ಲಂಕೇಶ್ ಪತ್ರಿಕೆಯ ವರದಿಗಾರರೊಬ್ಬರ ನೆನಪುಗಳು
ಮೇಷ್ಟ್ರು ನನ್ನ “ಆಧ್ಯಾತ್ಮ ಗುರು; ಮನುಷ್ಯತ್ವದ ಕುರಿತು ಧ್ಯಾನಿಸುವ ದೀಕ್ಷೆ ಕೊಟ್ಟವರು. ಜಾತಿ-ಧರ್ಮ-ದೇವರುಗಳ ಮೀರಿ ಜೀವಪರವಾಗಿ ಚಿಂತಿಸುವುದನ್ನ ಕಲಿಸಿದವರು. ನನ್ನ ಮತ್ತು ಮೇಷ್ಟ್ರು ಸಂಬಂಧ ಶುರುವಾಗಿದ್ದು ’ಲಂಕೇಶ್ ಪತ್ರಿಕೆ’ಯಿಂದಲೋ ಅಥವಾ ’ಜಗಳ’ದಿಂದಲೋ ಎಂಬ ಗೊಂದಲ ಇವತ್ತಿಗೂ ಕಾಡುತ್ತಲೇ ಇದೆ! 1980ರ ದಶಕದ ಆರಂಭದ ದಿನಗಳವು. ಲಂಕೇಶ್ ಪತ್ರಿಕೆ ಕನ್ನಡ ನಾಡಿನ ಸಾಕ್ಷಿಪ್ರಜ್ಞೆಯಾಗಿ ರೂಪುಗೊಂಡಿದ್ದ ಕಾಲಘಟ್ಟದಲ್ಲಿ ನಾನು ಕಾಲೇಜು ಮೆಟ್ಟಿಲು ಹತ್ತಿದ್ದೆ. ಓದುವ ಹವ್ಯಾಸ ಅಪ್ಪನಿಂದ ಬಳುವಳಿಯಾಗಿ ಬಂದಿತ್ತು. ರೈತರಿಗೆ ಸಲಹೆ ನೀಡುವ ಸಣ್ಣ ಸರ್ಕಾರಿ ಚಾಕರಿಯಲ್ಲಿದ್ದ ನನ್ನಪ್ಪ ಬೆಳಿಗ್ಗೆ ನಸುಕಲ್ಲೆ ಸೈಕಲ್ಲೇರಿ ಹಳ್ಳಿಗಳತ್ತ ಹೋದರೆ ರಾತ್ರಿ ಕತ್ತಲಾವರಿಸುವ ಹೊತ್ತಿಗೆ ಬರುತ್ತಿದ್ದ. ಬರುವಾಗ ಯಾವುದಾದರೂ ವೃತ್ತ ಪತ್ರಿಕೆ ತರುತ್ತಿದ್ದ. ಅದನ್ನು ರಾತ್ರಿ 12ರವರೆಗೂ ಒಂದು ಪುಟವೂ ಬಿಡದೆ ಓದುತ್ತಿದ್ದ.
ಅಪ್ಪ ಆಗಾಗ ಲಂಕೇಶ್ ಪತ್ರಿಕೆಯನ್ನೂ ತರುತ್ತಿದ್ದರು. ಅದು ನನ್ನ ಬದುಕಿನ ದಿಕ್ಕನ್ನೇ ಬದಲಿಸುತ್ತದೆಂದು ನಾನಂದುಕೊಂಡಿರಲಿಲ್ಲ. ಅಪ್ಪನ ಕೈಯಲ್ಲಿ ಕಾಸಿದ್ದಾಗ ತರುತ್ತಿದ್ದ ಲಂಕೇಶ್ ಪತ್ರಿಕೆ, ಸಾಂಸ್ಕೃತಿಕ ಲೋಕದ ’ದೈತ್ಯ ಲಂಕೇಶ್ ಮೇಷ್ಟ್ರು ಒಡನಾಟದ ಭಾಗ್ಯ ನನಗೆ ಸಿಗುವಂತೆ ಮಾಡಿತ್ತು! ಕಾಲೇಜಿಗೆಂದು ಪಟ್ಟಣಕ್ಕೆ ಹೋಗುತ್ತಿದ್ದಾಗ ಹಠ ಮಾಡಿ ಅಪ್ಪನಿಂದ ದುಡ್ಡು ಪಡಕೊಂಡು ಲಂಕೇಶ್ ಪತ್ರಿಕೆ ತರುತ್ತಿದ್ದೆ. ಅದರಲ್ಲಿ ಮೇಷ್ಟ್ರು ಮತ್ತಿತರರು ಬರೆಯುತ್ತಿದ್ದ ವಿಚಾರ ಪ್ರಚೋದಕ ಲೇಖನಗಳು ’ಬ್ರಾಹ್ಮಣ್ಯದ ಪರಿಸರದಲ್ಲಿದ್ದ ನನ್ನನ್ನು ’ಸೈತಾನ’ನನ್ನಾಗಿ ಮಾಡಿತ್ತು! ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ವ್ಯಭಿಚಾರ ಕಂಡಾಗೆಲ್ಲ ಕೂಗೋದು ರೂಢಿಯಾಗಿ ಕಾಲೇಜಿನಲ್ಲಿ ಅಧಿಕ ಪ್ರಸಂಗಿ ಅನಿಸಿಕೊಂಡಿದ್ದೆ.
