ತೃಣಮೂಲ ಕಾಂಗ್ರೆಸ್ ಪಕ್ಷದ ಚುನಾವಣಾ ಘೋಷಣೆಯಾದ “ಬಂಗಾಳವು ತನ್ನ ಮಗಳನ್ನು ಬಯಸಿದೆ” ಎಂಬುದನ್ನು ಕೀಳುಮಟ್ಟದಲ್ಲಿ ಗೇಲಿ ಮಾಡಿ ಟ್ವೀಟ್ (ಈಗ ಅಳಿಸಲಾಗಿದೆ) ಮಾಡಿದ್ದ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ತನ್ನನ್ನು ಟೀಕಿಸಿದವರ ವಿರುದ್ಧ ಇಂದು (ಭಾನುವಾರ) ವಾಗ್ದಾಳಿ ನಡೆಸಿದ್ದಾರೆ.
“ಬಂಗಾಳವು ತನ್ನ ಮಗಳನ್ನು ಬಯಸಿದೆ” ಘೋಷಣೆ ಗೇಲಿ ಮಾಡಿದ ಟ್ವೀಟ್‌ನಲ್ಲಿ ಮಮತಾ ಬ್ಯಾನರ್ಜಿ ಅವರ ಫೋಟೋ ಇದ್ದು, “ಮಗಳು ಬೇರೊಬ್ಬರ ಸ್ವತ್ತು, ಕಳುಹಿಸಿ ಕೊಡಲಾಗುವುದು” ಎಂದು ಹೇಳುವ ಗೃಹ ಸಚಿವ ಅಮಿತ್ ಶಾ ಅವರ ಚಿತ್ರವಿದೆ. ಬಬುಲ್ ಸುಪ್ರಿಯೋ ಅದನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡು, “ಹೌದು, ನಾವು ಅವರನ್ನು ಈ ಬಾರಿ ಕಳುಹಿಸಿ ಕೊಡುತ್ತೇವೆ’ ಎಂದು ಬರೆದಿದ್ದರು.
ಟಿಎಂಸಿ ಸೇರಿದಂತೆ ಹಲವು ಪಕ್ಷಗಳ ನಾಯಕರು, ಸಾಮಾಜಿಕ ಹೋರಾಟಗಾರರು, ಇದು ಪುರುಷತ್ವದ ಅಹಂಕಾರ, ಮಹಿಳೆಯರನ್ನು ಕೀಳಾಗಿ ನೋಡುವ ಮನುವಾದ ಎಂದೆಲ್ಲ ಟೀಕಿಸಿದ ನಂತರ ಸುಪ್ರಿಯೋ ಟ್ವೀಟ್ ಡಿಲೀಟ್ ಮಾಡಿದ್ದರು.
ಇದನ್ನೂ ಓದಿ: ಬಂಗಾಳ ಚುನಾವಣೆ :ಬಿಜೆಪಿ ಗೆದ್ದರೆ ಟ್ವಿಟರ್ ಬಿಡುತ್ತೇನೆ ಮಾತು ಮತ್ತೆ ನೆನಪಿಸಿದ ಪ್ರಶಾಂತ್ ಕಿಶೋರ್

ಈ ಟ್ವೀಟ್‌ಗೆ ’ಶೇಮ್’ ಎಂದು ಪ್ರತಿಕ್ರಿಯಿಸಿದ್ದ ಟಿಎಂಸಿ ಸಂಸದ ಡೆರೆಕ್ ಒಬ್ರಿಯೆನ್ ವಿರುದ್ಧ ಇಂದು(ಭಾನುವಾರ) ಸುಪ್ರಿಯೋ ಹರಿ ಹಾಯ್ದಿದ್ದಾರೆ.
ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿರುವ ಸುಪ್ರಿಯೋ, “ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಪೋಸ್ಟ್… ನಾನು ಇದನ್ನು ರಚಿಸಲಿಲ್ಲ ಅಥವಾ ಇದು ನನ್ನ ಹೇಳಿಕೆಯಲ್ಲ. ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಆದ್ದರಿಂದ ಪೂರ್ವಗ್ರಹದ ಕುರಿತು ನನಗೆ ಯಾವುದೇ ’ರಾಜಕೀಯ’ ಪಕ್ಷದ ಬೋಧನೆ ಅಗತ್ಯವಿಲ್ಲ ಎಂದಿದ್ದಾರೆ.
“ನಿಮ್ಮಲ್ಲಿ ಹೆಚ್ಚಿನವರು ನನ್ನ ರಾಜಕೀಯ ಜೀವನವನ್ನು ಬಲ್ಲಿರಿ ಮತ್ತು ನಾನು ಏನು ಹೇಳುತ್ತೇನೆ ಮತ್ತು ನನ್ನ ಮನಸ್ಥಿತಿ ಏನು ಎಂದು ನಿಮಗೆ ತಿಳಿದಿರಬೇಕು .. ನಾವೆಲ್ಲರೂ ನಮ್ಮ ಖಾತೆಗಳನ್ನು ನಿರ್ವಹಿಸುವ ಸಾಮಾಜಿಕ ಮಾಧ್ಯಮ ತಂಡಗಳನ್ನು ಹೊಂದಿದ್ದೇವೆ. ಹೌದು, ಕೆಲವು ಪೋಸ್ಟ್‌ಗಳು ಈ ರೀತಿಯ ವಿವಾದಗಳನ್ನು ಸೃಷ್ಟಿಸುತ್ತವೆ. ಇದನ್ನು ಒಪ್ಪಿದ್ದೇನೆ. ’ಸ್ಪಷ್ಟ ರಾಜಕೀಯ ಉದ್ದೇಶ’ಗಳೊಂದಿಗೆ ಸಂಪೂರ್ಣವಾಗಿ ಅದನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದಿದ್ದಾರೆ.
ಜೊತೆಗೆ, ’ಟ್ವೀಟ್ ವಿವಾದವನ್ನು ಸೃಷ್ಟಿಸಿದೆ ಎಂದು ನಾನು ಒಪ್ಪುತ್ತೇನೆ. ಈಗ ನನ್ನನ್ನು ನಾನು ಕೊಂದುಕೊಳ್ಳಬೇಕೆ..? ನನಗೆ ಕೆಲವು ಸಲಹೆಗಳನ್ನು ನೀಡಿ” ಎಂದು ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಕೇಳಿದ್ದಾರೆ.
ಮಾರ್ಚ್ 27ರಿಂದ ಪಶ್ಚಿಮ ಬಂಗಾಳದಲ್ಲಿ ಸುಧೀರ್ಘ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಆಡಳಿತರೂಢ ತೃಣಮೂಲ ಕಾಂಗ್ರೆಸ್ ಅನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಹಲವು ತಂತ್ರಗಳನ್ನು ಅನುಸರಿಸುತ್ತಿದೆ. ಬಂಗಾಳದಲ್ಲಿ ಅಧಿಕಾರದ ಗದ್ದುಗೆಯೇರಲು ಬಿಜೆಪಿಯ ಘಟಾನುಘಟಿ ನಾಯಕರು ಹಲವಾರು ರ್‍ಯಾಲಿಗಳನ್ನು ನಡೆಸಿದ್ದಾರೆ.
ಇದನ್ನೂ ಓದಿ: ಬಂಗಾಳದಲ್ಲಿ 8 ಹಂತದ ಚುನಾವಣೆ: ಮೋದಿ, ಶಾ ತಂತ್ರ ಎಂದು ಮಮತಾ ಬ್ಯಾನರ್ಜಿ ಆಕ್ರೋಶ


