Homeಅಂಕಣಗಳುಗೌರಿ ಕಾರ್ನರ್; ’ಅಂಡರ್ ಗ್ರೌಂಡ್’: ತಲ್ಲಣಗೊಳಿಸುವ ಚಿತ್ರವೊಂದರ ಕತೆ..

ಗೌರಿ ಕಾರ್ನರ್; ’ಅಂಡರ್ ಗ್ರೌಂಡ್’: ತಲ್ಲಣಗೊಳಿಸುವ ಚಿತ್ರವೊಂದರ ಕತೆ..

- Advertisement -
- Advertisement -

ಅವರಿಬ್ಬರೂ ಆತ್ಮೀಯ ಸ್ನೇಹಿತರು. ಕದಿಯುವುದರಲ್ಲಿ, ಮಜಾ ಉಡಾಯಿಸುವುದರಲ್ಲಿ, ಕುಡಿದು ಕುಪ್ಪಳಿಸುವುದರಲ್ಲಿ ನಿಷ್ಣಾತರು. ಒಬ್ಬ ಮಾರ್ಕೋ, ಮಗದೊಬ್ಬ ಬ್ಲಾಕಿ. ಜೋಕರ್‌ಗಳ ತರಹ ವರ್ತಿಸುವ ಇವರಿಬ್ಬರೂ ಒಂದು ರೀತಿಯಲ್ಲಿ ಬ್ಲ್ಯಾಕ್ ಕಾಮಿಡಿಯೊಂದರ ಹೀರೋಗಳು. ಅವರಿರುವ ಯುಗೋಸ್ಲಾವಿಯಾ ದೇಶದಲ್ಲಿ ಆಗ ತಾನೇ ಕಮ್ಯುನಿಸ್ಟರು ಸಂಘಟಿತರಾಗುತ್ತಿದ್ದಾರೆ. ಆ ಚಳವಳಿಯನ್ನು ಸೇರಿಕೊಳ್ಳುವ ಮಾರ್ಕೋ ತನ್ನೊಂದಿಗೆ ಬ್ಲಾಕಿಯನ್ನು ಕರೆತರುತ್ತಾನೆ. ಅದೇ ಸಮಯಕ್ಕೆ ಎರಡನೇ ಮಹಾಯುದ್ಧ ಪ್ರಾರಂಭವಾಗಿ ಹಿಟ್ಲರ್‌ನ ಸೈನ್ಯ ಯುಗೋಸ್ಲಾವಿಯಾ ದೇಶದ ಮೇಲೆ ದಾಳಿ ಇಡುತ್ತದೆ. ಹೇಗಾದರೂ ಸರಿಯೇ ’ಹಾದರಕ್ಕೆ ಹುಟ್ಟಿದ ಫ್ಯಾಸಿಸ್ಟರನ್ನು’ ಸೋಲಿಸಬೇಕು ಎಂದು ತೀರ್ಮಾನಿಸುವ ಮಾರ್ಕೋ ಮತ್ತು ಬ್ಲಾಕಿ ತಮ್ಮ ಚಾಣಾಕ್ಷತೆಯನ್ನು ಉಪಯೋಗಿಸಿ ಶಸ್ತ್ರಾಸ್ತ್ರಗಳನ್ನು ಕದ್ದು ಕಮ್ಯುನಿಸ್ಟರಿಗೆ ಸರಬರಾಜು ಮಾಡುವುದರಲ್ಲಿ ನಿರತರಾಗುತ್ತಾರೆ. ಯುದ್ಧದಲ್ಲಿ ಮಾರ್ಕೋ ಸಹೋದರನ ಮೃಗಾಲಯ ನಾಶಗೊಂಡರೆ ಬ್ಲಾಕಿಯ ಪ್ರೇಯಸಿ ಹಿಟ್ಲರ್‌ನ ಸೈನ್ಯಾಧಿಕಾರಿಯೊಬ್ಬನ ವಶಕ್ಕೆ ಬೀಳುವ ಅಂಚಿನಲ್ಲಿದ್ದಾಳೆ. ಆನಂತರ ಹಿಟ್ಲರ್‌ನ ಸೈನ್ಯ ನಾಶಮಾಡದೇ ಇದ್ದುದ್ದನ್ನು ಮೈತ್ರಿಕೂಟ ನೆಲಸಮ ಮಾಡುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಬದುಕುಳಿಯಲು ಬ್ಲಾಕಿ, ಆತನ ಹೆಂಡತಿಗೆ ಹುಟ್ಟಿದ ಹಸಿಗೂಸು, ಮಾರ್ಕೋನ ಸಹೋದರ ಎಲ್ಲರೂ ಮನೆಯೊಂದರ ನೆಲಮಾಳಿಗೆಯಲ್ಲಿ ಅವಿತುಕೊಳ್ಳುತ್ತಾರೆ. ಬ್ಲಾಕಿಯ ಪ್ರೇಯಸಿಯ ಮೇಲೆ ಕಣ್ಣಿಟ್ಟಿರುವ ಮಾರ್ಕೋ ಹೊರಗಡೆ ಬಂದು ಒಂದೇ ಏಟಿಗೆ ಎಲ್ಲವನ್ನೂ ತನ್ನದಾಗಿಸಿಕೊಳ್ಳುವ ಸಂಚನ್ನು ರೂಪಿಸುತ್ತಾನೆ. ಬ್ಲಾಕಿಯ ಪ್ರೇಯಸಿಯನ್ನು ವರಿಸುತ್ತಲೇ, ಬ್ಲಾಕಿ ನೆಲಮಾಳಿಗೆಯಲ್ಲೇ ಶಾಶ್ವತವಾಗಿ ಉಳಿಯುವಂತೆ ಮಾಡುತ್ತಾನೆ. ಹೊರ ಪ್ರಪಂಚದಲ್ಲಿ ಏನಾಗುತ್ತಿದೆ ಎಂದು ಅರಿಯದ ಬ್ಲಾಕಿ ಮತ್ತು ಇತರರು ಸೋತು ಸುಣ್ಣವಾಗಿರುವ ’ಹಾದರಕ್ಕೆ ಹುಟ್ಟಿದ ಫ್ಯಾಸಿಸ್ಟ್’ ಜರ್ಮನಿಯ ವಿರುದ್ಧ ಇನ್ನೂ ಯುದ್ಧ ನಡೆಯುತ್ತಿದೆ ಎಂಬ ಭ್ರಮೆಯಲ್ಲೇ 20 ವರ್ಷಗಳ ಕಾಲ ಜೀವಿಸುತ್ತಾರೆ. ಆದರೆ ವಾಸ್ತವವಾಗಿ ಬ್ಲಾಕಿಯ ಪ್ರೇಯಸಿಯನ್ನು ಮದುವೆಯಾಗಿರುವ ಮಾರ್ಕೋ, ಅಧಿಕಾರಕ್ಕೆ ಬಂದಿರುವ ಟೀಟೋನ ಸಂಪುಟದಲ್ಲಿ ಸಚಿವನಾಗಿರುತ್ತಾನೆ; ಬ್ಲಾಕಿ ತಂಡ ನೆಲಮಾಳಿಗೆಯಲ್ಲಿ ತಯಾರಿಸುತ್ತಿರುವ ಆಯುಧಗಳನ್ನು ಕಾಳಸಂತೆಯಲ್ಲಿ ಮಾರಿ ಆಗರ್ಭ ಶ್ರೀಮಂತನಾಗಿರುತ್ತಾನೆ.

