ಕೊರೊನಾ ಸೋಂಕಿಗೆ ಒಳಗಾಗಿದ್ದ ಹಿರಿಯ ವೈದ್ಯೆಯೊಬ್ಬರು ತಮ್ಮ ಫೇಸ್‌ಬುಕ್‌ನಲ್ಲಿ ಮತ್ತೆ ಸಿಗುವುದಿಲ್ಲ ಎಂಬ ಪೋಸ್ಟ್ ಹಾಕಿದ ಕೆಲವೇ ಗಂಟೆಗಳಲ್ಲಿ ಕೊರೊನಾಗೆ ಬಲಿಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.
51 ವರ್ಷದ ಮುಂಬೈನ ಸೆವ್ರಿ ಟಿಬಿ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಕೀಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಮನಿಷಾ ಜಾಧವ್, ಕೊರೊನಾ ಸೋಂಕಿಗೆ ಒಳಗಾಗಿದ್ದರು, ಈ ಕುರಿತು ಫೇಸ್‌ಬುಕ್‌ನಲ್ಲಿ ತಾವು ಬದುಕಿ ಉಳಿಯುವುದಿಲ್ಲ ಎಂಬುದನ್ನು ಸೂಚಿಸಿ ಸಂದೇಶ ಪೋಸ್ಟ್ ಮಾಡಿದ್ದರು.
ಕ್ಷಯರೋಗ ತಜ್ಞರಾದ ಡಾ. ಮನಿಷಾ ಜಾಧವ್, “ಬಹುಶಃ ಇದು ಕೊನೆಯ ಗುಡ್ ಮಾರ್ನಿಂಗ್ ಆಗಿರಬಹುದು. ಈ ವೇದಿಕೆಯಲ್ಲಿ ನಾನು ನಿಮ್ಮನ್ನು ಮತ್ತೆ ಭೇಟಿಯಾಗದೇ ಇರಬಹುದು. ಎಲ್ಲರೂ ಆರೋಗ್ಯವನ್ನು ನೋಡಿಕೊಳ್ಳಿ. ದೇಹ ಸಾಯುತ್ತದೆ. ಆದರೆ ಆತ್ಮ ಸಾಯುವುದಿಲ್ಲ ಅದು ಅಮರವಾಗಿದೆ” ಎಂದು ಫೇಸ್ ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ: ಜಾರ್ಜ್ ಫ್ಲಾಯ್ಡ್ ಜನಾಂಗೀಯ ಹತ್ಯೆಯ ಅಪರಾಧಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್‌ಗೆ ಶಿಕ್ಷೆ
ಸಾಂಕ್ರಾಮಿಕ ರೋಗ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಹಲವಾರು ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳ ಮೂಲಕ ಸಂದೇಶಗಳನ್ನು ಶೇರ್ ಮಾಡುತ್ತಿದ್ದಾರೆ. ತಮ್ಮ ಅಸಹಾಯಕತೆಯನ್ನು ಮತ್ತು ದುಃಖವನ್ನು ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಜಾಗ್ರತೆ ವಹಿಸುವಂತೆ ಎಚ್ಚರಿಸಿದ್ದಾರೆ.
“ನಾವು ಅಸಹಾಯಕರಾಗಿದ್ದೇವೆ, ಇಂತಹ ಪರಿಸ್ಥಿತಿಯನ್ನು ಈ ಹಿಂದೆ ನೋಡಿಲ್ಲ, ಜನರು ಭಯಭೀತರಾಗಿದ್ದಾರೆ” ಎಂದು ಮುಂಬೈನ ಮತ್ತೊಬ್ಬ ವೈದ್ಯರ ವಿಡಿಯೋ ವೈರಲ್ ಆಗಿದೆ.
ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ, ಬೆಡ್‌ಗಳು ಸಿಗದೆ ಇರುವುದು, ಸರಿಯಾದ ವೈದ್ಯಕೀಯ ಸೌಲಭ್ಯಗಳಿಲ್ಲದೆ ದೇಶದಲ್ಲಿ ಸಾವಿರಾರು ಮಂದಿ ಕೊರೊನಾಗೆ ಬಲಿಯಾಗುತ್ತಿದ್ದಾರೆ.
ಇದನ್ನೂ ಓದಿ: ದೇಶದೆಲ್ಲೆಡೆ ಆಮ್ಲಜನಕ ಕೊರತೆ: ಒಂದು ವರ್ಷದಲ್ಲಿ ಭಾರತದ ಆಮ್ಲಜನಕ ರಫ್ತು 700% ಕ್ಕಿಂತ ಹೆಚ್ಚಾಗಿದೆ!



Suprb News…