ಕಳೆದ 10 ವರ್ಷಗಳಿಂದ ಕನ್ನಡಕ್ಕಾಗಿ ಸೇವೆ ಸಲ್ಲಿಸುತ್ತಿದ್ದ, ಕನ್ನಡಕ್ಕಾಗಿ ಗ್ರಂಥಾಲಯವನ್ನು ಕಟ್ಟಿದ್ದ ಮೈಸೂರಿನ ರಾಜೀವ್ ನಗರದ ಸೈಯದ್ ಇಸಾಕ್ ಎಂಬುವವರ ಗ್ರಂಥಾಲಯಕ್ಕೆ ಕಿಡಿಗೇಡಿಗಳು ಬೆಂಕಿಯಿಟ್ಟಿದ್ದಾರೆ. ಕೂಲಿ ಕಾರ್ಮಿಕರಾಗಿದ್ದ ಸೈಯದ್ ಇಸಾಕ್ ಅವರ ಗ್ರಂಥಾಲಯದಲ್ಲಿ 11 ಸಾವಿರ ಪುಸ್ತಕಗಳಿದ್ದು, ಎಲ್ಲವೂ ಬೆಂಕಿಗಾಹುತಿಯಾಗಿವೆ.
ಕನ್ನಡದ ಮೇಲಿನ ಪ್ರೀತಿಯಿಂದಾಗಿ ಕಳೆದ 10 ವರ್ಷಗಳಿಂದ ಪುಸ್ತಕಗಳನ್ನು ಸಂಗ್ರಹಿಸಿ ಕನ್ನಡ ಸಾರ್ವಜನಿಕ ಗ್ರಂಥಾಲಯ ಆರಂಭಿಸಿದ್ದರು. ಇದರಿಂದ ರಾಜೀವ್ ನಗರ ಮತ್ತು ಶಾಂತಿ ನಗರದ ನಿವಾಸಿಗಳಲ್ಲಿ ಜನಪ್ರಿಯ ಮುಖವಾಗಿದ್ದರು. ಇದನ್ನು ಸಹಿಸದ ಕೆಲವರು ಅನೇಕ ಬಾರಿ ಗಲಾಟೆ ಮಾಡಿದ್ದರು. ಈಗ ಶುಕ್ರವಾರ ಬೆಳಗಿನ ಜಾವದಲ್ಲಿ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿದ್ದಾರೆ.
ಸೈಯದ್ ಇಸಾಕ್ ಅವರ ಸಾರ್ವಜನಿಕ ಗ್ರಂಥಾಲಯದಲ್ಲಿ 3 ಸಾವಿರ ಕನ್ನಡ ಪುಸ್ತಕಗಳು, ಭಗವದ್ ಗೀತೆಯ 3 ಸಾವಿರ ಪ್ರತಿಗಳು, 3 ಸಾವಿರ ಕುರಾನ್ ಪ್ರತಿಗಳು, 1 ಸಾವಿರ ಉರ್ದು ಪುಸ್ತಕಗಳು ಹಾಗೂ ಬೈಬಲ್‌ನ 1 ಸಾವಿರ ಕನ್ನಡ ಪ್ರತಿಗಳು ಇದ್ದವು. ಇವುಗಳಲ್ಲಿ ಬಹಳಷ್ಟು ದಾನಿಗಳಿಂದ ಸಂಗ್ರಹಿಸಿದ್ದು ಎಂದು ಸೈಯದ್ ಇಸಾಕ್ ಹೇಳಿದ್ದಾರೆ.
ಇದನ್ನೂ ಓದಿ: ರೈತರ ಮೇಲೆ ರಸಗೊಬ್ಬರ ದರ ಹೆಚ್ಚಳದ ಬರೆ: ಸರ್ಕಾರದ ಕ್ರಮ ಖಂಡಿಸಿದ ಎಸ್‌ಕೆಎಂ
ಶಿಕ್ಷಣದಿಂದ ವಂಚಿತರಾಗಿದ್ದ ಸೈಯದ್ ಇಸಾಕ್, ಅಂಡರ್ ಗ್ರೌಂಡ್ ಡ್ರೈನೇಜ್ (ಯುಜಿಡಿ) ಕ್ಲೀನರ್ ಆಗಿ ಕೆಲಸ ಮಾಡುತ್ತಾರೆ. ಜನರಲ್ಲಿ ಓದುವ ಹವ್ಯಾಸವನ್ನು ಬೆಳೆಸಲು ಮತ್ತು ಕನ್ನಡ ಕಲಿಯಲು ಪ್ರೋತ್ಸಾಹಿಸುವ ಉದ್ದೇಶದಿಂದ, ಈ ಸಾರ್ವಜನಿಕ ಗ್ರಂಥಾಲಯವನ್ನು ಆರಂಭಿಸಿದ್ದರು.
