ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಆಡಳಿತ ಮಂಡಳಿಯ ವಿರುದ್ದ ಅಲ್ಲಿನ ಕಾರ್ಮಿಕರು ಕಳೆದ ನಾಲ್ಕು ತಿಂಗಳಿನಿಂದ ಹೋರಾಟ ನಡೆಸುತ್ತಿದ್ದಾರೆ. ಅನಿಯಂತ್ರಿತ ಮತ್ತು ಏಕಪಕ್ಷೀಯವಾಗಿ ಕೆಲಸದ ಹೊರೆಯನ್ನು ಹೆಚ್ಚಿಸಿರುವುದನ್ನು ವಿರೋಧಿಸಿ ಕಾರ್ಮಿಕರು ಪ್ರತಿಭಟಿದ್ದನ್ನೇ ನೆಪವಾಗಿಸಿ ಟೊಯೊಟಾ ಆಡಳಿತವು ಕಂಪೆನಿಯನ್ನು ಲಾಕೌಟ್ ಮಾಡಿತ್ತು. ಇದನ್ನು ವಿರೋಧಿಸಿ ಕಾರ್ಮಿರು ನಿರಂತರ ಹೋರಾಟ ನಡೆಸುತ್ತಲೆ ಬಂದಿದ್ದಾರೆ.
ಹೋರಾಟವನ್ನು ಹತ್ತಿಕ್ಕಲು ತುಂಬಾ ಪ್ರಯತ್ನಪಟ್ಟ ಆಡಳಿತ ಮಂಡಳಿಯು ಮುಚ್ಚಳಿಕೆ ಬರೆದು ಕರ್ತವ್ಯಕ್ಕೆ ಹಾಜರಾಗುವಂತೆ ಹೇಳಿತ್ತು. ಆದರೆ ಕಾರ್ಮಿಕರು ಇದಕ್ಕೆ ಜಗ್ಗದೆ ಇದ್ದಾಗ ಇದೀಗ ಮತ್ತೆ ಮುಚ್ಚಳಿಕೆ ಇಲ್ಲದೆ ಕರ್ತವ್ಯಕ್ಕೆ ಬರುವಂತೆ ನೋಟಿಸ್ ನೀಡಿದೆ. ಇದು ತಮ್ಮ ಹೋರಾಟಕ್ಕೆ ಸಿಕ್ಕ ನೈತಿಕ ವಿಜಯ ಎಂದು ಕಾರ್ಮಿಕ ಸಂಘವು ಹೇಳಿದೆ. ಆದರೆ ತನ್ನ ಇದನ್ನು ಒಪ್ಪಿಕೊಳ್ಳದೆ ಆಡಳಿತ ಮಂಡಳಿಯು ಸಂಘದ ವಿರುದ್ದ ಅಪಪ್ರಚಾರ ಮಾಡುತ್ತಿದೆ ಎಂದು ಕಾರ್ಮಿಕ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ನಿಮ್ಮ ಪರವಾಗಿ ನಾವಿದ್ದೇವೆ: ಟೊಯೊಟಾ ಕಾರ್ಮಿಕರಿಗೆ ಸಿದ್ದರಾಮಯ್ಯ ಭರವಸೆ; ವೀಡಿಯೊ
ಹೋರಾಟದುದ್ದಕ್ಕೂ ರಾಜ್ಯದ ಬಿಜೆಪಿ ಸರ್ಕಾರವು ಟೊಯೊಟಾ ಕಾರ್ಮಿಕರ ಯಾವುದೇ ಸಮಸ್ಯೆಯನ್ನು ಪರಿಹರಿಸುವಲ್ಲಿ ತನ್ನ ಅಸಹಾಯಕತೆಯನ್ನು ತೋರಿಸುತ್ತಲೆ ಬಂದಿದೆ. “1999 ರಿಂದ 18 ವರ್ಷಗಳವರೆಗೆ ತೆರಿಗೆ ಮುಂದೂಡಿಕೆ ಮತ್ತು 2010 ರಲ್ಲಿ ಎರಡನೇ ಹಂತದ ಉತ್ಪಾದನೆಗೆ ಹೆಚ್ಚಿನ ತೆರಿಗೆ ಮುಂದೂಡುವಿಕೆ ಪ್ರಯೋಜನಗಳು ಸೇರಿದಂತೆ ಕಂಪನಿಗೆ ಹಲವಾರು ಲಾಭಗಳನ್ನು ನೀಡಿದ ರಾಜ್ಯ ಸರ್ಕಾರ ವಿವಾದವನ್ನು ಪರಿಹರಿಸುವಲ್ಲಿ ಅಸಹಾಯಕರಂತೆ ವರ್ತಿಸುತ್ತಿದೆ ಮತ್ತು ರಾಜ್ಯ ಕಾರ್ಮಿಕ ಇಲಾಖೆ ಮೂಕ ಪ್ರೇಕ್ಷಕನಾಗಿದೆ” ಎಂದು ಟೊಯೊಟಾ ಕಾರ್ಮಿಕ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಟೊಯೊಟಾ ಆಡಳಿತ ಮಂಡಳಿಯು, ಕಾರ್ಮಿಕ ಸಂಘಟನೆಯ ನಾಯಕರು ಹೆಚ್ಚುವರಿ ಕಾರ್ಮಿಕ ಆಯುಕ್ತರನ್ನು ಭೇಟಿ ಮಾಡಿ ‘ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಲು ಮುಚ್ಚಳಿಕೆ ಬರೆದಿದ್ದು, ಆದ್ದರಿಂದ ಕಾರ್ಮಿಕರು ಯಾವುದೆ ವೈಯಕ್ತಿಕ ಮುಚ್ಚಳಿಕೆ ಪತ್ರ ಬರೆಯದೆ ಕರ್ತವ್ಯಕ್ಕೆ ಹಾಜರಾಗಿ’ ಎಂದು 01.03.2021 ರಂದು ನೋಟಿಸ್ ನೀಡಿದೆ.
