ಹೊರಗಿಂದ ಬಂದವರು ಮಸ್ಕಿಯಲ್ಲಿ ಬಿಜೆಪಿ ಪರವಾಗಿ ಸಿಕ್ಕಾಪಟ್ಟೆ ಹಣ ಹಂಚುತ್ತಿದ್ದಾರೆ ಎಂಬ ಆರೋಪ ಇಲ್ಲಿ ಕೇಳಿ ಬರುತ್ತಿದೆ. ಬಿಜೆಪಿ ಯುವ ಮುಖಂಡ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಇದರ ನೇತೃತ್ವ ವಹಿಸಿದ್ದಾರೆ ಎಂದು ಕಾಂಗ್ರೆಸ್ ಮತ್ತು NRBC-5-ಎ ಕಾಲುವೆ ನೀರಾವರಿ ಹೋರಾಟದ ಮುಖಂಡರು ಆಪಾದಿಸಿದ್ದಾರೆ.
ಬಿಜೆಪಿ ಬೆಂಬಲಿಗರು ಹಣ ಹಂಚುವ ವಿಡಿಯೋ ಕೂಡ ವೈರಲ್ ಆಗಿತ್ತು. ಮಸ್ಕಿ ಕ್ಷೇತ್ರದ ಕವಿತಾಳ್ ಪಟ್ಟಣದಲ್ಲಿ ಈ ಕುರಿತು ಎಫ್‌ಐಆರ್ ಕೂಡ ದಾಖಲಾಗಿದೆ.
“ದಾವಣಗೆರೆ, ಮೈಸೂರು, ಬೆಂಗಳೂರು, ಹಾಸನ, ಮಂಡ್ಯ ಕಡೆಯ ಆರ್‌ಎಸ್‌ಎಸ್ ಕಾರ್ಯಕರ್ತರು ಹಣ ಹಂಚಲೆಂದೇ ನೂರಾರು ಸಂಖ್ಯೆಯಲ್ಲಿ ಬಂದಿದ್ದಾರೆ. ಅವರು ಮಸ್ಕಿ ವ್ಯಾಪ್ತಿಯ ಹೊರಗಡೆ ವಾಸ್ತವ್ಯ ಹೂಡಿದ್ದು, ದಿನವೂ ಮಸ್ಕಿ ಕ್ಷೇತ್ರದಲ್ಲಿ ಹಣ ಹಂಚುವ ಕೆಲಸದಲ್ಲಿ ನಿರತರಾಗಿದ್ದಾರೆ” ಎಂದು ನೀರಾವರಿ ಹೋರಾಟಗಾರರು ಮತ್ತು ಜನಸಾಮಾನ್ಯರು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಮಸ್ಕಿ ಬೆವರು ಬೆಂಗಳೂರಿನಲ್ಲಿ: ಬಸವಕಲ್ಯಾಣದಲ್ಲಿ ನಾರಾಯಣರಾವ್ ಸರಳತೆ ಉಳಿಯುವುದೇ?
ಮಸ್ಕಿ ಕ್ಷೇತ್ರಕ್ಕೆ ಹೊಂದಿಕೊಂಡ ಮುದಗಲ್, ಲಿಂಗಸೂಗುರು ಮತ್ತು ಸಿಂಧನೂರಿನಲ್ಲಿ ಇವರೆಲ್ಲ ವಾಸ್ತವ್ಯ ಮಾಡಿದ್ದಾರೆ ಎಂಬುದು ಕಾಂಗ್ರೆಸ್ ಕಾರ್ಯಕರ್ತರು ಮತ್ತು ರೈತ ಹೋರಾಟಗಾರರ ಆರೋಪವಾಗಿದೆ.
ಮಸ್ಕಿ ಕ್ಷೇತ್ರದ ವ್ಯಾಪ್ತಿಗೆ ಬರುವ ಸಿಂಧನೂರು ತಾಲೂಕಿನ ಮಾಟೂರಿನ ಯುವರೈತ ಬಸು ಸಂಜಿ ಫೇಸ್‌ಬುಕ್‌ನಲ್ಲಿ ಹಣ ಹಂಚುವಿಕೆ ಕುರಿತಾದ ವಿವರ ಹಾಕಿಕೊಂಡಿದ್ದಾರೆ.
ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಬಸು ಸಂಜಿ, “ಹಿಂದೆ ನಾನು ಮೋದಿ ಅಭಿಮಾನಿಯಾಗಿದ್ದೆ. ಆದರೆ ಈಗ ಆ ಭ್ರಮೆ ಕಳಚಿದೆ. ಈಗ ಇಲ್ಲಿ ಬಿಜೆಪಿ ಸೋಲಿಸಲು ನಾವು ತೀರ್ಮಾನಿಸಿದ್ದೇವೆ” ಎಂದರು.
ಇದನ್ನೂ ಓದಿ: ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದ ಮಾಜಿ ಶಾಸಕ ಪ್ರಕಾಶ್ ಖಂಡ್ರೆ ಮತ್ತೆ ಬಿಜೆಪಿಗೆ!
ಮಸ್ಕಿಯಲ್ಲಿ ಬಿಜೆಪಿಯವರು ರಂದು ಆರೋಪಿಸಲಾಗಿರುವ ಹಲವರು ಹಣ ಹಂಚಿ ಬಿಜೆಪಿಗೇ ಮತ ಹಾಕಬೇಕು ಎಂದು ಪ್ರಮಾಣ ಮಾಡಿಸಿಕೊಂಡ ಕನಿಷ್ಠ ಮೂರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನಿನ್ನೆಯಷ್ಟೇ ಬಿಜೆಪಿ ನಾಯಕ ನಂದೀಶರೆಡ್ಡಿ ಹಣ ಹಂಚಿದರು ಎನ್ನಲಾದ ವಿಡಿಯೋ ವೈರಲ್ ಆಗಿದೆ.
ಚುನಾವಣಾ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಮಸ್ಕಿಯಲ್ಲಿ 40-50 ಕೋಟಿ ರೂಪಾಯಿ ಖರ್ಚು ಮಾಡಲು ಹೊರಟಿದೆ ಎಂದು ಆರೋಪಿಸಿದ್ದರು. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ ಎಂದು ಹೇಳಲಾಗಿದೆ.
“ಹಣ ಹಂಚಿಕೆ ಕುರಿತು ನಮ್ಮ ರಾಜ್ಯ ನಾಯಕರು ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದಾರೆ. ವಿಜಯೇಂದ್ರ ಅವರು ದುಡ್ಡು ಹಂಚಲು ಹಾಸನ, ಶಿರಾ, ಶಿಮೊಗ್ಗದವರನ್ನು ಕರೆ ತಂದಿದ್ದಾರೆ” ಎಂದು ಮಸ್ಕಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ ತಿಳಿಸಿದ್ದಾರೆ.