ಮೊದಲ ಹಂತ: ಕಡೆಯ ದಿನದ ಬೆಳವಣಿಗೆಗಳು
ನಾಮಪತ್ರ ಸಲ್ಲಿಕೆಯಾದ ಸಂದರ್ಭದಲ್ಲೇ ಐದು ಕ್ಷೇತ್ರಗಳಲ್ಲಿ ಫಲಿತಾಂಶದ ದಿಕ್ಕು ಸ್ಪಷ್ಟವಾಗಿದ್ದರೆ, ಕಡೆಯ ದಿನಗಳಲ್ಲಿ ನಡೆದ ಕೆಲವು ಮಹತ್ವದ ಬೆಳವಣಿಗೆಗಳ ಕಾರಣದಿಂದ ಐದು ಕ್ಷೇತ್ರಗಳಲ್ಲಿ ಫಲಿತಾಂಶ ದಿಕ್ಕು ಪಡೆದುಕೊಂಡುಬಿಟ್ಟಿದೆ. ಉಳಿದಂತೆ, 4 ಕ್ಷೇತ್ರಗಳಲ್ಲಿ ಈಗಲೂ ಫೈಟ್ ಇದ್ದು ಇಂದಿನ ಬೆಳವಣಿಗೆಗಳು ಏನಾಗುತ್ತದೆಂಬುದರ ಜೊತೆಗೆ ಹೊರಗೆ ವ್ಯಕ್ತವಾಗದ ಮತದಾರರ ಭಾವನೆಗಳು ಮತಗಟ್ಟೆಯಲ್ಲಿ ಯಾರನ್ನು ಗೆಲ್ಲಿಸುತ್ತದೋ ನೋಡಬೇಕು.
ಮೊದಲಿಗೆ ಕಾಂಗ್ರೆಸ್ಸಿನದ್ದು ನೋಡೋಣ. ಕಾಂಗ್ರೆಸ್ಸಿನಲ್ಲಿ ಚುನಾವಣೆಗೆ ಮುಂಚೆಯೇ ಭಾರೀ ವಿರೋಧ ಎದುರಿಸಿದ್ದು ಕೆ.ಎಚ್.ಮುನಿಯಪ್ಪ. 30 ವರ್ಷಗಳಿಂದ ಎಂಪಿಯಾಗಿರುವ ಕೆ.ಎಚ್.ಗೆ ಸಹಜ ವಿರೋಧದ ಅಲೆಯ ಜೊತೆಗೆ ಅವರ ವ್ಯಕ್ತಿತ್ವದ ಸಮಸ್ಯೆಯ ಕಾರಣಕ್ಕೆ ಇನ್ನಷ್ಟು ಎಡವಟ್ಟು ಮಾಡಿಕೊಂಡರು. ಅವರ ಮಗಳೂ ಸೇರಿದಂತೆ ಇಬ್ಬರು ಎಂಎಲ್‌ಎಗಳು ಬಿಟ್ಟರೆ, ಮಿಕ್ಕೆಲ್ಲರೂ ಈ ಸಾರಿ ಮುನಿಯಪ್ಪಗೆ ಟಿಕೆಟ್ ಕೊಡಬಾರದು ಎಂದು ಪಟ್ಟು ಹಿಡಿಯಲು ದೆಹಲಿಯವರೆಗೆ ಹೋಗಿ ಬಂದರು. ಅವರಲ್ಲಿ ಬಂಗಾರಪೇಟೆಯ ಎಸ್.ಎನ್.ನಾರಾಯಣಸ್ವಾಮಿ ಮತ್ತು ಸೋಮವಾರ ಶಿಡ್ಲಘಟ್ಟದ ಮುನಿಯಪ್ಪ ಜೊತೆ ರಾಜಿ ಮಾಡಿಕೊಂಡರೂ, ಮುನಿಯಪ್ಪ ಮನಸ್ಸಿಟ್ಟು ಕೆಲಸ ಮಾಡುತ್ತಿಲ್ಲ.
