ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಮೂರು ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ನೋಬೆಲ್ ಪ್ರಶಸ್ತಿ ವಿಜೇತೆ ಮತ್ತು ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯೂಸುಫ್ ಝೈ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ನೀತಿಗಳ ವಿರುದ್ಧ ದನಿ ಎತ್ತಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರು, ಕಾರ್ಯಕರ್ತರ ಬಂಧನ ಹಾಗೂ ಪ್ರತಿಭಟನಾ ಸ್ಥಳಗಳಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಿದ ಸರ್ಕಾರದ ನಿರ್ಧಾರವನ್ನು ಪಾಕಿಸ್ತಾನ ಮೂಲದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಪ್ರಶ್ನಿಸಿದ್ದಾರೆ.
ಜೈಪುರ್ ಸಾಹಿತ್ಯ ಸಮ್ಮೇಳನ (JLF)ದಲ್ಲಿ, ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ಪುಸ್ತಕ ’I Am Malala: The Story of the Girl Who Stood Up for Education and was Shot by the Taliban’ ಕುರಿತು ಮಲಾಲಾ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ರೈತ ಹೋರಾಟಕ್ಕೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಿಸಿಲಿಗೂ ಬಗ್ಗುವುದಿಲ್ಲ: ಹೋರಾಟನಿರತ ರೈತರ ಟ್ಯ್ರಾಲಿ, ಟೆಂಟ್‌ಗಳಿಗೆ ಬಂದ ಎಸಿ, ಕೂಲರ್‌ಗಳು!
ಪಾಕಿಸ್ತಾನದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯೂಸುಫ್ ಝೈ, 2012 ರ ಅಕ್ಟೋಬರ್‌ನಲ್ಲಿ ತಾಲಿಬಾನ್‌ನಿಂದ ಗುಂಡೇಟಿಗೆ ಒಳಗಾಗಿಯೂ ಬದುಕುಳಿದಿದ್ದರು.
ಭಾರತದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರು ಮತ್ತು ಕಾರ್ಯಕರ್ತರ ಬಂಧನದ ಸುದ್ದಿ ಚಿಂತಾಜನಕವಾಗಿದೆ. ಪ್ರತಿಭಟನಾ ಸ್ಥಳಗಳಲ್ಲಿ ಅಂತರ್ಜಾಲ ಸ್ಥಗಿತ ಕಳವಳಕಾರಿಯಾಗಿದೆ ಎಂದು ಹೇಳಿದ್ದಾರೆ.
ಚರ್ಚೆಯ ಸಮಯದಲ್ಲಿ, ಅವರು ಮಾನವ ಹಕ್ಕುಗಳಿಗಾಗಿ ಹೋರಾಡುವ ಭಾರತೀಯ ಬಾಲಕಿಯರು ಮತ್ತು ಯುವತಿಯರನ್ನು ಶ್ಲಾಘಿಸಿದರು. “ಭಾರತದ ರೈತರಿಗಾಗಿ ಧ್ವನಿ ಎತ್ತುತ್ತಾರೆ. ಹವಾಮಾನ ಬದಲಾವಣೆ ಮತ್ತು ಅಲ್ಪಸಂಖ್ಯಾತ ಹಕ್ಕುಗಳ ರಕ್ಷಣೆ ಬಗ್ಗೆ ಮಾತನಾಡುತ್ತಾರೆ. ಈ ಯುವತಿಯರ ಕೆಲಸ ಸ್ಪೂರ್ತಿದಾಯಕ” ಎಂದು ಬೆಂಗಳೂರಿನ ದಿಶಾ ರವಿ ಅವರನ್ನು ಬೆಂಬಲಿಸಿದ್ದಾರೆ.
“ನೀವು ಅವರ ರಾಜಕೀಯ ಅಭಿಪ್ರಾಯವನ್ನು ಒಪ್ಪದೇ ಇರಬಹುದು. ಹಾಗೆಂದು ನೀವು ಅವರನ್ನು ಜೈಲಿನಲ್ಲಿ ಇರಿಸುವುದು ಅಥವಾ ಬಂಧಿಸುವುದು ಸರಿಯಲ್ಲ. ಮಹಿಳೆಯರು ಮತ್ತು ಯುವತಿಯರು ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಯೂ ಅವರ ರಾಜಕೀಯ ಅಭಿಪ್ರಾಯಗಳನ್ನು ಎತ್ತಿ ತೋರಿಸುವುದು ಪ್ರಜಾಪ್ರಭುತ್ವದ ಹಕ್ಕಾಗಿದೆ. ಆದ್ದರಿಂದ ಜನರು ಶಾಂತಿಯುತವಾಗಿ ಪ್ರತಿಭಟಿಸಬಹುದು ಮತ್ತು ಅವರ ಹಕ್ಕುಗಳನ್ನು ಕೇಳಬಹುದು ಮತ್ತು ಅವರ ದನಿಯನ್ನು ಸರ್ಕಾರ ಕೇಳುತ್ತದೆ ಎಂದು ನಾನು ಭಾವಿಸುತ್ತೇನೆ “ಎಂದು ಮಲಾಲಾ ಹೇಳಿದರು.
ಇದರ ಜೊತೆಗೆ, “ಭಾರತ ಮತ್ತು ಪಾಕಿಸ್ತಾನಗಳು ನಿಜವಾದ ಉತ್ತಮ ಸ್ನೇಹಿತರಾಗುವುದು ಮತ್ತು ನಾವು ಪರಸ್ಪರರ ದೇಶಗಳಿಗೆ ಭೇಟಿ ನೀಡುವುದನ್ನು ನೋಡುವುದು ನನ್ನ ಕನಸು. ನೀವು ಪಾಕಿಸ್ತಾನಿ ನಾಟಕಗಳನ್ನು ನೋಡುವುದನ್ನು ಮುಂದುವರಿಸಬಹುದು, ನಾವು ಬಾಲಿವುಡ್ ಚಲನಚಿತ್ರಗಳನ್ನು ನೋಡುವುದನ್ನು ಮುಂದುವರಿಸಬಹುದು ಮತ್ತು ಕ್ರಿಕೆಟ್ ಪಂದ್ಯಗಳನ್ನು ಆನಂದಿಸಬಹುದು” ಎಂದು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಹೇಳಿದ್ದಾರೆ.
ಇದನ್ನೂ ಓದಿ: ಮಾರ್ಚ್ 20 ರಂದು ಶಿವಮೊಗ್ಗದಲ್ಲಿ ರೈತ ಮಹಾಪಂಚಾಯತ್: ದರ್ಶನ್ ಪಾಲ್, ಯೋಗೇಂದ್ರ ಯಾದವ್, ರಾಕೇಶ್…



??