PC : FilmAffinity

ಕೊನೆಗೂ ಒಂದು ದಿನ ಬ್ಲಾಕಿ ತನ್ನ ಮಗನೊಂದಿಗೆ ನೆಲಮಾಳಿಗೆಯಿಂದ ಹೊರಬಂದು ನೇರವಾಗಿ ಯುದ್ಧದಲ್ಲಿ ತೊಡಗುವುದಾಗಿ ನಿರ್ಧರಿಸುತ್ತಾನೆ. ಈಗ 20 ವರ್ಷದ ಯುವಕನಾಗಿರುವ ಬ್ಲಾಕಿಯ ಮಗ ಇದೇ ಮೊದಲನೆ ಬಾರಿ ಹೊರ ಪ್ರಪಂಚವನ್ನು ನೋಡುತ್ತಿದ್ದಾನೆ. ರಾತ್ರಿಯ ಆಕಾಶದಲ್ಲಿ ಚಂದಿರನನ್ನು ಕಂಡು “ಅಪ್ಪ ನೋಡು ಸೂರ್ಯ ಎಂದು ಬೆರಗಾಗುತ್ತಾನೆ. ಮಾರನೆ ದಿನ ಸೂರ್ಯ ಉದಯವಾಗುವುದನ್ನು ಕಂಡು “ಈ ಜಗತ್ತು ಎಷ್ಟು ಸುಂದರ!” ಎಂದು ಉದ್ಗಾರವೆತ್ತುತ್ತಾನೆ. ಆದರೆ ತಂದೆ-ಮಗನನ್ನು ದಂಗೆಕೋರರೆಂದು ಭಾವಿಸಿ ಸರ್ಕಾರದ ಸೈನಿಕರೇ ಅವರನ್ನು ಕೊಲ್ಲಲೆತ್ನಿಸುತ್ತಾರೆ. ಈ ಘಟನೆಯಲ್ಲಿ ಬ್ಲಾಕಿಯ ಮಗ ನೀರುಪಾಲಾಗಿ ಸಾವನ್ನಪ್ಪುತ್ತಾನೆ.

ಬ್ಲಾಕಿ ಹೊರಬಂದ ನಂತರ ತನಗೆ ಇನ್ನು ಯಾವುದೇ ಮಾರ್ಗವಿಲ್ಲ ಎಂದು ಭಾವಿಸಿ ಮಾರ್ಕೋ ಭೂಗತನಾಗುತ್ತಾನೆ. ಇದೆಲ್ಲದರ ಮಧ್ಯೆ ಮಾರ್ಕೋನ ತಮ್ಮ ನೆಲಮಾಳಿಗೆಯಿಂದ ತಪ್ಪಿಸಿಕೊಂಡಿರುವ ತನ್ನ ಕೋತಿಯನ್ನು ಹುಡುಕುತ್ತಾ ಅದೇ ’ಹಾದರಕ್ಕೆ ಹುಟ್ಟಿದ ಫ್ಯಾಸಿಸ್ಟ್’ರ ದೇಶವಾದ ಜರ್ಮನಿಗೆ ಬರುತ್ತಾನೆ. ಆದರೆ ಯುದ್ಧ ಮುಗಿದು ಅದೆಷ್ಟೋ ಕಾಲವಾಗಿ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ತನ್ನ ಅಣ್ಣ ಮಾರ್ಕೋನೇ ತನ್ನನ್ನು ಮತ್ತು ಇತರರನ್ನು ನೆಲಮಾಳಿಗೆಯಲ್ಲಿ ಬಂಧಿಸಿಟ್ಟಿದ್ದ ಎಂದು ಅವನಿಗೆ ಗೊತ್ತಾಗಿ ದುಃಖಿಸುತ್ತಾನೆ. ಆತ ಯುಗೋಸ್ಲಾವಿಯಾಗೆ ಹಿಂದಿರುಗಿದಾಗ, ಅಲ್ಲಿ ಆಂತರಿಕ ಯುದ್ಧ ಪ್ರಾರಂಭವಾಗಿದೆ. ಮಾರ್ಕೋ ಭೂಗತನಾದ ನಂತರ ಸರ್ವಾಧಿಕಾರಿ ಟೀಟೋ ಸತ್ತು ಹೋಗಿದ್ದಾನೆ. ಯುಗೋಸ್ಲಾವಿಯಾ ದೇಶವೇ ಛಿದ್ರಗೊಂಡು, ಕ್ರೋಏಶಿಯನ್ನರು, ಬೋಸ್ನಿಯನ್ನರು ಮತ್ತು ಸರ್ಬಿಯನ್ನರು ಪರಸ್ಪರ ಯುದ್ಧದಲ್ಲಿ ಮುಳುಗಿದ್ದಾರೆ. ಇಂತಹ ಸಂದರ್ಭದಲ್ಲೂ ಮಾರ್ಕೋ ತನ್ನ ಶಸ್ತ್ರಾಸ್ತ್ರಗಳ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದಾನೆ. ಗುಂಡೇಟಿನಿಂದ ಕುಂಟನಾಗಿರುವ ಮಾರ್ಕೋ ಒಮ್ಮೆ ತನ್ನ ವೀಲ್‌ಚೇರ್‌ನಲ್ಲಿ ಹೋಗುತ್ತಿರುವುದನ್ನು ನೋಡುವ ಅವನ ಸಹೋದರ ಬಂದು ಮಾರ್ಕೋನನ್ನು ಇನ್ನಿಲ್ಲದಂತೆ ಹೊಡೆಯುತ್ತಾನೆ. ಆದರೂ ಮಾರ್ಕೋ ತನಗೆ ಏನೂ ಆಗಿಲ್ಲವೆಂಬಂತೆ ಕೂತಿರುವುದನ್ನು ಕಂಡು ರೋಸಿ ಹೋಗುವ ಸಹೋದರ ಹತ್ತಿರದಲ್ಲಿರುವ ಚರ್ಚ್ ಒಂದರಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಸಾವನ್ನಪ್ಪುತ್ತಾನೆ.