ಅಮ್ಮರ್ ಮಸೀದಿ ಬಳಿಯ ರಾಜೀವ್ ನಗರದ ಎರಡನೇ ಹಂತದ ಕಾರ್ಪೊರೇಷನ್ ಪಾರ್ಕ್ ಒಳಗೆ ಶೆಡ್ ಹಾಕಿ ಸ್ಥಾಪಿಸಿದ್ದರು. ಪ್ರತಿದಿನ, 100-150 ಕ್ಕೂ ಹೆಚ್ಚು ಜನರು ಅವರ ಗ್ರಂಥಾಲಯಕ್ಕೆ ಭೇಟಿ ನೀಡುತ್ತಿದ್ದರು. ಕನ್ನಡ, ಇಂಗ್ಲಿಷ್, ಉರ್ದು ಮತ್ತು ತಮಿಳು ಸೇರಿದಂತೆ 17 ಕ್ಕೂ ಹೆಚ್ಚು ಪತ್ರಿಕೆಗಳನ್ನು ಇಸಾಕ್ ಖರೀದಿಸುತ್ತಿದ್ದರು.
“ಬೆಳಿಗ್ಗೆ 4 ಗಂಟೆಗೆ, ಗ್ರಂಥಾಲಯದ ಪಕ್ಕದಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರು ಒಳಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ನನಗೆ ಮಾಹಿತಿ ನೀಡಿದರು. ನಾನು ಗ್ರಂಥಾಲಯಕ್ಕೆ ಧಾವಿಸಿ, ಬೆಂಕಿ ಆರಿಸಲು ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ. ಪುಸ್ತಕಗಳು ಬೂದಿಯಾಗುವುದನ್ನು ನೋಡಿದೆ. ”ಎಂದು ಅಳಲು ತೋಡಿಕೊಂಡಿದ್ದಾರೆ.

ಈ ಘಟನೆಯ ನಂತರ, ಸೈಯದ್ ಇಸಾಕ್ ಉದಯಗಿರಿ ಪೊಲೀಸ್ ಠಾಣೆಯಲ್ಲಿ, ದುಷ್ಕರ್ಮಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 436 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದು, ಅಪರಾಧಿಗಳನ್ನು ಬಂಧಿಸಲು ತನಿಖೆ ಆರಂಭಿಸಿದ್ದಾರೆ.
ಘಟನೆಯಿಂದ ನೊಂದಿದ್ದರು ಕೂಡ ಮತ್ತೆ ಗ್ರಂಥಾಲಯವನ್ನು ಕಟ್ಟುತ್ತೇನೆ ಎಂದಿದ್ದಾರೆ. ಇಸಾಕ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಬೆಂಬಲ ವ್ಯಕ್ತವಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, “ಮೈಸೂರಿನ ಅಕ್ಷರ ಪ್ರೇಮಿ ಸೈಯದ್ ಇಸಾಕ್ ಅವರು ಕಷ್ಟಪಟ್ಟು ಕಟ್ಟಿ ನಡೆಸುತ್ತಿದ್ದ ಸಾರ್ವಜನಿಕ ಗ್ರಂಥಾಲಯವನ್ನು ಸುಟ್ಟುಹಾಕಿರುವುದು ಹೇಯಕೃತ್ಯ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಅಕ್ಷರವಿರೋಧಿ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಲು ಕ್ರಮ ಕೈಗೊಳ್ಳುವದರ ಜೊತೆಗೆ ಸೈಯದ್ ಅವರಿಗೆ ಸೂಕ್ತ ಪರಿಹಾರವನ್ನೂ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ಮೈಸೂರಿನ ಅಕ್ಷರ ಪ್ರೇಮಿ ಸೈಯದ್ ಇಸಾಕ್ ಅವರು ಕಷ್ಟಪಟ್ಟು ಕಟ್ಟಿ ನಡೆಸುತ್ತಿದ್ದ ಸಾರ್ವಜನಿಕ ಗ್ರಂಥಾಲಯವನ್ನು ಸುಟ್ಟುಹಾಕಿರುವುದು ಹೇಯಕೃತ್ಯ.@CMofKarnataka ಅವರು,
ಈ ಅಕ್ಷರವಿರೋಧಿ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಲು ಕ್ರಮ ಕೈಗೊಳ್ಳುವದರ ಜೊತೆಗೆ ಸೈಯದ್ ಅವರಿಗೆ ಸೂಕ್ತ ಪರಿಹಾರವನ್ನೂ ನೀಡಬೇಕು. pic.twitter.com/Mq6sqrMYNE— Siddaramaiah (@siddaramaiah) April 10, 2021
ಇದನ್ನೂ ಓದಿ: ಬೀದಿಬದಿ ವಾಸಿಸುವ ಬಾಲಕಿಯರಿಗೆ ಸಿಎಎ, ಎನ್‌ಆರ್‌ಸಿ ಪಾಠ ಮಾಡಿದ್ದಕ್ಕೆ ದೇಶದ್ರೋಹ ಪ್ರಕರಣ ದಾಖಲು!


