ತಿಂಗಳಿಗೆ 100 ಕೋಟಿ ಲಂಚ ಸಂಗ್ರಹಿಸಿ ಕೊಡಲು ಗೃಹ ಸಚಿವರು ಸೂಚಿಸಿದ್ದರು ಎಂಬ ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಆರೋಪದ ಹಿನ್ನೆಲೆ ಇಂದು ಮಹಾರಾಷ್ಟ್ರ ಸರ್ಕಾರದ ಮೈತ್ರಿಪಕ್ಷಗಳು ದೆಹಲಿಯಲ್ಲಿ ಸಭೆ ನಡೆಸಲಿವೆ. ಗೃಹ ಸಚಿವ ಅನಿಲ್ ದೇಶ್‌ಮುಖ್ ರಾಜೀನಾಮೆಗೆ ಪ್ರತಿಪಕ್ಷಗಳು ಒತ್ತಾಯಿಸಿವೆ ಹಾಗಾಗಿ ದೇಶ್‌ಮುಖ್ ಮೇಲಿನ ಆರೋಪದ ಕುರಿತು ಸಭೆಯಲ್ಲಿ ಚರ್ಚಿಸಲಿವೆ.
ಮುಖೇಶ್ ಅಂಬಾನಿ ಮನೆ ಮುಂದೆ ಜಿಲೆಟಿನ್ ಕಡ್ಡಿಗಳಿದ್ದ ವಾಹನ ಪತ್ತೆಯಾದ ಪ್ರಕರಣದ ತನಿಖೆಯಲ್ಲಿ ಲೋಪ ಎಸಗಿದ ಆರೋಪದ ಮೇಲೆ ಮುಂಬೈ ಪೊಲೀಸ್ ಕಮಿಷನರ್ ಹುದ್ದೆಯಿಂದ ವರ್ಗಾವಣೆಗೊಂಡ ಪರಮ್ ಬೀರ್ ಸಿಂಗ್ ಗೃಹ ಸಚಿವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿ, ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದರು.
ಅನಿಲ್ ದೇಶಮುಖ್ ರಾಜೀನಾಮೆಗೆ ಬಿಜೆಪಿ ಒತ್ತಾಯಿಸುತ್ತಿದ್ದು, ಮೈತ್ರಿಪಕ್ಷಗಳಲ್ಲೂ ಕೆಲವರು ಇಂಥದ್ದೇ ಅಭಿಪ್ರಾಯ ಹೊಂದಿದ್ದಾರೆ. ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ್ದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಮಾಜಿ ಪೊಲೀಸ್ ಅಧಿಕಾರಿ ಜುಲಿಯೊ ರಿಬೆರೋ ಅವರಿಂದ ಈ ಬಗ್ಗೆ ತನಿಖೆ ಮಾಡಿಸಬೇಕು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ತಿಂಗಳಿಗೆ 100 ಕೋಟಿ ಲಂಚ ಆರೋಪ: ಗೃಹ ಸಚಿವ ದೇಶ್‌ಮುಖ್ ರಾಜೀನಾಮೆಗೆ ಒತ್ತಡ
ಅನಿಲ್ ದೇಶ್‌ಮುಖ್ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷ ಬಿಜೆಪಿ ಮುಂಬೈ, ಪುಣೆ ಮತ್ತು ನಾಗಪುರಗಳಲ್ಲಿ ಪ್ರತಿಭಟನೆ ನಡೆಸಿದೆ. ಗೃಹ ಸಚಿವರು 100 ಕೋಟಿ ರೂ. ಸಂಗ್ರಹಿಸಲು ಸೂಚಿಸಿದ್ದಾರೆ ಎನ್ನುವುದಾದರೆ, ಉಳಿದ ಸಚಿವರು ಎಷ್ಟೆಷ್ಟು ಸಂಗ್ರಹಕ್ಕೆ ಸೂಚಿಸಿದ್ದರು ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ.
ಆರೋಪ ಸುಳ್ಳು, ತಮ್ಮನ್ನು ಉಳಿಸಿಕೊಲ್ಳಲು ಪರಮ್ ಬೀರ್ ಸಿಂಗ್ ಹೀಗೆ ಹೇಳುತ್ತಿದ್ದಾರೆ. ತಮ್ಮ ಮತ್ತು ಮಹಾ ವಿಕಾಸ್ ಅಘಾಡಿ ಮೈತ್ರಿ ಸರ್ಕಾರದ ವಿರುದ್ಧ ನಡೆದಿರುವ ಷಡ್ಯಂತ್ರವಿದು ಎಂದು ಗೃಹ ಸಚಿವ ಅನಿಲ್ ದೇಶ್‌ಮುಖ್ ಪ್ರಕಟಣೆ ನೀಡಿದ್ದಾರೆ.
ಪ್ರಕರಣ ಸಂಬಂಧ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶರದ್ ಪವಾರ್, ಈ ಆರೋಪ ಬಂದಿರುವ ಸಂದರ್ಭವೇ ಅನುಮಾನಾಸ್ಪದವಾಗಿದೆ. ವರ್ಗಾವಣೆಗೊಂಡ ನಂತರ ಮಾಜಿ ಪೊಲೀಸ್ ಆಯುಕ್ತರು 100 ಕೋಟಿ ಲಂಚದ ಆರೋಪ ಮಾಡಿದ್ದಾರೆ. ಮೈತ್ರಿ ಸರ್ಕಾರವನ್ನು ಬೀಳಿಸುವ ಸಂಚು ಇದರ ಹಿಂದೆ ಇರಬಹುದು. ಆದರೆ ನಾವು ಸಮಲೋಚನೆ ನಡೆಸಿ ಎಲ್ಲ ಸರಿಪಡಿಸುತ್ತೇವೆ. ಸರ್ಕಾರ ಐದು ವರ್ಷ ಗಟ್ಟಿಯಾಗಿ ಇರಲಿದೆ ಎಂದಿದ್ದಾರೆ.
