ಪಕ್ಷಾಂತರಿಗಳಿಗೆ ಟಿಕೆಟ್ ನೀಡಿದ ಬಂಗಾಳ BJP: ಭುಗಿಲೆದ್ದ ಅಸಮಧಾನ; ರಾಜ್ಯದಾದ್ಯಂತ ಭಾರಿ ಪ್ರತಿಭಟನೆ

ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯಲು ಬಿಜೆಪಿಯು ಭಾರಿ ಕಸರತ್ತು ನಡೆಸುತ್ತಿದ್ದು ಬೇರೆ ಪಕ್ಷಗಳಿಂದ ಮತ್ತು ಜನಪ್ರಿಯ ವ್ಯಕ್ತಿಗಳನ್ನು ಪಕ್ಷಕ್ಕೆ ಸೇರಿಸುತ್ತಿದೆ. ಪಕ್ಷದ ಈ ಕ್ರಮವು ಹಳೆಯ ಬಿಜೆಪಿ ಮತ್ತು ಹೊಸದಾಗಿ ಬಿಜೆಪಿ ಸೇರಿದವರ ನಡುವೆ ಬಿರುಕು ಮೂಡಿಸಿದೆ. ಪಕ್ಷವು ಭಾನುವಾರ ಬಿಡುಗಡೆ ಮಾಡಿರುವ ಚುನಾವಣಾ ಅಭ್ಯರ್ಥಿಗಳ ಎರಡನೆ ಪಟ್ಟಿಗೆ ಸಂಬಂಧಿಸಿದಂತೆ, ಬಿಜೆಪಿಯ ಕಚೇರಿಯ ಹೊರಗೆ ಮತ್ತು ಬಂಗಾಳದಾದ್ಯಂತ ಹಲವೆರೆಡೆ ಪ್ರತಿಭಟನೆಗಳು ಸೋಮವಾರ ನಡೆದವು.

ಪಕ್ಷದ ಕಾರ್ಯಕರ್ತರು ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಮತ್ತು ಪಕ್ಷದ ಹಿರಿಯ ಮುಖಂಡ ಅರ್ಜುನ್ ಸಿಂಗ್ ಅವರು ಬಿಜೆಪಿ ಕಚೇರಿ ಪ್ರವೇಶಿಸುವುದಕ್ಕೆ ತಡೆಯೊಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರ ಒಂದು ಗುಂಪು ಮುಕುಲ್ ರಾಯ್ ಅವರ ಕಾರಿನ ಬಾನೆಟ್ ಮೇಲೆ ಬಡಿದು ಕಚೇರಿಯನ್ನು ಚೆಲ್ಲಾಪಿಲ್ಲಿ ಮಾಡುವುದಾಗಿ ಬೆದರಿಕೆ ಹಾಕಿತು. ಪಕ್ಷದ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಇದನ್ನೂ ಓದಿ: ಕೇರಳ: ನಾನು ಬಿಜೆಪಿಯ ಕಾರ್ಯಕರ್ತನೂ ಅಲ್ಲ & ಸ್ಪರ್ಧಿಸುವುದಿಲ್ಲ- ಬಿಜೆಪಿ ಟಿಕೆಟ್ ಘೋಷಿಸಲಾಗಿದ್ದ ವ್ಯಕ್ತಿಯಿಂದ ಹೇಳಿಕೆ

“ಪಂಚಲದಲ್ಲಿ ಟಿಎಂಸಿಯಿಂದ ಬಂದಿರುವ ಮೋಹಿತ್‌ಲಾಲ್‌ ಘಾಟಿ ಅವರ ಉಮೇದುವಾರಿಕೆಯನ್ನು ತಕ್ಷಣ ಹಿಂತೆಗೆದುಕೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ. ಅವರನ್ನು ಅಭ್ಯರ್ಥಿಯಾಗಿ ಸ್ವೀಕರಿಸಲು ನಮಗೆ ಸಾಧ್ಯವಿಲ್ಲ” ಎಂದು ಪಕ್ಷದ ಕಚೇರಿಯ ಹೊರಗೆ ಪ್ರತಿಭಟನಾಗಾರರೊಬ್ಬರು ತಿಳಿಸಿದ್ದಾರೆ.

