4ನೇ ಹಂತದ ಮತದಾನದ ಹಿಂದಿನ ದಿನ ರಿಪ್ಲಬಿಕ್ ಟಿವಿಯಲ್ಲಿ, ‘ಸಂಡೇ ಡಿಬೇಟ್ ವಿತ್ ಅರ್ನಾಬ್ ಗೋಸ್ವಾಮಿ’ ಕಾರ್ಯಕ್ರಮದ ಟೈಟಲ್ಲೇ #ModiWaveElection…

ಚರ್ಚೆಯ ಸಂದೇಶ ಏನಾಗಿರಬೇಕು ಎಂಬುದನ್ನು ಮೊದಲೇ ನಿರ್ಧರಿಸಿಯೇ ಗೋಸ್ವಾಮಿ ಕಾರ್ಯಕ್ರಮ ರೂಪಿಸಿರುತ್ತಾರಲ್ಲವಾ? ಚರ್ಚೆ ಶುರುವಾಗುತ್ತಲೇ ಮರಿ ಗೋಸ್ವಾಮಿಗಳಾಗಿರುವ ಅವರ ಅಭಿಮಾನಿಗಳು ತಮ್ಮ ಮನದಿಂಗಿತವನ್ನು ಟ್ವೀಟ್ ಮಾಡಲು ಶುರು ಮಾಡಿಬಿಡುತ್ತಾರೆ.
ಚರ್ಚೆಯಲ್ಲಿ ಬಿಜೆಪಿ ವಿರೋಧಿ ಪ್ಯಾನಲಿಸ್ಟ್ ಅರ್ಥಪೂರ್ಣವಾಗಿ ವಾದ ಮಂಡಿಸತೊಡಗಿದರೆ, ಗೋಸ್ವಾಮಿ ಚೀರಾಡಿ, ಹಾರಾಡಿ ವಿಷಯವನ್ನು ಎತ್ತೆತ್ತಲೋ ಒಯ್ದು ಬಿಡುತ್ತಾರೆ. ಮೊನ್ನೆ ರವಿವಾರವೂ ಅವರೂ ಅದನ್ನೇ ಮಾಡಿದರು. ಇದು ‘ಮೋದಿ ಅಲೆ ಚುನಾವಣೆ’ ಎಂಬ ಅವರ ನಿಲುವನ್ನು ಮುನ್ನೆಲೆಗೆ ತರಲು ಹರಸಾಹಸ ಮಾಡಿದರು….
ಮಂಡ್ಯದ ನಂತರ ನಮ್ಮ ಚಾನೆಲಗಳಿಗೆ ಆಕರ್ಷಕವಾಗಿ ಕಂಡಿದ್ದು ವಾರಣಾಸಿ. ಮೋದಿಯವರ ನಾಮಿನೇಶನ್ ಅವುಗಳ ಪಾಲಿಗೆ ‘ಸ್ವಾಮಿ-ನೇಷನ್’ ಅನಿಸಿರಬೇಕು. ಇಂಗ್ಲಿಷ್, ಹಿಂದಿ ಮತ್ತು ಪ್ರಾದೇಶಿಕ ಚಾನೆಲ್ಲುಗಳಲ್ಲಿ ಎರಡು ದಿನ ವಾರಣಾಸಿಯ ಜಪ. ಪ್ರಧಾನಿಯ ನಾಮಪತ್ರ ಸಲ್ಲಿಕೆ ಓಕೆ, ಜನರಿಗೆ ಅಲ್ಲಿನ ವಾತಾವರಣ ತೋರಿಸಬೇಕು, ಅದೂ ಸರಿ. ಆದರೆ, ರಾಜಕೀಯದೊಂದಿಗೆ ಧಾರ್ಮಿಕತೆಯನ್ನು ಬೆರೆಸಿ, ವೀಕ್ಷಕರಲ್ಲಿ ಕಾಶಿ ವಿಶ್ವನಾಥನ ಬಗ್ಗೆ ಇರಬಹುದಾದ ಭಕ್ತಿಯನ್ನು ಮೋದಿಗೆ ‘ಟ್ರಾನ್ಸ್‍ಫರ್’ ಮಾಡಲು ಹೆಣಗಲಾಯಿತು.
