ಸಂಪನ್ಮೂಲದ ಅಭಾವ ಎನ್ನುತ್ತಿರುವ ಜೆಡಿಎಸ್ ಪಕ್ಷ ಬಸವಕಲ್ಯಾಣದಲ್ಲಿ ಮುಸ್ಲಿಂ ಕ್ಯಾಂಡಿಡೇಟ್ ಹಾಕಿದೆ. ಆದರೆ ಅಕ್ಕ ಪಕ್ಕದಲ್ಲೇ ಇಬ್ಬರು ಎಂಎಲ್‌ಎ ಇದ್ದರೂ ಮಸ್ಕಿ ಉಪಚುನಾವಣೆಗೆ ಅಭ್ಯರ್ಥಿ ಹಾಕಿಲ್ಲ.
ಈಗ ರಾಯಚೂರು ಜಿಲ್ಲೆಯ ಮಸ್ಕಿಗೆ ಉಪ ಚುನಾವಣೆ ನಡೀತಾ ಇದೆ. ವಿಶೇಷ ಅಂದರೆ ಇಲ್ಲಿ ಕಳೆದ ಸಲದ ಕಾಂಗ್ರೆಸ್ ಅಭ್ಯರ್ಥಿ ಈಗ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ, ಕಳೆದ ಸಲದ ಬಿಜೆಪಿಯ ಕ್ಯಾಂಡಿಡೇಟ್ ಈ ಸಲ ಕಾಂಗ್ರೆಸ್ ಕ್ಯಾಂಡಿಡೇಟ್. ಇವುಗಳ ನಡುವೆ ಜೆಡಿಎಸ್ ಇಲ್ಲಿ ಬೆಳೆಯುವ ಅಪೂರ್ವ ಅವಕಾಶವನ್ನು ಕೈ ಚೆಲ್ಲಿತೆ..?
ಉಪ ಚುನಾವಣೆಯಲ್ಲಿ ಕ್ಯಾಂಡಿಡೇಟ್ ಹಾಕಲ್ಲ ಅಂತ ದೇವೇಗೌಡರು ಹೇಳಿದರು. ಕುಮಾರಸ್ವಾಮಿ ಕೂಡ ಅದನ್ನೆ ಹೇಳಿದ್ದರು. ಆದರೆ, ಭೂಕಾಯ್ದೆ ಪರ ಮತ್ತು ಸ್ಪೀಕರ್ ವಿಷಯದಲ್ಲಿ ಜೆಡಿಎಸ್ ನಿಲುವನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡು, ಜೆಡಿಎಸ್ ಬಿಜೆಪಿ ಪರ ನಿಲ್ತಾ ಇದೆ ಎಂದ ಕೂಡಲೇ ಎಚ್ಚೆತ್ತುಕೊಂಡ ಕುಮಾರಸ್ವಾಮಿ, ಉಪ ಚಹುನಾವಣೆಗಳಲ್ಲಿ ಎಲ್ಲ ಕಡೆ ಕ್ಯಾಂಡಿಡೇಟ್ ಹಾಕುವುದಾಗಿ ಹೇಳಿದ್ದರು.
ಆದರೆ ಈಗ ಸಂಪನ್ಮೂಲದ ಕೊರತೆಯ ಕಾರಣದಿಂದ ಅವರು ಎಲ್ಲ ಕಡೆ ಅಭ್ಯರ್ಥಿ ಹಾಕಿಲ್ಲ! 3 ಉಪ ಚುನಾವಣೆ ಪೈಕಿ ಬಸವಕಲ್ಯಾಣದಲ್ಲಿ ಮುಸ್ಲಿಂ ಅಭ್ಯರ್ಥಿ ಹಾಕಲು ಅವರಿಗೆ ಸಂಪನ್ಮೂಲದ ಕೊರತೆ ಕಾಣಲಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.
ಇದನ್ನೂ ಓದಿ: ಮಸ್ಕಿ ಉಪಚುನಾವಣೆ| ಅಭ್ಯರ್ಥಿಗಳು ಅದಲು-ಬದಲು: ಮೀಸಲು ಕ್ಷೇತ್ರದಲ್ಲಿ ‘ಗೌಡರ’ ಸ್ಪರ್ಧೆ!