ಇದೇ ಹೊತ್ತಿಗೆ ಬ್ಲಾಕಿ ಯುದ್ಧದಲ್ಲಿ ಹೋರಾಡುತ್ತಿರುವ ಪಂಗಡವೊಂದರ ನಾಯಕನಾಗಿ ’ಹಾದರಕ್ಕೆ ಹುಟ್ಟಿದ ಫ್ಯಾಸಿಸ್ಟ್’ಗಳ ವಿರುದ್ಧ ಇನ್ನೂ ಕೆಂಡಕಾರುತ್ತಿದ್ದಾನೆ. ಮಾರ್ಕೋನನ್ನು ಹಿಡಿಯುವ ಬ್ಲಾಕಿಯ ಅಧೀನ ಅಧಿಕಾರಿಯೊಬ್ಬ “ಶಸ್ತ್ರಾಸ್ತ್ರಗಳ ಕಳ್ಳ ವ್ಯವಹಾರಿ ಮತ್ತು ಆತನ ಹೆಂಡತಿ ಸೆರೆ ಸಿಕ್ಕಿದ್ದಾರೆ, ಅವರನ್ನು ಏನು ಮಾಡಲಿ?” ಎಂದು ಕೇಳುತ್ತಾನೆ. ಮರುಚಿಂತೆ ಮಾಡದೆ “ಅವರಿಬ್ಬರನ್ನು ತಕ್ಷಣವೇ ಕೊಂದು ಹಾಕು” ಎಂದು ಬ್ಲಾಕಿ ಆದೇಶಿಸುತ್ತಾನೆ. ಅಗ್ನಿಗೆ ಬಲಿಯಾದ ಅವರಿಬ್ಬರ ಪಾಸ್‌ಪೋರ್ಟ್‌ಗಳನ್ನು ನೋಡಿದ ನಂತರವೇ ತಾನು ತನ್ನ ಸ್ನೇಹಿತ ಮತ್ತು ಮಾಜಿ ಪ್ರೇಯಸಿಯನ್ನು ಕೊಲ್ಲಿಸಿದ್ದೇನೆ ಎಂದು ಬ್ಲಾಕಿಗೆ ಗೊತ್ತಾಗುತ್ತದೆ.

