ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ಅಭ್ಯರ್ಥಿ ಸುವೇಂಧು ಅಧಿಕಾರಿ ಸ್ಪರ್ಧಿಸಿರುವ ನಂದಿಗ್ರಾಮ ಕೇಂದ್ರಬಿಂದುವಾಗಿದೆ. ನಂದಿಗ್ರಾಮದಲ್ಲಿಂದು ಮತದಾನದ ವೇಳೆ ಕಾರ್ಯಕರ್ತರ ಹತ್ಯೆ, ಕಲ್ಲುತೂರಾಟ, ಬೂತ್ ನಿಯಂತ್ರಣ ಆರೋಪಗಳು ಕೇಳಿ ಬರುತ್ತಿವೆ.
ನಂದಿಗ್ರಾಮದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಬೆಳಗ್ಗೆಯಿಂದ ನಡೆಯುತ್ತಿರುವ ಘಟನೆಗಳ ಕುರಿತು ಚುನಾವಣಾ ಆಯೋಗಕ್ಕೆ ಸುಮಾರು 63 ದೂರುಗಳನ್ನು ನೀಡಿದ್ದೇವೆ. ಆದರೆ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಚುನಾವಣಾ ಆಯೋಗ ಈ ದೂರುಗಳ ವಿರುದ್ಧ ಕ್ರಮ ತೆಗೆದುಕೊಳ್ಳದಿರುವುದರ ಕುರಿತು ನಾವು ನ್ಯಾಯಾಲಯಕ್ಕೆ ದೂರು ನೀಡುತ್ತೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇಡೀ ದಿನ ಮಮತಾ ಬ್ಯಾನರ್ಜಿ ನಂದಿಗ್ರಾಮ ಬಿಟ್ಟು ಎಲ್ಲಿಯೂ ಹೋಗಿಲ್ಲ.
ಬಿಜೆಪಿ ಕಾರ್ಯಕರ್ತರು ನಂದಿಗ್ರಾಮ ಬೂತ್‌ಗಳನ್ನು ಸುತ್ತುವರೆದು ಸ್ಥಳೀಯರಿಗೆ ಮತದಾನ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ರಾಜ್ಯಪಾಲ ಜಗದೀಪ್ ಧಂಖರ್ ಅವರೊಂದಿಗೆ ನಂದಿಗ್ರಾಮದನ ಮತದಾನ ಕೇಂದ್ರದಿಂದಲೇ ಕರೆ ಮಾಡಿ ದೂರು ನೀಡಿದ್ದಾರೆ.
“ಅವರು ಸ್ಥಳೀಯ ಜನರಿಗೆ ಮತ ಚಲಾಯಿಸಲು ಬಿಡುತ್ತಿಲ್ಲ. ಬೆಳಿಗ್ಗೆಯಿಂದ ನಾನು ದೂರು ನೀಡುತ್ತಿದ್ದೇನೆ. ಈಗ ನಾನು ನಿಮಲ್ಲಿ ಮನವಿ ಮಾಡುತ್ತಿದ್ದೇನೆ, ದಯವಿಟ್ಟು ನೀವು ಇದನ್ನು ನೋಡಿ” ಎಂದಿದ್ದಾರೆ.
ಇದನ್ನೂ ಓದಿ: ಬಡ್ಡಿದರ ಕಡಿತಗೊಳಿಸಿ ‘ನಿನ್ನೆ’ ಆದೇಶ: ‘ಇಂದು’ ಯೂಟರ್ನ್ ಹೊಡೆದ ಕೇಂದ್ರ ಸರ್ಕಾರ!
ನಂದಿಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಬೂತ್ ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ತೃಣಮೂಲದ ಡೆರೆಕ್ ಒಬ್ರಿಯೆನ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. “ಬಿಜೆಪಿ ಕಾರ್ಯಕರ್ತರ ಬೃಹತ್ ಗುಂಪೊಂದು ಬೂತ್ ಸಂಖ್ಯೆ 6, 7, 49, 27, 162, 21, 26, 13, 262, 256, 163, 20ಕ್ಕೆ ಪ್ರವೇಶಿಸಿದೆ. ಇವಿಎಂ ನಿಯಂತ್ರಣವನ್ನು ತೆಗೆದುಕೊಳ್ಳಲು ಪ್ರಯತ್ನಿಸುವ ಬಿಜೆಪಿ ಕಾರ್ಯಕರ್ತರು ಮತ್ತು ಬೂತ್ ಅನ್ನು ಸುತ್ತುವರೆದಿದ್ದಾರೆ ಎಂದು ಪತ್ರ ಬರೆದಿದ್ದಾರೆ.
ಇನ್ನು ಸುಮಾರು 150ಕ್ಕೂ ಹೆಚ್ಚು ಇವಿಎಂಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಟಿಎಂಸಿ ಸಂಸದೆ ಮಹುವಾ ಮೊಹಿತ್ರ ಆರೋಪಿಸಿದ್ದರು. ಇದಕ್ಕೆ ಚುನಾವಣಾ ಆಯೋಗ ಪ್ರತಿಕ್ರಿಯೆ ನೀಡಿದ್ದು, ಬಹಳಷ್ಟನ್ನು ಸರಿಪಡಿಸಲಾಗಿದೆ ಎಂದಿದೆ.
More than 150 EVM machines malfunctioning since Phase II voting started this morning
Wish @ECISVEEP had put half as much effort into ensuring no EVM glitches as it did into transferring police officials ..
— Mahua Moitra (@MahuaMoitra) April 1, 2021
ಬಿಜೆಪಿ ಅಭ್ಯರ್ಥಿಯ ಕಾರಿಗೆ ಕಲ್ಲು ತೂರಾಟ ನಡೆದ ನಂತರ ನಂದಿಗ್ರಾಮದ ಕೇಶಪುರದಲ್ಲಿ ಭಾರಿ ಭದ್ರತೆ ನಿಯೋಜಿಸಲಾಗಿದೆ.
ಬಂಗಾಳದಲ್ಲಿ ಚುನಾವಣೆಗಾಗಿ ಚುನಾವಣಾ ಆಯೋಗ ಬಂಗಾಳದ 10,620 ಬೂತ್‌ಗಳ ಭದ್ರತೆಗಾಗಿ ಕೇಂದ್ರ ಪಡೆಗಳ ಸುಮಾರು 651 ತಂಡಗಳನ್ನು ನಿಯೋಜಿಸಿದೆ. ನಂದಿಗ್ರಾಮದ 355 ಬೂತ್‌ಗಳನ್ನು ಅತಿಸೂಕ್ಷ್ಮ ಮತದಾನದ ಬೂತ್ ಎಂದು ಹೇಳಲಾಗಿದೆ. ಇಲ್ಲಿ ಕೇಂದ್ರ ಭದ್ರತಾ ಪಡೆಗಳ 22 ತಂಡಗಳನ್ನು ನಿಯೋಜಿಸಲಾಗಿದೆ. ಡ್ರೋನ್‌ಗಳು ಮತ್ತು ಹೆಲಿಕಾಪ್ಟರ್‌ಗಳೊಂದಿಗೆ ವೈಮಾನಿಕ ಸಮೀಕ್ಷೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಬೆಳಗಾವಿ ರೈತ ಮಹಾಪಂಚಾಯತ್: ಕಿತ್ತೂರು ರಾಣಿ ಚೆನ್ನಮ್ಮನ ಮಾದರಿಯಲ್ಲಿ ಹೋರಾಡೋಣ- ರಾಕೇಶ್ ಟಿಕಾಯತ್


