ಸರ್ಕಾರದೊಂದಿಗೆ ಮಾತುಕತೆಗಾಗಿ 9 ಸದಸ್ಯರ ಸಮಿತಿಯನ್ನು ರಚಿಸಲಾಗುತ್ತಿದೆ ಎಂಬ ಹೇಳಿಕೆಗಳು ಸುಳ್ಳು ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಸ್ಪಷ್ಟಪಡಿಸಿದೆ. ಸರ್ಕಾರದೊಂದಿಗೆ ಮಾತನಾಡಲು ಅಂತಹ ಯಾವುದೇ ಸಮಿತಿಯನ್ನು ರಚಿಸಲಾಗಿಲ್ಲ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಒಕ್ಕೂಟ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಿರುವ ರೈತರು, ರೈತ ವಿರೋಧಿ ಬಿಜೆಪಿಗೆ ಮತ ಚಲಾಯಿಸದಂತೆ ಅಲ್ಲಿನ ಮತದಾರರನ್ನು ಮನವಿ ಮಾಡಲು ಎಸ್‌ಕೆಎಂ ನಾಯಕರ ತಂಡ ಪಶ್ಚಿಮ ಬಂಗಾಳ ಮತ್ತು ಅಸ್ಸಾಂಗೆ ಹೋಗಲಿದೆ ಎಂದು ತಿಳಿಸಿದ್ದಾರೆ. ಈ ಕಾರ್ಯಕ್ರಮವು ಮಾರ್ಚ್ 12 ರಂದು ಪಶ್ಚಿಮ ಬಂಗಾಳದಿಂದ ಪ್ರಾರಂಭವಾಗಿ ಮೂರು ದಿನಗಳು ಈ ರಾಜ್ಯಗಳಲ್ಲಿ ನಡೆಯಲಿದೆ ಎಂದು ಎಸ್‌ಕೆಎಂ ಪತ್ರಿಕಾ ಪ್ರಕಟಣೆ ತಿಳಿಸಿದೆ.
ರೈತ ಆಂದೋಲನದಲ್ಲಿ ಈವರೆಗೆ ಪ್ರಾಣ ತ್ಯಾಗ ಮಾಡಿರುವ ರೈತರ ಸಂಖ್ಯೆ 280 ದಾಟಿದೆ ಎಂದು ಮಾಹಿತಿ ನೀಡಿದ್ದಾರೆ. ಇಂದು (ಬುಧವಾರ) ಹರಿಯಾಣದ ಜಿಂದ್ ಜಿಲ್ಲೆಯ 50 ವರ್ಷದ ರೈತ ರಾಧೇಶ್ಯಾಮ್ ಟಿಕ್ರಿ ಗಡಿಯಲ್ಲಿ ಹುತಾತ್ಮರಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಾಮ ಮಂದಿರ ನಿರ್ಮಾಣದ ನಂತರ ವೃದ್ದರನ್ನು ದರ್ಶನಕ್ಕಾಗಿ ಕಳುಹಿಸುತ್ತೇವೆ: ಕೇಜ್ರಿವಾಲ್
ಕಿಸಾನ್ ಮಜ್ದೂರ್ ಜಾಗೃತಿ ಯಾತ್ರೆಯು ಉತ್ತರ ಪ್ರದೇಶದ ಬಿಜ್ನೋರ್ ದಾಟಿ, ನಿನ್ನೆ ಉತ್ತರಾಖಂಡದ ಜಸ್ಪುರಕ್ಕೆ ಪ್ರವೇಶಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಯಾತ್ರೆ 300 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ ಮತ್ತು ಇದುವರೆಗೆ 200 ಕ್ಕೂ ಹೆಚ್ಚು ಹಳ್ಳಿಗಳು, ಪಟ್ಟಣಗಳನ್ನು ತಲುಪಿದೆ. ಇಂದು ರಾತ್ರಿ ದಿನೇಶಪುರವನ್ನು ತಲುಪುವ ನಿರೀಕ್ಷೆಯಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಇನ್ನು, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ದೆಹಲಿ ವಿಶ್ವವಿದ್ಯಾಲಯಕ್ಕೆ ಹೋಗಿದ್ದ ಹೋರಾಟಗಾರ್ತಿ ನೋದೀಪ್ ಕೌರ್ ಮೇಲೆ ಎಬಿವಿಪಿ ನಡೆಸಿದ ದಾಳಿಯನ್ನು ಎಸ್‌ಕೆಎಂ ಖಂಡಿಸಿದೆ.
ಇತ್ತ, “ರೈತರು ಮೋದಿ ಸರ್ಕಾರದ ಉಳಿದ ಮೂರೂವರೆ ವರ್ಷ ಅವಧಿಯುದ್ದಕ್ಕೂ ತಮ್ಮ ಹೋರಾಟ ಮುಂದುವರಿಸಲು ಸಿದ್ಧವಿದ್ದಾರೆ. ಕೇಂದ್ರ ಸರ್ಕಾರ ಯಾವುದೇ ರೀತಿಯಲ್ಲಿ ಪ್ರಯತ್ನಿಸಿದರೂ ಈ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ” ಎಂದು ರೈತ ಮುಖಂಡ ನರೇಂದ್ರ ಟಿಕಾಯತ್ ಹೇಳಿದ್ದಾರೆ.
ಇದನ್ನೂ ಓದಿ: ಮೋದಿ ಸರ್ಕಾರದ ಅವಧಿ ಮುಗಿಯುವವರೆಗೂ ರೈತ ಹೋರಾಟ ಮುಂದುವರಿಯಲಿದೆ: ನರೇಂದ್ರ ಟಿಕಾಯತ್