ಯುದ್ಧ ಆತನಲ್ಲಿ ಭ್ರಮನಿರಸನವನ್ನುಂಟು ಮಾಡುತ್ತದೆ. ಆತ ದ್ವೇಷಿಸುತ್ತಿದ್ದ “ಹಾದರಕ್ಕೆ ಹುಟ್ಟಿದ ಫ್ಯಾಸಿಸ್ಟ್” ವೈರಿಗಳು ಬದಲಾಗುತ್ತಾ ಹೋಗುತ್ತಾರೆಯೇ ಹೊರತು ಯುದ್ಧ ಮಾತ್ರ ನಿರಂತರವಾಗಿ ಸಾಗುತ್ತದೆ ಎಂದು ಬ್ಲಾಕಿಗೆ ಗೊತ್ತಾಗುತ್ತದೆ. ತನ್ನ ದೇಶ, ಚಳವಳಿ, ಕನಸು, ಸ್ನೇಹಿತ, ಪ್ರೇಯಸಿ, ಮಗ…. ಎಲ್ಲವನ್ನು ಕಳೆದುಕೊಂಡ ಬ್ಲಾಕಿ ಮತ್ತೆ ಅದೇ ನೆಲಮಾಳಿಗೆಯಲ್ಲಿ ಸ್ವಬಂಧನವನ್ನು ಅರಸುತ್ತಾನೆ.

ಎಲ್ಲರೂ ಸತ್ತಿದ್ದಾರೆ, ಎಲ್ಲವೂ ನಾಶಗೊಂಡಿದೆ, ದೇಶ ಛಿದ್ರಗೊಂಡಿದೆ. ಹೋರಾಡಲು, ಪ್ರೀತಿಸಲು, ಆಶ್ರಯಿಸಲು, ಬೆಂಬಲಿಸಲು ಈಗ ಏನೂ ಉಳಿದಿಲ್ಲ. ಒಂದು ಸ್ತರದಲ್ಲಿ ಕಾಮಿಡಿ ರೀತಿಯಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುವ ಈ ಕತೆ ಇನ್ನೊಂದು ಸ್ತರದಲ್ಲಿ ಅಸಂಗತ ನಾಟಕದಂತೆಯೂ, ವಾಸ್ತವದ ವಿಮರ್ಶೆಯಾಗಿಯೂ ಸಾಗುತ್ತದೆ. ಕೊನೆ ದೃಶ್ಯದಲ್ಲಿ ಸತ್ತಿರುವ ಎಲ್ಲರೂ ಸಮುದ್ರದ ದಡದಲ್ಲಿ ಸೇರಿದ್ದಾರೆ. ಅಲ್ಲಿ ಸಂಗೀತ, ನೃತ್ಯದಲ್ಲಿ ಎಲ್ಲಾ ದ್ವೇಷಾಸೂಯೆಗಳನ್ನು ಮರೆತು ಸಂತೋಷದ ಅಮಲಿನಲ್ಲಿ ತೇಲಾಡುತ್ತಿದ್ದಾರೆ. ನಿಧಾನವಾಗಿ ನೆಲದಲ್ಲಿ ಬಿರುಕೊಂದು ಮೂಡಿ ಸಮುದ್ರದ ದಡವೇ ಪ್ರತ್ಯೇಕ ದ್ವೀಪವಾಗಿ ದೂರಕ್ಕೆ ಚಲಿಸಲಾರಂಭಿಸುತ್ತದೆ….. ಆಗ ಮಾರ್ಕೋನ ಸಹೋದರ ನಮ್ಮತ್ತ ದಿಟ್ಟಿಸುತ್ತಾ; “ಮುಂದೊಂದು ದಿನ ನಮ್ಮ ಮಕ್ಕಳಿಗೆ ಹೀಗೊಂದು ಕತೆ ಹೇಳಬಹುದು: ಒಂದಾನೊಂದು ಕಾಲದಲ್ಲಿ ಒಂದು ದೇಶ ಇತ್ತು…..”

ಇದು ಎಮಿರ್ ಕುಸ್ಟಿರಿಕಾ ಎಂಬಾತ ನಿರ್ದೇಶಿಸಿರುವ ’ಅಂಡರ್‌ಗ್ರೌಂಡ್’ ಸಾರಾಂಶ. ಯುಗೋಸ್ಲಾವಿಯಾ ಎಂಬ ದೇಶದ ದುರಂತವನ್ನು ಸೆರೆ ಹಿಡಿದಿರುವ ’ಅಂಡರ್‌ಗ್ರೌಂಡ್’ ಚಿತ್ರಕ್ಕೆ ಪ್ರತಿಷ್ಠಿತ ಕಾನ್ ಚಿತ್ರೋತ್ಸವದಲ್ಲಿ ಗೋಲ್ಡನ್ ಪಾಮ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.

