ಟೇ ಬಯಸುವವರು. ಉಮೇಶ ಕತ್ತಿಗೆ ಸಹೋದರ ರಮೇಶನ ಬಗ್ಗೆ ಅಷ್ಟೇ ಕಾಳಜಿ. ನಿಪ್ಪಾಣಿ ಶಾಸಕಿ ಶಶಿಕಲಾ ಜೊಳ್ಳೆಗೆ ಗಂಡನ ಗೆಲುವಿನದ್ದೇ ಚಿಂತೆ!

ಇಂತಹ ವೈಯಕ್ತಿಕ ಹಿತಾಸಕ್ತಿಯ ರಾಜಕಾರಣದಲ್ಲಿ ಕಾಂಗ್ರೆಸ್ಸಿನ ಪ್ರಕಾಶ ಹುಕ್ಕೇರಿ ಎಂಬ ಸ್ವಾರ್ಥಿ ‘ಕುದುರೆ’ ಮತ್ತೆ ಡಿಲ್ಲಿಗೆ ಹಾರಲಿದೆ. ಬಿಜೆಪಿಯ ಜೋಡು ‘ಕತ್ತಿ’ಗಳಿಗೂ ಇದೇ ಬೇಕಾಗಿದೆಯೇನೋ? ಸದ್ಯಕ್ಕೆ ‘ಕುದುರೆ’ ಗೆಲ್ಲುವುದೇ ಇದ್ದುದರಲ್ಲಿ ಲೇಸು ಎಂಬ ಪರಿಸ್ಥಿತಿಯಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...