ಕೇರಳ ಮೂಲದ ಕ್ರೈಸ್ತ ಸನ್ಯಾಸಿನಿಯರಿಗೆ ರೈಲಿನಲ್ಲಿ ಕಿರುಕುಳ ನೀಡಿದ್ದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಉತ್ತರಪ್ರದೇಶದ ಝಾನ್ಸಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಂಚಲ್ ಅರ್ಜರಿಯಾ ಮತ್ತು ಪೂರ್ಗೇಶ್ ಅಮರಿಯಾ ಬಂಧಿತ ಆರೋಪಿಗಳು.
ಮಾರ್ಚ್ 19 ರಂದು ಕ್ರೈಸ್ತ ಸನ್ಯಾಸಿನಿಯರ ಮೇಲೆ ನಡೆದ ಕಿರುಕುಳದ ಬಗ್ಗೆ ‘ಈ ಪ್ರಕರಣದಲ್ಲಿ ಪೊಲೀಸರು ಸರಿಯಾಗಿ ಕಾರ್ಯನಿರ್ವಹಿಸಿಲ್ಲ; ಜೊತೆಗೆ ಸನ್ಯಾಸಿನಿಯರನ್ನು ಬಿಟ್ಟಿದ್ದಾರೆ’ ಎಂಬುದಾಗಿ ಈ ಇಬ್ಬರು ಝಾನ್ಸಿ ರೈಲು ನಿಲ್ದಾಣದಲ್ಲಿ ಚರ್ಚಿಸುತ್ತಿದ್ದರು. ಅಲ್ಲಿಯೇ ಗಸ್ತು ತಿರುಗುತ್ತಿದ್ದ ರೈಲ್ವೇ ಪೊಲೀಸರು ಈ ಕುರಿತು ಪ್ರಶ್ನಿಸಿದ್ದಾರೆ. ನಂತರ ಪೊಲೀಸರು ಮತ್ತು ಆರೋಪಿಗಳ ಮಧ್ಯೆ ವಾಗ್ವಾದ ಆರಂಭವಾಗಿದೆ. ನಂತರ ಪೊಲೀಸರ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಅವರು ಆಕ್ರೋಶಗೊಂಡರು. ಹಾಗಾಗಿಯೇ ಇವರನ್ನು ಬಂಧಿಸಲಾಗಿದೆ ಎಂದು ಝಾನ್ಸಿ ರೈಲ್ವೆ ಠಾಣೆಯ ಪೊಲೀಸ್ ವರಿಷ್ಠಾಧಿಕಾರಿ ನಯೀಮ್ ಖಾನ್ ಮನ್ಸೂರಿ ತಿಳಿಸಿದ್ದಾರೆ.
ಬಂಧಿತರು ಝಾನ್ಸಿಯಲ್ಲಿ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಎಂದು ತಿಳಿದುಬಂದಿದೆ.
ಮತಾಂತರ ಮಾಡುತ್ತಿದ್ದಾರೆ ಎಂದು ಶಂಕಿಸಿ ಇಬ್ಬರು ಕ್ರೈಸ್ತ ಸನ್ಯಾಸಿಗಳು (ನನ್‌ಗಳು) ಮತ್ತು ಅವರ ಇಬ್ಬರು ನವಶಿಷ್ಯೆಯರಿಗೆ ABVP ಕಾರ್ಯಕರ್ತರು ಕಿರುಕುಳ ನಿಡಿರುವ ಪ್ರಕರಣ ಮಾರ್ಚ್ 19ರಂದು ಉತ್ತರ ಪ್ರದೇಶದ ಝಾನ್ಸಿಯಲ್ಲಿ ವರದಿಯಾಗಿತ್ತು. ಕ್ರೈಸ್ತ ಸನ್ಯಾಸಿಗಳನ್ನು ABVP ಕಾರ್ಯಕರ್ತರು ರೈಲಿನಿಂದ ಕೆಳಗಿಳಿಸಿ ಕಿರುಕುಳ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬಂದಿತ್ತು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ‘ಕೇರಳ ಮೂಲದ ಕ್ರೈಸ್ತ ಸನ್ಯಾಸಿನಿಯರ ಮೇಲೆ ಯಾವುದೇ ದಾಳಿ ನಡೆದಿಲ್ಲ’-ಕೇಂದ್ರ ರೈಲ್ವೇ ಸಚಿವ
