ಭಾರತದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ, ನ್ಯಾಯಮೂರ್ತಿ ಎನ್‌ವಿ ರಮಣ ಅವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇಮಕ ಮಾಡಿದ್ದಾರೆ. ನ್ಯಾಯಮೂರ್ತಿ ಎನ್‌ವಿ ರಮಣ ಏಪ್ರಿಲ್ 24 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಏಪ್ರಿಲ್ 23 ರಂದು ನಿವೃತ್ತರಾಗಲಿರುವ ಭಾರತದ ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬಡೆ, ಕಳೆದ ತಿಂಗಳು ನ್ಯಾಯಮೂರ್ತಿ ರಮಣ ಅವರನ್ನು ಮುಂದಿನ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಶಿಫಾರಸು ಮಾಡಿದ್ದರು.
ಆಗಸ್ಟ್ 27, 1957 ರಂದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಕೃಷಿ ಕುಟುಂಬದಲ್ಲಿ ಜನಿಸಿದ ನ್ಯಾಯಮೂರ್ತಿ ರಮಣ ಅವರು, 1983ರ ಫೆಬ್ರುವರಿ 10ರಂದು ವಕೀಲರಾಗಿ ವೃತ್ತಿ ಜೀವನ ಆರಂಭಿಸಿದ್ದರು. 2022 ರ ಆಗಸ್ಟ್ 26 ರವರೆಗೆ ಒಂದು ವರ್ಷ ಮತ್ತು ನಾಲ್ಕು ತಿಂಗಳು ಸುಪ್ರೀಂ ಕೋರ್ಟ್‌ನ 48ನೇ ಮುಖ್ಯ ನ್ಯಾಯಾಧೀಶರಾಗಿರಲಿದ್ದಾರೆ.
ಇದನ್ನೂ ಓದಿ: ’ನ್ಯಾಯಮೂರ್ತಿ ರಮಣ ಪಕ್ಷಪಾತಿ’: ಆಂಧ್ರ ಸಿಎಂ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್
ನ್ಯಾಯಮೂರ್ತಿ ಎನ್‌ವಿ ರಮಣ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾಗುತ್ತಿರುವ ಆಂಧ್ರಪ್ರದೇಶದ ಎರಡನೇ ವ್ಯಕ್ತಿಯಾಗಿದ್ದಾರೆ. ಈ ಹಿಂದೆ ನ್ಯಾಯಮೂರ್ತಿ ಕೆ ಸುಬ್ಬ ರಾವ್ ಅವರು 1966-67ರವರೆಗೆ ಭಾರತದ ಒಂಬತ್ತನೇ ಮುಖ್ಯ ನ್ಯಾಯಮೂರ್ತಿಯಾಗಿದ್ದರು.
ಜೂನ್ 27, 2000 ರಂದು ಆಂಧ್ರಪ್ರದೇಶದ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರನ್ನಾಗಿ ರಮಣ ಅವರನ್ನು ನೇಮಿಸಲಾಗಿತ್ತು. ಅವರು ಮಾರ್ಚ್ 10, 2013 ರಿಂದ ಮೇ 20, 2013 ರವರೆಗೆ ಆಂಧ್ರಪ್ರದೇಶದ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದಾರೆ. 2013 ರಲ್ಲಿ ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಮತ್ತು 2014 ರಲ್ಲಿ ಉನ್ನತ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಇದನ್ನೂ ಓದಿ: ಅಂಧ ಭಕ್ತರೆ, ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಯಾರು ಕಾರಣ? ಮೋದಿ ವಿರುದ್ಧ ಸಿಡಿದ ಸುಬ್ರಮಣಿಯನ್ ಸ್ವಾಮಿ


