ಹರಿದ ಜೀನ್ಸ್ ಧರಿಸುವುದು ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಲು ದಾರಿ ಮಾಡಿಕೊಡುತ್ತದೆ. ಇಂದಿನ ಪೋಷಕರು ಮಕ್ಕಳಿಗಾಗಿ ರೂಪಿಸಿರುವ “ಕೆಟ್ಟ ಉದಾಹರಣೆಯ” ಪರಿಣಾಮವಾಗಿದೆ. ಇದರಿಂದ ಮಾದಕ ವಸ್ತು ಸೇವನೆಗೂ ಕಾರಣವಾಗುತ್ತದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಗಳವಾರ ಡೆಹರಾಡೂನ್‌ನಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ರಾಜ್ಯ ಆಯೋಗ ಆಯೋಜಿಸಿದ್ದ ಎರಡು ದಿನಗಳ ಕಾರ್ಯಾಗಾರ ಮಾದಕ ದ್ರವ್ಯ ಸೇವನೆ ಕುರಿತ ಕಾರ್ಯಾಗಾರದಲ್ಲಿ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಮಾತನಾಡಿದ್ದಾರೆ.
“ಬರೀ ಮೊಣಕಾಲುಗಳನ್ನು ತೋರಿಸುವುದು, ಹರಿದ ಡೆನಿಮ್ ಬಟ್ಟೆಗಳನ್ನು ಧರಿಸಿ ಶ್ರೀಮಂತ ಮಕ್ಕಳಂತೆ ಕಾಣುವುದು, ಇಂತಹ ವಿಷಯಗಳನ್ನು ಇಂದು ಮನೆಗಳಲ್ಲಿ ಕಲಿಸಲಾಗುತ್ತಿದೆ. ಇವುಗಳೆಲ್ಲ ಮನೆಯಿಂದಲೇ ಆರಂಭವಾಗುತ್ತದೆ. ಇರದಲ್ಲಿ ಶಾಲೆ ಮತ್ತು ಶಿಕ್ಷಕರ ತಪ್ಪಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: ‘ಭವಿಷ್ಯದಲ್ಲಿ ಮೋದಿ ಕೂಡಾ ರಾಮನ ಅವತಾರ’- ಉತ್ತಾರಾಖಂಡ ಸಿಎಂ
’ನಾನು ನನ್ನ ಮಗನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೇನೆ, ನಾನು ನನ್ನ ಮೊಣಕಾಲುಗಳನ್ನು ತೋರಿಸುತ್ತಿದ್ದೇನೆಯೇ..? ಯಾಕೆ ಹರಿದ ಜೀನ್ಸ್ ಧರಿಸಿದ್ದೇನೆ? ಎಂಬುದನ್ನು ಪೋಷಕರು ಯೋಚಿಸಬೇಕು. ತಮ್ಮ ಮೊಣಕಾಲುಗಳನ್ನು ತೋರಿಸಿಕೊಂಡು ಹೋಗುವುದರಲ್ಲಿ ಹುಡುಗಿಯರು ಕಡಿಮೆ ಇಲ್ಲ ಎಂದಿದ್ದಾರೆ.