ರಾಜ್ಯದಲ್ಲಿ ಮತದಾನ ಮುಗಿದಿದ್ದರೂ ಕನ್ನಡದ ಚಾನೆಲ್‍ಗಳೂ ಹಿಂದಿಯವರಂತೆ ಉತ್ಸುಕವಾಗಿಯೇ ನಾಮಪತ್ರ ಸಲ್ಲಿಕೆಯನ್ನು ಪ್ರಸಾರ ಮಾಡಿದರು. ಬಹುಷ: ಇದು ಪ್ಯಾಕೇಜ್‍ನ ಭಾಗವಾಗಿರಬಹುದು.
ದಿಗ್ವಿಜಯಕ್ಕೆ ಯುದ್ಧ ಗೆದ್ದ ಸಂಭ್ರಮ. ನೇರ ಪ್ರಸಾರದ ಜೊತೆಗೆ ವಿಶೇಷ ಕಾರ್ಯಕ್ರಮ ಬೇರೆ! ‘ವೈರಿಪಡೆಗೆ ನಮೋ ಖಬರ್‍ದಾರ್ ಮೆಸೇಜ್!’ – ಮೋದಿ ನಾಮಿನೇಶನ್ ಭಾಷಣ ಮಾಡುವ ಮೊದಲೇ ಈ ತರಹದ ಹೆಡ್ಡಿಂಗ್! ಗಂಗಾ ಆರತಿ ಮೂಲಕ ವಿಪಕ್ಷಗಳಿಗೆ ವಾರ್ನಿಂಗ್ ಕೊಟ್ಟರೆಂದೇ? ಅಲ್ಲಿ ಸೇರಿಸಿದ ಜನರನ್ನು ಇಟ್ಟುಕೊಂಡು ದಿಗ್ವಿಜಯ ಹೀಗೆ ಹೇಳಿತೋ ಗೊತ್ತಾಗಲಿಲ್ಲ!
ಟಿವಿ9 ಪಾಲಿಗೆ ಮೋದಿ ‘ಕಾಶಿಯ ಕೊತ್ವಾಲ’… ವಿಶ್ವನಾಥನೇ ಬಲ್ಲ ಇದರ ಮರ್ಮ! ನ್ಯೂಸ್18ನಲ್ಲಿ ವಿಶೇಷ ಕಾರ್ಯಕ್ರಮ- ‘ದಶಾಶ್ವಮೇಧ ರಹಸ್ಯ, ಗಂಗಾ ಆರತಿ (ಅವರ ಪರದೆ ಮೇಲೆ ಗಂಗಾರತಿ ಎಂದಿತ್ತು!) ವಿಸ್ಮಯ, ಪ್ರತ್ಯಕ್ಷರಾದ ಸಾಧುಗಳು’….ಸೂಪರ್ ಮಾಮ! ಪ್ರತ್ಯಕ್ಷವಾಗುವವರೆಗೆ ಸಾಧುಗಳು ಎಲ್ಲಿದ್ದರು? ಅಥವಾ ಮೇಲಿಂದ ಉದುರಿ ಬಿದ್ದರಾ?
ಬಿಟಿವಿಯವರಂತೂ ರಾಧಿಕಾ ಹಿರೇಗೌಡರ್ ಅವರನ್ನೇ ವಾರಣಾಸಿಯಲ್ಲಿ ಲ್ಯಾಂಡ್ ಮಾಡಿಸಿದ್ದರು. ರಾಧಮ್ಮರಂತೂ ‘ಏನ್ ವೈಭವ, ಹಬ್ಬದ ಸಂಭ್ರಮ, ಎಲ್ಲೆಲ್ಲೂ ಎಲ್ಲೆಲ್ಲೂ ಎಲ್ಲೆಲ್ಲೂ…ಎಲ್ಲೆಲ್ಲೂ (ನಾಲ್ಕು ದಿಕ್ಕುಗಳ ಹೊರಳಿದ್ದರಿಂದ 4 ಸಲ ಹೇಳಿದರೋ?)…ಜನ ಸ್ವ-ಇಚ್ಛೆಯಿಂದ ಪಾಲ್ಗೊಂಡು ತಾವೇ ನಗರವನ್ನು ಸಿಂಗರಿಸಿದ್ದಾರೆ…’ -ನಾನ್‍ಸ್ಟಾಪ್ ಹೊಗಳಿಕೆಯಲ್ಲೇ ಕಾಲ ಕಳೆದರು.