ಆದರೆ ಇದನ್ನು ಕಾರ್ಮಿಕ ಸಂಘಟನೆಗಳು ನಿರಾಕರಿಸಿದ್ದು, ಕಾರ್ಮಿಕ ಇಲಾಖೆಯ ಆಯುಕ್ತರಿಗೆ ಕಾರ್ಮಿಕ ಸಂಘದ ಕಾರ್ಯಕಾರಿ ಸಮಿತಿಯು ಯಾವುದೆ ಮುಚ್ಚಳಿಕೆಯನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ಇದು ಟೊಯೊಟಾ ಆಡಳಿತ ಮಂಡಳಿಯು ತನ್ನ ಕುತಂತ್ರವನ್ನು ಮುಚ್ಚಿಹಾಕಲು ಮಾಡಿರುವ ಕಟ್ಟುಕತೆ ಕತೆ ಎಂದು ಕಾರ್ಮಿಕ ಸಂಘ ಹೇಳಿದೆ.
ಇದನ್ನೂ ಓದಿ: ವಿದೇಶಿ ಕಂಪನಿಗಳು ಈ ನೆಲದ ಕಾನೂನನ್ನು ಗೌರವಿಸಲಿ: ಟೊಯೊಟಾ ಕಾರ್ಮಿಕರ ಹೊರಾಟದಲ್ಲಿ ಸಿದ್ದರಾಮಯ್ಯ
ಯಾವುದೆ ಮುಚ್ಚಳಿಕೆ ನೀಡದೆ ಕರ್ತವ್ಯಕ್ಕೆ ಹಾಜರಾಗಬಹುದು ಎಂದು ಕಂಪೆನಿಯು ನೋಟಿಸ್ ನೀಡಿದ್ದರಿಂದ ಕಾರ್ಮಿಕ ಸಂಘವು ತಮ್ಮ ಸದಸ್ಯರಿಗೆ ಕರ್ತವ್ಯಕ್ಕೆ ಹಾಜರಾಗಲು ಸಲಹೆ ನೀಡಿದೆ. ಅದಾಗ್ಯೂ ಕಾರ್ಮಿಕ ಸಂಘದ ಹೋರಾಟವು ಕಂಪೆನಿಯ ಒಳಗೆ ಮತ್ತು ಹೊರಗೆ ಮುಂದುವರೆಯುತ್ತದೆ ಎಂದು ಸಂಘವು ಹೇಳಿದೆ. ಜೊತೆಗೆ ಹಲವು ಬೇಡಿಕೆಗಳನ್ನು ಕೂಡಾ ಮುಂದಿಟ್ಟಿದೆ.
- 10.11.2020 ರಿಂದ 01.03 2021 ರವರೆಗಿನ ಲಾಕ್‌ಔಟ್ ಅವಧಿಯ ಪೂರ್ಣ ವೇತನ ನೀಡಬೇಕು.
- ಕಾರ್ಮಿಕ ಸಂಘಟದ ಜೊತೆ ಕೆಲಸದ ಹೊರೆ ಬಗ್ಗೆ ಮಾತುಕತೆ ಮಾಡಿ ಒಪ್ಪಂದ ಮಾಡಬೇಕು.
- ಹೋರಾಟದ ಸಮಯದಲ್ಲಿ ಮಾಡಲಾಗಿರುವ ವಜಾ, ಅಮಾನತು ಆದೇಶ, ಚಾರ್ಜ್‌ಶೀಟ್‌ಗಳನ್ನು ಹಿಂತೆಗೆದುಕೊಳ್ಳಬೇಕು.
