ಬಿಜೆಪಿ ಮಸ್ಕಿಯಲ್ಲಿ ಒಂದು ವೋಟಿಗೆ ಸಾವಿರ ನಿಗದಿ ಮಾಡಿದೆ ಎಂದ ಆರೋಪಗಳು ಕೇಳಿ ಬಂದಿವೆ. ಇದಕ್ಕೆ ಸಾಕ್ಷಿ ಎಂಬಂತೆ ಮಸ್ಕಿಯ ತುರ್ವಿಹಾಳದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲರಿಗೆ ಮತ ನೀಡಿ ಎಂದು ಹಣ ಹಂಚುತ್ತಿದ್ದ ಮೂವರನ್ನು ನಿನ್ನೆ ಬಂಧಿಸಲಾಗಿದ್ದು, ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಣ ಹಂಚುತ್ತಿದ್ದ ಮೂವರು ಯುವಕರು ತಾವು ಹಾಸನದವರೆಂದು ಪೊಲೀಸರ ಎದುರು ಒಪ್ಪಿಕೊಂಡಿದ್ದು, ನವೀನ್, ಸಚಿನ್ ಮತ್ತು ಆನಂದ್ ಎಂಬ ಯುವಕರ ಮೇಲೆ ಪ್ರಕರಣ ದಾಖಲಾಗಿದೆ. ಇವರಿಂದ 81 ಸಾವಿರ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮಸ್ಕಿ: ಬಿಜೆಪಿ ಹಣ ಹಂಚಿಕೆ ಆರೋಪದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್
ತುರ್ವಿಹಾಳದ ಶ್ರೀನಿವಾಸ್ ಕ್ಯಾಂಪ್ ರಸ್ತೆ ಬಳಿಯ ವಾರ್ಡ್ 1 ಮತ್ತು 3 ರಲ್ಲಿ ಮನೆಮನೆಗೆ ತೆರಳಿ, ಪ್ರತಾಪ ಗೌಡರಿಗೆ ಮತ ನೀಡುವಂತೆ ಹಣ ಹಂಚುತ್ತಿದ್ದಾಗ ಕಾಂಗ್ರೆಸ್ ಕಾರ್ಯಕರ್ತರು ಇವರನ್ನು ಹಿಡಿದು, ’ನೀವೆಲ್ಲ ಎಲ್ಲಿಂದ ಬಂದಿರಲೇ?’ ಎಂದು ಆಕ್ರೋಶ ವ್ಯಕ್ತಪಡಿಸುವ ವಿಡಿಯೋ ವೈರಲ್ ಆಗಿದೆ. ನಂತರ ಕಾಂಗ್ರೆಸ್ ಕಾರ್ಯಕರ್ತರು ಈ ಮೂವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆ ಸಂದರ್ಭದಲ್ಲಿ ಠಾಣೆಗೆ ಬಂದ ಚುನಾವಣಾ ಜಾಗೃತ ದಳದ ಅಧಿಕಾರಿ ಎಂ. ಬೀರಪ್ಪ ಅವರ ತಂಡ ಈ ಮೂವರನ್ನು ವಿಚಾರಣೆಗೆ ಒಳಪಡಿಸಿದೆ. ಪ್ರಕರಣ ದಾಖಲಿಸಿ ಹಾಗೇ ಬಿಟ್ಟು ಕಳಿಸಲಾಗಿದೆಯೇ ಎಂಬ ಅನುಮಾನವೂ ಜನರಲ್ಲಿದೆ. ಈ ಕುರಿತು ಹೆಚ್ಚಿನ ವಿವರಣೆಗಾಗಿ ತುರ್ವಿಹಾಳ್ ಠಾಣೆಯ ಪಿಎಸ್‌ಐ ಯರಿಯಪ್ಪಂಗಡಿಯವರನ್ನು ಫೋನಿನಲ್ಲಿ ಸಂರ್ಕಿಸಲು ಯತ್ನಿಸಿದೆವು. ಅವರು ಲಭ್ಯವಾಗಿಲ್ಲ.
ಇದನ್ನೂ ಓದಿ: ಮಮತಾ ಬ್ಯಾನರ್ಜಿ ವಿಚಾರದಲ್ಲಿ ಚುನಾವಣಾ ಆಯೋಗ ಪಕ್ಷಪಾತ ತೋರುತ್ತಿದೆ- ಶಿವಸೇನೆ
ಹೊರಗಿನವರ ಆಟ-ಬಂಗಾಳದಲ್ಲೂ, ಇಲ್ಲೂ
ಬಂಗಾಳದಲ್ಲೂ ಬಿಜೆಪಿ ಸಾವಿರಾರು ಸಂಖ್ಯೆಯಲ್ಲಿ ಹೊರಗಿನವರನ್ನು ಕರೆತಂದು ಗಲಭೆ ಮತ್ತು ಕೊವಿಡ್ ಹರಡುವಿಕೆಗೆ ಕಾರಣವಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸುತ್ತಲೇ ಇದ್ದಾರೆ.
ಮಸ್ಕಿಯಲ್ಲೂ ಹಾಸನ, ಶಿರಾ, ಶಿವಮೊಗ್ಗ, ಮೈಸೂರು ಕಡೆಯ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಹಣ ಹಂಚಲು ಕರೆ ತರಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಕಾರ್ಯಾಚರಣೆ ಹಿಂದೆ ವಿಜಯೇಂದ್ರ ಇದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರನ್ನೂ ಸಲ್ಲಿಸಿದೆ.
ಆದರೆ, ಆಯೋಗ ಇದನ್ನು ಗಂಭಿರವಾಗಿ ಪರಿಗಣಿಸಿಲ್ಲ, ಇದಕ್ಕೆ ಸರ್ಕಾರದ ಪ್ರಭಾವ ಕಾರಣ ಎಂದು ರೈತ ಹೋರಾಟಗಾರರು ಆರೋಪಿಸಿದ್ದಾರೆ. ಹಣ ಹಂಚುವ ವಿಡಿಯೋಗಳು ಹರಿದಾಡಿದರೂ ಇಲ್ಲಿನ ಚುನಾವಣಾ ಜಾಗೃತಾ ಅಧಿಕಾರಿಗಳು ಮತ್ತು ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡುತ್ತಿದ್ದಾರೆ.
ಮಸ್ಕಿ ಪಕ್ಕದ ಮುದಗಲ್, ಲಿಂಗಸೂಗುರು ಮತ್ತು ಸಿಂಧನೂರಿನ ಲಾಡ್ಜ್‌ಗಳ ಮೇಲೆ ದಾಳಿ ನಡೆಸಿದರೆ ನೂರಾರು ಕಾರ್ಯಕರ್ತರು ಮತ್ತು ಅಪಾರ ಹಣ ಸಿಗಬಹುದು ಎಂದು ರೈತ ಹೋರಾಟಗಾರರು ಹೇಳುತ್ತಲೇ ಬಂದಿದ್ದಾರೆ. ಇಂದು ರಾತ್ರಿ ಪ್ರಚಾರ ಅಂತ್ಯವಾಗಲಿದ್ದು ಬಿಜೆಪಿ ಸಾಕಷ್ಟು ಹಣ ಹರಿಸಲಿದೆ ಎಂದೂ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಇಫ್ತಾರ್ ಕೂಟ ನಡೆಸುವಂತಿಲ್ಲ, ರಂಜಾನ್‌ಗೆ ರಾಜ್ಯದಲ್ಲಿ ಹೊಸ ಮಾರ್ಗಸೂಚಿ


