ಪಶ್ಚಿಮ ಬಂಗಾಳ ಚುನಾವಣಾ ಕಣ ರಂಗೇರುತ್ತಿದ್ದು, ಕಾಂಗ್ರೆಸ್ ಕೂಡ ಚುನಾವಣೆಗೆ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಎಂಟು ಹಂತದ ಚುನಾವಣೆಗಳಲ್ಲಿ ಮೊದಲ ಎರಡು ಹಂತದ ಚುನಾವಣೆಗೆ 13 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ.
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಪಟ್ಟಿಯಲ್ಲಿರುವ ಪ್ರಮುಖ ಹೆಸರುಗಳಲ್ಲಿ ಪಕ್ಷದ ಹಿರಿಯ ಮುಖಂಡ ನೇಪಾಳ ಮಹತೋ ಅವರು ಬಾಗ್ಮುಂಡಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ಮಾರ್ಚ್ 27 ರಿಂದ ಏಪ್ರಿಲ್ 29 ರ ವರೆಗೆ ಪಶ್ಚಿಮ ಬಂಗಾಳದಲ್ಲಿ ಸುಧೀರ್ಘ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ನಡೆಯಲಿರುವ ತಮಿಳುನಾಡು, ಅಸ್ಸಾಂ, ಕೇರಳ, ಪುದುಚೇರಿ ರಾಜ್ಯಗಳ ಚುನಾವಣೆ ಫಲಿತಾಂಶದಂದು (ಮೇ 2) ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶ ಕೂಡ ಹೊರ ಬೀಳಲಿದೆ.
ಇದನ್ನೂ ಓದಿ: ಟಿಎಂಸಿ ಅಭ್ಯರ್ಥಿಗಳ ಪಟ್ಟಿ: ಮಹಿಳೆಯರಿಗೆ ಆದ್ಯತೆ, 114 ಹೊಸಮುಖಗಳು, ಎಸ್‌ಸಿ-ಎಸ್‌ಟಿಗೆ ಒತ್ತು
INC COMMUNIQUE
Important Notification regarding West Bengal Candidates pic.twitter.com/uwLDBP2mLM
— INC Sandesh (@INCSandesh) March 6, 2021
ಈಗಾಗಲೇ ಚುನಾವಣೆಗೆ ತೃಣಮೂಲ ಕಾಂಗ್ರೆಸ್ ತಮ್ಮ ಪಕ್ಷದ ಪೂರ್ಣ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಶುಕ್ರವಾರ ಪಟ್ಟಿ ಪ್ರಕಟಿಸಿದ್ದಾರೆ. 294 ಸ್ಥಾನಗಳಲ್ಲಿ ಟಿಎಂಸಿ 291 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಮೂರು ಸ್ಥಾನಗಳನ್ನು ಮೈತ್ರಿ ಪಾಲುದಾರ ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ಗೆ ಬಿಟ್ಟಿದೆ.
ಮಮತಾ ಬ್ಯಾನರ್ಜಿ ನಂದಿಗ್ರಾಮ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಈ ಬಾರಿ ಭಬಾನಿಪುರ ಸ್ಥಾನವನ್ನು ಪಕ್ಷದ ಮುಖಂಡ ಶೋಭಂದೇಬ್ ಚಟ್ಟೋಪಾಧ್ಯಾಯ ಅವರಿಗೆ ಬಿಟ್ಟು ಕೊಟ್ಟಿದ್ದಾರೆ.
ಬಿಜೆಪಿ ಕೂಡ 57 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಅಧಿಕಾರ ಹಿಡಿಯಲು ಬಿಜೆಪಿ ಹಲವು ಕಸರತ್ತುಗಳನ್ನು ನಡೆಸಿದೆ. ಚುನಾವಣೆಯ ಸುಧೀರ್ಘ ಹಂತದ ಮತದಾನ ಕೂಡ ಬಿಜೆಪಿ ಷಡ್ಯಂತ್ರ ಎಂದು ತೃಣಮೂಲ ಕಾಂಗ್ರೆಸ್ ಆಪಾದಿಸಿದೆ. ಮಮತಾ ಬ್ಯಾನರ್ಜಿಗೆ ಬೆಂಬಲ ನೀಡಿ ಈ ಬಾರಿ ಶಿವಸೇನೆ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ.
ಇದನ್ನೂ ಓದಿ: ತಮಿಳುನಾಡು: DMK 180 ಸ್ಥಾನಗಳಲ್ಲಿ ಸ್ಪರ್ಧಿಸಲು ಹಠ ಹಿಡಿದಿರುವುದೇಕೆ?


