ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದ ಮೊದಲ ತೃತೀಯಲಿಂಗಿ ಅಭ್ಯರ್ಥಿ 28 ವರ್ಷದ ಅನನ್ಯಾ ಕುಮಾರಿ ಅಲೆಕ್ಸ್, ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಈ ಮೊದಲು ಅವರು ಡೆಮಾಕ್ರಟಿಕ್ ಸೋಶಿಯಲ್ ಜಸ್ಟೀಸ್ ಪಾರ್ಟಿಯಿಂದ ಸ್ಪರ್ಧಿಗಿಳಿಯುವುದಾಗಿ ಘೋಷಿಸಿದ್ದರು.
ಅನನ್ಯಾ ಕುಮಾರಿ ಅಲೆಕ್ಸ್ ಸ್ಫರ್ಧಿಸಲು ಬಯಸಿದ್ದ ಡೆಮಾಕ್ರಟಿಕ್ ಸೋಶಿಯಲ್ ಜಸ್ಟೀಸ್ ಪಾರ್ಟಿಯವರಲ್ಲೇ ಕೆಲವರು ಲಿಂಗ ತಾರತಮ್ಯ ಮಾಡುತ್ತಿದ್ದಾರೆ. ತೀವ್ರ ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ, ಹೀಗಾಗಿ ಚುನಾವಣೆಯಿಂದ ದೂರ ಇರುವುದಾಗಿ ಅನನ್ಯಾ ತಿಳಿಸಿದ್ದಾರೆ.
ಮಲ್ಲಾಪುರಂನ ವೆಂಗಾರಾ ಕ್ಷೇತ್ರದಲ್ಲಿ ಡೆಮಾಕ್ರೆಟಿಕ್ ಸೋಷಿಯಲ್ ಜಸ್ಟಿಸ್ ಪಾರ್ಟಿ (DSJP)ಯಿಂದ ಸ್ಪರ್ಧಿಸಲು ನಿರ್ಧರಿಸಿದ್ದರು. ಈ ಕ್ಷೇತ್ರದಲ್ಲಿ ಪ್ರಭಾವಿಯಾಗಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಅಭ್ಯರ್ಥಿ ಪಿ.ಕೆ.ಕುನ್ಹಾಲಿಕುಟ್ಟಿ ಮತ್ತು ಎಲ್‌ಡಿಎಫ್ ಅಭ್ಯರ್ಥಿ ಪಿ.ಜಿಜಿ ಕಣಕ್ಕಿಳಿದಿದ್ದಾರೆ.
ಇದನ್ನೂ ಓದಿ: ‘ತಂಬಿ ತೇಜಸ್ವಿ ಸೂರ್ಯ, ಇದು ತಮಿಳುನಾಡು; ನಿಮ್ಮ ನಾಟಕ ಬೆಂಗಳೂರಲ್ಲೇ ಬಿಟ್ಟು ಬನ್ನಿ’
ತನಗೆ ಕಿರುಕುಳ ನೀಡಿದ ಡೆಮಾಕ್ರೆಟಿಕ್ ಸೋಷಿಯಲ್ ಜಸ್ಟಿಸ್ ಪಾರ್ಟಿ ಮತ್ತು ನಾಯಕರ ವಿರುದ್ಧ ತಾನು ಪೊಲೀಸ್ ದೂರು ದಾಖಲಿಸಿದ್ದೇನೆ ಎಂದು ಅನನ್ಯಾ ಇತ್ತೀಚಿನ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಚುನಾವಣಾ ಪ್ರಚಾರ ಕಾರ್ಯ ಕೂಡ ನಿಲ್ಲಿಸಿದ್ದಾರೆ.
ಅನನ್ಯಾ ತಮ್ಮ ಹೇಳಿಕೆಯಲ್ಲಿ, “ನಾನು ಡೆಮಾಕ್ರೆಟಿಕ್ ಸೋಷಿಯಲ್ ಜಸ್ಟಿಸ್ ಪಾರ್ಟಿದಲ್ಲಿ ತಾರತಮ್ಯ ಮತ್ತು ಲೈಂಗಿಕ ಕಿರುಕುಳವನ್ನು ಎದುರಿಸುತ್ತಿರುವ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ. ಅವರು ಪ್ರಚಾರಕ್ಕಾಗಿ ನನ್ನನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಯುಡಿಎಫ್ ಅಭ್ಯರ್ಥಿ ಪಿ.ಕೆ.ಕುನ್ಹಾಲಿಕುಟ್ಟಿ ಬಗ್ಗೆ ತಪ್ಪಾಗಿ ಮಾತನಾಡಲು ಮತ್ತು ಎಲ್‌ಡಿಎಫ್ ಸರ್ಕಾರವನ್ನು ಟೀಕಿಸಲು ಡಿಎಸ್‌ಜೆಪಿ ನಾಯಕರು ನನ್ನನ್ನು ಒತ್ತಾಯಿಸುತ್ತಿದ್ದಾರೆ. ಇದರ ಜೊತೆಗೆ, ಚುನಾವಣಾ ಪ್ರಚಾರದ ಸಮಯದಲ್ಲಿ ಬುರ್ಖಾ ಧರಿಸಲು ನನ್ನನ್ನು ಒತ್ತಾಯಿಸಿದರು, ಅದನ್ನು ನಾನು ನಿರಾಕರಿಸಿದ್ದೇನೆ” ಎಂದಿದ್ದಾರೆ.
ಅನನ್ಯಾ ಕುಮಾರಿ ಅಲೆಕ್ಸ್, ಕೇರಳದ ಮೊದಲ ತೃತೀಯಲಿಂಗಿ ರೇಡಿಯೋ ಜಾಕಿ ಮತ್ತು ಸುದ್ದಿ ನಿರೂಪಕರಾಗುವ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: ಹಿಂದೂ ಮುಸ್ಲಿಮರನ್ನು ವಿಭಜಿಸಲು AIMIM ಪಕ್ಷಕ್ಕೆ ಬಿಜೆಪಿ ಹಣ ನೀಡಿದೆ: ಮಮತಾ ಬ್ಯಾನರ್ಜಿ