ಹೂಗ್ಲಿ ಜಿಲ್ಲೆಯ ಸಿಂಗೂರ್ ವಿಧಾನಸಭಾ ಕ್ಷೇತ್ರದಲ್ಲಿ, ಬಿಜೆಪಿ ಕಾರ್ಯಕರ್ತರು ತಮ್ಮ ಕಚೇರಿಯಲ್ಲಿದ್ದ ಪಕ್ಷದ ಪದಾದಿಕಾರಿಗಳನ್ನು ಕೂಡಿಹಾಕಿ, ಟಿಎಂಸಿಯಿಂದ ಬಂದ ಶಾಸಕ ರವೀಂದ್ರನಾಥ್ ಭಟ್ಟಾಚಾರ್ಯ ಅವರಿಗೆ ಟಿಕೆಟ್ ನೀಡಿರುವುದನ್ನು ಪ್ರತಿಭಟಿಸಿದರು. ಟಿಎಂಸಿ ಪಕ್ಷವು ಭಟ್ಟಾಚಾರ್ಯ ಅವರಿಗೆ ಟಿಕೆಟ್ ನಿರಾಕರಿಸಿದ ನಂತರ ಬಿಜೆಪಿಗೆ ಪಕ್ಷಾಂತರ ಗೊಂಡಿದ್ದರು.

ದಕ್ಷಿಣ 24 ಪರಗಣಗಳ ರೈಡಿಘಿ ವಿಧಾನಸಭಾ ಕ್ಷೇತ್ರದಲ್ಲಿ ನೂರಾರು ಬಿಜೆಪಿ ಬೆಂಬಲಿಗರು ಟಿಎಂಸಿಯಿಂದ ಪಕ್ಷಾಂತರಗೊಂಡ ಸಂತನು ಬಾಪುಲಿ ಅವರಿಗೆ ಟಿಕೆಟ್‌ ನೀಡಿರುವುದನ್ನು ವಿರೋಧಿಸಿ ಇಡೀ ದಿನ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು, “ಬಾಪುಲಿ ನಮ್ಮ ಮೇಲೆ ಈ ಹಿಂದೆ ಹಲ್ಲೆ ನಡೆಸಿದ್ದು, ಬಿಜೆಪಿಯನ್ನು ಹತ್ತಿಕ್ಕಲು ಪ್ರಯತ್ನಿಸಿದ್ದರು” ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಮೈತ್ರಿ ತುಂಬಾ ಕೆಟ್ಟ ಮತ್ತು ಕಹಿ ಅನುಭವ ನೀಡಿದೆ- ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ

ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಪಶ್ಚಿಮ ಬಂಗಾಳದವರಾದ ಕೇಂದ್ರ ಸಚಿವರಾದ ಬಾಬುಲ್ ಸುಪ್ರಿಯೋ ಮತ್ತು ಡೆಬಸ್ರೀ ಚೌಧುರಿ ಏಪ್ರಿಲ್ 6 ಮತ್ತು 10 ರಂದು ನಡೆಯುವ ಮೂರನೇ ಮತ್ತು ನಾಲ್ಕನೇ ಹಂತದ ಚುನಾವಣೆಗೆ 63 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದ್ದಾರೆ.