ಬಂಡಾಯ ಮತ್ತು ಬದಲಾವಣೆಗೆ ’ಪತ್ರಿಕೆ’ ಪ್ರೇರಣೆಯಾಗಿತ್ತು. ಕಾಲೇಜಿನ ವಿದ್ಯಾರ್ಥಿಸಂಘದ ಚುನಾವಣೆಗೆ ನಿಲ್ಲುವ ಹುಕ್ಕಿ ಬಂದಿತ್ತು. ಬಡ ವಿದ್ಯಾರ್ಥಿಗಳಿಗೆ ಸಹಾಯವಾಗುವಂಥ ಸಹಕಾರಿ ಸಂಘ ಸ್ಥಾಪಿಸಬೇಕು; ಮಂತ್ಲಿ ಮೀಟಿಂಗ್‌ನ ಚಹಾಪಾರ್ಟಿ ದುಂದುವೆಚ್ಚ ನಿಲ್ಲಿಸಬೇಕೆಂಬ ಧ್ಯೇಯೋದ್ದೇಶ ನನ್ನದಾಗಿತ್ತು. ಹಣವಿಲ್ಲದೆ ಚುನಾವಣೆ ಗೆದ್ದು ತೋರಿಸಬೇಕೆಂಬ ಪ್ಲಾನು ಹಾಕಿದ್ದೆ. ಅಂದಿನ ದಿನಗಳಲ್ಲೇ ಸಾವಿರಾರು ರೂಪಾಯಿ ಹರಿಸಿ ಯೂನಿಯನ್ ಜನರಲ್ ಸೆಕ್ರೆಟರಿ, ಇನ್ನಿತರ ಕಾರ್ಯದರ್ಶಿ ಸ್ಥಾನಕ್ಕೆ ಜಿದ್ದಾಜಿದ್ದಿ ನಡೆಯುತ್ತಿತ್ತು. ನಾನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದಾಗ ಸ್ವೀಟು ಹಂಚಲು ಬರೀ 20ರೂ ಖರ್ಚು ಮಾಡಿದ್ದು ಬಿಟ್ಟರೆ ಬೇರೇನೂ ಮಾಡಿರಲಿಲ್ಲ! ನನ್ನ ’ದಂಗೆ’ ವಿದ್ಯಾರ್ಥಿವೃಂದಕ್ಕೆ ಅರ್ಥವಾಗದಿದ್ದರೂ ಒಂದಿಷ್ಟು ಮೂಲಭೂತವಾದಿ ಗುರುಗಳ ಕಣ್ಣು ಕೆಂಪಾಗಿಸಿತ್ತು. ಈ ಕಾರಣಕ್ಕೆ ಕಾಲೇಜಿನ ವಾರ್ಷಿಕೋತ್ಸವಕ್ಕೆ ಲಂಕೇಶರನ್ನು ಮುಖ್ಯ ಅತಿಥಿಯಾಗಿ ಕರೆಸಬೇಕೆಂಬ ನನ್ನ ಪ್ರಯತ್ನಕ್ಕೆ ರಹಸ್ಯ ಪ್ರತಿರೋಧ ಎದುರಾಯಿತು.