ಕೋಲಾರಕ್ಕೆ ಬಂದಿದ್ದ ರಾಹುಲ್‌ಗಾಂಧಿ ಸ್ಪೀಕರ್ ರಮೇಶ್‌ಕುಮಾರ್‌ರಿಗೆ ಫೋನ್ ಮಾಡಿ ಕೋಪ ತಣಿಸುತ್ತಾರೆಂದು ಎಲ್ಲರೂ ಭಾವಿಸಿದ್ದರು. ಅದೂ ಆಗಲಿಲ್ಲ. ಈಗ ರಮೇಶ್‌ಕುಮಾರ್ ಕೆ.ಎಚ್.ಸೋಲಿಸಲು ತಮ್ಮ ಬೆಂಬಲಿಗರಿಗೆ ಸೂಚನೆ ಕೊಟ್ಟರೆ, ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಏ.16ರಂದು ಬಹಿರಂಗ ಕರೆಯನ್ನೇ ಕೊಟ್ಟಿದ್ದಾರೆ. ಮಾಜಿ ಶಾಸಕ ಕೊತ್ತೂರು ಮಂಜು ಬಿಜೆಪಿಯ ವೇದಿಕೆಯನ್ನೇ ಹತ್ತಿದ್ದಾರೆ. ಇವೆಲ್ಲದರ ಪರಿಣಾಮವಾಗಿ ಇಲ್ಲಿ ಕಾಂಗ್ರೆಸ್ ಔಟ್ ಆಗಿಬಿಟ್ಟಿದೆ.
ಎರಡನೇ ಕ್ಷೇತ್ರ ಚಿಕ್ಕಬಳ್ಳಾಪುರ. ವಾಸ್ತವದಲ್ಲಿ ಸುಲಭದಲ್ಲಿ ಗೆಲ್ಲಬಹುದಾಗಿದ್ದ ಚಿಕ್ಕಬಳ್ಳಾಪುರದಲ್ಲಿ ಎಡವಟ್ಟು ಮಾಡಿಕೊಂಡಿದ್ದು ಮೊಯ್ಲಿ. ಕಳೆದ ಸಾರಿ ಒಕ್ಕಲಿಗರ ಓಟು ಒಡೆಯಲು ಕುಮಾರಸ್ವಾಮಿಯವರನ್ನು ಸ್ಪರ್ಧೆ ಮಾಡಲು ಒಪ್ಪಿಸಿ ಅವರಿಗೆ ಹಣ ನೀಡಿದ್ದಲ್ಲದೇ, ತನ್ನ ಗೆಲುವಿಗೂ ಮೊಯ್ಲಿ ಸಾಕಷ್ಟು ಹಣ ಚೆಲ್ಲಿದ್ದರು. ಆದರೆ, ಈ ಸಾರಿ ಬೂತ್ ಖರ್ಚಿಗೂ ಹಣ ಕೊಟ್ಟಿಲ್ಲ. ನಿನ್ನೆ ರಾತ್ರಿಯವರೆಗೂ ಕಾದ ಶಾಸಕರುಗಳಿಗೆ ಮೊಯ್ಲಿ ಕಡೆಯ ಕ್ಷಣದಲ್ಲಿ ಕೈ ಎತ್ತಿದ್ದಾರೆ. ಇದು ಕೇವಲ ಹಣದ ಪ್ರಶ್ನೆ ಅಲ್ಲ. ಅಭ್ಯರ್ಥಿಗೇ ತಾನು ಗೆಲ್ಲುವ ಭರವಸೆ ಇಲ್ಲ ಎಂಬ ಸಂದೇಶವನ್ನು ಅದು ರವಾನಿಸುತ್ತದೆ. ಈಗ ಈ ಕ್ಷೇತ್ರದ ಶಾಸಕರು ಮತ್ತು ಕಾಂಗ್ರೆಸ್ ನಾಯಕರು ಯಾವ ರೀತಿ ಖರ್ಚು ಮಾಡುತ್ತಾರೆ ಎಂದು ನೋಡಬೇಕು.
