ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ (ಏಪ್ರಿಲ್ 2) ವಿಶೇಷ ತನಿಖಾ ತಂಡದ ಮುಂದೆ ವಿಚಾರಣೆಗೆ ಹಾಜರಾಗಬೇಕಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಗ್ಯ ಸಮಸ್ಯೆಯ ನೆಪ ಹೇಳಿ ತಪ್ಪಿಸಿಕೊಂಡಿದ್ದಾರೆ. ಪ್ರಕರಣದ ಬಗ್ಗೆ ಸಂತ್ರಸ್ತ ಯುವತಿ ಪ್ರತ್ಯಕ್ಷವಾಗಿ ಹೇಳಿಕೆ ನೀಡಿದ ನಂತರ ಮಾಜಿ ಸಚಿವರಿಗೆ ಬಂಧನದ ಭೀತಿ ಶುರುವಾಗಿದೆ ಎನ್ನಲಾಗಿದೆ.
ವಕೀಲರ ಮೂಲಕ ಮಾಹಿತಿ ನೀಡಿರುವ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಆರೋಗ್ಯ ಸಮಸ್ಯೆಯಿದೆ ಎಂದು ಹೇಳಿ ಎರಡು ದಿನಗಳ ಕಾಲಾವಕಾಶ ಕೇಳಿದ್ದಾರೆ ಎನ್ನಲಾಗಿದೆ. ಏಪ್ರಿಲ್ 5 ರಂದು ಸೋಮವಾರ ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದ್ದಾರೆ.
ನಿನ್ನೆ (ಗುರುವಾರ) ಸಂತ್ರಸ್ತೆ ಕೊಟ್ಟ ಹೇಳಿಕೆ ಆಧರಿಸಿ ಇಂದು ಎಸ್‌ಐಟಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿಚಾರಣೆ ನಡೆಸಲು ನಿರ್ಧರಿಸಿತ್ತು. ಆದರೆ ರಮೇಶ್ ಜಾರಕಿಹೊಳಿ ಬಂದಿರಲಿಲ್ಲ. ನಂತರ ತಮ್ಮ ವಕೀಲರ ಮೂಲಕ ಆರೋಗ್ಯದಲ್ಲಿ ಸಮಸ್ಯೆಯಾಗಿದೆ ಎಂದು ತಿಳಿಸಿ ಎರಡು ದಿನಗಳ ಗಡುವು ಕೇಳಿದ್ದಾರೆ.
“ರಮೇಶ್ ಜಾರಕಿಹೊಳಿ ಗೋಕಾಕ್‌ನಲ್ಲೇ ಇದ್ದು, ಆರೋಗ್ಯ ಸರಿ ಇಲ್ಲದ ಕಾರಣ ಸಾರ್ವಜನಿಕ ವಲಯದಲ್ಲಿ ಕಂಡಿಲ್ಲ. ರಮೇಶ್ ಜಾರಕಿಹೊಳಿ ಅವರಿಗೆ ಯಾವುದೇ ಬಂಧನ ಭೀತಿ ಇಲ್ಲ” ಎಂದು ರಮೇಶ್ ಜಾರಕಿಹೊಳಿ ಪರ ವಕೀಲರು ತಿಳಿಸಿದ್ದಾರೆ.
ಇದನ್ನೂ ಓದಿ: ‘ರಮೇಶ್ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯುತ್ತೇನೆ’ – ಸಿಡಿ ಹಗರಣದ ಸಂತ್ರಸ್ತೆ ಯುವತಿ
ನ್ಯಾಯಾಲಯದ ಎದುರು ಹಾಜರಾಗಿ ಸ್ಟೆಟ್‌ಮೆಂಟ್ 164 ದಾಖಲಿಸಿರುವ ಸಂತ್ರಸ್ತ ಯುವತಿ, ಎಸ್ಐಟಿ ವಿಚಾರಣೆ ಹಾಗೂ ಮಹಜರು ಪ್ರಕ್ರಿಯೆಗೆ ಉತ್ತಮವಾಗಿ ಸಹಕರಿಸಿದ್ದಾರೆ. ಶುಕ್ರವಾರವೂ ಎಸ್ಐಟಿ ತಂಡ ಯುವತಿಯನ್ನ ಸುದೀರ್ಘ ವಿಚಾರಣೆ ನಡೆಸಲಿದ್ದು, ಆಡುಗೋಡಿ ಟೆಕ್ನಿಕಲ್ ಸೆಲ್‌ಗೆ ಯುವತಿಯನ್ನು ಕರೆತರಲಾಗಿದೆ.
ಎಸ್ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ, ಸಿಡಿ ಪ್ರಕರಣದ ತನಿಖಾಧಿಕಾರಿ ಎಸಿಪಿ ಕವಿತಾ, ಇನ್ಸ್‌ಪೆಕ್ಟರ್ ಮಾರುತಿ, ಕುಮಾರಸ್ವಾಮಿಯವರು ಅತ್ಯಾಚಾರ ಪ್ರಕರಣ ಸಂಬಂಧ ಸಂತ್ರಸ್ತ ಯುವತಿ ವಿಚಾರಣೆ ಇಂದು ಆರಂಭವಾಗಲಿದೆ. ಹೀಗಾಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಯುವತಿಯನ್ನು ಕರೆತರಲಾಗಿದೆ. ಗುರುವಾರವಷ್ಟೇ ಎಸ್‌ಐಟಿ ತಂಡ ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದೆ. ಮಹಜರು ವೇಳೆ ಕೂಡ ಸಂತ್ರಸ್ತೆಯಿಂದ ಸಾಕಷ್ಟು ಮಾಹಿತಿಯನ್ನು ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಕೋರ್ಟ್‌ಗೆ ಹಾಜರಾದ ಸಂತ್ರಸ್ತ ಯುವತಿ: ಅರೆಸ್ಟ್ ಆಗುವರೆ ರಮೇಶ್ ಜಾರಕಿಹೊಳಿ?