’ಇವೆಲ್ಲವೂ, ಪಾಶ್ಚಿಮಾತ್ಯೀಕರಣದ ಹುಚ್ಚು ಅನುಕರಣೆಯಿಂದ ಬಂದಿದೆ. ಪಾಶ್ಚಾತ್ಯ ಜಗತ್ತು ಯೋಗ ಮಾಡುತ್ತಾ, ದೇಹವನ್ನು ಮುಚ್ಚಿಕೊಳ್ಳುತ್ತಾ ನಮ್ಮನ್ನು ಹಿಂಬಾಲಿಸುತ್ತಿರುವಾಗ ನಾವು ನಗ್ನತೆಯತ್ತ ಓಡುತ್ತಿದ್ದೇವೆ’ ಎಂದು ನೂತನ ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಹರಿದ ಜೀನ್ಸ್ ಧರಿಸಿ ಎನ್‌ಜಿಒ ನಡೆಸುತ್ತಿದ್ದ ಮಹಿಳೆಯನ್ನು ಭೇಟಿಯಾಗಿ ತಾನು ಆಘಾತಕ್ಕೊಳಗಾಗಿದ್ದೇನೆ ಎಂದು ಸಿಎಂ ಹೇಳಿದ್ದಾರೆ. “ಈ ರೀತಿಯ ಮಹಿಳೆಯರು ಸಮಾಜದಲ್ಲಿ ಜನರನ್ನು ಭೇಟಿ ಮಾಡಲು, ಅವರ ಸಮಸ್ಯೆಗಳನ್ನು ಪರಿಹರಿಸಲು ಹೊರಟರೆ, ನಾವು ಸಮಾಜಕ್ಕೆ, ನಮ್ಮ ಮಕ್ಕಳಿಗೆ ಯಾವ ರೀತಿಯ ಸಂದೇಶವನ್ನು ನೀಡಲು ಸಾಧ್ಯ? ಇದು ಮನೆಯಲ್ಲಿಯೇ ಪ್ರಾರಂಭವಾಗುತ್ತದೆ. ನಾವು ಏನು ಮಾಡುತ್ತೇವೆಯೋ ಅದನ್ನು ನಮ್ಮ ಮಕ್ಕಳೂ ಅನುಸರಿಸುತ್ತಾರೆ” ಎಂದು ಹೆಣ್ಣು ಮಕ್ಕಳ ಬಟ್ಟೆ ಆಯ್ಕೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉತ್ತರಾಖಂಡ ಮುಖ್ಯಮಂತ್ರಿ ಹೇಳಿಕೆಗೆ ಹಲವು ಮಂದಿ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ನಾಯಕ ಸಂಜಯ್ ಝಾ ಕೂಡ ಪ್ರತಿಕ್ರಿಯೆ ನೀಡಿದ್ದು, ತಿರಥ್ ಸಿಂಗ್ ರಾವತ್ ಮಾತನ್ನು ನೀವು ಅನುಮೋದಿಸುತ್ತಿರಾ ಎಂದು ಪ್ರಶ್ನಿಸಿದ್ದಾರೆ.
Wearing “#rippedjeans” destroys our culture, it seems. It leads to substance abuse. And a societal breakdown. Women should strictly avoid this sacrilege against our pristine customs, says Uttarakhand CM.
Dear BJP, this is your CM Tirath Singh Rawat: Do you endorse this? pic.twitter.com/9pGQdkxZKp
— Sanjay Jha (@JhaSanjay) March 17, 2021
ಹರಿದ ಜೀನ್ಸ್ ಧರಿಸುವುದರಿಂದ ನಮ್ಮ ಸಂಸ್ಕೃತಿಯನ್ನು ಹಾಳುಮಾಡುತ್ತದೆ ಎಂದು ತೋರುತ್ತದೆ. ಇದು ಮಾದಕ ವಸ್ತು ಸೇವನೆಗೆ ಕಾರಣವಾಗುತ್ತದೆ ಎಂಬ ಉತ್ತರಾಖಂಡ ಸಿಎಂ ಮಾತುಗಳನ್ನು ಉಲ್ಲೇಖಿಸಿ, ಹರಿದ ಜೀನ್ಸ್ ಧರಿಸಿ ಪುಸ್ತಕ ಹಿಡಿದುಕೊಂಡಿರುವ ವ್ಯಕ್ತಿಯ ಚಿತ್ರವನ್ನು ಪೊಸ್ಟ್ ಮಾಡಿದ್ದಾರೆ.
ತಿರಥ್ ಸಿಂಗ್ ರಾವತ್, ಮಾರ್ಚ್ 11 ರಂದು ಉತ್ತರಾಖಂಡದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಾರ್ಚ್ 9 ರಂದು ಅಲ್ಲಿನ ಮುಖ್ಯಮಂತ್ರಿಯಾಗಿದ್ದ ತ್ರಿವೇಂದ್ರ ಸಿಂಗ್ ರಾವತ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಇದನ್ನೂ ಓದಿ: ಪಕ್ಷಾಂತರಿಗಳಿಗೆ ಟಿಕೆಟ್: ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ; ರಾಜ್ಯದಾದ್ಯಂತ ಭಾರಿ ಪ್ರತಿಭಟನೆ