ಈ ಪ್ರಕಟಣೆಯ ನಂತರ ರಾಜ್ಯದ ವಿವಿಧ ಭಾಗಗಳಲ್ಲಿ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿದ್ದು, ಹಲವಾರು ನಾಯಕರು ಹೊಸಬರ ಉಮೇದುವಾರಿಕೆಯ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉತ್ತರ ಬಂಗಾಳದಲ್ಲಿ, ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅಲಿಪುರ್ದಾರ್‌ನ ಅಶೋಕ್ ಲಹಿರಿ ಮತ್ತು ಕಲ್ಚಿನಿಯ ಗೂರ್ಖಾ ಜನಮುಕ್ತಿ ಮೋರ್ಚಾದಿಂದ ಬಿಜೆಪಿಗೆ ಬಂದಿರುವ ಬಿಷಾಲ್ ಲಾಮಾ ಅವರಿಗೆ ಟಿಕೆಟ್ ಘೋಷಿಸಿರುವುದನ್ನು ವಿರೋಧಿಸಿ ಕಾರ್ಯಕರ್ತರು ಬೀದಿಗಿಳಿದಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ GST ಅಡಿಯಲ್ಲಿ ತರುವ ಪ್ರಸ್ತಾಪ ಇಲ್ಲ: ಕೇಂದ್ರ ಸರ್ಕಾರ

“ಈ ಅಶೋಕ್ ಲಾಹಿರಿ ಯಾರು ಮತ್ತು ಅವರಿಗೆ ಯಾಕೆ ಟಿಕೆಟ್ ನೀಡಲಾಗಿದೆ ಎಂದು ನಮಗೆ ತಿಳಿದಿಲ್ಲ. ಅಲಿಪುರ್ದಾರ್‌ನ ಹಳೆಯ ಬಿಜೆಪಿಗರನ್ನು ಕಡೆಗಣಿಸಲಾಗುತ್ತಿದೆ. ಬಿಶಾಲ್ ಲಾಮಾ ಕೇವಲ ಎರಡು ದಿನಗಳ ಹಿಂದೆ ಪಕ್ಷಕ್ಕೆ ಸೇರಿಕೊಂಡರು, ಅವರಿಗೆ ಟಿಕೆಟ್ ನೀಡಲಾಗಿದೆ. ಸ್ಥಳೀಯ ಬಿಜೆಪಿ ಕಾರ್ಯಕರ್ತರು ಇದನ್ನು ಎಂದಿಗೂ ಸ್ವೀಕರಿಸುವುದಿಲ್ಲ” ಎಂದು ಹೆಸರು ಹೇಳಲು ಇಚ್ಛಿಸದ ಕಾರ್ಯಕರ್ತನ ಹೇಳಿಕೆಯನ್ನು ಉಲ್ಲೇಖಿಸಿ TNIE ವರದಿ ಮಾಡಿದೆ.

ಈ ಪ್ರತಿಭಟನೆಗಳನ್ನು ಉಲ್ಲೇಖಿಸಿ ಬಿಜೆಪಿ ವಕ್ತಾರ ಶಮಿಕ್ ಭಟ್ಟಾಚಾರ್ಯ “ಇವು ಅಡ್ಡ ದಾರಿಯ ಘಟನೆಗಳು” ಎಂದು ಹೇಳಿದ್ದಾರೆ.

“ಹೆಚ್ಚು ಹೆಚ್ಚು ಜನರು ಪಕ್ಷಕ್ಕೆ ಸೇರುತ್ತಿರುವುದರಿಂದ ಬಿಜೆಪಿ ಬೆಳೆಯುತ್ತಿದೆ. ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದೆ. ಕೆಲವು ಸಮಸ್ಯೆಗಳಿವೆ, ಆದರೆ ಅದನ್ನು ಶೀಘ್ರದಲ್ಲಿಯೇ ಪರಿಹರಿಸಲಾಗುವುದು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕಾನ್ಶಿರಾಮ್ ಜಯಂತಿ: JNU ಬಾಪ್ಸಾ ಅಧ್ಯಕ್ಷನ ಮೇಲೆ ABVP ಕಾರ್ಯಕರ್ತರಿಂದ ಹಲ್ಲೆ ಆರೋಪ

LEAVE A REPLY

Please enter your comment!
Please enter your name here