ದುಡ್ಡು ಖರ್ಚು ಮಾಡಿಯೇ ಗೆಲ್ಲಬೇಕು ಎಂಬುದು ಚುನಾವಣೆಯ ನೀತಿಯಾಗಬೇಕಿಲ್ಲ. ಆದರೆ, ತನ್ನ ಸ್ಪರ್ಧೆಯ ಸೀರಿಯಸ್‌ನೆಸ್ ಬಗ್ಗೆ ಮೊಯ್ಲಿ ಯಾವ ರೀತಿ ಪಕ್ಷದ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಬೇಕಿತ್ತೋ ಅದಾಗಲಿಲ್ಲ. ಹೀಗಾಗಿ ಕೈಯ್ಯಲ್ಲಿದ್ದ ಕ್ಷೇತ್ರವನ್ನು ಕೈ ಚೆಲ್ಲಿದಂತಾಗಿದೆ.
ಅದೇ ರೀತಿ ಗೆಲ್ಲುವ ಸಾಧ್ಯತೆಯಿದ್ದ, ಆದರೆ ಬಿಜೆಪಿ ಕಳೆದುಕೊಳ್ಳುತ್ತಿರುವ ಮೂರು ಕ್ಷೇತ್ರಗಳಿವೆ. ಒಂದು, ಮೈಸೂರು. ಸಿದ್ದರಾಮಯ್ಯನವರು ಮತ್ತು ಜಿ.ಟಿ.ದೇವೇಗೌಡರು ಎಷ್ಟೇ ಅಪ್ಪಿಕೊಂಡರು ಮೈಸೂರಿನ ಒಕ್ಕಲಿಗರಿಗೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಮನಸ್ಸಿರಲಿಲ್ಲ. ಮೇಲಾಗಿ ಕೊಡಗು ಸಂಪೂರ್ಣ ಪ್ರತಾಪಸಿಂಹರ ಪರ ನಿಲ್ಲುವ ಸಾಧ್ಯತೆಯಿತ್ತು. ಆದರೆ, ಪ್ರತಾಪ ಸಿಂಹನ ಪ್ರತಾಪದ ಆಡಿಯೋ, ಸೆಕ್ಸ್ ಚಾಟ್‌ನ ವಾಟ್ಸಾಪ್ ಸ್ಕ್ರೀನ್‌ಶಾಟ್‌ಗಳು ಇಡೀ ಕ್ಷೇತ್ರದ ಪ್ರತೀ ಮೊಬೈಲಿಗೂ ಹೋದ ನಂತರ ಜನರು ಬೆಚ್ಚಿ ಬಿದ್ದಿದ್ದಾರೆ. ಸಾರ್ವಜನಿಕರಿರಲಿ, ಬಿಜೆಪಿ ಮತದಾರರೇ ಅಸಹ್ಯ ಪಟ್ಟುಕೊಳ್ಳುವ ರೇಂಜಿಗೆ ಆತನ ಕಾಮಪುರಾಣವಿದೆ. ಒಂದೋ ಸಜ್ಜನ ವಿಜಯಶಂಕರರಿಗೆ
ಮತ ಹಾಕಿ ಪ್ರತಾಪಸಿಂಹ ಸೋಲುವಂತೆ ಮಾಡಬೇಕು, ಇಲ್ಲವೇ ಮನೆಯಲ್ಲೇ ಇರಬೇಕು ಅಷ್ಟೇ ಆಯ್ಕೆ ಎಂಬಂತಾಗಿದೆ. ಪ್ರತಾಪ ಸಿಂಹ ಜೊತೆ ಓಡಾಡಲು ಬಿಜೆಪಿ ನಾಯಕರು/ಕಾರ್ಯಕರ್ತರು ಮುಜುಗರ ಪಟ್ಟುಕೊಳ್ಳುವಂತಾಗಿರುವುದು ಕಡೆಯ ಎರಡು ದಿನಗಳ ಬೆಳವಣಿಗೆ.