- ವಾರದಲ್ಲಿ 5 ದಿನಗಳ ಕೆಲಸ ಮರುಸ್ಥಾಪನೆ.
- ಉತ್ಪಾದನೆಯಲ್ಲಿ ಗುತ್ತಿಗೆ ಕಾರ್ಮಿಕರನ್ನು ಬಳಸುವುದು ನಿಲ್ಲಿಸಬೇಕು.
ಇದನ್ನೂ ಓದಿ: ಟೊಯೊಟಾ ಆಡಳಿತ ಮಂಡಳಿಯ ವಿರುದ್ದ ಕಾರ್ಮಿಕರ ಬೃಹತ್ ಪಾದಯಾತ್ರೆ
ಈ ಹಿಂದೆಯೆ ಕಾರ್ಮಿಕರು ಮತ್ತು ಕಂಪೆನಿಯ ನಡುವಿನ ಬಿಕ್ಕಟ್ಟು ಶಮನಕ್ಕಾಗಿ ಸರ್ಕಾರ ಲಾಕೌಟನ್ನು ಮತ್ತು ಮುಷ್ಕರವನ್ನು ನಿಷೇಧಿಸಿತ್ತು. ಈ ಸಮಯದಲ್ಲಿ ಕಾರ್ಮಿಕರು ಕೆಲಸಕ್ಕೆ ತೆರಳಲು ತಯಾರಾಗಿದ್ದರೂ, ಕಂಪೆನಿ ಮಾತ್ರ ಲಾಕೌಟ್ ತೆರವುಗೊಳಿಸದೆ ಸರ್ಕಾರಿ ಆದೇಶವನ್ನು ಬಹಿರಂಗವಾಗಿ ತಿರಸ್ಕರಿಸಿತ್ತು. ಇದರ ವಿರುದ್ದ ಆಕ್ರೋಶಗೊಂಡ ಕಾರ್ಮಿಕರು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದರು.
ನಿರಂತರವಾಗಿ ಹೋರಾಟ ನಡೆಸುತ್ತಿದ್ದ ಕಾರ್ಮಿಕರಿಗೆ ರಾಜಕೀಯ ನಾಯಕರು ಬೆಂಬಲ ನೀಡುತ್ತಿದ್ದಂತೆ ಲಾಕೌಟನ್ನು ತೆರವುಗೊಳಿಸಿ ಮುಚ್ಚಳಿಕೆ ಬರೆದು ಕೆಲಸಕ್ಕೆ ಹಾಜರಾಗುವಂತೆ ಆಡಳಿತ ಮಂಡಳಿ ಷರತ್ತನ್ನು ವಿಧಿಸಿತ್ತು. ಆದರೆ ಕಾರ್ಮಿಕರು ಮಾತ್ರ ಮುಚ್ಚಳಿಕೆ ಬರೆಯುವ ಯಾವುದೆ ಷರತ್ತಿಗೆ ಒಪ್ಪಿಕೊಳ್ಳದೆ ತಮ್ಮ ನ್ಯಾಯಯುತ ಹೋರಾಟವನ್ನು ಮುಂದುವರೆಸಿದರು.
ಈ ನಡುವೆ ಟೊಯೊಟಾ ಆಡಳಿತ ಮಂಡಳಿಯು ಸುಮಾರು 100 ಕಾರ್ಮಿಕರನ್ನು ವಜಾಗೊಳಿಸುವುದು, ಅಮಾನತುಗೊಳಿಸುವುದು ಸೇರಿಂದತೆ ಕಾರ್ಮಿಕರ ವಿರುದ್ದ ಚಾರ್ಜ್‌ಶೀಟ್‌ಗಳು, ಮೆಮೋ ಕಳುಹಿಸುವುದನ್ನು ಮಾಡುತ್ತಲೆ ಬಂದಿತ್ತು. ಕಾರ್ಮಿಕರಿಗೆ ಬಲವಂತವಾಗಿ ವಿ.ಎಸ್.ಎಸ್. ಪಡೆಯಲು ಹಾಗೂ ಕಂಪೆನಿಯ ಕೆಲಸವನ್ನು ಬಿಡಲು ಒತ್ತಾಯಿಸುತ್ತಲೆ ಬಂದಿದೆ.
ಇದನ್ನೂ ಓದಿ: ಹೋರಾಟಕ್ಕೆ ಮಣಿಯುತ್ತಿರುವ ಟೊಯೊಟಾ: ಕಾನೂನುಬಾಹಿರ ಷರತ್ತಿಗೆ ಬಗ್ಗುವುದಿಲ್ಲವೆಂದ ಕಾರ್ಮಿಕರು


