ಅದು ತುಂಟಾಟವೂ ಆಗಿತ್ತು, ಕಣ್ಣಾಮುಚ್ಚಾಲೆಯೂ ಆಗಿತ್ತು ಎಂದರೆ ಸಾಕೆ? ನಾವಿಬ್ಬರು ಕಳ್ಳರು ಕದಿಯುವ ಹುಚ್ಚಾಟವಾಗಿಯೇ ಇತ್ತು ಎಂದರೆ ಸರಿ ಅನಿಸುತ್ತದೆ.
ಅದೊಂದು ಪುಟ್ಟ ಗ್ರಂಥಾಲಯ. 3ನೆ ಕ್ಲಾಸಿನಲ್ಲಿದ್ದ ನಾನು ಮತ್ತು ಧನಂಜಯ್ ಕುಂದಾಪೂರ (ಹೊಟೆಲ್ ಮಾಡಿದ್ದ ಕುಂದಾಪೂರ ಕುಟುಂಬದ ಹುಡುಗ, ಈಗ ಅವರ ಫ್ಯಾಮಿಲಿ ಅಲ್ಲಿಲ್ಲ) ಅದ್ಹೇಗೋ ಆ ಗ್ರಂಥಾಲಯದತ್ತ ಆಕರ್ಷಿತರಾದೆವು, ಶಾಲೆಯ ಸಮೀಪವೇ ಇದ್ದುದು ಒಂದು ಕಾರಣ ಅನಿಸುತ್ತೆ.
ಶಾಲೆ ಮುಗಿದ ನಂತರ ಸಿಕ್ಕಾಪಟ್ಟೆ ಆಟ ಆಡಿ ಸುಸ್ತಾಗಿರುತ್ತಿದ್ದ ನಮಗೆ ಆ ಗ್ರಂಥಾಲಯ ಒಂದು ರಿಲೀಫ್ ಸೆಂಟರ್ ಆಗಿತ್ತೇನೊ? ಹಲವು ದಿನಪತ್ರಿಕೆಗಳು, ವಾರಪತ್ರಿಕೆಗಳು… ಅಂತೂ ಒಂದನ್ನು ಹಿಡಿದು ಓದುತ್ತ ಇದ್ದೆವು… ನಂತರ ಹಾಗೆ ನಟಿಸ ತೊಡಗಿದೆವು!
ಇದಕ್ಕೆ ಕಾರಣ ಆಗ ನಮಗೆ ಹುಚ್ಚು ಹಿಡಿಸಿದ್ದ ಕ್ರಿಕೆಟ್ ಮತ್ತು ಗ್ರಂಥಾಲಯದಲ್ಲಿ ಇರುತ್ತಿದ್ದ ಸ್ಪೋರ್ಟ್ಸ್ ಸ್ಟಾರ್ ಮ್ಯಾಗಜೀನ್!
ನಾವು ಕಳ್ಳರಾಗಿ ಬಿಟ್ಟೆವು, ಸ್ಪೋರ್ಟ್ಸ್ ಸ್ಟಾರ್ ನಲ್ಲಿ ಬರುತ್ತಿದ್ದ ಕ್ರಿಕೆಟಿಗರ ವರ್ಣರಂಜಿತ ಫೋಟೊ ಇರುವ ಪೇಜ್ ಎಗರಿಸತೊಡಗಿದೆವು.. 4ನೆ ಕ್ಲಾಸ್ ಮುಟ್ಟುವವರೆಗೂಗೂ ಅವ್ಯಾಹತವಾಗಿ ಹರಿದೆವು, ಕಲೆಕ್ಷನ್ ಮಾಡಿದೆವು. ನನ್ನ ಕಡೆ ಕಲೆಕ್ಷನ್ ಜಾಸ್ತಿ ಎಂದೆಲ್ಲ ಜಗಳ ಆಡಿದೆವು. ಕಲೆಕ್ಷನ್ ಹೆಚ್ಚಿಸಲು, ರಣಜಿ ಆಟಗಾರರ ಫೋಟೊಗಳನ್ನೂ ಕಿತ್ತುಕೊಂಡು ಬಂದೆವು. ರಾಷ್ಟ್ರೀಯ ತಂಡಕ್ಕೆ ಆಡುವ ಮೊದಲೇ ದೆಹಲಿಯ ಬ್ತಾಟ್ಸ್‌ಮನ್ ರಮಣ್ ಲಂಬಾ ಪೋಸ್ಟರ್ ನನ್ನ ಸಂಗ್ರಹದಲ್ಲಿತ್ತು!
