ಮುಖೇಶ್ ಅಂಬಾನಿ ಮನೆ ಮುಂದೆ ಜಿಲೆಟಿನ್ ಕಡ್ಡಿಗಳಿದ್ದ ವಾಹನ ಪತ್ತೆ ಪ್ರಕರಣದಲ್ಲಿ ವಜಾಗೊಂಡಿರುವ ಮುಂಬೈ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್, ಗೃಹ ಸಚಿವ ಅನಿಲ್ ದೇಶ್‌ಮುಖ್ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದು, ಇದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
ಭ್ರಷ್ಟಾಚಾರದ ಆರೋಪ ಗಂಭೀರವಾಗಿರುವುದರಿಂದ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಸಂಪುಟದಿಂದ ಹೊರ ಹೋಗಬೇಕಾಗುತ್ತದೆ ಎಂದು ರಾಜ್ಯದ ಆಡಳಿತ ಒಕ್ಕೂಟದ ಉನ್ನತ ಮುಖಂಡರು ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೂಡ ಇದೇ ಅಭಿಪ್ರಾಯದಲ್ಲಿದ್ದು, ಇಂದು (ಭಾನುವಾರ) ಸಂಜೆ ಶಿವಸೇನೆ ಮುಖಂಡರು ಮತ್ತು ಮಿತ್ರಪಕ್ಷ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ನಡುವೆ ಸಭೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮುಖೇಶ್ ಅಂಬಾನಿ ಮನೆ ಬಳಿ ಸ್ಪೋಟಕವಿದ್ದ ವಾಹನ ಪ್ರಕರಣದ ಭದ್ರತಾ ತನಿಖೆಯಲ್ಲಿ ಲೋಪ ಎಸಗಿದ್ದಾರೆ ಎಂದು ಮುಂಬೈ ಪೊಲೀಸ್ ಆಯುಕ್ತ ಸ್ಥಾನದಿಂದ ವಜಾಗೊಳಿಸಲ್ಪಟ್ಟ ಪರಮ್ ಬೀರ್ ಸಿಂಗ್, ಗೃಹ ಸಚಿವರು “ತಿಂಗಳಿಗೆ 100 ಕೋಟಿ ರೂಪಾಯಿ ಲಂಚ ಸಂಗ್ರಹಿಸುವ ಗುರಿ ಹೊಂದಿದ್ದಾರೆ” ಎಂದು ಆರೋಪಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ತಿಂಗಳಿಗೆ 100 ಕೋಟಿ ಲಂಚ ಸಂಗ್ರಹಕ್ಕೆ ಗೃಹ ಸಚಿವರ ಸೂಚನೆ- ಪರಮ್ ಬೀರ್ ಸಿಂಗ್ ಆರೋಪ
ಗೃಹ ಸಚಿವರ ಮೇಲಿನ ಭ್ರಷ್ಟಾಚಾರ ಆರೋಪ ಈಗ ಮೈತ್ರಿಯಲ್ಲಿ ತಳಮಳಕ್ಕೆ ಕಾರಣವಾಗಿದ್ದು, ದೇಶಮುಖ್ ರಾಜೀನಾಮೆಗೆ ಒತ್ತಡ ಹೆಚ್ಚಿದೆ ಎನ್ನಲಾಗಿದೆ. ಎನ್‌ಸಿಪಿ ಪಕ್ಷದ ದೇಶ್‌ಮುಖ್ ರಾಜೀನಾಮೆಗೆ ಮೈತ್ರಿ ಪಕ್ಷ ಕಾಂಗ್ರೆಸ್ ಕೂಡ ಒತ್ತಾಯಿಸಿದೆ ಎನ್ನಲಾಗಿದ್ದು, ಇಂದು (ಭಾನುವಾರ) ಸಂಜೆ ದೇಶ್‌ಮುಖ್ ಭವಿಷ್ಯ ತಿಳಿಯಲಿದೆ.
ಆರೋಪಗಳನ್ನು ನಿರಾಕರಿಸಿರುವ ದೇಶ್‌ಮುಖ್, ಪರಮ್ ಬೀರ್ ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ಆದರೆ ಅವರನ್ನು ತೆಗೆದುಹಾಕುವಂತೆ ರಾಜ್ಯದ ಪ್ರತಿಪಕ್ಷ ಬಿಜೆಪಿ ಕರೆ ನೀಡಿದೆ.
ಪರಮ್ ಬೀರ್ ಸಿಂಗ್ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿ, ಮುಕೇಶ್ ಅಂಬಾನಿ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಸಚಿನ್ ವಾಜೆ ಸೇರಿದಂತೆ ಹಲವಾರು ಅಧಿಕಾರಿಗಳನ್ನು ಸುಲಿಗೆ ದಂಧೆ ನಡೆಸುವಂತೆ ಸಚಿವರು ಕೇಳಿದ್ದಾರೆ ಎಂದು ತಿಳಿಸಿದ್ದಾರೆ.
ಸಚಿವರು ಮುಂಬೈ ಪೊಲೀಸ್ ಅಧಿಕಾರಿಗಳಿಗೆ ಪ್ರತಿ ತಿಂಗಳು 100 ಕೋಟಿ ರೂಪಾಯಿ ಕಲೆಕ್ಷನ್ ಗುರಿಯನ್ನು ನಿಗದಿಪಡಿಸಿದ್ದರು. ರೆಸ್ಟೋರೆಂಟ್‌ಗಳು, ಪಬ್‌ಗಳು, ಬಾರ್‌ಗಳು ಮತ್ತು ಹುಕ್ಕಾ ಪಾರ್ಲರ್‌ಗಳಿಂದ ಹಣವನ್ನು ಸಂಗ್ರಹಿಸಲು ಸೂಚಿಸಿದ್ದರು. ಫೆಬ್ರವರಿಯಲ್ಲಿ ಈ ಬೇಡಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಗೃಹ ಸಚಿವರು ಹಲವಾರು ಸಂದರ್ಭಗಳಲ್ಲಿ ಪೊಲೀಸ್ ಅಧಿಕಾರಿಗಳಿಗೆ ಪ್ರಕರಣಗಳನ್ನು ಹೇಗೆ ನಿರ್ವಹಿಸಬೇಕು ಮತ್ತು ಆರೋಪಗಳನ್ನು ಹೇಗೆ ಸಲ್ಲಿಸಬೇಕು ಎಂದು ಸೂಚನೆ ನೀಡಿದ್ದರು, ಆಗಾಗ್ಗೆ ತಮ್ಮನ್ನು ಮತ್ತು ಇತರ ಹಿರಿಯರನ್ನು “ಬೈಪಾಸ್” ಮಾಡಲು ಪೊಲೀಸ್ ಅಧಿಕಾರಿಗಳನ್ನು ಅವರ ಮನೆಗೆ ಕರೆಸಿಕೊಳ್ಳುತ್ತ ಬಂದಿದ್ದರು ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ: ಕಾಯ್ದೆ ವಾಪಸಾತಿ ಮಾತನಾಡುತ್ತಿರುವ ಯುವಜನರು ಸರ್ಕಾರ ವಾಪಸಾತಿ ಮಾಡುತ್ತಾರೆ ಎಚ್ಚರ: ರಾಕೇಶ್ ಟಿಕಾಯತ್