ಪಟ್ಟುಬಿಡದೆ ಲಂಕೇಶರನ್ನು ಕರೆಸುವುದೆಂದು ಠರಾವು ಮಾಡಿಸಿದೆ. ಮೇಷ್ಟ್ರನ್ನು ಆಹ್ವಾನಿಸಲು ಬೆಂಗಳೂರಿಗೆ ಒಬ್ಬ ಶಿಕ್ಷಕರನ್ನು ಕಳಿಸಲಾಯಿತು. ನಂತರ ಮೇಷ್ಟ್ರು ಬರಲೊಪ್ಪಲಿಲ್ಲ ಎಂದು ಬೇರೆ ಯಾರನ್ನೋ ಕರೆದು ವಾರ್ಷಿಕೋತ್ಸವ ಮುಗಿಸಲಾಯಿತಾದರೂ ನನಗೆ ’ಸಂಶಯ’ ಹಾಗೇ ಉಳಿದಿತ್ತು. ಮೇಷ್ಟ್ರಿಗೊಂದು ಪತ್ರ ಬರೆದೆ “ಸರ್, ನನ್ನ ಕಾಲೇಜಿಂದ ನಿಮ್ಮನ್ನು ಕರೆಯಲು ಹೋದವರಿಗೆ ಬೈದು ಕಳಿಸಿದಿರಂತೆ, ಹೌದಾ?” ಎಂದು ಕೇಳಿದೆ. “ಇಲ್ಲ ಮರಿ, ಬರಲಾಗದೆಂದು ಸ್ವಲ್ಪ ನಿಷ್ಠುರವಾಗಿ ಹೇಳಿರಬಹುದೇ ಹೊರತು, ಬೈಯ್ಯಲು ಸಾಧ್ಯವೇ ಇಲ್ಲ. ಸುಮಾರು ನಾಲ್ಕು ನೂರು ಕಿ.ಮೀ ದೂರದ ಪ್ರಯಾಣದ ತೊಂದರೆಗೆ ಒಲ್ಲೆ ಎಂದಿರಬೇಕಷ್ಟೇ” ಎಂದು ನನ್ನ ಕಾಲೇಜು ವಿಳಾಸಕ್ಕೆ ಪತ್ರ ಬರೆದರು. ಈ ಪತ್ರ ಒಡೆದು ಓದಲು ನನಗೆ ಕೊಡಲಾಯಿತು. ಇದು ನನ್ನನ್ನು ’ಗದ್ಧರ’ ಎಂದು ಬಿಂಬಿಸಿಬಿಟ್ಟಿತು.
ಮರುವರ್ಷ ನನ್ನ ತಮ್ಮ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ. ಆತನೂ ಮೇಷ್ಟ್ರಿಂದ ಪ್ರಭಾವಿತನಾದವನು. ಈ ಬಾರಿ ಗ್ಯಾರಂಟಿ ಮೇಷ್ಟ್ರನ್ನು ಕರೆಸಲೇಬೇಕೆಂದು ತೀರ್ಮಾನಿಸಿದ್ದ. ಮೇಷ್ಟ್ರು ಕರೆಯಲು ’ಹಿರಿಯರು’ ಯಾರೂ ಹೋಗೋದು ಬೇಡ, ತಾನೇ ಹೋಗುತ್ತೇನೆಂದು ಹೋರಾಡಿ ಬೆಂಗಳೂರಿಗೆ ಹೋದ. ಮೇಷ್ಟ್ರನ್ನು ಒಪ್ಪಿಸಿ ಬಂದ. ಫಂಕ್ಷನ್ ಮುಗಿಸಿ ಪ್ರಾಚಾರ್ಯರ ಕೊಠಡಿಗೆ ಬಂದು ಕೂತಿದ್ದ ಮೇಷ್ಟ್ರನ್ನು ಮಾತಾನಾಡಿಸಲು ಗೆಳೆಯರ ಜೊತೆಗೆ ಕರಕೊಂಡು ಹೋಗಿದ್ದೆ. “ಸರ್, ಸಮಾಜವಾದದ ಬಗ್ಗೆ ಬರೆಯುವ ನೀವು ಕಾರಲ್ಲಿ ಓಡಾಡ್ತಿರಿ. ಆರಾಮಾಗಿದ್ದೀರಿ.. ಬಡವರಿಗಿನ್ನೂ ಅನ್ನ, ಸೂರು ಇಲ್ಲಾ.. ನನ್ನೂರಲ್ಲಿರುವ ನಿರ್ಗತಿಕ ಉಪ್ಪಾರರ ಕೇರಿಗೆ ಬನ್ನಿ.. ಬವಣೆ ತೋರಿಸ್ತೇನೆ” ಎಂದು ಏನೇನೋ ಅಸಂಬದ್ಧ ತರ್ಕ ಮಂಡಿಸಿದೆ.