ಗಂಭೀರ ಓದುಗರಿಗೆ ಸಂಶಯ ಬರಬಾರದೆಂದು, ಬೇರೆ ಬೇರೆ ಪೇಪರ್ ಓದುವ ನಾಟಕ ಮಾಡುತ್ತಿದ್ದೆವು. ಆಗ ತುಂಟಾಟ ಮತ್ತು ಕಣ್ಣಾಮುಚ್ಚಾಲೆ ನನಗೆ ಆಪ್ತವಾದವು!
ಅಲ್ಲಿನ ಗ್ರಂಥಪಾಲಕ ‘ಪುಂಡ’ ಅವರ ಕೈಗೆ ನಾವು ಒಂದು ಸಲಾನೂ ಸಿಗಲಿಲ್ಲ. ಮೊದಲೆಲ್ಲ ಸ್ಪೋರ್ಟ್ಸ್ ಸ್ಟಾರ್ ಪುಟ ಹರಿದಾಗ ಚರಕ್ ಎಂಬ ಶಬ್ದ ಬರುತ್ತಿತ್ತು, ಪಕ್ಕದವರು ನೋಡಿದ ಕೂಡಲೇ ಗಾಬರಿ ಆಗುತ್ತಿತ್ತು. ಅದಕ್ಕೂ ಒಂದು ಸಲ್ಯೂಷನ್ ಕಂಡು ಹಿಡಿದೆವು. ನೈಸ್ ಆಗಿರುತ್ತಿದ್ದ ಆ ಪುಟಗಳ ಅಂಚಿಗೆ ಒಗುಳನ್ನು (ಎಂಜಲನ್ನು) ಹಚ್ಚಿ ಬಿಡುವುದು! ಹರಿಯುವಾಗ ಚರಕ್ ಇಲ್ಲ ಪರಕ್ ಇಲ್ಲ!
ಗ್ರಂಥಪಾಲಕ ‘ಪುಂಡ’ ಎಂದು ಬರಹದಲ್ಲಿ ಇದೆ ಅಲ್ಲವೇ? ಮುಂದೆ ಇವರೇ ನೀಲು ಕಾವ್ಯಕ್ಕೆ ಹಲವು ವರ್ಷ ‘ಪುಂಡ’ ಹೆಸರಲ್ಲಿ ರೇಖಾಚಿತ್ರ ಬರೆದ ಕೆ.ವಿ. ಪುಂಡಲೀಕ ಅಥವಾ ಪುಂಡಲೀಕ ಕಲ್ಲಿಗನೂರು…
ಈ ದುಸ್ಸಾಹಸದ ನಡುವೆ ನನ್ನನ್ನು ಲಂಕೇಶ್ ಪತ್ರಿಕೆ ಕ್ಯಾಚ್ ಮಾಡಿತ್ತು. ಆರನೇ ಕ್ಲಾಸಿನಲ್ಲಿ ಇರುವಾಗ ಹೈಸ್ಕೂಲ್‌ಗೆ ಜೀವಶಾಸ್ತ್ರ ಪಾಠ ಮಾಡುತ್ತಿದ್ದ ಇ.ಪ್ರಭಾಕರನ್ ಸರ್ ಹತ್ತಿರವಾದರು. ದಿನವೂ ಅವರ ಮನೆಗೆ ಹೋಗುತ್ತಿದ್ದೆ. ಅಲ್ಲಿ ಪ್ರಜಾವಾಣಿ, ಲಂಕೇಶ್ ಪತ್ರಿಕೆ, ಸುಧಾ, ಮಯೂರ ಎಲ್ಲವೂ ಲಭ್ಯವಿತ್ತು. ತಮಿಳು ಮೂಲದ ಪ್ರಭಾಕರನ್ ಸರ್ ಗದಗ ಜಿಲ್ಲೆಯ ಪುಟ್ಟ ಊರಿಗೆ ಮಾಸ್ತರಾಗಿ ಬಂದಿದ್ದೇ ಒಂದು ಕುತೂಹಲದ ವಿಷಯ. ಅಪ್ಪಟ ಸೆಕ್ಯುಲರ್ ಮತ್ತು ವಿಚಾರವಾದಿ ಆಗಿದ್ದ ಅವರು ನನ್ನಂತಹ ಅನೇಕರಿಗೆ ಟೀಕೆ ಟಿಪ್ಪಣಿ ಓದಲು ಸಲಹೆ ಮಾಡುತ್ತಿದ್ದರು. (ಸರ್ 3 ವರ್ಷದ ಹಿಂದೆ ತೀರಿಕೊಂಡರು)
ಅಲ್ಲಿಂದ ಶುರುವಾಯ್ತು ಲಂಕೇಶರ ಜೊತೆಗಿನ ವರ್ಚುವಲ್ ಒಡನಾಟ. ಪಿಯುಸಿಗೆಂದು ಬಲವಂತವಾಗಿ ನನ್ನನ್ನು ಧಾರವಾಡಕ್ಕೆ ಅಟ್ಟಿದ ಮೇಲೆ, ಅಲ್ಲಿದ್ದ ಹೋರಾಟದ ಪರಿಸರ ನನ್ನನ್ನು ಲಂಕೇಶ್ ಪತ್ರಿಕೆಯೊಂದಿಗೆ ಇನ್ನಷ್ಟು ಆಪ್ತಗೊಳಿಸಿತು. ಕಣ್ಣಾಮುಚ್ಚಾಲೆಗೆ ಕಳಿಸಿದ ಪ್ರಶ್ನೆಗಳಿಗೆ ಮೊದಲು 30, ನಂತರ 50 ರೂ ಬಹುಮಾನ ತಿಂಗಳಲ್ಲಿ ಎರಡು ಸಲ ಸಿಗುವಂತಾಯಿತು.
