ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ 24 ಗಂಟೆಗಳ ಕಾಲ ಪ್ರಚಾರಕ್ಕೆ ನಿರ್ಬಂಧ ಹೇರಿದ್ದ ಚುನಾವಣಾ ಆಯೋಗವು ಮಮತಾ ಬ್ಯಾನರ್ಜಿ ವಿಚಾರದಲ್ಲಿ ಪಕ್ಷಪಾತ ತೋರುತ್ತಿದೆ ಎಂದು ಶಿವಸೇನೆ ಬುಧವಾರ ಆರೋಪಿಸಿದೆ.
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರಿಗೆ ಬೆಂಬಲ ನೀಡಿರುವ ಶಿವಸೇನೆ, ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಯು ರಾಜಕೀಯ ಲಾಭಕ್ಕಾಗಿ ಕೀಳಾಗಿ ವರ್ತಿಸಬಾರದು ಎಂದು ಶಿವಸೇನಾ ತನ್ನ ಮುಖವಾಣಿ ‘ಸಾಮನಾ’ದ ಸಂಪಾದಕೀಯದಲ್ಲಿ ತಿಳಿಸಿದೆ.
“ಚುನಾವಣಾ ಆಯೋಗವು ಮಮತಾ ಬ್ಯಾನರ್ಜಿ ವಿರುದ್ಧ ಪಕ್ಷಪಾತ ಮಾಡುತ್ತಿದೆ. ಬಿಜೆಪಿಯವರ ಮಾತನ್ನು ಮಾತ್ರ ಕೇಳುತ್ತಿದೆ. ನಾವು ಕೈಮುಗಿದು ಕೇಳಿಕೊಳ್ಳುತ್ತಿದ್ದೇವೆ ನೀವು ಎಲ್ಲಾ ಪಕ್ಷದ ಅಭಿಪ್ರಾಯವನ್ನೂ ಆಲಿಸಬೇಕು. ಈ ವಿಷಯದಲ್ಲಿ ಪಕ್ಷಪಾತ ಮಾಡಬಾರದು” ಎಂದು ಮರಾಠಿ ದಿನಪತ್ರಿಕೆ ತನ್ನ ಸಂಪಾದಕಿಯದಲ್ಲಿ ಹೇಳಿದೆ.
ಇದನ್ನೂ ಓದಿ: ಸೀತಾಲ್ಕುಚ್ಚಿ ಶೂಟೌಟ್ ಬಗ್ಗೆ ವಿವಾದಿತ ಹೇಳಿಕೆ: ರಾಹುಲ್ ಸಿನ್ಹಾಗೆ 48 ಗಂಟೆ ಪ್ರಚಾರಕ್ಕೆ ನಿಷೇಧ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಚಣೆಯ ಪ್ರಚಾರದ ಸಮಯದಲ್ಲಿ ಎಲ್ಲಾ ಪಕ್ಷಗಳು ಶಿಷ್ಟಾಚಾರವನ್ನು ಕಳೆದುಕೊಂಡಿದ್ದಾರೆ. ಆದರೆ ಬ್ಯಾನರ್ಜಿಗೆ ಮಾತ್ರ ಚುನಾವಣಾ ಆಯೋಗ ಶಿಕ್ಷೆ ನೀಡಿದೆ ಎಂದು ಸಂಪಾದಕೀಯದಲ್ಲಿ ಶಿವಸೇನೆ ಆರೋಪಿಸಿದೆ.
“ಕಾನೂನಿನ ಮುಂದೆ ಪ್ರತಿಯೊಬ್ಬರನ್ನು ಸಮಾನವಾಗಿ ಪರಿಗಣಿಸಲಾಗುವುದು ಎಂಬುದನ್ನು ಸುಳ್ಳು ಎಂದು ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ಮಾಡಿ ತೋರಿಸಿದೆ. ಈ ಚುನಾವಣೆಯ ಫಲಿತಾಂಶವನ್ನು ಲೆಕ್ಕಿಸದೆ ಮಮತಾ ಬ್ಯಾನರ್ಜಿ ಅವರ ಹೋರಾಟವನ್ನು ಇತಿಹಾಸದಲ್ಲಿ ನೆನಪಿಸಿಕೊಳ್ಳಲಾಗುವುದು” ಎಂದು ತಿಳಿಸಲಾಗಿದೆ.
ಮಾದರಿ ನೀತಿ ಸಂಹಿತೆಯನ್ನು “ಮೋದಿ ನೀತಿ ಸಂಹಿತೆ” ಎಂದು ಮಮತಾ ಬ್ಯಾನರ್ಜಿ ಕರೆದಿದ್ದಕ್ಕಾಗಿ ಆಯೋಗ ಅವರ ಮೇಲೆ ಅಸಮಾಧಾನಗೊಂಡಿದೆ. ಆದರೆ, ಕೂಚ್ ಬೆಹಾರ್‌ನ ಸೀತಾಲ್ಕುಚ್ಚಿ ಹಿಂಸಾಚಾರದ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.
ಮೋದಿಯವರ ಬಾಂಗ್ಲಾದೇಶ ಭೇಟಿಯ ನಂತರ, ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಹೆಚ್ಚಾಗಿದೆ ಎಂದು ಚುನಾವಣಾ ಆಯೋಗ ಏಕೆ ಗಮನಿಸುತ್ತಿಲ್ಲ?” ಎಂದು ಮರಾಠಿ ಪತ್ರಿಕೆ ಪ್ರಶ್ನಿಸಿದೆ. ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಕೇಂದ್ರ ಮತ್ತು ಬಿಜೆಪಿ ನಾಯಕರ ಮೇಲೆ ಬ್ಯಾನರ್ಜಿ ಮಾಡಿರುವ ತೀವ್ರ ಟೀಕೆಗೆ ಸಂಪಾದಕೀಯ ಬೆಂಬಲ ನೀಡಿದೆ.
ಇದನ್ನೂ ಓದಿ: ಸುಗ್ರೀವಾಜ್ಞೆ ಹೊರಡಿಸುವಲ್ಲಿ ಯುಪಿಎಗಿಂತ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವೇ ಮುಂದು!