ಮುಂದಿನ ಹಂತದ ಚುನಾವಣೆಗಳು ಹಿಂದಿ ಬೆಲ್ಟ್‍ನಲ್ಲೇ ಜಾಸ್ತಿ. ಹೀಗಾಗಿ ಹಿಂದಿ ಚಾನೆಲ್‍ಗಳಿಗೆ ವಿಶೇಷ ಪ್ಯಾಕೇಜ್ ಇದ್ದಂತಿತ್ತು. ಝೀ ಚಾನೆಲ್ ಪಾಲಿಗೆ ಶಿವನೇ ನಾಮಿನೇಶನ್‍ಗೆ ಬಂದಂತಿತ್ತು. ಆಜ್‍ತಕ್‍ನಲ್ಲಿ ನಿರೂಪಕಿ ಮತ್ತು ವಾರಣಾಸಿಯಲ್ಲಿ ಓಡಾಡುತ್ತಿದ್ದ ವರದಿಗಾರ್ತಿಯ ನಡುವಿನ ಮಾತು ಹೇಗಿದ್ದವು ಎಂದರೆ,
-ಯಾ ಪರಿ ಮಂದಿ…ಸಂದಿಗೊಂದಿಯಲ್ಲೆಲ್ಲ ಮಂದಿ…ಅಬಬಾ….ನಾ ನೋಡೆ ಇಲ್‍ಬಿಡು ಇಂತಹ ಸಂಭ್ರಮ…
-ಹೌದು ಹೌದು ನಾವು ನೋಡ್ತಾ ಇದ್ದೇವಲ್ಲ. ನೀನೇ ಲಕ್ಕಿ ಕಣೆ…ವಾರಣಾಸಿಯಲ್ಲೇ ನಿಂತು ಇದನ್ನ ಕಣ್ತುಂಬಿಕೊಳ್ಳೋ ಭಾಗ್ಯ…
-ಧೂಮ್‍ಧಾಮ್ ಸೆ ಆಯೇಗಿ ಸರ್ಕಾರ್
ಈ ಲೈವ್ ವರದಿಯ ಪ್ರಾಯೋಜಕರು: ಬಿಗ್‍ಬಾಸ್ ಡಾಲರ್ ಬನಿಯನ್ ಮತ್ತು ಅಂಡರ್‍ವೇರ್ ಕಂಪನಿ!
‘ವೀಕೆಂಡ್ ವಿಥ್ ರಮೇಶ್’ ನೋಡಿದ ಮೇಲೆ ಅನಿಸಿದ್ದು: ಮೋದಿಯವರನ್ನು ಅತಿಥಿಯಾಗಿ ಕರೆದರೆ ಹೇಗೆ? ಓದಿದ ಸ್ಕೂಲ್, ಚಾ ಮಾರಿದ ಸ್ಟೇಷನ್, ಅವರ ಬಾಲ್ಯದ ಸಹಪಾಠಿಗಳನ್ನು ಕರೆಸಲು ಸಾಧ್ಯವಾ? ಅವರ ತಾಯಿ ಕರೆಸಬಹುದು, ಪತ್ನಿ ಬರುವುದು ಡೌಟು… ಸರ್, ಮಾವಿನ ಹಣ್ಣು ತಿಂದು ತೋರಿಸಿ ಅನ್ನೋದು…..ಇವೆಲ್ಲ ಕಷ್ಟ ಅಲ್ಲವಾ ರಮೇಶ್ ಅರವಿಂದ?


