ಮಂಗಳೂರಿನಿಂದ ಬೆಂಗಳೂರಿಗೆ ಬಸ್‌ನಲ್ಲಿ ಅನ್ಯ ಧರ್ಮದ ಯುವತಿಯೊಂದಿಗೆ ಪ್ರಯಾಣಿಸಿದ್ದಕ್ಕಾಗಿ 23 ವರ್ಷದ ಮುಸ್ಲಿಂ ಯುವಕನ ಮೇಲೆ ಭಜರಂಗದಳದವರು ಹಲ್ಲೆ ನಡೆಸಿ ಹರಿತವಾದ ಆಯುಧದಿಂದ ಇರಿದಿರುವ ಘಟನೆ ಗುರುವಾರ ನಡೆದಿದೆ. ಘಟನೆ ಸಂಬಂಧ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
“ಮಂಗಳೂರು ನಗರದ ಹೊರವಲಯದಲ್ಲಿ, ನಿನ್ನೆ (ಗುರುವಾರ) ರಾತ್ರಿ 9: 30 ರ ಸುಮಾರಿಗೆ ಬೆಂಗಳೂರಿಗೆ ಹೋಗುತ್ತಿದ್ದ ಬಸ್ಸಿಗೆ ಅಡ್ಡ ಹಾಕಿ, ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ಯುವಕ ಯುವತಿಯನ್ನು ಬಸ್‌ನಿಂದ ಇಳಿಸಲಾಗಿದೆ. ಬೇರೆ ಬೇರೆ ಧರ್ಮಗಳಿಗೆ ಸೇರಿದ ಕಾರಣ ಯುವಕನನ್ನು ಥಳಿಸಲಾಗಿದೆ. ಅಡ್ಡ ಪಡಿಸಲು ಬಂದ ಯುವತಿಗೂ ಗಾಯಗಳಾಗಿವೆ” ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿ ಕುಮಾರ್ ತಿಳಿಸಿದ್ದಾರೆ.
“ಘಟನೆಯಲ್ಲಿ ಭಾಗಿಯಾಗಿದ್ದ ಎಂಟು ಜನರನ್ನು ಬಂಧನದಲ್ಲಿಡಲಾಗಿದೆ. ಭಜರಂಗ ದಳದ ನಾಲ್ವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು” ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಧರ್ಮಗಳು ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಅರಿತ್ತಿದ್ದೇವೆಯೇ? : ಬಿ. ಶ್ರೀಪಾದ ಭಟ್
“ನಾಲ್ವರು ವ್ಯಕ್ತಿಗಳು ಕಾರಿನಲ್ಲಿ ಬಂದು ಬಸ್ ನಿಲ್ಲಿಸಿದ್ದಾರೆ. ಯುವಕ ಅಸ್ವಿರ್ ಅನ್ವರ್ ಮಹ್ಮದ್ ಥಳಿಸಲಾಗಿದೆ ಮತ್ತು ಆತನ ಸೊಂಟದ ಬಳಿ ಇರಿತದ ಗಾಯವೂ ಆಗಿದೆ. ಸದ್ಯ ಗಾಯಾಳು ಆಸ್ಪತ್ರೆಯಲ್ಲಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ” ಎಂದು ಶಶಿ ಕುಮಾರ್ ಹೇಳಿದ್ದಾರೆ.
ಯುವತಿ ಆಕೆಯ ಸಹಪಾಠಿ ಜೊತೆಗೆ ಖಾಸಗಿ ಬಸ್ಸಿನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಆತನಿಗೆ ಬೆಂಗಳೂರು ಹೆಚ್ಚು ತಿಳಿದಿದ್ದ ಕಾರಣ ತನಗೆ ಕೆಲಸ ಹುಡುಕಲು ಸಹಾಯ ಮಾಡಲು ಹೋಗುತ್ತಿದ್ದರು. ಆತ ತನಗೆ ಹಲವು ವರ್ಷಗಳಿಂದ ಪರಿಚಿತ ಎಂದು ಯುವತಿ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆ ನಡೆಸಿದವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಸಹಾಯಕ ಪೊಲೀಸ್ ಆಯುಕ್ತರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಇಬ್ಬರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬಗ್ಗೆ ಯಾರು ಮಾಹಿತಿ ಹಂಚಿಕೊಂಡಿದ್ದಾರೆ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಬಿಜೆಪಿ ಬೆಂಬಲಿಗರ ಹಲ್ಲೆ- ಆರೋಪ