ಮೇಷ್ಟ್ರು ತಮ್ಮ ಕನ್ನಡಕದೊಳಗಿಂದ ಕಣ್ಣನ್ನು ಅಗಲಿಸಿ ನನ್ನನ್ನು ದುರುಗುಟ್ಟಿ ನೋಡಿದರು. ಬೈತಾರೆಂದು ಬೆವರಿಳಿಯಿತು. ಮೇಷ್ಟ್ರು ದೊಡ್ಡದಾಗಿ ನಕ್ಕರು. “ಏ ಮಾರಾಯ, ನಾನು ಜರ್ನಲಿಸ್ಟ್ ನಂಗೇ ಹೇಳ್ತಿಯಲ್ಲ ಕತೆ.. ನಿನ್ನ ತಹತಹ ನಂಗೆ ಅರ್ಥವಾಗುತ್ತದೆ. ವಾಸ್ತವ ಅರ್ಥಮಾಡಿಕೊಳ್ಳಲು ನಿನಗೆ ಸ್ಮಲ್ಪ ಸಮಯ ಬೇಕು. ತಾಳ್ಮೆಯಿಂದ ಯೋಚಿಸು. ನಿಂಗೆ ನಿನ್ನ ಪ್ರಶ್ನೆಗೆ ಉತ್ತರ ಸಿಗುತ್ತದೆ. ನೀನು ಕೇಳಿದ್ದರಲ್ಲಿ ತಪ್ಪೇನಿಲ್ಲ ಎಂದರು. ಮರುದಿನ ಮೇಷ್ಟ್ರನ್ನು ನಮ್ಮ ಮನೆಗೆ ನನ್ನ ತಮ್ಮ ಕರಕೊಂಡು ಬಂದಿದ್ದ. ನನ್ನಪ್ಪ “ಸರ್ ನಮ್ಮ ಹುಡುಗ ತಮ್ಮತ್ರ ದುಡುಕಿ ಮಾತಾಡಿದನಂತೆಬೇ॒ಸರ ಮಾಡಿಕೊಳ್ಳಬೇಡಿ” ಎಂದರು. “ಇಲ್ಲಇ॒ಲ್ಲ. ಅವನೇನೂ ಅಂದಿಲ್ಲ.. ಅವನಿಗೆ ನೀವೇನೂ ಹೇಳಬೇಡಿ. ಇಂಥ ಹುಡುಗರ ಹುಂಬತನದ ಹಿಂದಿನ ಉದ್ದೇಶ ಒಳ್ಳೆಯದಿರುತ್ತದೆ. ನಂಗದು ಗೊತ್ತು” ಎಂದು ಹೇಳುತ್ತ ನನ್ನ ಕರೆದು ಬೆನ್ನು ತಟ್ಟಿ ಹೋದರು.