****
ಧಾರವಾಡದಲ್ಲಿ ನಾನಿದ್ದ ಹಾಸ್ಟೇಲ್ ಪಕ್ಕದಲ್ಲಿ ಎಸ್‌ಸಿ/ಎಸ್‌ಟಿ, ಬಿಸಿಎಂ ಮತ್ತು ಸ್ಪೋರ್ಟ್ಸ್ ಹಾಸ್ಟೇಲ್ ಇದ್ದವು. ಅಲ್ಲಿದ್ದ ಮಿತ್ರರನ್ನು ಭೇಟಿಯಾಗಲು ಹೋಗುತ್ತಿದ್ದ ಕಾರಣಕ್ಕೆ, ನನಗೆ ಪಿವಿಕೆ (ಪ್ರಗತಿಪರ ವಿದ್ಯಾರ್ಥಿ ಕೇಂದ್ರ) ನಂಟು ಬೆಳೆಯಿತು. ಹಾಗಂತ ನಾನೇನೂ ಅದರ ಸದಸ್ಯನಾಗಲಿಲ್ಲ. ಪಿವಿಕೆ ಧಾರವಾಡದ ಅಗ್ರಿ ಯುನಿವರ್ಸಿಟಿಯಲ್ಲಿ ತುಂಬ ಸ್ಟ್ರಾಂಗ್ ಆಗಿತ್ತು. ವಿದ್ಯಾರ್ಥಿಗಳ ಕಷ್ಟಗಳಿಗೆ ಅದು ಸ್ಪಂದಿಸಿ ಜಯ ಸಾಧಿಸುತ್ತಿತ್ತು.
ಚೆನ್ನೈನಲ್ಲಿ ನಡೆದ ಅಖಿಲ ಭಾರತೀಯ ಕ್ರಾಂತಿಕಾರಿ ವಿದ್ಯಾರ್ಥಿ ಸಮಾವೇಶಕ್ಕೆ ಹೋಗಿ ಚೆನ್ನೈನ ಪೆರಿಯಾರ್ ಭವನದಲ್ಲಿ ಎಂಟು ತಾಸು ಗೃಹ ಬಂಧನವಾಗಿತ್ತು.
ನಂತರ ಕಾಡತೊಡಗಿದ್ದು, ಯಾಕೆ ಲಂಕೇಶ್ ಇಂತಹ ಚಳುವಳಿಯ ಬಗ್ಗೆ ಅಷ್ಟಾಗಿ ಪ್ರಚಾರ ಕೊಡುತ್ತಿಲ್ಲ ಎಂಬ ವಿಷಯ… ಅದು ಆ ಕಾಲಘಟ್ಟದ ವೈಪರೀತ್ಯವೋ? ಅಥವಾ ಲಂಕೇಶ್‌ರಿಗೆ ಆಪ್ತವಾಗಿದ್ದವರು ಪಿವಿಕೆ ಮತ್ತು ಕೆವಿಆರ್ ಸದಸ್ಯರನ್ನು ಅವರಿಂದ ದೂರ ಇಡಿಸಿದರೋ? ಈ ಪ್ರಶ್ನೆ ಈಗಲೂ ಇದೆ.
****
ಆಗ ನನಗೆ ಚಳುವಳಿಗಳ ಬಗ್ಗೆ ಅಷ್ಟಾದ ತಿಳುವಳಿಕೆ ಇರಲಿಲ್ಲ. ಧಾರವಾಡ ಗ್ರಾಮೀಣದಲ್ಲಿ ನಂಜುಂಡಸ್ವಾಮಿಯವರ ಗೆಲುವಿಗೆ ಕೆಲಸ ಮಾಡಿದೆವು. ಅದೊಂದು ಅಭೂತಪೂರ್ವ ಅನುಭವ. ಹಳ್ಳಿಹಳ್ಳಿಗಳಲ್ಲಿ ರೈತರ ರಣೋತ್ಸಾಹವಿತ್ತು. ಈಗಿನ ಐತಿಹಾಸಿಕ ರೈತ ಪ್ರತಿಭಟನೆ ವೇಳೆ ಅದೆಲ್ಲ ನೆನಪಾಗುತ್ತಿದೆ.