ಜುಲಿಯೋ ರಿಬೆರೋ ದಕ್ಷತೆ ಬಗ್ಗೆ ಎಲ್ಲರಿಗೂ ತಿಳಿದಿದೆ. ಅವರ ತನಿಖೆಯಲ್ಲಿ ಯಾರೂ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಪವಾರ್ ಅಭಿಪ್ರಾಯ ಪಟ್ಟಿದ್ದಾರೆ. ಇದು ಗಂಭೀರ ಪ್ರಕರಣವಾದ್ದರಿಂದ ದೇಶ್‌ಮುಖ್ ರಾಜೀನಾಮೆ ಪಡೆಯುವುದು ಸೂಕ್ತ ಎಂದು ಸಿಎಮ ಠಾಕ್ರೆ ಕೂಡ ಯೋಚಿಸಿದ್ದಾರೆ ಎಂದು ಮೈತ್ರಿಕೂಟದ ಉನ್ನತ ನಾಯಕರೊಬ್ಬರು ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ತಿಂಗಳಿಗೆ 100 ಕೋಟಿ ಲಂಚ ಸಂಗ್ರಹಕ್ಕೆ ಗೃಹ ಸಚಿವರ ಸೂಚನೆ- ಪರಮ್ ಬೀರ್ ಸಿಂಗ್ ಆರೋಪ
ಅಂಬಾನಿ ಮನೆ ಎದುರು ಪತ್ತೆಯಾದ ಜಿಲೆಟಿನ್ ಕಡ್ಡಿಗಳಿದ್ದ ವಾಹನ ಸುತ್ತಲಿನ ತನಿಖೆಯಲ್ಲಿ ಪರಮ್ ಬೀರ್ ಸಿಂಗ್ ಲೋಪ ಎಸಗಿದ್ದು ಖಾತರಿಯಾದ ಕಾರಣ ತಾನು ಮತ್ತು ಸಿಎಂ ಠಾಕ್ರೆ ಅವರನ್ನು ಕಮೀಷನರ್ ಹುದ್ದೆಯಿಂದ ವರ್ಗಾವಣೆ ಮಾಡಿದ್ದೆವು. ಈ ಕಾರಣಕ್ಕೆ ಸಿಂಗ್ ಈಗ ತಮ್ಮ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಅವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸುವುದಾಗಿ ಅನಿಲ್ ದೇಶಮುಖ್ ತಿಳಿಸಿದ್ದಾರೆ.
’ಆ ಹುದ್ದೆಯಿಂದ ತೆಗೆದು ಹಾಕುವ ಒಂದು ದಿನ ಮೊದಲೆ ಸಿಂಗ್ ಅವರಿಗೆ ತಿಳಿದಿತ್ತು. ಹಿಂದಿನ ದಿನ ಅವರು ಸಹಾಯಕ ಪೊಲೀಸ್ ಕಮೀಷನರ್ ಸಂಜಯ್ ಪಾಟೀಲರೊಂದಿಗೆ ವ್ಯಾಟ್ಸಾಪ್ ಚಾಟ್ ನಡೆಸಿ, ತಮ್ಮ ವಿರುದ್ಧ ಸಾಕ್ಷ್ಯ ಸಂಗ್ರಹಕ್ಕೆ ಯತ್ನಿಸಿದ್ದರು’ ಎಂದು ದೇಶಮುಖ್ ಆರೋಪಿಸಿದ್ದಾರೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಜಿಲೆಟಿನ್ ಪ್ರಕರಣ ಮತ್ತು ವಾಹನ ಮಾಲೀಕ ಹಿರೇನ್ ಅವರ ಸಾವಿಗೆ ಸಂಬಧಿಸಿದಂತೆ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಎನ್‌ಐಎ ಬಂಧಿಸಿದ ನಂತರ ಈ ಬೆಳವಣಿಗೆಗಳು ನಡೆದಿವೆ.
ಪರಮ್ ಬೀರ್ ಸಿಂಗ್ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿ, ಸಚಿವರು ಮುಂಬೈ ಪೊಲೀಸ್ ಅಧಿಕಾರಿಗಳಿಗೆ ಪ್ರತಿ ತಿಂಗಳು 100 ಕೋಟಿ ರೂಪಾಯಿ ಕಲೆಕ್ಷನ್ ಗುರಿಯನ್ನು ನಿಗದಿಪಡಿಸಿದ್ದರು. ರೆಸ್ಟೋರೆಂಟ್‌ಗಳು, ಪಬ್‌ಗಳು, ಬಾರ್‌ಗಳು ಮತ್ತು ಹುಕ್ಕಾ ಪಾರ್ಲರ್‌ಗಳಿಂದ ಹಣವನ್ನು ಸಂಗ್ರಹಿಸಲು ಸೂಚಿಸಿದ್ದರು. ಫೆಬ್ರವರಿಯಲ್ಲಿ ಈ ಬೇಡಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕಾಯ್ದೆ ವಾಪಸಾತಿ ಮಾತನಾಡುತ್ತಿರುವ ಯುವಜನರು ಸರ್ಕಾರ ವಾಪಸಾತಿ ಮಾಡುತ್ತಾರೆ ಎಚ್ಚರ: ರಾಕೇಶ್ ಟಿಕಾಯತ್