ಇದಾದ ಎಂಟತ್ತು ತಿಂಗಳಿಗೆ ಮೇಷ್ಟ್ರಿಂದ ತಮ್ಮನಿಗೊಂದು ಪತ್ರ ಬಂತು. “ನೀನು ಅಥವಾ ನಿನ್ನಣ್ಣ ವಿವೇಕ ಉತ್ತರ ಕನ್ನಡದ ಸುತ್ತಲಿನ ವರದಿ ಕಳಿಸಿರಿ ಸಂಭಾವನೆ ಕೊಡುತ್ತೇನೆ. ಓಡಾಟದ ಖರ್ಚು ಕೊಡುತ್ತೇನೆ” ಎಂಬುದು ಪತ್ರದ ಒಕ್ಕಣಿಯಾಗಿತ್ತು. ನನ್ನ ಸಹೋದರ ಎಂಎ ಮಾಡಲು ಹೋಗಿದ್ದರಿಂದ ಮತ್ತು ನಾನು ಬಿ.ಎಸ್‌ಸಿ ಮುಗಿಸಿ ಖಾಲಿ ಇದ್ದುದ್ದರಿಂದ ನಾನೇ ವರದಿ ಮಾಡಲು ಶುರುಹಚ್ಚಿಕೊಂಡೆ. ಆದರೆ ಮೊದಮೊದಲು ನಾನು ಕಳಿಸಿದ ಮೂರ್ನಾಲ್ಕು ವರದಿಗಳು ಪ್ರಕಟವಾಗಲೇ ಇಲ್ಲ. ಆ ವರದಿಗಳನ್ನು ಸಹಾಯಕರು ಮೇಷ್ಟ್ರು ಗಮನಕ್ಕೆ ತಂದಿರಲಿಲ್ಲವಂತೆ. ನಂತರ ಬಂದ ವರದಿ ’ಪತ್ರಿಕೆ’ಯ ಮಧ್ಯದ ಭರ್ತಿ ಎರಡು ಪುಟಗಳದಾಗಿತ್ತು. ಹಲವು ಬಾಕ್ಸ್‌ಗಳು ಮತ್ತು ಸಬ್ ಹೆಡ್ಡಿಂಗ್‌ಗಳ ಆ ವರದಿ ಮೆಚ್ಚಿಕೆಯಾಗಿತ್ತು. ಆದರೆ “ಕಾಗುಣಿತದ ತಪ್ಪು ಬಾಲಿಶ ಮಾರಾಯಾ. ಪತ್ರಿಕೆ, ಲೇಖನ ಓದುವಾಗ ಗಮನವಿಟ್ಟು ಓದಿದರೆ ಹೀಗೆಲ್ಲಾ ಆಗೋದಿಲ್ಲ ಎಂದು ಪಾಠ ಮಾಡಿದ್ದರು!
ಆಗಾಗ ಪತ್ರ ಬರೆದು ನನ್ನ ತಿದ್ದು-ತೀಡಿ ವರದಿಗಾರಿಕೆ ತರಬೇತಿ ಕೊಡುತ್ತಿದ್ದರು. ವರದಿ ಮಾಡುವಾಗ ಸಾಕ್ಷ್ಯಾಧಾರ ಇರಲಿ, ಕೊನೆ ಪಕ್ಷ ನಿನಗಾದರೂ ಕನ್‌ವಿನ್ಸ್ ಆಗಿರಲಿ. ಸಾಮಾಜಿಕ-ರಾಜಕೀಯ ವರದಿ ಬರೆವಾಗ ಎಚ್ಚರ ತಪ್ಪುಬಾರದೆಂದು ನೆನಪಿಸುತ್ತಿದ್ದರು. ಪ್ರತಿ ತಿಂಗಳು ಸಂಬಳ ಸರಿಯಾಗಿ ಕಳಿಸುತ್ತಿದ್ದರು. ಪ್ರಕಟವಾಗದ ವರದಿಯ ಖರ್ಚು-ವೆಚ್ಚವನ್ನೂ ಕೊಡುತ್ತಿದ್ದರು. ನಾನು ಆಫೀಸಿಗೆ ಹೋಗುವುದು ತುಂಬಾ ಕಮ್ಮಿಯಾಗಿತ್ತು. ಪತ್ರಿಕೆ ಹುಟ್ಟುಹಬ್ಬ, ಮೇಷ್ಟ್ರ ಹುಟ್ಟುಹಬ್ಬ ಮತ್ತು ಮೀಟಿಂಗ್‌ಗೆ ಮಾತ್ರ ಹೋಗುತ್ತಿದ್ದೆ. ಹೋದಾಗೆಲ್ಲ ಬಸ್‌ಚಾರ್ಜ್ ಕೊಟ್ಟೇ ಕಳಿಸುತ್ತಿದ್ದರು. ನಾನು ಆಫೀಸಿಗೆ ಬಂದಿದ್ದೇನೆಂದು ಸಹಾಯಕರು ಹೇಳಿದರೆ “ಆತನಿಗೆ ಕಾಫಿ, ಊಟ, ತಿಂಡಿ ಎಲ್ಲಾ ಮಾಡಿಸಿ ಮಧ್ಯಾಹ್ನದ ನಂತರ ನನ್ಹತ್ರ ಕಳಿಸಿ” ಅನ್ನುತ್ತಿದ್ದರು. ಉತ್ತರ ಕನ್ನಡದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕಹೀ॒ಗೆ ಎಲ್ಲದರ ಬಗ್ಗೆ ಮಾತಾಡುತ್ತಿದ್ದರು. ನಾನು ಬರೆದ ವರದಿಗಳಲ್ಲಿ ಯಾವುದು ಚನ್ನಾಗಿತ್ತು, ಯಾವುದು ಸರಿಯಿರಲಿಲ್ಲ ಎಂಬುದು ನೆನಪಿಟ್ಟು ಹೇಳುತ್ತಿದ್ದುದು ಅದ್ಭುತವಾಗಿತ್ತು. ಯಾವುದಾದರೂ ವರದಿಯಿಂದ ಲೋಕಲ್‌ನಲ್ಲಿ ತೊಂದರೆಯಾದರೆ ತಕ್ಷಣ ನೆರವಾಗುತ್ತಿದ್ದರು.
