ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರಾಷ್ಟ್ರವ್ಯಾಪಿ ನಡೆಯುತ್ತಿರುವ ರೈತರ ಹೋರಾಟ 132 ನೇ ದಿನಕ್ಕೆ ಕಾಲಿಟ್ಟಿದ್ದು ಮತ್ತಷ್ಟು ತೀವ್ರಗೊಂಡಿದೆ. ದೆಹಲಿಯ ಗಡಿಗಳನ್ನೂ ಸುತ್ತುವರೆದಿರುವ ರೈತರು ಹೋರಾಟ ಸಮಯದಲ್ಲಿ ಹುತಾತ್ಮರಾದ ರೈತರ ಹುತಾತ್ಮ ಸ್ಮಾರಕ ನಿರ್ಮಾಣ ಮಾಡಿದ್ದಾರೆ.
ಸ್ಮಾರಕ ನಿರ್ಮಾಣಕ್ಕೆ ಮಣ್ಣು ಸಂಗ್ರಹಿಸಲು ಹೋರಾಟಗಾರರ ಒಂದು ತಂಡ ಮಾರ್ಚ್ 30 ರಂದು ಮಿಟ್ಟಿ ಯಾತ್ರೆ ಆರಂಭ ಮಾಡಿತ್ತು. ಗುಜರಾತ್‌ನ ದಂಡಿಯಿಂದ ಪ್ರಾರಂಭವಾಗಿ ರಾಜಸ್ಥಾನ, ಹರಿಯಾಣ, ಪಂಜಾಬ್ ಮೂಲಕ ದೆಹಲಿ ಗಡಿ ತಲುಪಿದೆ. ಮಿಟ್ಟಿ ಸತ್ಯಾಗ್ರಹ ಯಾತ್ರೆಯಲ್ಲಿ 23 ರಾಜ್ಯಗಳ 1500 ಹಳ್ಳಿಗಳಿಂದ ಮಣ್ಣು ಸಂಗ್ರಹಿಸಲಾಗಿದೆ.
ಇದನ್ನೂ ಓದಿ: ರೈತ ಹೋರಾಟ: ಸುಗ್ಗಿಗೆ ಹೊರಟ ಟ್ಯ್ರಾಲಿಗಳು, ನಿರ್ಮಾಣಗೊಂಡ ಹುಲ್ಲಿನ ಗುಡಿಸಲುಗಳು
ಮಿಟ್ಟಿ ಸತ್ಯಾಗ್ರಹ ಯಾತ್ರೆಯನ್ನು ದೇಶದ ಹಲವು ರಾಜ್ಯಗಳಲ್ಲಿ ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಾಖಂಡ್, ಅಸ್ಸಾಂ ಮತ್ತು ಪಂಜಾಬ್‌ನಲ್ಲಿ ಆಯೋಜಿಸಲಾಗಿತ್ತು.
ಗುಜರಾತ್‌ನ ಕಲಾವಿದರು, ಮಿಟ್ಟಿ ಸತ್ಯಾಗ್ರಹದಲ್ಲಿದ್ದವರು ಮತ್ತು ರೈತರ ತಂಡ ಹುತಾತ್ಮ ಸ್ಮಾರಕವನ್ನು ದೇಶದಾದ್ಯಂತ ಸಂಗ್ರಹಿಸಿದ್ದ ಮಣ್ಣಿನಿಂದ ದೆಹಲಿ-ಗಾಝಿಪುರ್ ಗಡಿಯಲ್ಲಿ ನಿರ್ಮಿಸಿದ್ದಾರೆ. ಜೊತೆಗೆ ಪ್ರತಿಭಟನೆ ನಡೆಯುತ್ತಿರುವ ಪ್ರತಿ ಗಡಿಯಲ್ಲಿಯೂ ಹುತಾತ್ಮ ರೈತರ ಸ್ಮಾರಕಗಳನ್ನು ನಿರ್ಮಿಸಲಾಗಿದೆ.

ಮಿಟ್ಟಿ ಸತ್ಯಾಗ್ರಹ ಯಾತ್ರೆಯಲ್ಲಿ ತೆಲಂಗಾಣದ ಸಾವಿರಾರು ರೈತರು ವಿಶೇಷವಾಗಿ ಭಾಗವಹಿಸಿದ್ದರು. ಪ್ರತಿಭಟನೆಯ ಭಾಗವಾಗಿ, ರಾಜ್ಯದ ವಿವಿಧ ಭಾಗಗಳ ರೈತರು ತಮ್ಮ ಹೊಲಗಳಿಂದ ಮಣ್ಣನ್ನು ಸಂಗ್ರಹಿಸಿ ದೆಹಲಿಯ ಗಾಜಿಪುರ ಗಡಿ ಮತ್ತು ಸಿಂಗು ಗಡಿಯಲ್ಲಿ ಪ್ರತಿಭಟನಾ ನಿರತ ರೈತರಿಗೆ ಕಳುಹಿಸಿದ್ದರು.

ಹುತಾತ್ಮ ಭಗತ್ ಸಿಂಗ್ ಅವರ ಗ್ರಾಮ ಖಟ್ಖಾದ್ ಕಲಾನ್, ಹುತಾತ್ಮ ಸುಖದೇವ್ ಅವರ ಗ್ರಾಮ ನೌಘರಾ ಜಿಲ್ಲೆ ಲೂಧಿಯಾನ, ಉಧಮ್ ಸಿಂಗ್ ಅವರ ಗ್ರಾಮ ಸುನಮ್ ಜಿಲ್ಲೆ ಸಂಗ್ರೂರ್, ಹುತಾತ್ಮ ಚಂದ್ರಶೇಖರ್ ಆಜಾದ್ ಅವರ ಜನ್ಮಸ್ಥಳ ಭಭಾರಗಳಿಂದಲೂ ಈ ಸ್ಮಾರಕಕ್ಕೆ ಮಣ್ಣು ಸೇರಿದೆ.
ಕರ್ನಾಟಕದ ಬಸವ ಕಲ್ಯಾಣ ಮತ್ತು ಬಳ್ಳಾರಿ, ಗುಜರಾತ್‌ನ 33 ಜಿಲ್ಲೆಗಳ 800 ಗ್ರಾಮಗಳು, ಮಹಾರಾಷ್ಟ್ರದ 150 ಗ್ರಾಮಗಳು, ರಾಜಸ್ಥಾನದ 150 ಗ್ರಾಮಗಳು, ಆಂಧ್ರಪ್ರದೇಶ ಮತ್ತು ತೆಲಂಗಾಣ ಗ್ರಾಮಗಳು, ಉತ್ತರ ಪ್ರದೇಶದ 75 ಗ್ರಾಮಗಳು, ಬಿಹಾರದ 30 ಗ್ರಾಮಗಳು, ಹರಿಯಾಣದ 60 ಗ್ರಾಮಗಳು, ಪಂಜಾಬ್‌ನ 78 ಗ್ರಾಮಗಳ ಮಣ್ಣು ‘ಮಿಟ್ಟಿ ಸತ್ಯಾಗ್ರಹ’ಕ್ಕೆ ಬಂದಿದೆ.
ಇದನ್ನೂ ಓದಿ: ಕೊರೊನಾ ಅಲ್ಲ ಅದಕ್ಕಿಂತ ದೊಡ್ಡದು ಬಂದರೂ ರೈತ ಹೋರಾಟ ನಿಲ್ಲದು- ರಾಕೇಶ್ ಟಿಕಾಯತ್