ನಾಮಪತ್ರ ಸಲ್ಲಿಕೆಯಾದ ದಿನದಿಂದಲೇ ಮೀಟೂ ಆರೋಪಗಳು ಬೆಳಕಿಗೆ ಬಂದದ್ದು ತೇಜಸ್ವಿಯದ್ದು. ಬೆಂಗಳೂರಿನಲ್ಲಿ ತೇಜಸ್ವಿ ಜೊತೆಗೆ ಕಾರ್ಯಕರ್ತರು ಓಡಾಡುತ್ತಿದ್ದರೂ, ಸಜ್ಜನರು ಗೊಂದಲಕ್ಕೆ ಬಿದ್ದು ಬಹಳ ದಿನಗಳಾದುವು. ಏನೇ ಇರಲಿ, ಪಕ್ಷಕ್ಕೆ ಮತ ಹಾಕಬೇಕು ಎಂದು ತೇಜಸ್ವಿನಿ ಅನಂತಕುಮಾರ್ ಹೇಳಿದರೂ, ನಿನ್ನೆಯ ಅವರ ಹೇಳಿಕೆ ಬೇರೆ ಸಂದೇಶವನ್ನೇ ರವಾನೆ ಮಾಡಿದೆ. ಬಿಜೆಪಿ ಪರ ಪ್ರಚಾರದಲ್ಲೂ ಭಾಗಿಯಾಗಿರುವ ಅವರು, ‘ತನಗಿನ್ನೂ ಬಿಜೆಪಿ ನಾಯಕರು ಟಿಕೆಟ್ ತಪ್ಪಿದ್ದೇಕೆಂದು ಹೇಳಿಲ್ಲ’, ತೇಜಸ್ವಿ ಸೂರ್ಯನ ಮೇಲಿನ ಲೈಂಗಿಕ ಹಗರಣಗಳ ಆರೋಪದ ಕುರಿತು ‘ಚುನಾವಣೆ ಸಮಯದಲ್ಲಿ ಇಂತಹ ಆರೋಪಗಳು ಸಹಜ. ಇವುಗಳ ಬಗ್ಗೆ ತನಿಖೆ ನಡೆದರೆ ಸತ್ಯ ಗೊತ್ತಾಗುತ್ತದೆ’ ಎಂದಿದ್ದಾರೆ. ಈ ಹೇಳಿಕೆ ಬಂದ ದಿನವೇ ಬ್ರಾಹ್ಮಣರ ಸಭೆಯಲ್ಲಿ ಗಲಾಟೆಯಾಗಿ ತೇಜಸ್ವಿಯ ವಿರುದ್ಧ ಮತ ಚಲಾಯಿಸಬೇಕು ಎಂದು ಒಂದು ಬಣ ಹೇಳಿಕೆ ನೀಡಿದೆ.
ಇಂತಹ ಗೊಂದಲಗಳು ಆರ್.ಅಶೋಕ್ ಮತ್ತು ಸೋಮಣ್ಣರಿಗೆ ಅನುಕೂಲ ಮಾಡಿದೆ. ತಮ್ಮ ವ್ಯಾಪ್ತಿಯಲ್ಲಿ ತೇಜಸ್ವಿಗೆ ಕಡಿಮೆ ಮತಗಳು ಬಂದರೆ ದೂರಬೇಕಾದ್ದು ಅಭ್ಯರ್ಥಿಯ ಚಾರಿತ್ರ್ಯಯವನ್ನೇ ಹೊರತು ತಮ್ಮನ್ನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದರಲ್ಲೂ ಸೋಮ್‌ದತ್ತಾ ಅವರ ದೀರ್ಘ ಸಂಭಾಷಣೆಯ ಆಡಿಯೋ ವಿಡಿಯೋ ರೂಪದಲ್ಲಿ ಎಲ್ಲೆಡೆ ಹರಡಿದ ನಂತರವಂತೂ ಬಿಜೆಪಿ ಕಾರ್ಯಕರ್ತರ ಹುಮ್ಮಸ್ಸು ಕಡಿಮೆಯಾಗುತ್ತಾ ಬಂದಿತು. ಹೊಸ ಮತದಾರರನ್ನು
ಮಾತನಾಡಿಸಿದ ದಿ ಕ್ವಿಂಟ್‌ನ ವರದಿಯಲ್ಲಿ ಇದರ ಅಭಿವ್ಯಕ್ತಿ ಇತ್ತು. ನಾವು ಬಿಜೆಪಿಗೆ ಮತ ಹಾಕಬೇಕೆಂದಿದ್ದೆವು, ಈಗ ಅಭ್ಯರ್ಥಿಯ ಚಾರಿತ್ರ್ಯಯದ ಬಗ್ಗೆ ಗೊತ್ತಾದ ನಂತರ ಗೊಂದಲವಾಗಿದೆ. ನಮ್ಮ ಅಭ್ಯರ್ಥಿಯಾದವರು ಅರ್ಹರಾಗಿರಬೇಕೆಂದು ಬಯಸುತ್ತೇವೆ ಎಂದು ಹಲವು ಕಾಲೇಜು ಹುಡುಗಿಯರು ಹೇಳಿದರು.
ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್ ಪರವಾಗಿ ರಾಮಲಿಂಗಾರೆಡ್ಡಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆಗಳು ಹವಾ ಬದಲಾವಣೆಗೆ ಕಾರಣವಾಗಿವೆ.
ಇನ್ನು ಮೂರನೆಯದ್ದು, ಬೆಂಗಳೂರು ಉತ್ತರ. ಸದಾನಂದ ಗೌಡ ವರ್ಸಸ್ ಕೃಷ್ಣ ಭೈರೇಗೌಡ ಆದ ಹೊತ್ತಿನಲ್ಲೇ ಫೈಟ್ ಜೋರಾಗುವುದು ಖಾತ್ರಿಯಿತ್ತು. ಆದರೆ, ಕಡೆಯ ಎರಡು ದಿನಗಳಲ್ಲಿ ಸದಾನಂದಗೌಡರು ಕೈ ಚೆಲ್ಲಿ ಕೂತಿದ್ದರೆ,
ಕಾಂಗ್ರೆಸ್ ಮತ್ತು ಜೆಡಿಎಸ್‌ನ ಎಲ್ಲಾ ಶಾಸಕರು ಕೃಷ್ಣ ಭೈರೇಗೌಡರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಸದಾನಂದಗೌಡ ಔಟ್ ಎಂಬ ಸಂದೇಶವನ್ನು ಕ್ಷೇತ್ರದೆಲ್ಲೆಡೆ ಕೊಟ್ಟು, ತಳಮಟ್ಟದಲ್ಲಿ ಬೇಲಿ ಮೇಲೆ ಕೂತಿರುವವರು ಹಾರಲು ಕಾರಣವಾಗಿದೆ.
ಇನ್ನು ಫೈಟ್ ಇರುವ ನಾಲ್ಕು ಕ್ಷೇತ್ರಗಳೆಂದರೆ, ಮಂಡ್ಯ, ಮಂಗಳೂರು, ಉಡುಪಿ-ಚಿಕ್ಕಮಗಳೂರು ಮತ್ತು ಬೆಂಗಳೂರು ಸೆಂಟ್ರಲ್. ಇವುಗಳಲ್ಲಿ ಮಂಡ್ಯದಲ್ಲಿ ಅಲೆ ಸುಮಲತಾ ಪರವಾಗಿಯೇ ಇದ್ದರೂ, ಜೆಡಿಎಸ್‌ನ ಕಡೆಯ ದಿನದ ಕಾರ್ಯತಂತ್ರದ ಬಗ್ಗೆ ಎಲ್ಲರಿಗೂ ಕುತೂಹಲವಿದೆ.
ಇನ್ನು ಮೈತ್ರಿ ಅಭ್ಯರ್ಥಿಗಳು ಸೇಫಾಗಿ ಗೆಲ್ಲಲಿದ್ದಾರೆ ಎಂದು ಭಾವಿಸಲಾಗುವ ಕ್ಷೇತ್ರಗಳೆಂದರೆ, ಬೆಂ.ಗ್ರಾಮಾಂತರ, ತುಮಕೂರು, ಹಾಸನ, ಚಿತ್ರದುರ್ಗ, ಚಾಮರಾಜನಗರ.
ಉಳಿದ ಚರ್ಚೆ ಏನಿದ್ದರೂ, ಕಡೆಯ ಸುತ್ತಿನ ಚುನಾವಣೆ ಮುಗಿದ ನಂತರವೇ.