ಮೇಷ್ಟ್ರ ಜತೆ ಸುಮಾರು 10 ವರ್ಷ ಕೆಲಸ ಮಾಡಿದ ಹೆಮ್ಮೆ ನನ್ನದು. ಈ ದಶಕದ ಅವಧಿಯಲ್ಲಿ 2-3 ಕೇಸ್ ಆಗಿತ್ತು. ಕೇಸ್ ಹಾಕಿದವರೇ ಕೆಲವನ್ನು ವಾಪಸ್ ತೆಗೆದುಕೊಂಡರೆ, ಉಳಿದಿದ್ದರಲ್ಲಿ ನಮಗೇ ಜಯವಾಗಿದೆ. ಆರೋಗ್ಯ ಹದಗೆಟ್ಟಿರುವಾಗ, ಕೇಸಾದರೆ ಮೇಷ್ಟ್ರರಿಗೆ ಸ್ವಲ್ಪ ಬೇಜಾರಾಗುತ್ತಿತ್ತು. ದೂರದ ಪ್ರಯಾಣ ಕಷ್ಟವಾಗುತ್ತಿತ್ತು. “ದುಷ್ಟ-ಭ್ರಷ್ಟರಿಗೆ ನೀನಾಗೇ ಜಾಸ್ತಿ ಬೈದು ಬರೀಬೇಡ, ನಿನ್ನ ವರದಿ ಓದಿದವರೇ ಅವರಿಗೆ ಬೈಯ್ಯುವ ಥರ ಬರೀಬೇಕು ಮಾರಾಯಾ” ಅನ್ನುತ್ತಿದ್ದರು. ಒಮ್ಮೆ ಮೇಷ್ಟ್ರು ಬುದ್ಧಿ ಹೇಳುವಾಗ ಅವರ ಟೇಬಲ್ ಮೇಲಿದ್ದ ಬಾಟಲಿಯನ್ನು ಬಗ್ಗಿ ನೋಡಿದೆ. ಮೇಷ್ಟ್ರಿಗೆ ನಗು ಬಂತು. “ಏನೋ ಮಾರಾಯಾ ವಿಷ ಕಂಡ ಹಾಗೆ ನೋಡ್ತಿಯಾ. ಅದು ಹಾರ್ಲಿಕ್ಸ್ ಕಣಯ್ಯ ಎಂದವರೇ ಸಹಾಯಕನ ಕರೆದು ಎರಡು ಕಪ್ ಹಾಲು ತರಲು ಹೇಳಿದರು. ಅದಕ್ಕೆ ಹಾರ್ಲಿಕ್ಸ್ ಹಾಕಿ ನನಗೊಂದು ಕಪ್ ಕೊಟ್ಟು ತಾವೊಂದು ಕಫ್ ಹಾರ್ಲಿಕ್ಸ್ ಕುಡಿಯುತ್ತ “ನಾನು ಹೇಳಿದ್ದು ತಿಳಿತಾ, ಊರಿಗಾದ ತೊಂದರೆ ನಿನಗೆ ಆದಂತೆ ಅನುಭವಿಸಿ ಬರೀತಿಯಾ ನಿಜ, ಆದ್ರೆ ತೀರಾ ಒರಟಾಗಿ ಗೀಚಬೇಡ” ಎಂದರು. ಹುಡ್ಗನಿಗೆ ಬರೋಬರಿ ಕ್ಲಾಸು ತಗೊಂಡಿದ್ದೆ, ಈಗ ಸುಧಾರಿಸಿದ್ದಾನೆಂದು ಆಫೀಸಲ್ಲಿ ಹೇಳುತ್ತಿದ್ದರಂತೆ.
