ರಾಜ್ಯ ಸರ್ಕಾರ ಲಾಕ್‌ಡೌನ್ ಎಂಬ ಪದ ಬಳಸದೇ ಎಲ್ಲವನ್ನು ಬಂದ್ ಮಾಡಿದ್ದಾರೆ. ಮುಖ್ಯಮಂತ್ರಿಗಳು ಏನು ಬೇಕಾದರೂ ಕ್ರಮ ಕೈಗೊಳ್ಳಲಿ, ನಮ್ಮ ಅಭ್ಯಂತರ ಇಲ್ಲ. ಆದರೆ ಕೂಡಲೇ ಪರಿಹಾರ ಪ್ಯಾಕೇಜ್ ಘೋಷಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ನಾಳೆಯಿಂದ ಮೇ 10ರವರೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್, “ಸರ್ಕಾರ ರಾಜ್ಯದ ಹಿತವನ್ನ ಕಾಪಾಡುವಲ್ಲಿ ವಿಫಲವಾಗಿದೆ, ಅವರು ಒಪ್ಪಿಕೊಳ್ಳುತ್ತಿಲ್ಲ. ಲಾಕ್‌ಡೌನ್ ಎಂಬ ಪದ ಬಳಸದೇ ಎಲ್ಲವನ್ನು ಬಂದ್ ಮಾಡಿದ್ದಾರೆ. ಈ ನಿರ್ಬಂಧದಿಂದ ತೊಂದರೆ ಎದುರಿಸುವವರಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಿ. ಇಂದು ಸಂಜೆಯೊಳಗೆ ಪರಿಹಾರ ಪ್ಯಾಕೇಜ್ ನೀಡಲಿ” ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಆರೋಗ್ಯ ಕಾಪಾಡಲು ರಾಜ್ಯ ಸರ್ಕಾರ ಏನು ಬೇಕಾದರೂ ಮಾಡಲಿ. ಆದರೆ, ಬಡವರು, ಕೆಲಸ ಇಲ್ಲದವರ ಖಾತೆಗೆ ನೇರವಾಗಿ ಸರ್ಕಾರ ಹಣ ಹಾಕಿಲಿ. ಉದ್ಯೋಗ ಕಳೆದುಕೊಂಡವರಿಗೆ ಪ್ಯಾಕೇಜ್ ಘೋಷಣೆ ಮಾಡಲಿ ಎಂದಿದ್ದಾರೆ.
ಇದನ್ನೂ ಓದಿ: ಚುನಾವಣಾ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು: ಮದ್ರಾಸ್ ಹೈಕೋರ್ಟ್
ಒಂದು ವರ್ಷದಿಂದ ವ್ಯಾಪಾರ-ವಹಿವಾಟು ನಿಂತಿದೆ. ಮುಂದಿನ ಒಂದು ವರ್ಷ ಈಗಾಗಿರುವ ಹೊಡೆತದಿಂದ ಚೇತರಿಕೆ ಆಗುವುದಿಲ್ಲ. ಹೀಗಾಗಿ ಸರ್ಕಾರ ಎಲ್ಲ 2 ವರ್ಷಗಳ ಕಾಲ ಕಮರ್ಷಿಯಲ್ ಪ್ರಾಪರ್ಟಿ ಟ್ಯಾಕ್ಸ್ ಮನ್ನಾ ಮಾಡಬೇಕು ಎಂದು ಡಿ.ಕೆ. ಶಿವಕುಮಾರ್ ಬೇಡಿಕೆ ಇಟ್ಟಿದ್ದಾರೆ. ಜೊತೆಗೆ ಎಲ್ಲ ಸಾಲಗಳ ಅವಧಿ 2 ವರ್ಷ ಮುಂದೂಡಬೇಕು ಎಂದಿದ್ದಾರೆ.
ಬರಗಾಲ ಬಂದಾಗೆಲ್ಲ ರೈತರಿಗೆ ಆಸ್ತಿ ತೆರಿಗೆ ಮನ್ನಾ ಮಾಡಿದ್ದೇವೆ. ಅದೇ ರೀತಿ ಇವರಿಗೆ ಆಸ್ತಿ ತೆರಿಗೆ ಮನ್ನಾ ಮಾಡಿ. ಈ ಕೊರೊನಾ ಸೋಂಕನ್ನು ಇವರು ಹರಡಿಲ್ಲ, ಸರ್ಕಾರ ಹರಡಿದೆ. ಸರ್ಕಾರ ಚಪ್ಪಾಳೆ ಹೊಡಿ ಅಂದಾಗ ಹೊಡೆದಿದ್ದೇವೆ, ದೀಪ ಹಚ್ಚಿ ಅಂದಾಗ ದೀಪ ಹಚ್ಚಿದ್ದೇವೆ. ಎಲ್ಲ ಮಾಡಿದ್ದೇವೆ ಎಂದು ಸರ್ಕಾರವನ್ನು ಟೀಕಿಸಿದ್ದಾರೆ.
ರಾಜ್ಯ ಸರ್ಕಾರ ಒಂದು ಮಿತಿಯವರೆಗೂ ಸಾಲ ಮನ್ನಾ ಮಾಡಬೇಕು. ರಾಜ್ಯ ಸರ್ಕಾರಕ್ಕೆ ಇದರ ವ್ಯಾಪ್ತಿ ಬರುವುದಿಲ್ಲ. ಆದರೆ, ಸಭೆ ಕರೆದು 10-20 ಲಕ್ಷದವರೆಗಿನ ಸಾಲದವರಿಗೆ ಬಡ್ಡಿ ಕಟ್ಟಿಕೊಡುವ ಕೆಲಸ ಮಾಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ವಾಹನ ಸಾಲ ಪಡೆದವರ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದು, ಎಲ್ಲ ವಾಹನ ಮಾಲೀಕರಿಗೆ ರಕ್ಷಣೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಒತ್ತಾಯಿಸಿದ್ದಾರೆ.
“ವರ್ತಕರ ಧ್ವನಿಯಾಗಿ ನಾನು ಕೆಲಸ ಮಾಡುತ್ತಿದ್ದು, ಇವರ ನೇತೃತ್ವದಲ್ಲೇ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ. ನೀವು ಇವರ ನೆರವಿಗೆ ಬಾರದಿದ್ದರೆ ನಾವು ಇವರ ಪರವಾಗಿ ಬೀದಿಗಿಳಿದು ಹೋರಾಡುತ್ತೇವೆ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ರೈತ ಹೋರಾಟಕ್ಕೆ 150 ದಿನ: ಬಿರು ಬೇಸಿಗೆಯಲ್ಲೂ ಬತ್ತದ ಉತ್ಸಾಹ, ಮೇ 10 ರಿಂದ ಮತ್ತಷ್ಟು ಬಿರುಸು!