ಆದರೆ ಒಳ್ಳೇ ಫೈಟ್ ಕೊಡುವ ಸಾಧ್ಯತೆಯಿದ್ದ ಮಸ್ಕಿಯಲ್ಲಿ ಜೆಡಿಎಸ್ ಕ್ಯಾಂಡಿಡೇಟ್ ಹಾಕಿಲ್ಲ. ಸಂಪನ್ಮೂಲದ ಕೊರತೆಯೇ? ಸಂಪನ್ಮೂಲ ಅಂದರೆ ಏನು? ಅದು ನೂರಾರು ಕೋಟಿ ರೊಕ್ಕವೇ? ಅಥವಾ ಅಲ್ಲಿರುವ ಮತದಾರರರೇ? ಈ ನಿಟ್ಟಿನಲ್ಲಿ ಯೋಚಿಸಿದಾಗ ಒಕ್ಕಲಿಗರ ಪಾರ್ಟಿ ಎಂಬ ಹಣೆಪಟ್ಟಿ ಅಚಿಟಿಸಿಕೊಂಡಿರುವ ಜೆಡಿಎಸ್‌ಗೆ ಹೈದರಾಬಾದ್ ಕರ್ನಾಟಕದಲ್ಲಿ ನೆಲೆ ವಿಸ್ತರಿಸುವ ಸಾಕಷ್ಟು ಸಾಧ್ಯತೆ ಇವೆ. ಇಲ್ಲಿ ಇನ್ನೂ ಜನತಾ ಪರಿವಾರದ ಬೇರುಗಳಿವೆ.
ಇನ್ನು ಮಸ್ಕಿಗೇ ಬರೋಣ. ಮಸ್ಕಿಗೆ ಅಂಟಿಕೊಂಡ ಸಿಂಧನೂರಲ್ಲಿ ಜೆಡಿಎಸ್‌ನಿಂದ ವೆಂಕಟರಾವ್ ನಾಡಗೌಡ ಶಾಸಕರು, ಇನ್ನೊಂದು ಕಡೆ ಮಸ್ಕಿಗೆ ಅಂಟಿಕೊಂಡ ರಾಯಚೂರು ಜಿಲ್ಲೆಯ ಮಾನ್ವಿ ಕ್ಷೇತ್ರದಲ್ಲಿ ರಾಜಾ ವೆಂಕಟಪ್ಪ ನಾಯಕ್ ಜೆಡಿಎಸ್‌ನ ಶಾಸಕರು. ಜೆಡಿಎಸ್‌ಗೆ ಇದಕ್ಕಿಂತ ಸಂಪನ್ಮೂಲ ಬೇಕಿತ್ತೆ..? ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾದ ಮಸ್ಕಿಯಲ್ಲಿ ನಾಯಕರು ಮತ್ತು ಲಿಂಗಾಯತರ ಮತಗಳು ನಿರ್ಣಾಯಕ. ಸಿಂಧನೂರಿನ ಎಂಎಲ್‌ಎ ಲಿಂಗಾಯತ, ಮಾನ್ವಿಯ ಎಂಎಲ್‌ಎ ನಾಯಕ ಜನಾಂಗದವರು. ಇದು ಸಂಪನ್ಮೂಲ ಅಲ್ಲವೇ..? ಎಂಬ ಪ್ರಶ್ನೆಗಳು ಮೂಡಿವೆ.
ಮಸ್ಕಿಗೆ ಅಂಟಿಕೊಂಡ ಲಿಂಗಸೂಗುರು ಕ್ಷೇತ್ರದಲ್ಲೂ ಜೆಡಿಎಸ್ ಪ್ರಭಾವ ಇದೆ. 2013 ರಲ್ಲಿ ಮಾನಪ್ಪ ವಜ್ಜಲ ಇಲ್ಲಿಂದ ಜೆಡಿಎಸ್‌ನಿಂದ ಗೆದ್ದಿದ್ದರು. 2018 ರಲ್ಲಿ ಜೆಡಿಎಸ್ ಕೆಲವೇ ಸಾವಿರ ಮತಗಳಲ್ಲಿ ಸೋತು ಎರಡೆನೇ ಸ್ಥಾನದಲ್ಲಿ ಇತ್ತು.
ಅಂದರೆ ಅಂಟಿಕೊಂಡ ಮೂರು ಕ್ಷೇತ್ರಗಳಲ್ಲಿ ಪ್ರಭಾವ ಇದ್ದರೂ ಸಂಪನ್ಮೂಲದ ಕೊರತೆಯಿಂದ ಜೆಡಿಎಸ್ ಇಲ್ಲಿ ಕ್ಯಾಂಡಿಡೇಟ್ ಹಾಕಿಲ್ಲ! ಆದರೆ ಬಸವಕಲ್ಯಾಣದಲ್ಲಿ ಅದು ಮುಸ್ಲಿಂ ಅಭ್ಯರ್ಥಿಯನ್ನು ಹಾಕಿದೆ. ಇತ್ತ ಬೆಳಗಾವಿಯಲ್ಲಿ ಅಪಾರ ಸಂಪನ್ಮೂಲದ ಜಾರಕಿಹೊಳಿ ಎದುರೂ ಕ್ಯಾಂಡಿಡೇಟ್ ಹಾಕಿಲ್ಲ.
