ಅತ್ಯಾಚಾರದಿಂದ ಗರ್ಭಿಣಿಯಾದ ಸಂತ್ರಸ್ತೆಗೆ ತನ್ನ ಕಾನೂನು ಹಕ್ಕುಗಳ ಬಗ್ಗೆ ತಿಳಿಸಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಜೊತೆಗೆ ಅನಗತ್ಯ ಗರ್ಭಧಾರಣೆಯ ಪ್ರಕರಣಗಳನ್ನು ನಿರ್ಧರಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವೈದ್ಯಕೀಯ ಮಂಡಳಿಗಳನ್ನು ಸ್ಥಾಪಿಸುವ ಮನವಿಯ ಮೇಲೆ ಕೇಂದ್ರಕ್ಕೆ ನೋಟಿಸ್ ನೀಡಿದೆ.
ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ ಕಾಯ್ದೆ-1971 ರ ಸೆಕ್ಷನ್ 3 ರ ಪ್ರಕಾರ 20 ವಾರಗಳ ನಂತರ ಗರ್ಭಧಾರಣೆಯನ್ನು ತೆಗೆದು ಹಾಕುವುದನ್ನು ನಿಷೇಧಿಸುತ್ತದೆ.
“ಒಬ್ಬ ಮಹಿಳೆ ಅತ್ಯಾಚಾರಕ್ಕೊಳಗಾಗಿದ್ದರೆ ಮತ್ತು ಗರ್ಭಿಣಿಯಾಗಿದ್ದರೆ, ಅವರಿಗೆ ಕಾನೂನು ಹಕ್ಕುಗಳ ಬಗ್ಗೆ ತಿಳಿಸಬೇಕು” ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ನ್ಯಾಯಪೀಠ ಹೇಳಿದೆ. ಈ ವಿಚಾರಗಳ ಕುರಿತು ನ್ಯಾಯಾಲಯವು ನಾಲ್ಕು ವಾರಗಳಲ್ಲಿ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೋರಿದೆ.
ಇದನ್ನೂ ಓದಿ: ಸರ್ಕಾರದ ಭೂಮಿ ಉಳಿಸಿಕೊಳ್ಳಲಾಗದವರು ಅಧಿಕಾರದಲ್ಲಿದ್ದೇನು ಪ್ರಯೋಜನ?-ಎಚ್.ಡಿ.ಕುಮಾರಸ್ವಾಮಿ
ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನೂ ಒಳಗೊಂಡ ನ್ಯಾಯಪೀಠ, ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವೈದ್ಯಕೀಯ ಮಂಡಳಿಗಳನ್ನು ಸ್ಥಾಪಿಸುವ ವಿಷಯ ಕುರಿತು ವಿಚಾರಣೆ ನಡೆಸಿತು. 14 ವರ್ಷದ ಅತ್ಯಾಚಾರ ಸಂತ್ರಸ್ತೆ ಪರವಾಗಿ ಹಾಜರಾದ ವಕೀಲ ವಿ.ಕೆ.ಬಿಜು, ಕೆಲವು ವೈದ್ಯಕೀಯ ಅಭಿಪ್ರಾಯದ ಕಾರಣದಿಂದಾಗಿ 26 ವಾರಗಳ ಗರ್ಭಧಾರಣೆಯನ್ನು ತೆಗೆಯದಿರಲು ನಿರ್ಧರಿಸಿದರು.
ಆದರೆ, ಪ್ರತಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ “20 ವಾರಗಳನ್ನು ದಾಟಿದ ಅನಗತ್ಯ ಗರ್ಭಧಾರಣೆಯ ಪ್ರಕರಣಗಳನ್ನು ನಿರ್ಧರಿಸಲು” ವೈದ್ಯಕೀಯ ಮಂಡಳಿಗಳ ನೇಮಕಕ್ಕೆ ಮಾರ್ಗಸೂಚಿಯನ್ನು ರೂಪಿಸಲು ಅರ್ಜಿಯಲ್ಲಿ ಕೋರಲಾಗಿದೆ.
ವಿಚಾರಣೆಯ ಸಮಯದಲ್ಲಿ, ವಕೀಲ ಬಿಜು ಅವರು ’ಈಗ ಗರ್ಭಪಾತಕ್ಕೆ ಅನುಮತಿ ಪಡೆಯುತ್ತಿಲ್ಲ’ ಎಂದು ಹೇಳಿದರು, ಆದರೆ ರಾಜ್ಯಗಳಲ್ಲಿ ವೈದ್ಯಕೀಯ ಮಂಡಳಿಗಳನ್ನು ಸ್ಥಾಪಿಸಲು ಕೋರಿದ್ದಾರೆ. ಜೊತೆಗೆ, “ನಾನು ಈ ಅರ್ಜಿಯನ್ನು ಬರೆಯುವಾಗ, ಸಂತ್ರಸ್ತೆಯ ಪೋಷಕರ ನೋವನ್ನು ನೋಡಿದೆ” ಎಂದು ನ್ಯಾಯಾಲಯದಲ್ಲಿ ಹೇಳಿದ್ದಾರೆ.
ಇಂತಹ ಪ್ರಕರಣಗಳನ್ನು ಪರಿಶೀಲಿಸಲು ಸ್ಥಳೀಯ ಮಂಡಳಿ ಇದ್ದರೆ ಅದು ಸಹಾಯಕವಾಗಲಿದೆ ಎಂದು ನ್ಯಾಯಪೀಠವು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭತಿಗೆ ತಿಳಿಸಿದೆ.
ಇದನ್ನೂ ಓದಿ: ಎಡಿಆರ್ ವರದಿ – 5 ವರ್ಷಗಳಲ್ಲಿ ಪಕ್ಷಾಂತರಗೊಂಡ 44.9% ಶಾಸಕರು ಸೇರಿದ್ದು ಬಿಜೆಪಿಗೆ!