ರಾಜ್ಯಮಟ್ಟದ ವರದಿಗಳನ್ನು ನನ್ನಿಂದ ಮೇಷ್ಟ್ರು ಮಾಡಿಸಿದ್ದರು. ಬೆಂಗಳೂರಿಗೆ ಬಂದು ಉಳಿತಿಯಾ ಎಂದು ಕೇಳಿದ್ದರು. ವೀರಪ್ಪ ಮೊಯ್ಲಿ ಆಡಳಿತದ ಅಂತ್ಯದಲ್ಲಿ ನಡೆದ ಅಸೆಂಬ್ಲಿ ಇಲೆಕ್ಷನ್ ಹೊತ್ತಲ್ಲಿ ಅಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವರದಿಗಾರಿಕೆಯನ್ನೂ ವಹಿಸಿದ್ದರು. ದಕ್ಷಿಣ ಕನ್ನಡದ ಅಂದಿನ ಹದಿನೈದು ಶಾಸಕರ ಸಾಧನೆ-ಸಾಹಸದ ವರದಿ ಮೇಷ್ಟ್ರಿಗೆ ತುಂಬಾ ಹಿಡಿಸಿತ್ತು. ಇಲೆಕ್ಷನ್ ಸಮಯದಲ್ಲಿ ದಕ್ಷಿಣ ಕನ್ನಡದಲ್ಲಿ ಪತ್ರಿಕೆ ಜೋರಾಗಿ ಓಡಿತ್ತೆಂದು ದೊಡ್ಡ ಮೊತ್ತದ ಚೆಕ್ ಕಳಿಸಿದ್ದರು. ಬದ್ಧತೆಯಿಂದ ಕೆಲಸ ಮಾಡೋರನ್ನ ಕಂಡರೆ ಅವರಿಗೆ ಖುಷಿಯಾಗುತ್ತಿತ್ತು. ಅಡಚಣೆ ಇದ್ದರೆ ಹೇಳು ಹಣ ಕಳಿಸ್ತೇನೆ ಎಂದು ಆಗಾಗ ಹೇಳುತ್ತಿದ್ದರು. ಮೇಷ್ಟ್ರು ನನ್ನನ್ನು ತುಂಬ ಪ್ರೀತಿಯಿಂದ ನೋಡಿಕೊಂಡಿದ್ದರು. “ನನ್ನ ಮದುವೆ ಹೊತ್ತಲ್ಲಿ ಸ್ವಲ್ಪ ಹಣ ಬೇಕಾಗಬಹುದು ಸಾರ್ ಎಂದಿದ್ದೆ. “ಆಯ್ತು ಮಾರಾಯಾ ಕಳಿಸ್ತೇನೆ.. ರಾತ್ರಿಕಂಡ ಬಾವಿಗೆ ಹಗಲು ಬೀಳಲು ನೀನೂ ರೆಡಿಯಾದ್ಯಾ ಎಂದು ನಕ್ಕಿದ್ದರು. ಆದರೆ ನನ್ನ ಮದುವೆಗೂ ಮೊದಲೇ ಮೇಷ್ಟ್ರು ಹೋಗಿಬಿಟ್ಟರು! ಆದರೆ ಗೌರಿ ಮೇಡಮ್ ಕೈಬಿಡಲಿಲ್ಲ. ಮೇಷ್ಟ್ರಂತೆಯೇ ಕಾಳಜಿಯಿಂದ ನೋಡಿಕೊಂಡಿದ್ದರು!
ವಿವೇಕ
ದೀರ್ಘ ಕಾಲ ಲಂಕೇಶ್ ಪತ್ರಿಕೆ ಮತ್ತು ಗೌರಿ ಲಂಕೇಶ್ ಪತ್ರಿಕೆಗಳಲ್ಲಿ ವರದಿಗಾರನಾಗಿ ದುಡಿದಿದ್ದಾರೆ.