ಮತ್ತೆ ಮೂಲ ವಿಷಯಕ್ಕೆ ಬರೋಣ, ತುಮಕೂರಿನಲ್ಲಿ ಎರಡನೇ ಪಿಯುಸಿ ವಿಜ್ಞಾನ ಓದುತ್ತಿದ್ದ ಹುಡುಗನೊಬ್ಬ (ಹೆಸರು ಯೋಗೀಶ್ ಅನಿಸುತ್ತೆ) ಲಂಕೇಶರಿಗೆ ಪತ್ರ ಬರೆದಿದ್ದ: ‘ದೆಹಲಿಯಲ್ಲಿ ಅಧಿಕಾರ ಸ್ವೀಕಾರದ ಸಂಭ್ರಮ ನಡೆಯುತ್ತಿರುವಾಗ ಗಾಂಧಿ ಕಲಕತ್ತಾದ ಬೀದಿಗಳಲ್ಲಿ ಅಡ್ಡಾಡುತ್ತಿದ್ದರು’ ಎಂಬ ವಾಕ್ಯ ಅರ್ಥವಾಗಲಿಲ್ಲ ಸರ್ ಎಂದು ಕೇಳಿದ್ದ. ಆಗ ಎರಡನೇ ಪಿಯು ಕನ್ನಡದಲ್ಲಿ ಲಂಕೇಶರ ‘ಮೋಕ್ಷ ಹುಡುಕುತ್ತ ಪ್ರೀತಿಯ ಬಂಧನದಲ್ಲಿ’ ಎಂಬ ಟೀಕೆ-ಟಿಪ್ಪಣೆ ಪಠ್ಯವಾಗಿತ್ತು. ಆ ತುಮಕೂರಿನ ಹುಡುಗನ ಪ್ರಶ್ನೆಗೆ ಮರುವಾರ ಉತ್ತರಿಸಿದ ಲಂಕೇಶ್, ಅಂದಿನ ( ಸ್ವಾತಂತ್ರ್ಯ ಸಿಕ್ಕ ಸಂದರ್ಭ) ಸಾಮಾಜಿಕ ಸಂದರ್ಭ, ಕೋಮು ಗಲಭೆ ಇತ್ಯಾದಿ ಸಂಗತಿಗಳನ್ನು ಸರಳವಾಗಿ ಹೇಳಿದ್ದರು.
ಬರೆದರೆ ದೀರ್ಘವಾಗುತ್ತದೆ.. ಪ್ರತಿ ಸಲ ದೇಶದಲ್ಲಿ, ರಾಜ್ಯದಲ್ಲಿ ಬಿಕ್ಕಟ್ಟು ಸಂಭವಿಸಿದಾಗೆಲ್ಲ ಲಂಕೇಶ್ ಇದ್ದರೆ ಏನು ಹೇಳುತ್ತಿದ್ದರು ಎಂಬ ಪ್ರಶ್ನೆ ಕಾಡಿತ್ತು. ಅದಕ್ಕೆ ಚಳುವಳಿಯ ಮೂಲಕ ಗೌರಿ ನಮಗೆ ಉತ್ತರ ಕೊಟ್ಟರು.
ಈಗ ಗೌರಿಯೂ ಇಲ್ಲ, ಲಂಕೇಶರೂ ಇಲ್ಲ ಎಂದು ಕೈಚೆಲ್ಲುವಂತಿಲ್ಲ.
ಈಗ ನಡೆಯುತ್ತಿರವ ಐತಿಹಾಸಿಕ ಚಳುವಳಿಗೆ ಬೆಂಬಲಿಸುವ ಮೂಲಕ ನಾವೆಲ್ಲ ನಂಜುಂಡಸ್ವಾಮಿ, ಲಂಕೇಶ್, ತೇಜಸ್ವಿ…. ಅದರಾಚೆ ಕುವೆಂಪು, ಬಸವಣ್ಣ ಮತ್ತು ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸೋಣ.
ಇದನ್ನೂ ಓದಿ: ಪಿ. ಲಂಕೇಶ್ ಜನ್ಮದಿನ: ಅವರ ಬರೆಹಗಳ ಆಯ್ದ ಭಾಗಗಳು