PC : Elle, (ಎಮಿರ್ ಕುಸ್ಟಿರಿಕಾ)

ಇಲ್ಲಿ ಯುಗೋಸ್ಲಾವಿಯಾ ಬದಲಿಗೆ ಭಾರತವನ್ನೇ ಚಿತ್ರಿಸಿಕೊಳ್ಳಿ. ಎರಡನೇ ಮಹಾಯುದ್ಧದ ನಂತರ ದೇಶದ ವಿಭಜನೆ, ಆನಂತರ ಪಾಕಿಸ್ತಾನ ಮತ್ತು ಭಾರತದ ನಡುವಿನ ನಾಲ್ಕು ಯುದ್ಧಗಳು, ಅಲ್ಲಿನ ಕ್ರೋಏಶಿಯರು, ಸರ್ಬಿಯನ್ನರು ಮತ್ತು ಬೋಸ್ನಿಯಾದವರ ನಡುವಿನ ಕಾಳಗದಂತೆ ಇಲ್ಲಿನ ಹಿಂದೂ ಮತ್ತು ಮುಸ್ಲಿಮರ ನಡುವಿನ ಕೋಮುಗಲಭೆಗಳು…. ’ಅಂಡರ್ ಗ್ರೌಂಡ್’ ಚಿತ್ರದಲ್ಲಿ ಒಂದು ಸಾಲಿದೆ. ತನ್ನ ತಮ್ಮನಿಂದ ಏಟುಗಳನ್ನು ತಿನ್ನುತ್ತಿರುವ ಮಾರ್ಕೋ ಹೇಳುತ್ತಾನೆ: “ಸಹೋದರರು ಒಬ್ಬರನ್ನೊಬ್ಬರು ಸಾಯಿಸುವವರೆಗೂ ಯಾವ ಯುದ್ಧವೂ ಸಂಪೂರ್ಣವಾದ ಯುದ್ಧವಾಗುವುದಿಲ್ಲ. ಇದು ಇವತ್ತಿನ ಭಾರತಕ್ಕೂ ಅನ್ವಯಿಸುತ್ತದಲ್ಲವೇ?

ಅಂದಹಾಗೆ, ಛಿದ್ರಗೊಂಡ ಯುಗೋಸ್ಲಾವಿಯಾದಲ್ಲಿನ ಯುದ್ಧವನ್ನು ಕಂಡು ಯಾರೋ ಒಬ್ಬರು “ವಿವಿಧ ಬುಡಕಟ್ಟು ಮತ್ತು ಧರ್ಮೀಯರ ನಡುವೆ ಭಾರತದಲ್ಲೇನಾದರೂ ಯುದ್ಧ ಶುರುವಾದರೆ ಇವತ್ತು ಯುಗೋಸ್ಲಾವಿಯಾದಲ್ಲಾಗುತ್ತಿರುವುದು ಒಂದು ಪುಟ್ಟ ಪಿಕ್‌ನಿಕ್‌ನಂತೆ ಕಾಣಿಸುತ್ತದೆ” ಎಂದಿದ್ದರು.

ಈ ಚಿತ್ರವನ್ನು ನೋಡುತ್ತಿದ್ದಾಗ ಅವರು ಆಡಿದ್ದ ಭವಿಷ್ಯವಾಣಿ ನೆನಪಾಯಿತು.

(ಗೌರಿ ಲಂಕೇಶ್ ಅವರ ಕಂಡಹಾಗೆ ಅಂಕಣವೊಂದರ ಮರುಪ್ರಕಟಣೆ ಇದು)


ಇದನ್ನೂ ಓದಿ: ಗೌರಿ ಕಾರ್ನರ್; ಲಿವ್ ಅಂಡ್ ಬಿಕಮ್ ಸಿನಿಮ: ಪ್ರೀತಿಗಿರುವಷ್ಟು ಶಕ್ತಿ ಇನ್ಯಾವುದಕ್ಕಿದೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...