ಇದನ್ನೂ ಓದಿ: ಬಸವ ಕಲ್ಯಾಣ ಉಪಚುನಾವಣೆ: ವಿಜಯೇಂದ್ರಗೆ ಟಿಕೆಟ್ ಇಲ್ಲ, ಈಗ್ಲೂ ‘ಹೊರಗಿನವರಿಗೇ’ ಟಿಕೆಟ್: ನಾರಾಯಣರಾವ್ ನೆನಪೇ ಕಾಂಗ್ರೆಸ್ ಶಕ್ತಿ!
ಸಂಪನ್ಮೂಲ ಹುಡುಕುತ್ತ ಬೈ ಎಲೆಕ್ಷನ ಬಂಧನದಲ್ಲಿ ಅನ್ನಬಹುದು. ಸಂಪನ್ಮೂಲದ ಕೊರತೆ ಬೈ ಎಲೆಕ್ಷನ್ ಮೂಲಕ ನೀಗಿದೆಯೇ ಎಂಬ ಪ್ರಶ್ನೆ ಮಾತ್ರ ಹಾಗೇ ಉಳಿದಿದೆ.
ನಿನ್ನೆ ಮಸ್ಕಿಯ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡರು ಸಿಂಧನೂರಿನ ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡರ ಮನೆಗೆ ಹೋಗಿ ಬೆಂಬಲ ಕೇಳಿದರೆಂದು ಇಲ್ಲಿನ ಎಲ್ಲ ದಿನಪತ್ರಿಕೆಗಳಲ್ಲಿ ಬಂದಿದೆ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ.
ಇತ್ತ, ಸುಮಾರು 12 ದಿನದ ಹಿಂದೆ ಮಸ್ಕಿ ಚುನಾವಣೆ ನಿಮಿತ್ತ ಸಿಂಧನೂರಿಗೆ ಬಂದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಿಂಧನೂರು ಐಬಿಯಲ್ಲಿ ವಿಶೇಷವಾಗಿ ಭೇಟಿ ಮಾಡಿದ ಸಿಂಧನೂರು ಶಾಸಕ ನಾಡಗೌಡರು ಮರುದಿನವೇ, ಮಸ್ಕಿಯಲ್ಲಿ ಕ್ಯಾಂಡಿಡೇಟ್ ಹಾಕಲ್ಲ ಎಂದಿದ್ದರು. ಅಷ್ಟೊತ್ತಿಗೆ ವಿಜಯೇಂದ್ರ ಮತ್ತು ಕುಮಾರಸ್ವಾಮಿ ಡಿಸ್ಕಸ್ ಮಾಡಿರಬಹುದು ಎಂದು ಇಲ್ಲಿನ ರೈತ ಹೋರಾಟಗಾರರು ಹೇಳುತ್ತಾರೆ. ಜೊತೆಗೆ ಒಳ ಒಪ್ಪಂದ ಆಗಿರಬಹುದು ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.
‘ನಾನು ಒಬ್ಬ ಶಾಸಕನಾಗಿ ಸಿಎಂ ಭೇಟಿ ಮಾಡಿದ್ದೇನೆ ಅಷ್ಟೇ… ನಮ್ಮ ಕಾರ್ಯಕರ್ತರು ಬೇಡ ಅಂದಿದ್ದಕ್ಕೆ ಕ್ಯಾಂಡಿಡೇಟ್ ಹಾಕಿಲ್ಲ. ನೀರಾವರಿ ಹೋರಾಟ ಫಲಿತಾಂಶದ ಮ್ಯಾಲ ಪ್ರಭಾವ ಬೀರುತ್ತದೆ ‘ – ವೆಂಕಟ ರಾವ್ ನಾಡಗೌಡ, ಸಿಂಧನೂರು ಶಾಸಕ
ಇದನ್ನೂ ಓದಿ: ಬೆಳಗಾವಿ ಲಿಂಗಾಯತರ ಕೋಟೆಯಲ್ಲಿ ಸತೀಶ್ ಜಾರಕಿಹೊಳಿ ಹೋರಾಟ: ಅಹಿಂದ ಒಟ್ಟುಗೂಡುವುದೇ? ಗೆದ್ರೆ ಯಮಕನಮರಡಿಯಲ್ಲಿ ಪ್ರಿಯಾಂಕಾ!
