ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ ವಿಳಂಬವಾಗುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ಇತ್ತೀಚೆಗೆ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. ಇದಕ್ಕೆ ಮಂಗಳವಾರ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಹೈಕೋರ್ಟ್ ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿಯಾಗುವ ಆರು ತಿಂಗಳು ಮುಂಚಿತವಾಗಿಯೇ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂಬ ವಿಧಿವಿಧಾನಗಳ ಒಡಂಬಡಿಕೆ (ಎಂಓಪಿ)ಯನ್ನು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗಳು ಉಲ್ಲಂಘಿಸಿವೆ ಎಂದು ಹೇಳುವ ಮೂಲಕ ನ್ಯಾಯಾಂಗದ ವಿರುದ್ದವೆ ತಿರುಗಿ ಬಿದ್ದಿದೆ.
ಎಂಒಪಿ ಎನ್ನುವುದು, ಸಂವಿಧಾನಾತ್ಮಕ ನ್ಯಾಯಾಲಯದ ನ್ಯಾಯಾಧೀಶರ ನೇಮಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವಿನ ಲಿಖಿತ ಒಪ್ಪಂದವಾಗಿದೆ. “ಮಾರ್ಚ್ 26 ರ ಹೊತ್ತಿಗೆ ಖಾಲಿಯಿರುವ 410 ನ್ಯಾಯಾಧೀಶರ ಹುದ್ದೆಗಳಲ್ಲಿ, ಹೈಕೋರ್ಟ್ ಕೊಲಾಜಿಯಮ್ 214 ಹುದ್ದೆಗಳಿಗೆ ಶಿಫಾರಸುಗಳನ್ನು ಮಾಡಿಲ್ಲ” ಎಂದು ನ್ಯಾಯಾಂಗದ ಮೂಲಗಳನ್ನು ಉಲ್ಲೇಖಿಸಿ TOI ವರದಿ ಮಾಡಿದೆ.
ಇದನ್ನೂ ಓದಿ: ಗಂಡಾಳಿಕೆಯನ್ನು ಬಿಂಬಿಸುವ ಕೋರ್ಟುಗಳಿಗೆ ’ಸುಪ್ರೀಮ್’ ಕಡಿವಾಣ
ಮಾರ್ಚ್ 27 ರಂದು ಭಾರತದ ಮುಖ್ಯನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಸೂರ್ಯಕಾಂತ್ ಅವರ ನ್ಯಾಯಪೀಠವು, “ಹೈಕೋರ್ಟ್ ಕೊಲಾಜಿಯಮ್ ಶಿಫಾರಸ್ಸು ಮಾಡಿದ 45 ಮಂದಿಯ ಕಡತಗಳ ಮೇಲೆ ಕೇಂದ್ರ ಸರ್ಕಾರ ಯಾಕೆ ಕುಳಿತುಕೊಂಡಿದೆ.ಈ ಕಡತಗಳು 6-14 ತಿಂಗಳಿನಿಂದ ಬಾಕಿ ಉಳಿದಿವೆ, ಇದರ ಬಗ್ಗೆ ಎಪ್ರಿಲ್ 8 ರಂದು ವಿವರಿಸಬೇಕು” ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೊಪಾಲ್ ಅವರನ್ನು ಕೋರಿತ್ತು.
7 ರಿಂದ 19 ತಿಂಗಳವರೆಗಿನ ಅವಧಿಯವರೆಗೆ ಹೈಕೋರ್ಟ್ ನ್ಯಾಯಾಧೀಶರ ನೇಮಕಕ್ಕಾಗಿ ಸುಪ್ರೀಂಕೋರ್ಟ್ ಕೊಲಾಜಿಯಮ್ ಶಿಫಾರಸ್ಸು ಮಾಡಿದ್ದ 10 ಕ್ಕೂ ಹೆಚ್ಚು ಮಂದಿಯ ಕಡತಗಳ ಕುರಿತು ಇನ್ನುಕೇಂದ್ರ ಸರ್ಕಾರ ನಿರ್ಧಾರ ಮಾಡಿಲ್ಲ ಎಂದು ಹೇಳಿ ನ್ಯಾಯಮೂರ್ತಿ ಕೌಲ್ ಗಮನಸೆಳೆದಿದ್ದರು. ಕೋಲ್ಕತ್ತಾ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಐದು ವಕೀಲರನ್ನು ನೇಮಕ ಮಾಡಲು ಸುಪ್ರೀಂಕೋರ್ಟ್ ಕೊಲಾಜಿಯಮ್ ಶಿಫಾರಸನ್ನು 2019 ರ ಜುಲೈ 25 ರಂದು ಸರ್ಕಾರಕ್ಕೆ ಕಳುಹಿಸಲಾಗಿದೆ ಮತ್ತು ಇವುಗಳನ್ನು ಸರ್ಕಾರ ಪರಿಗಣಿಸಿಲ್ಲ ಎಂದು ಅವರು ಹೇಳಿದ್ದಾರೆ. ಅಂತೆಯೇ, ಜಮ್ಮುಕಾಶ್ಮೀರ ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿಗಾಗಿ ವಕೀಲರ ಹೆಸರನ್ನು 17 ತಿಂಗಳುಗಳಿಂದ ಬಾಕಿ ಉಳಿದಿದೆ ಎಂದು ಹೇಳಿದ್ದಾರೆ.
ಕಾನೂನು ಸಚಿವಾಲಯ ಇತ್ತೀಚೆಗೆ ವಿವಿಧ ಹೈಕೋರ್ಟ್ ಕೊಲಾಜಿಯಮ್‌ಗಳು ಶಿಫಾರಸು ಮಾಡಿದ 45 ಹೆಸರುಗಳನ್ನು ಸುಪ್ರೀಂಕೊರ್ಟ್ ಕೊಲಾಜಿಯಮ್‌ಗೆ ಪರಿಶೀಲನೆಗಾಗಿ ಕಳುಹಿಸಿದೆ. ಏಪ್ರಿಲ್ 8 ರಂದು ನ್ಯಾಯಾಧೀಶರ ನೇಮಕ ವಿಳಂಬಕ್ಕೆ ಸಂಬಂಧಿಸಿದ ಪ್ರಕರಣವನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಪೀಠ ನಿರ್ಧರಿಸಿದೆ.
ಇದನ್ನೂ ಓದಿ: ಬಹುಜನ ಭಾರತ: ಬಂಧನದಲ್ಲಿ ಕಳೆದುಹೋಗುವ ಮುಸಲ್ಮಾನ ಬದುಕುಗಳು- ಪರಿಹಾರ ಇಲ್ಲವೇ?