“ಎಬಿವಿಪಿಯ ಕೆಲವು ಸದಸ್ಯರು ಉತ್ಸಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಝಾನ್ಸಿಗೆ ರಿಷಿಕೇಶದ ತರಬೇತಿ ಶಿಬಿರದಿಂದ ಹಿಂದಿರುಗುತ್ತಿದ್ದರು. ನಾಲ್ಕು ಕ್ರಿಶ್ಚಿಯನ್ ಮಹಿಳೆಯರು ದೆಹಲಿಯ ಹಜರತ್ ನಿಜಾಮುದ್ದೀನ್‌ನಿಂದ ಒಡಿಶಾದ ರೂರ್ಕೆಲಾಕ್ಕೆ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಅವರಲ್ಲಿ ಇಬ್ಬರು ಸನ್ಯಾಸಿಗಳು ಮತ್ತು ಇಬ್ಬರು ತರಬೇತಿಯಲ್ಲಿದ್ದವರು. ಸನ್ಯಾಸಿಗಳು ಇತರ ಮಹಿಳೆಯರೊಂದಿಗೆ ಮಾತನಾಡುತ್ತಿರುವುದರಿಂದ ಈ ಇಬ್ಬರು ಸನ್ಯಾಸಿಗಳು ಇತರ ಇಬ್ಬರು ಮಹಿಳೆಯರನ್ನು ಮತಾಂತರಕ್ಕಾಗಿ ಕರೆದೊಯ್ಯುತ್ತಿದ್ದಾರೆ ಎಂದು ಎಬಿವಿಪಿಯ ಈ ಸದಸ್ಯರು ಶಂಕಿಸಿದ್ದಾರೆ. ಈ ಅನುಮಾನದ ಮೇಲೆ ಅವರು ರೈಲ್ವೆ ಸಂರಕ್ಷಣಾ ಪಡೆಗೆ ಮಾಹಿತಿ ನೀಡಿದರು. ಹುಟ್ಟಿನಿಂದ ನಾಲ್ವರು ಮಹಿಳೆಯರು ಕ್ರಿಶ್ಚಿಯನ್ ಆಗಿದ್ದು ಯಾವುದೇ ಮತಾಂತರದಲ್ಲಿ ಪಾಲ್ಗೊಂಡಿಲ್ಲ. ಇದರ ನಂತರ ನಾವು ನಾಲ್ವರು ಮಹಿಳೆಯರನ್ನು ಒಡಿಶಾದ ಅವರ ಸ್ವಂತ ಸ್ಥಳಕ್ಕೆ ಕಳುಹಿಸಿದ್ದೇವೆ’ ಎಂದು ನಯೀಮ್ ಖಾನ್ ಮನ್ಸೂರಿ ವಿವರವಾದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ರೈಲು ನಿಲ್ದಾಣದಲ್ಲಿ ವಿಚಾರಣೆ ನಡೆಸಿ, ಸನ್ಯಾಸಿನಿಯರು ಮತಾಂತರ ನಡೆಸುತ್ತಿಲ್ಲ ಎಂಬುದು ಸಾಬೀತಾದ ನಂತರ ಅವರನ್ನು ಕಳುಹಿಸಲಾಗಿತ್ತು.
ಈ ಕುರಿತು ಪ್ರಧಾನಿಗೆ ಪತ್ರ ಬರೆದಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಇಂತಹ ಘಟನೆಗಳು ರಾಷ್ಟ್ರದ ಗೌರವ ಮತ್ತು ಅದರ ಪ್ರಾಚೀನ ಧಾರ್ಮಿಕ ಸಹಿಷ್ಣುತೆಯನ್ನು ಕೆಡಿಸುತ್ತವೆ. ಇಂತಹ ಘಟನೆಗಳಿಗೆ ಕೇಂದ್ರ ಸರ್ಕಾರದಿಂದ ಅತ್ಯಂತ ಖಂಡನೆ ಅಗತ್ಯ. ಅಡ್ಡಿಪಡಿಸುವ, ದುರ್ಬಲಗೊಳಿಸುವ ಎಲ್ಲ ಗುಂಪುಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲು ನಿಮ್ಮ ಹಸ್ತಕ್ಷೇಪವನ್ನು ನಾನು ಕೋರುತ್ತೇನೆ. ಸಂವಿಧಾನವು ಖಾತರಿಪಡಿಸಿದ ವೈಯಕ್ತಿಕ ಹಕ್ಕುಗಳ ಸ್ವಾತಂತ್ರ‍್ಯ ಕಾಪಾಡಿ” ಎಂದು ಆಗ್ರಹಿಸಿದ್ದರು.
ಆದರೆ ಈ ಕುರಿತು ಪ್ರತಿಕ್ರಿಯಿಸದ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್, “ಕೇರಳ ಮೂಲದ ಇಬ್ಬರು ಕ್ರೈಸ್ತ ಸನ್ಯಾಸಿನಿಯರ ಮೇಲೆ ರೈಲು ಪ್ರಯಾಣದ ಸಂದರ್ಭದಲ್ಲಿ ಹಲ್ಲೆ ನಡೆದಿಲ್ಲ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ವಿಷಯದಲ್ಲಿ “ಸುಳ್ಳು ಹೇಳಿಕೆ ನೀಡುತ್ತಿದ್ದಾರೆ” ಎಂದು ಅವರು ಆರೋಪಿಸಿದ್ದರು.
ಇದನ್ನೂ ಓದಿ: ರೈಲಿನಲ್ಲಿ ABVP ಕಾರ್ಯಕರ್ತರಿಂದ ಕ್ರೈಸ್ತ ಸನ್ಯಾಸಿನಿಗಳಿಗೆ ಕಿರುಕುಳ: ವ್ಯಾಪಕ ಟೀಕೆ


